
ನವದೆಹಲಿ, ಡಿಸೆಂಬರ್ 31: ಭಾರತವು 2026ರ ಗಣರಾಜ್ಯೋತ್ಸವದಂದು (Republic Day) ಅಪರೂಪದ ದೃಶ್ಯಕ್ಕೆ ಸಾಕ್ಷಿಯಾಗಲಿದೆ. ಈ ಬಾರಿ ಭಾರತೀಯ ಸೇನೆಯ ಪ್ರಾಣಿಗಳು ಕರ್ತವ್ಯ ಪಥದಲ್ಲಿ ಮೆರವಣಿಗೆ ನಡೆಸಲಿವೆ. ಇದು ಸಹಿಷ್ಣುತೆ, ತ್ಯಾಗ ಮತ್ತು ಸೈನ್ಯದ ವಿಶಿಷ್ಟವಾದ ಕಾರ್ಯಾಚರಣೆಯ ಸಾಮರ್ಥ್ಯವನ್ನು ಸಂಕೇತಿಸುತ್ತದೆ. ಇದೇ ಮೊದಲ ಬಾರಿಗೆ, ರಿಮೌಂಟ್ ಮತ್ತು ಪಶುವೈದ್ಯಕೀಯ ದಳದ ಕ್ಯುರೇಟೆಡ್ ಪ್ರಾಣಿ ತುಕಡಿಯು ಮೆರವಣಿಗೆಯಲ್ಲಿ ಭಾಗವಹಿಸುತ್ತದೆ. ಈ ತುಕಡಿಯು ಎರಡು ಬ್ಯಾಕ್ಟ್ರಿಯನ್ ಒಂಟೆಗಳು, 4 ಝನ್ಸ್ಕಾರ್ ಪೋನಿಗಳು, 4 ರಾಪ್ಟರ್‌ಗಳು, 10 ಭಾರತೀಯ ತಳಿಯ ಸೇನಾ ನಾಯಿಗಳು ಮತ್ತು ಈಗಾಗಲೇ ಸೇವೆಯಲ್ಲಿರುವ 6 ಸಾಂಪ್ರದಾಯಿಕ ಮಿಲಿಟರಿ ನಾಯಿಗಳನ್ನು ಒಳಗೊಂಡಿರುತ್ತದೆ.
ಲಡಾಖ್‌ನ ಮರುಭೂಮಿಗಳಲ್ಲಿ ಕಾರ್ಯಾಚರಣೆಗಾಗಿ ಇತ್ತೀಚೆಗೆ ಸೇರಿಸಲಾದ ಹಾರ್ಡಿ ಬ್ಯಾಕ್ಟ್ರಿಯನ್ ಒಂಟೆಗಳು ಈ ಮೆರವಣಿಗೆಯನ್ನು ಮುನ್ನಡೆಸುತ್ತವೆ. ತೀವ್ರ ಶೀತ, ಗಾಳಿ ಮತ್ತು 15,000 ಅಡಿಗಳಿಗಿಂತ ಹೆಚ್ಚಿನ ಎತ್ತರಕ್ಕೆ ಸಂಪೂರ್ಣವಾಗಿ ಹೊಂದಿಕೊಂಡಿರುವ ಈ ಒಂಟೆಗಳು 250 ಕೆಜಿಗಳಷ್ಟು ಭಾರವನ್ನು ಹೊತ್ತೊಯ್ಯಬಲ್ಲವು. ಅತ್ಯಂತ ಕಡಿಮೆ ನೀರು ಮತ್ತು ಆಹಾರದೊಂದಿಗೆ ದೀರ್ಘ ದೂರವನ್ನು ಕ್ರಮಿಸಬಲ್ಲವು. ಹೀಗಾಗಿ, ಇವುಗಳನ್ನು ಮಿಲಿಟರಿ ಕಾರ್ಯಾಚರಣೆಯಲ್ಲಿ ಬಳಸಲಾಗುತ್ತದೆ. ಅದರಲ್ಲೂ ಮುಖ್ಯವಾಗಿ ಮರಳು ಭೂಪ್ರದೇಶ ಮತ್ತು ಇಳಿಜಾರುಗಳಲ್ಲಿ ವಾಸ್ತವಿಕ ನಿಯಂತ್ರಣ ರೇಖೆಯ ಉದ್ದಕ್ಕೂ ಗಸ್ತು ತಿರುಗುವ ಸಾಮರ್ಥ್ಯವನ್ನು ಈ ಒಂಟೆಗಳು ಹೊಂದಿವೆ. ಈಗಾಗಲೇ ಇವು ಸಿಯಾಚಿನ್ ಹಿಮನದಿ ಸೇರಿದಂತೆ ಕೆಲವು ಕಠಿಣ ಭೂಪ್ರದೇಶಗಳಲ್ಲಿ ಸೇವೆ ಸಲ್ಲಿಸಿವೆ. ಇವು ಹೆಚ್ಚಿನ ಅಪಾಯದ ಪ್ರದೇಶಗಳಲ್ಲಿ ಸೈನಿಕರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತವೆ.
