ದೆಹಲಿ: ಭಾರತದ ಆರ್ಥಿಕತೆ ಅತಿ ಶೀಘ್ರ ಪುಟಿದೇಳಲಿದೆ. ಯಾರೂ ಊಹಿಸದ ರೀತಿಯಲ್ಲಿ ಆರ್ಥಿಕ ಪ್ರಗತಿಗೆ ಭಾರತ ಸಾಕ್ಷಿಯಾಗಲಿದೆ. ಆರ್ಥಿಕತೆ ನೆಲಕಚ್ಚಲಿದೆ ಎಂಬ ಸಿನಿಕತನದ ಹೇಳಿಕೆಗಳು ಸುಳ್ಳಾಗಲಿದೆ ಎಂದು ಭಾರತದ ಶ್ರೀಮಂತ ಉದ್ಯಮಿ, ರಿಲಯನ್ಸ್ ಸಂಸ್ಥೆಯ ಮುಖ್ಯಸ್ಥ ಮುಕೇಶ್ ಅಂಬಾನಿ ಅಭಿಪ್ರಾಯಪಟ್ಟಿದ್ದಾರೆ.
ಭಾರತೀಯ ಮೊಬೈಲ್ ಕಾಂಗ್ರೆಸ್ (IMC) 2020 ಕಾರ್ಯಕ್ರಮದಲ್ಲಿ ಮಾತನಾಡಿದ ಅಂಬಾನಿ, ಭಾರತದಲ್ಲಿ ಆದಾಯ, ಉದ್ಯೋಗ, ಜೀವನ ಸ್ಥಿತಿ ಎಲ್ಲವೂ ಉನ್ನತ ಮಟ್ಟಕ್ಕೆ ಏರಲಿದೆ. ಸಮಾನತೆಯ ಭಾರತಕ್ಕೆ ನಾವು ಸಾಕ್ಷಿಯಾಗಲಿದ್ದು, 5 ಲಕ್ಷ ಡಾಲರ್ ಆರ್ಥಿಕತೆಯ ಗುರಿಯನ್ನು ಭಾರತ ಅತ್ಯಂತ ವೇಗವಾಗಿ ತಲುಪಲಿದೆ ಎಂದು ಹೇಳಿದ್ದಾರೆ.
ಡಿಜಿಟಲ್ ಕ್ರಾಂತಿ ಭಾರತೀಯರಲ್ಲಿ ಹೊಸ ಬದಲಾವಣೆಯನ್ನು ತಂದಿದೆ. ಡಿಜಿಟಲ್ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಸೃಷ್ಟಿಯಾಗಿದೆ. ವಿಶ್ವದ ಇತರೆ ದೇಶಗಳಿಗೆ ಹೋಲಿಸಿದರೆ ಭಾರತ ಡಿಜಿಟಲ್ ಕ್ಷೇತ್ರದಲ್ಲಿ ಸಶಕ್ತವಾಗಿದೆ ಮತ್ತು ವೇಗವಾಗಿ ಸಾಗುತ್ತಿದೆ. ಪ್ರತಿಯೊಬ್ಬ ಭಾರತೀಯನೂ ಡಿಜಿಟಲ್ ಲೋಕಕ್ಕೆ ತೆರೆದುಕೊಳ್ಳುವ ಮೂಲಕ ದೇಶದ ಸರ್ವತೋಮುಖ ಬೆಳವಣಿಗೆ ಸಾಧ್ಯವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.
2021ರ ಅಂತ್ಯದ ಒಳಗೆ ಭಾರತದಲ್ಲಿ 5ಜಿ ಆರಂಭವಾಗಲಿದೆ. ಅದಕ್ಕೆ ಬೇಕಾದ ಸಕಲ ಸಿದ್ಧತೆಗಳೂ ಆಗುತ್ತಿದೆ. ಭಾರತ ಪ್ರಗತಿ ಹೊಂದುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಕೊರೊನಾ ಸಹ ಭಾರತವನ್ನು ತಡೆದು ನಿಲ್ಲಿಸಲಾರದು ಎಂದು ಹೇಳುವ ಮೂಲಕ ಭಾರತದ ಆರ್ಥಿಕತೆ ಪಾತಾಳಕ್ಕೆ ತಲುಪಿದೆ ಎನ್ನುತ್ತಿರುವವರನ್ನು ಪರೋಕ್ಷವಾಗಿ ಕಾಲೆಳೆದಿದ್ದಾರೆ.
ದೆಹಲಿ ಚಲೋ ಆರ್ಥಿಕತೆಗಷ್ಟೇ ಅಲ್ಲ.. ಮುಂದೆ ದೇಶದ ಭದ್ರತೆಗೇ ಧಕ್ಕೆ ತರಲಿದೆ: ಅಮರೀಂದರ್ ಎಚ್ಚರಿಕೆ
Published On - 2:22 pm, Thu, 10 December 20