ರಷ್ಯಾ ರಕ್ಷಣಾ ಸಚಿವರೊಂದಿಗೆ ರಾಜನಾಥ್​ ಸಿಂಗ್​ ಸಭೆ; ಕಲಾಶ್ನಿಕೋವ್ ತಿದ್ದುಪಡಿ ಸೇರಿ 4 ರಕ್ಷಣಾ ಒಪ್ಪಂದಗಳಿಗೆ ಎರಡೂ ದೇಶಗಳ ಸಹಿ

ರಷ್ಯಾ ರಕ್ಷಣಾ ಸಚಿವರೊಂದಿಗೆ ರಾಜನಾಥ್​ ಸಿಂಗ್​ ಸಭೆ; ಕಲಾಶ್ನಿಕೋವ್ ತಿದ್ದುಪಡಿ ಸೇರಿ 4 ರಕ್ಷಣಾ ಒಪ್ಪಂದಗಳಿಗೆ ಎರಡೂ ದೇಶಗಳ ಸಹಿ
ಭಾರತ-ರಷ್ಯಾ ರಕ್ಷಣಾ ಸಚಿವರ ನಡುವೆ ಮಾತುಕತೆ

ಪ್ರಧಾನಿ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ ಭೇಟಿಗೂ ಪೂರ್ವ ಇಂದು ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಮತ್ತು ರಷ್ಯಾ ರಕ್ಷಣಾ ಸಚಿವ ಜನರಲ್ ಸೆರ್ಗೆ ಶೋಯಿಗು ಅವರೊಂದಿಗೆ ಸಭೆ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ಭಾರತ-ರಷ್ಯಾ ಪಾಲುದಾರಿಕೆಯಲ್ಲಿ ರಕ್ಷಣಾ ಸಹಕಾರ ಅತಿಮುಖ್ಯವಾದ ಆಧಾರಸ್ತಂಭವಾಗಿದೆ . ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆ ರಕ್ಷಣೆಗಾಗಿ ಭಾರತ-ರಷ್ಯಾ ಒಟ್ಟಾಗಿ ಪ್ರಯತ್ನಿಸುತ್ತವೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ. ಸದ್ಯದ ಭೌಗೋಳಿಕ ರಾಜಕೀಯ ಸನ್ನಿವೇಶದ ನಡುವೆಯೂ ಭಾರತ-ರಷ್ಯಾ ಶೃಂಗಸಭೆ ನಡೆಯುತ್ತಿರುವುದು, ಎರಡೂ ದೇಶಗಳ ನಡುವೆ ಇರುವ ವಿಶೇಷ ಕಾರ್ಯತಂತ್ರ ಪಾಲುದಾರಿಕೆಯ ನಿರ್ಣಾಯಕತೆಯನ್ನು ದೃಢಗೊಳಿಸುತ್ತದೆ ಎಂದು ರಾಜನಾಥ್​ ಸಿಂಗ್​ ಹೇಳಿದ್ದಾರೆ.  

ಭಾರತ-ರಷ್ಯಾ ವಾರ್ಷಿಕ ಶೃಂಗಸಭೆ ನಿಮಿತ್ತ ಇಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ದೆಹಲಿಗೆ ಬರಲಿದ್ದು, ಸಂಜೆ 5.30ಕ್ಕೆ ಪ್ರಧಾನಿ ಮೋದಿಯವರೊಂದಿಗೆ ಶೃಂಗಸಭೆಯಲ್ಲಿ ಪಾಲ್ಗೊಳ್ಳುವರು. ಅದಕ್ಕೂ ಪೂರ್ವದಲ್ಲಿ ಭಾರತದ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ರಷ್ಯಾದ ರಕ್ಷಣಾ ಮಂತ್ರಿ ಸೆರ್ಗೆ ಶೋಯಿಗು ಅವರ ಜತೆ ಮತ್ತು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್​.ಜೈಶಂಕರ್​ ಅವರು ಸೆರ್ಗೆ ಲಾವ್ರೊವ್ ಅವರೊಂದಿಗೆ 2+2 ಸಭೆ ನಡೆಸಿದ್ದಾರೆ.

ಹಾಗೇ, ಉತ್ತರಪ್ರದೇಶದ ಅಮೇಠಿಯಲ್ಲಿ ಐದು ಲಕ್ಷಕ್ಕೂ ಅಧಿಕ ಎಕೆ-203 ಅಸಾಲ್ಟ್ ರೈಫಲ್​ಗಳನ್ನು ಜಂಟಿಯಾಗಿ ಉತ್ಪಾದಿಸುವ ಒಪ್ಪಂದಕ್ಕೆ ಭಾರತ ಮತ್ತು ರಷ್ಯಾ ಎರಡೂ ದೇಶಗಳೂ ಇಂದು ಸಹಿ ಹಾಕಿವೆ. ಇದು ಸುಮಾರು 5100 ಕೋಟಿ ರೂ.ಮೌಲ್ಯದ ಒಪ್ಪಂದವಾಗಿದೆ. ಇದರೊಂದಿಗೆ ಮುಂದಿನ 10 ವರ್ಷಗಳ ಕಾಲ ಎರಡೂ ದೇಶಗಳ ನಡುವಿನ ಮಿಲಿಟರಿ ಸಹಕಾರ ದೃಢಪಡಿಸುವ ಇನ್ನೊಂದು ಒಪ್ಪಂದಕ್ಕೂ ಸಹಿ ಹಾಕಿವೆ.  ಹಾಗೇ, 2019ರ ಫೆಬ್ರವರಿಯಲ್ಲಿ ಮೊಹರು ಮಾಡಲಾದ ಕಲಾಶ್ನಿಕೋವ್​ ಸರಣಿಯ ಸಣ್ಣ ಶಸ್ತ್ರಾಸ್ತ್ರಗಳ ತಯಾರಿಕಾ ಕ್ಷೇತ್ರದ ಒಪ್ಪಂದವನ್ನು ತಿದ್ದುಪಡಿ ಮಾಡುವ ಇನ್ನೊಂದು ಒಪ್ಪಂದಕ್ಕೆ ಕೂಡ ಇಂದು ಎರಡೂ ದೇಶಗಳ ಸಹಿ ಬಿದ್ದಿದೆ.  ಒಟ್ಟಾರೆ ಇಂದು ನಾಲ್ಕು ಒಪ್ಪಂದಗಳಿಗೆ ಸಹಿ ಹಾಕಿದ್ದಾಗಿ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ನಾಗಾಲ್ಯಾಂಡ್​ ಹತ್ಯೆ ಪ್ರಕರಣ: ಮೃತರ ಕುಟುಂಬಗಳಿಗೆ ತಲಾ 11 ಲಕ್ಷ ರೂ.ಪರಿಹಾರ ನೀಡಲಿರುವ ಕೇಂದ್ರ ಸರ್ಕಾರ

Click on your DTH Provider to Add TV9 Kannada