Operation Dost: ಟರ್ಕಿಗೆ ತೆರಳಲಿದೆ ಭಾರತದ ಮತ್ತೊಂದು ಬ್ಯಾಚ್; ಈವರೆಗೆ ಕೊಟ್ಟ ನೆರವು ಎಷ್ಟು?
Fifth Aircraft From India Fly To Turkey: ಭೂಕಂಪಪೀಡಿತ ಟರ್ಕಿ ದೇಶಕ್ಕೆ ರಕ್ಷಣಾ ಕಾರ್ಯದಲ್ಲಿ ನೆರವಾಗಲು ಭಾರತದಿಂದ ಐದನೇ ವಿಮಾನ ಹಾರಿ ಹೋಗಲಿದೆ. ಇದರಲ್ಲಿ ಎನ್ಡಿಆರ್ಎಫ್ ತಜ್ಞರು, ಪರಿಹಾರ ಸಾಮಗ್ರಿ ಇತ್ಯಾದಿಯನ್ನು ಕಳುಹಿಸಿಕೊಡಲಾಗುತ್ತಿದೆ.
ನವದೆಹಲಿ: ಘನಘೋರ ಎನ್ನಬಹುದಾದ ಭೀಕರ ಭೂಕಂಪಗಳಿಂದ ಜರ್ಝರಿತವಾಗಿರುವ ಟರ್ಕಿ ಮತ್ತು ಸಿರಿಯಾ (Turkey Earthquake) ದೇಶಗಳಿಗೆ ಮಾನವೀಯ ದೃಷ್ಟಿಯಿಂದ ಭಾರತ ನೆರವಿನ ಹಸ್ತ ಚಾಚಿದೆ. ಈಗಾಗಲೇ ಟರ್ಕಿ ದೇಶಕ್ಕೆ ಭಾರತ ನಾಲ್ಕು ಸಿ-17 ಮಿಲಿಟರಿ ವಿಮಾನಗಳ ಮೂಲಕ ರಕ್ಷಣಾ ಮತ್ತು ಪರಿಹಾರ ಸಾಮಗ್ರಿಗಳನ್ನು ಕಳುಹಿಸಿಕೊಟ್ಟಿದೆ. ಇದರಲ್ಲಿ ಎನ್ಡಿಎಆರ್ಎಫ್ನ ರಕ್ಷಣಾ ತಜ್ಞರು, ಶ್ವಾನ ದಳ ಮೊದಲಾದವು ಸೇರಿವೆ. ಈಗ ಭಾರತದಿಂದ ಮತ್ತೊಂದು ಸಿ-17 ಫ್ಲೈಟ್ ಮೂಲಕ ಟರ್ಕಿಗೆ ಐದನೇ ಬ್ಯಾಚ್ ರವಾನೆಯಾಗಲಿದೆ. ಈ ಸಂಗತಿಯನ್ನು ಹಿರಿಯ ಅಧಿಕಾರಿ ಸಂಜಯ್ ವರ್ಮಾ ತಿಳಿಸಿದ್ದಾರೆ.
ಟರ್ಕಿಗೆ ಭಾರತದಿಂದ ಈಗಾಗಲೇ ನಾಲ್ಕು ವಿಮಾನಗಳ ಮೂಲಕ ರಕ್ಷಣಾ ಸಾಮಗ್ರಿ, ಉಪಕರಣಗಳು ತಲುಪಿವೆ. ಈಗ ಹೋಗಲಿರುವುದು ಐದನೇ ವಿಮಾನ. ಹಾಗೆಯೇ ಸಾವಿರಾರು ಜನರು ಮೃತಪಟ್ಟಿರುವ ಸಿರಿಯಾ ದೇಶಕ್ಕೂ ಭಾರತ ಸಹಾಯಹಸ್ತ ಚಾಚಿದೆ. ಸಿ-130 ವಿಮಾನದ ಮೂಲಕ ರಕ್ಷಣಾ ಕಾರ್ಯಾಚರಣೆ ತಂಡ ಮತ್ತು ಸಾಮಗ್ರಿಗಳನ್ನು ಸಿರಿಯಾಗೆ ಭಾರತ ತಲುಪಿಸಿದೆ.
ಕೆಲ ದಿನಗಳ ಹಿಂದೆ ಟರ್ಕಿ ದೇಶಕ್ಕೆ ಭಾರತ ನೆರವು ಘೋಷಿಸಿದಾಗ ಆ ದೇಶದ ರಾಯಭಾರಿ ಭಾವುಕಗೊಂಡು ಭಾರತವನ್ನು ಪ್ರಶಂಸಿಸಿದ್ದರು. ಭಾರತವನ್ನು ದೋಸ್ತ್ ಎಂದು ಅವರು ಕರೆದಿದ್ದರು. ಆಪತ್ಕಾಲದಲ್ಲಿ ಆಗುವವನೇ ನಿಜವಾದ ಗೆಳೆಯ ಎಂದು ಅವರು ಹೇಳುವ ಮೂಲಕ ಭಾರತದ ಗುಣಗಾನ ಮಾಡಿದ್ದರು.
