India Help: ಟರ್ಕಿಗೆ ಭಾರತದ ಪರಿಹಾರ ಸಾಮಗ್ರಿ ರವಾನೆ; ಕಷ್ಟಕ್ಕಾಗುವವನೇ ಸ್ನೇಹಿತ ಎಂದು ಮಿಡಿದ ರಾಯಭಾರಿ
Turkey Thanks India- ಭೂಕಂಪ ಪರಿಹಾರ ಸಾಮಗ್ರಿಗಳ ಮೊದಲ ಪ್ಯಾಕೇಜ್ ಅನ್ನು ಟರ್ಕಿ ದೇಶಕ್ಕೆ ವಿಮಾನದ ಮೂಲಕ ಕಳುಹಿಸಿಕೊಡಲಾಗಿದೆ. ಈ ಪ್ಯಾಕೇಜ್ನಲ್ಲಿ ಎನ್ಡಿಆರ್ಎಫ್ನ ತಜ್ಞ ಶೋಧ ಮತ್ತು ರಕ್ಷಣಾ ತಂಡವೊಂದೂ ಇದೆ.
ನವದೆಹಲಿ: ಟರ್ಕಿಯಲ್ಲಿ ಸುಮಾರು 4 ಸಾವಿರ ಮಂದಿಯನ್ನು ಬಲಿತೆಗೆದುಕೊಂಡಿರುವ ಭೂಕಂಪಕ್ಕೆ (Turkey Earthquake) ಭಾರತ ಮಿಡಿದಿದೆ. ನಿನ್ನೆ ಕರ್ನಾಟಕ ಭೇಟಿ ವೇಳೆ ಪ್ರಧಾನಿ ನರೇಂದ್ರ ಮೋದಿ ಟರ್ಕಿ ದೇಶಕ್ಕೆ ನೆರವು ಒದಗಿಸುವುದಾಗಿ ಹೇಳಿದ್ದರು. ಅದರಂತೆ ಇದೀಗ ಭೂಕಂಪ ಪರಿಹಾರ ಸಾಮಗ್ರಿಗಳ ಮೊದಲ ಪ್ಯಾಕೇಜ್ ಅನ್ನು (First batch of Quake Relief material) ಟರ್ಕಿ ದೇಶಕ್ಕೆ ವಿಮಾನದ ಮೂಲಕ ಕಳುಹಿಸಿಕೊಡಲಾಗಿದೆ. ಈ ಪ್ಯಾಕೇಜ್ನಲ್ಲಿ ಎನ್ಡಿಆರ್ಎಫ್ನ ತಜ್ಞ ಶೋಧ ಮತ್ತು ರಕ್ಷಣಾ ತಂಡವೊಂದೂ ಇದೆ. ಈ ತಂಡದಲ್ಲಿ ಪುರುಷ ಮತ್ತು ಮಹಿಳಾ ಸಿಬ್ಬಂದಿ ಇದ್ದಾರೆ. ಈ ಪ್ಯಾಕೇಜ್ನಲ್ಲಿ ತಜ್ಞರ ಜೊತೆ ವಿವಿಧ ರೀತಿಯ ಔಷಧಗಳು, ಡ್ರಿಲಿಂಗ್ ಮೆಷೀನ್ ಇತ್ಯಾದಿ ಹಲವು ಉಪಕರಣಗಳಿವೆ. ತರಬೇತಿ ಪಡೆದ ಶ್ವಾನಗಳ ದಳವೂ ವಿಮಾನದ ಮೂಲಕ ಟರ್ಕಿ ದೇಶ ತಲುಪಿದೆ.
ಕೇಂದ್ರ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗಚಿ ಈ ಬಗ್ಗೆ ಟ್ವೀಟ್ ಮಾಡಿದ್ದು, ಭೂಕಂಪಪೀಡಿತ ಟರ್ಕಿಗೆ ಭಾರತದಿಂದ ಪರಿಹಾರ ಸಾಮಗ್ರಿಗಳಿರುವ ಮೊದಲ ಬ್ಯಾಚ್ ಅನ್ನು ಕಳುಹಿಸಿರುವುದಾಗಿ ತಿಳಿಸಿದ್ದಾರೆ.
