ಏರ್​ ಇಂಡಿಯಾ ಖರೀದಿಗೆ ಟಾಟಾ ಸನ್ಸ್​ ಬಿಡ್: ಯಾರಿಗೆ ಸಿಗಲಿದೆ ದೈತ್ಯ ಕಂಪನಿಯ ಆಧಿಪತ್ಯ

ಬಂಡವಾಳ ಹಿಂತೆಗೆದ ಘೋಷಣೆಯ ನಂತರ ಹಲವು ಖಾಸಗಿ ಕಂಪನಿಗಳು ಏರ್​ ಇಂಡಿಯಾ ಖರೀದಿಗೆ ಬಿಡ್​ ಸಲ್ಲಿಸಿವೆ. ಇದೀಗ ಏರ್​ ಇಂಡಿಯಾ ಮಾರಾಟ ಪ್ರಕ್ರಿಯೆಯು ನಿರ್ಣಾಯಕ ಹಂತ ತಲುಪಿದೆ.

ಏರ್​ ಇಂಡಿಯಾ ಖರೀದಿಗೆ ಟಾಟಾ ಸನ್ಸ್​ ಬಿಡ್: ಯಾರಿಗೆ ಸಿಗಲಿದೆ ದೈತ್ಯ ಕಂಪನಿಯ ಆಧಿಪತ್ಯ
ಏರ್​ ಇಂಡಿಯಾ ಮತ್ತು ಟಾಟಾ ಸನ್ಸ್​


ದೆಹಲಿ: ಸಾಲದ ಸುಳಿಯಲ್ಲಿ ಸಿಲುಕಿರುವ ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ಖರೀದಿಗೆ ಟಾಟಾ ಸನ್ಸ್​ ಬುಧವಾರ (ಸೆಪ್ಟೆಂಬರ್ 15) ಬಿಡ್​ ಸಲ್ಲಿಸಿದೆ. ಬಂಡವಾಳ ಹಿಂತೆಗೆದ ಘೋಷಣೆಯ ನಂತರ ಹಲವು ಖಾಸಗಿ ಕಂಪನಿಗಳು ಏರ್​ ಇಂಡಿಯಾ ಖರೀದಿಗೆ ಬಿಡ್​ ಸಲ್ಲಿಸಿವೆ. ಇದೀಗ ಏರ್​ ಇಂಡಿಯಾ ಮಾರಾಟ ಪ್ರಕ್ರಿಯೆಯು ನಿರ್ಣಾಯಕ ಹಂತ ತಲುಪಿದೆ. ಹಲವು ಬಿಡ್​ಗಳನ್ನು ವಹಿವಾಟು ಸಲಹೆಗಾರರು (ಟ್ರಾನ್ಸಾಕ್ಷನ್ ಅಡ್ವೈಸರ್) ಸ್ವೀಕರಿಸಿದ್ದಾರೆ ಎಂದು ಬಂಡವಾಳ ಹಿಂತೆಗೆದ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ವಿಭಾಗದ (Department of Investment and Public Asset Management – DIPAM) ಕಾರ್ಯದರ್ಶಿ ಹೇಳಿದ್ದಾರೆ.

ಏರ್ ಇಂಡಿಯಾ ಖರೀದಿಗೆ ಬಿಡ್ ಸಲ್ಲಿಸಲು ಸೆಪ್ಟೆಂಬರ್ 15 ಅಂತಿಮ ದಿನ. ಈ ಗಡುವು ವಿಸ್ತರಿಸುವುದಿಲ್ಲ ಎಂದು ನಾಗರಿಕ ವಿಮಾನಯಾನ ಖಾತೆ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಈ ಮೊದಲೇ ಸ್ಪಷ್ಟಪಡಿಸಿದ್ದರು. ಪ್ರಸ್ತುತ ಏರ್​ ಇಂಡಿಯಾ ಕಂಪನಿಯು ₹ 43,000 ಕೋಟಿ ಸಾಲದ ಸುಳಿಯಲ್ಲಿದೆ. ಈ ಪೈಕಿ ₹ 22,000 ಕೋಟಿಯನ್ನು ಏರ್​ ಇಂಡಿಯಾ ಅಸೆಟ್ ಹೋಲ್ಡಿಂಗ್ ಲಿಮಿಟೆಡ್​ಗೆ (AIAHL) ವರ್ಗಾಯಿಸಲಾಗಿತ್ತು.

