ದೆಹಲಿ: ಕೊರೊನಾ ಸೋಂಕು ಭಾರತದಲ್ಲಿ ಮುಂದಿನ ಆರು ತಿಂಗಳಿನಲ್ಲಿ ಎಂಡೆಮಿಕ್ ಹಂತವನ್ನು ತಲುಪಲಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಂದರೆ, ಕೊವಿಡ್19 ಹೊಸ ರೂಪಾಂತರಿಗಳು ಕೊರೊನಾ ಮೂರನೇ ಅಲೆಯನ್ನು ತರಲಾರವು ಎಂದು ಹೇಳಲಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಕೇಂದ್ರದ ನಿರ್ದೇಶಕ ಸುಜೀತ್ ಸಿಂಗ್ ಈ ಬಗ್ಗೆ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಕೊವಿಡ್ ಸೋಂಕು ಎಂಡೆಮಿಕ್ ಹಂತ ತಲುಪುತ್ತಿದೆ. ಅಂದರೆ, ಕೊರೊನಾ ಸೋಂಕನ್ನು ಇನ್ನು ಹೆಚ್ಚು ಉತ್ತಮವಾಗಿ ನಿರ್ವಹಿಸಬಹುದು. ಆರೋಗ್ಯ ಸೇವೆಗಳನ್ನು ಸುಲಭವಾಗಿ ನೀಡಬಹುದಾದ ಮಟ್ಟಿಗೆ ಕೊರೊನಾ ಬಾಧೆ ಕುಗ್ಗಲಿದೆ ಎಂದು ತಿಳಿಸಿದ್ದಾರೆ. ಕೇರಳದಲ್ಲಿ ಕೂಡ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಕೆ ಕಾಣುತ್ತಿವೆ ಎಂದು ಅವರು ಹೇಳಿದ್ದಾರೆ. ಇದೊಂದು ಆಶಾದಾಯಕ ಬೆಳವಣಿಗೆ ಆಗಲಿದೆ.
ಕೊವಿಡ್ ವಿರುದ್ಧದ ಹೋರಾಟಕ್ಕೆ ಲಸಿಕೆ ಮುಖ್ಯ ಅಸ್ತ್ರವಾಗಿದೆ ಎಂದು ಅವರು ಒತ್ತಿ ಹೇಳಿದ್ದಾರೆ. ಭಾರತದಲ್ಲಿ ಸುಮಾರು 75 ಕೋಟಿ ಮಂದಿ ಲಸಿಕೆ ಪಡೆದುಕೊಂಡಿದ್ದಾರೆ. ಲಸಿಕೆಯ ಪರಿಣಾಮಕಾರಿತ್ವ ಶೇಕಡಾ 70 ಆದರೆ, ಭಾರತದಲ್ಲಿ ಸುಮಾರು 50 ಕೋಟಿ ಮಂದಿ ರೋಗನಿರೋಧಕ ಶಕ್ತಿ ಪಡೆದಂತೆ ಎಂದು ಅವರು ತಿಳಿಸಿದ್ದಾರೆ.
ಕೊವಿಡ್ ಲಸಿಕೆಯ ಸಿಂಗಲ್ ಡೋಸ್ 30 ರಿಂದ 31 ಶೇಕಡಾ ರೋಗನಿರೋಧಕ ಶಕ್ತಿ ನೀಡುತ್ತದೆ. ಹಾಗಾಗಿ, ಲಸಿಕೆಯ ಮೊದಲ ಡೋಸ್ ಪಡೆದಿರುವ 30 ಕೋಟಿ ಮಂದಿ ಕೂಡ ರೋಗನಿರೋಧಕ ಶಕ್ತಿ ಪಡೆದುಕೊಂಡಿದ್ದಾರೆ ಎಂದು ಸಿಂಗ್ ಹೇಳಿದ್ದಾರೆ.