ಭಾರತದ ಈ ನೆರವಿಗೆ ಟರ್ಕಿ ಕೃತಜ್ಞತೆ ಸಲ್ಲಿಸಿದೆ. ಕಷ್ಟದಲ್ಲಿರುವಾಗ ಆಗುವವನೇ ನಿಜವಾದ ಸ್ನೇಹಿತ ಎಂದು ಭಾರತಕ್ಕೆ ಟರ್ಕಿ ರಾಯಭಾರಿ ಫಿರತ್ ಸುನೆಲ್ ತಮ್ಮ ದೇಶದ ನಾಣ್ನುಡಿಯೊಂದನ್ನು ಉಲ್ಲೇಖಿಸಿ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.
“ಟರ್ಕಿ ಮತ್ತು ಹಿಂದಿಯಲ್ಲಿ ದೋಸ್ತ್ ಎಂಬುದು ಸಾಮಾನ್ಯ ಪದ. ನಮ್ಮಲ್ಲಿ ಟರ್ಕಿ ನಾಣ್ನುಡಿಯೊಂದಿದೆ: ದೋಸ್ತ್ ಕರಾ ಗೂಂಡೇ ಬೆಲ್ಲಿ ಒಲುರ್ (ಕಷ್ಟದಲ್ಲಿರುವಾಗ ಸಹಾಯ ಮಾಡುವವನೇ ಸ್ನೇಹಿತ). ಧನ್ಯವಾದಗಳು” ಎಂದು ಅವರು ತಮ್ಮ ಟ್ವೀಟ್ನಲ್ಲಿ ಪ್ರಧಾನಿ ಕಾರ್ಯಾಲಯ, ನರೇಂದ್ರ ಮೋದಿ, ವಿದೇಶಾಂಗ ಸಚಿವ ಜೈಶಂಕರ್ ಅವರನ್ನು ಟ್ಯಾಗ್ ಮಾಡಿದ್ದಾರೆ.
India’s Humanitarian Assistance and Disaster Relief (HADR) capabilites in action.
The 1st batch of earthquake relief material leaves for Türkiye, along with NDRF Search & Rescue Teams, specially trained dog squads, medical supplies, drilling machines & other necessary equipment. pic.twitter.com/pB3ewcH1Gr
— Arindam Bagchi (@MEAIndia) February 6, 2023
“Dost” is a common word in Turkish and Hindi… We have a Turkish proverb: “Dost kara günde belli olur” (a friend in need is a friend indeed). Thank you very much ??@narendramodi @PMOIndia @DrSJaishankar @MEAIndia @MOS_MEA #earthquaketurkey https://t.co/nB97RubRJU
— Fırat Sunel फिरात सुनेल فرات صونال (@firatsunel) February 6, 2023
ಭಾರತದಂತೆ ವಿಶ್ವದ ಹಲವು ದೇಶಗಳು ಟರ್ಕಿ ಮತ್ತು ಸಿರಿಯಾ ದೇಶಗಳಿಗೆ ನೆರವು ಘೋಷಿಸಿವೆ. ಅಮೆರಿಕ, ಬ್ರಿಟನ್, ಐರೋಪ್ಯ ಒಕ್ಕೂಟ, ಜಪಾನ್, ಸೌತ್ ಕೊರಿಯಾ, ಮೆಕ್ಸಿಕೋ, ಜೋರ್ಡಾನ್ ಮೊದಲಾದ ದೇಶಗಳು ಪರಿಹಾರ ತಂಡಗಳನ್ನು ಟರ್ಕಿ ಮತ್ತು ಸಿರಿಯಾಗೆ ಕಳುಹಿಸಿವೆ.