ಏರ್​ ಇಂಡಿಯಾ ಮತ್ತು ಅದರ ಅಧೀನದಲ್ಲಿರುವ ಕಡಿಮೆ ವೆಚ್ಚದ ವಿಮಾನಯಾನ ಸಂಸ್ಥೆಯ ಏರ್​ ಇಂಡಿಯಾ ಎಕ್ಸ್​ಪ್ರೆಸ್​ನಲ್ಲಿ ಸರ್ಕಾರವು ತನ್ನ ಬಂಡವಾಳವನ್ನು ಸಂಪೂರ್ಣ ಹಿಂಪಡೆಯಲು ಯೋಜಿಸಿದೆ. ವಿಮಾನ ನಿಲ್ದಾಣಗಳಲ್ಲಿ ವಿಮಾನಗಳ ನಿರ್ವಹಣೆ ಮತ್ತು ಪ್ರಯಾಣಿಕರಿಗೆ ಪೂರಕ ಸೇವೆ ಒದಗಿಸುವ ಕಂಪನಿಯಾದ ಏರ್ ಇಂಡಿಯಾ ಸ್ಯಾಟ್ಸ್ ಏರ್​ಪೋರ್ಟ್​ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್​ನಿಂದಲೂ (Air India SATS Airport Services Private Limited – AISATS) ಸರ್ಕಾರವು ಅರ್ಧದಷ್ಟು ಬಂಡವಾಳ ಹಿಂಪಡೆಯಲು ಉದ್ದೇಶಿಸಿದೆ.

ಮುಂಬೈನಲ್ಲಿರುವ ಏರ್​ ಇಂಡಿಯಾ ಕಟ್ಟಡ ಮತ್ತು ದೆಹಲಿಯಲ್ಲಿರುವ ಏರ್​ಲೈನ್ಸ್​ ಹೌಸ್​ ಕಟ್ಟಡವೂ ಈ ಹರಾಜು ಪ್ರಕ್ರಿಯೆಯ ಭಾಗವಾಗಿರಲಿದೆ. ಪ್ರಸ್ತುತ ಏರ್ ಇಂಡಿಯಾ ಬಳಿ ಭಾರತದ ವಿಮಾನ ನಿಲ್ದಾಣಗಳಲ್ಲಿ 4,400 ದೇಶೀಯ ಮತ್ತು 1,800 ಅಂತರರಾಷ್ಟ್ರೀಯ ಲ್ಯಾಂಡಿಂಗ್ ಮತ್ತು ಪಾರ್ಕಿಂಗ್ ಸ್ಲಾಟ್​ಗಳಿವೆ. ವಿದೇಶಗಳಲ್ಲಿ 900 ಸ್ಲಾಟ್​ಗಳಿವೆ. ಏರ್​ ಇಂಡಿಯಾ ಖರೀದಿಸುವ ಕಂಪನಿಗೆ ಈ ಸವಲತ್ತುಗಳೂ ದೊರೆಯಲಿವೆ.

ಇದನ್ನೂ ಓದಿ: ಕಳೆದ ವರ್ಷ ಕೇರಳದಲ್ಲಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಅಪಘಾತಕ್ಕೆ ಕಾರಣವಾಗಿದ್ದು ಪೈಲಟ್ ಅಚಾತುರ್ಯ: ವರದಿ

ಇದನ್ನೂ ಓದಿ: ಸ್ಯಾನ್​ ಫ್ರಾನ್ಸಿಸ್ಕೋ ಟು ಬೆಂಗಳೂರು; 17 ಗಂಟೆಗಳ ನಾನ್​ಸ್ಟಾಪ್ ವಿಮಾನಯಾನದ ನೇತೃತ್ವ ವಹಿಸಿದ ಏರ್ ಇಂಡಿಯಾ ಮಹಿಳಾ ಪೈಲಟ್ ತಂಡ

(Tatas Submit Bid For Air India Sale on Last Day Who has the Chance Own this Big Company)

Click on your DTH Provider to Add TV9 Kannada