ಇದನ್ನೂ ಓದಿ: Operation Dost: ನಮ್ಮದು ‘ವಸುದೈವ ಕುಟುಂಬಕಂ’ ನೀತಿ, ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು ಧರ್ಮ: ಎಸ್ ಜೈಶಂಕರ್
ಟರ್ಕಿಯಲ್ಲಿ ಭೂಕಂಪಪೀಡಿತ ಪ್ರದೇಶಗಳಲ್ಲಿ ಭಾರತದ ಎನ್ಡಿಆರ್ಎಫ್ ತಜ್ಞರು ಅಖಾಡಕ್ಕಿಳಿದಿದ್ದಾರೆ. ಎನ್ಡಿಆರ್ಎಫ್ನ 101 ಮಂದಿಯ ಎರಡು ತಂಡಗಳು ಕೆಲಸ ಮಾಡುತ್ತಿವೆ. ಈಗ ಇನ್ನೂ 51 ಮಂದಿ ತಜ್ಞರು ಟರ್ಕಿಗೆ ಹೋಗುತ್ತಿದ್ದಾರೆ ಎಂದು ಎನ್ಡಿಎಆರ್ಎಫ್ನ ನಿರ್ದೇಶಕ ಅತುಲ್ ಕರ್ವಾಲ್ ಹೇಳಿದ್ದಾರೆ.
ಟರ್ಕಿ ದೇಶದಲ್ಲಿ ಸುಮಾರು 3 ಸಾವಿರ ಭಾರತೀಯ ನಾಗರಿಕರಿದ್ದಾರೆ. ಇಸ್ತಾಂಬುಲ್ನಲ್ಲಿ 850, ಅಂಕಾರದಲ್ಲಿ 250 ಮಂದಿ ಇದ್ದಾರೆ. ಇನ್ನುಳಿದವರು ಬೇರೆ ಬೇರೆ ಕಡೆ ಚದುರಿ ಹೋಗಿದ್ದಾರೆ. ಅವರ ಪೈಕಿ ಬೆಂಗಳೂರು ಮೂಲದ ಕಂಪನಿಯ ಉದ್ಯೋಗಿ ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿದ್ದಾರೆ. ಇನ್ನೂ ಹಲವರು ದೂರದ ಸ್ಥಳದಲ್ಲಿ ಸಿಲುಕಿಕೊಂಡಿದ್ದಾರಾದರೂ ಸದ್ಯ ಸುರಕ್ಷಿತವಾಗಿದ್ದಾರೆನ್ನಲಾಗಿದೆ. ಭಾರತೀಯರ ಸುರಕ್ಷತೆಗೆ ವಿವಿಧ ಸಹಾಯವಾಣಿಗಳನ್ನು ಆರಂಭಿಸಲಾಗಿದೆ. ಹಾಗೆಯೇ, ಟರ್ಕಿಯಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆ ಮತ್ತು ಸಂಪರ್ಕಕ್ಕೂ ಪ್ರತ್ಯೇಕವಾಗಿ ನೋಡಲ್ ಅಧಿಕಾರಿ ಮತ್ತು ಸಹಾಯವಾಣಿಯನ್ನು ಒದಗಿಸಲಾಗಿದೆ.
ಟರ್ಕಿ ಮತ್ತು ಸಿರಿಯಾ ದೇಶಗಳಲ್ಲಿ ಸಂಭವಿಸಿರುವ ಭೂಕಂಪಗಳಲ್ಲಿ 16 ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟಿರುವುದು ದೃಢಪಟ್ಟಿದೆ. ಒಟ್ಟು ನಾಲ್ಕು ಬಾರಿ ದೊಡ್ಡ ಕಂಪನಗಳಾಗಿವೆ. ಇವತ್ತೂ ಕೂಡ ಭೂಮಿ ಸಣ್ಣದಾಗಿ ಕಂಪಿಸಿರುವುದು ತಿಳಿದುಬಂದಿದೆ. 10 ಸಾವಿರಕ್ಕೂ ಹೆಚ್ಚು ಕಟ್ಟಡಗಳು ನೆಲಸಮಗೊಂಡಿವೆ. ಈ ಕಟ್ಟಡಗಳ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದ್ದು, ಸಾವಿನ ಸಂಖ್ಯೆ ಕ್ಷಣಕ್ಷಣವೂ ಏರುತ್ತಿದೆ. 1939ರ ಬಳಿಕ ಟರ್ಕಿಯಲ್ಲಿ ಸಂಭವಿಸಿದ ಅತಿ ಭೀಕರ ಭೂಕಂಪ ಇದು ಎಂದು ಬಣ್ಣಿಸಲಾಗುತ್ತಿದೆ.