ಟರ್ಕಿ ಮತ್ತು ಸಿರಿಯಾದಲ್ಲಿ ಭೀಕರ ಭೂಕಂಪ
ಮೊನ್ನೆ ಟರ್ಕಿ ಮತ್ತು ಸಿರಿಯಾ ದೇಶಗಳಲ್ಲಿ 7.8, 7.9 ಮತ್ತು 6.0 ತೀವ್ರತೆಯ ಭೂಕಂಪಗಳು ಸಂಭವಿಸಿದ್ದು, ಮಂಗಳವಾರ ಬೆಳಗ್ಗೆಯವರೆಗೂ ಸಾವಿನ ಸಂಖ್ಯೆ 4 ಸಾವಿರ ಗಡಿದಾಟಿದೆ. ಟರ್ಕಿ ದೇಶದಲ್ಲಿ ಸಾವಿನ ಸಂಖ್ಯೆ 3 ಸಾವಿರ ಸಮೀಪ ಇದೆ. ಸಿರಿಯಾದಲ್ಲಿ ಸುಮಾರು ಒಂದೂವರೆ ಸಾವಿರ ಮಂದಿ ಬಲಿಯಾಗಿರುವುದು ತಿಳಿದುಬಂದಿದೆ. ಈ ಶತಮಾನದಲ್ಲಿ ಕಂಡ ಅತ್ಯಂತ ಘೋರ ಭೂಕಂಪಗಳಲ್ಲಿ ಇದೂ ಒಂದಾಗಿದೆ. ಕಟ್ಟಡಗಳು ನೋಡನೋಡುತ್ತಲೇ ಕುಸಿದುಹೋಗುತ್ತಿರುವ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಹೋಗಿವೆ. ಮೂರು ಭೂಕಂಪದ ಜೊತೆಗೆ ನೂರಕ್ಕೂ ಹೆಚ್ಚು ಪಶ್ಚಾತ್ ಕಂಪನಗಳಿಂದಲೂ ಈ ಎರಡು ದೇಶಗಳು ನಲುಗಿ ಹೋಗಿವೆ.
ಇದನ್ನೂ ಓದಿ: Hajj Pilgrimage: ಹಜ್ ಯಾತ್ರಿಕರಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ; ಹೆಚ್ಚುವರಿ ಶುಲ್ಕವಿಲ್ಲದೆ 50 ಸಾವಿರ ರೂ.ಗೆ ಯಾತ್ರೆ
ಶವ ಸಿಕ್ಕ ಸಂಖ್ಯೆ 4 ಸಾವಿರ ಇದೆ. ಆದರೆ, ಸಾವಿರ ಸಾವಿರ ಜನರು ಕಣ್ಮರೆಯಾಗಿದ್ದಾರೆ. ಕಟ್ಟಡಗಳ ಅವಶೇಷಗಳನ್ನು ಸಂಪೂರ್ಣವಾಗಿ ತೆರವುಗೊಳಿಸುವುದಕ್ಕೆ ಬಹಳ ದಿನಗಳು ಬೇಕಾಗಬಹುದು. ಸಾವಿನ ಸಂಖ್ಯೆ ಇನ್ನೂ ಬಹಳಷ್ಟು ಹೆಚ್ಚುವ ಸಾಧ್ಯತೆ ಇದೆ.
ಟರ್ಕಿ ದೇಶದ ಅಧ್ಯಕ್ಷ ರೆಸೆಪ್ ಟಯ್ಯಿಪ್ ಎರ್ಡೋಗನ್ ಅವರು ಏಳು ದಿನಗಳ ರಾಷ್ಟ್ರೀಯ ಶೋಕಾಚರಣೆ ಘೋಷಿಸಿದ್ದಾರೆ. ಈ ಸಂದರ್ಭದಲ್ಲಿ ಟರ್ಕಿಯಾದ್ಯಂತ ಹಾಗೂ ವಿದೇಶಗಳಲ್ಲಿರುವ ಅದರ ರಾಯಭಾರ ಕಚೇರಿಗಳಲ್ಲಿ ಟರ್ಕಿ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಮಾತ್ರ ಹಾರಿಸಲಾಗುತ್ತದೆ.
Published On - 8:33 am, Tue, 7 February 23