ಆದರೆ, ಲಸಿಕೆ ಪಡೆದ ಬಳಿಕವೂ ಜನರು ಕೊವಿಡ್ ಮಾರ್ಗಸೂಚಿಗಳನ್ನು ಪಾಲಿಸಬೇಕಾದ ಅನಿವಾರ್ಯತೆ ಇದೆ. ಒಮ್ಮೆ ಸೋಂಕಿಗೆ ಒಳಗಾದವರಿಗೆ ಅಥವಾ ಲಸಿಕೆ ಪಡೆದವರೂ ಕೊರೊನಾಗೆ ತುತ್ತಾಗುವ ಸಾಧ್ಯತೆಯ ಪ್ರಮಾಣ 20 ರಿಂದ 30 ಶೇಕಡಾ ಇದೆ ಎಂದು ಡಾ. ಸಿಂಗ್ ತಿಳಿಸಿದ್ದಾರೆ.
ಹೊಸ ಅಥವಾ ರೂಪಾಂತರಿ ಕೊರೊನಾ ವೈರಾಣುಗಳಿಂದ ಕೊವಿಡ್ಗೆ ಮರಳಿ ತುತ್ತಾಗುವ ಸಾಧ್ಯತೆ ಇರುತ್ತದೆ ಎಂದು ಅವರು ವಿವರಿಸಿದ್ದಾರೆ. ಅಷ್ಟೇ ಅಲ್ಲದೆ, ಲಸಿಕೆಯ ರೋಗನಿರೋಧಕ ಶಕ್ತಿ ಲಸಿಕೆ ಪಡೆದ 70 ರಿಂದ 100 ದಿನಗಳ ಅವಧಿಯ ನಂತರ ಕುಂಠಿತವಾಗುತ್ತದೆ ಎಂದೂ ಅವರು ತಿಳಿಸಿದ್ದಾರೆ.
ಸುಜೀತ್ ಸಿಂಗ್ ಪ್ರಕಾರ ಭಾರತದಲ್ಲಿ ಯಾವುದೇ ಹೊಸ ರೂಪಾಂತರಿ ಕೊರೊನಾ ವೈರಾಣು ಕಂಡುಬಂದಿಲ್ಲ. ಸದ್ಯ ಜಗತ್ತಿನಲ್ಲಿ ಕೊಂಚ ಆತಂಕ ಸೃಷ್ಟಿಸಿರುವ C1.2 ಮತ್ತು Mu ಕೊರೊನಾ ವೈರಾಣುಗಳು ಭಾರತದಲ್ಲಿ ಪತ್ತೆಯಾಗಿಲ್ಲ ಎಂದು ಅವರು ಹೇಳಿದ್ದಾರೆ. ಹೊಸ ಕೊರೊನಾ ರೂಪಾಂತರಿ ಒಂದೇ ಮೂರನೇ ಅಲೆ ಸೃಷ್ಟಿಸಲು ಸಾಧ್ಯವಿಲ್ಲ. ಆದರೆ, ಹಬ್ಬಗಳ ಸೀಸನ್ ಇರುವುದರಿಂದ ಸ್ವಲ್ಪ ಎಚ್ಚರಿಕೆಯೂ ಅಗತ್ಯ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಭಾರತಕ್ಕೆ ಕೊರೊನಾ ಇನ್ನು ಸ್ಥಳೀಯ ಜಾಡ್ಯ: ವಿಶ್ವ ಆರೋಗ್ಯ ಸಂಸ್ಥೆ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್
ಇದನ್ನೂ ಓದಿ: ಕೊರೊನಾ ಸಂಕಷ್ಟ ಮುಗಿಯುತ್ತಿದ್ದಂತೆ ಕೊರೊನಾ ವಾರಿಯರ್ಸ್ಗೆ ಕರ್ತವ್ಯದಿಂದ ಮುಕ್ತಿಗೊಳಿಸಲು ಮುಂದಾದ ಆರೋಗ್ಯ ಇಲಾಖೆ