ಇದನ್ನೂ ಓದಿ: Indian Army Recruitment 2025: ಲಿಖಿತ ಪರೀಕ್ಷೆಯಿಲ್ಲದೇ ಭಾರತೀಯ ಸೇನೆ ಸೇರಲು ಇಲ್ಲಿದೆ ಸುವರ್ಣವಕಾಶ; ಹೀಗೆ ಅರ್ಜಿ ಸಲ್ಲಿಸಿ
ಭಾರತೀಯ ಸೇನೆಯ “ಸೈಲೆಂಟ್ ವಾರಿಯರ್ಸ್” ಎಂದು ಕರೆಯಲ್ಪಡುವ ಸೇನಾ ಶ್ವಾನಗಳು ಗಣರಾಜ್ಯೋತ್ಸವದ ಮೆರವಣಿಗೆಯ ಪ್ರಮುಖ ಅಂಶವಾಗಿರುತ್ತದೆ. ಮೀರತ್‌ನ ಆರ್‌ವಿಸಿ ಸೆಂಟರ್ ಮತ್ತು ಕಾಲೇಜಿನಲ್ಲಿ ರಿಮೌಂಟ್ ಮತ್ತು ಪಶುವೈದ್ಯಕೀಯ ದಳದಿಂದ ಬೆಳೆಸಲ್ಪಟ್ಟ, ತರಬೇತಿ ಪಡೆದ ಮತ್ತು ಪೋಷಿಸಲ್ಪಟ್ಟ ಈ ಶ್ವಾನಗಳು ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳು, ಸ್ಫೋಟಕ ಮತ್ತು ಗಣಿ ಪತ್ತೆ, ಟ್ರ್ಯಾಕಿಂಗ್, ಕಾವಲು, ವಿಪತ್ತು ಪ್ರತಿಕ್ರಿಯೆ ಮತ್ತು ಹುಡುಕಾಟ ಮತ್ತು ರಕ್ಷಣಾ ಕಾರ್ಯಾಚರಣೆಗಳಲ್ಲಿ ಸೈನಿಕರನ್ನು ಬೆಂಬಲಿಸುತ್ತವೆ.
ಕಳೆದ ದಶಕಗಳಲ್ಲಿ ಸೇನಾ ಶ್ವಾನಗಳು ಮತ್ತು ಅವುಗಳ ನಿರ್ವಾಹಕರು ಅಸಾಧಾರಣ ಶೌರ್ಯವನ್ನು ಪ್ರದರ್ಶಿಸಿದ್ದಾರೆ, ಯುದ್ಧ ಮತ್ತು ಮಾನವೀಯ ಕಾರ್ಯಾಚರಣೆಗಳಲ್ಲಿ ಧೈರ್ಯದ ಕಾರ್ಯಗಳಿಗಾಗಿ ಶೌರ್ಯ ಪ್ರಶಸ್ತಿಗಳು ಮತ್ತು ಪ್ರಶಂಸೆಗಳನ್ನು ಗಳಿಸಿದ್ದಾರೆ. ಈ ಬಾರಿಯ ಸ್ವಾತಂತ್ರ್ಯೋತ್ಸವದ ವೇಳೆಯೂ ಭಾರತೀಯ ತಳಿಯ ಸೇನಾ ಶ್ವಾನಗಳ ಪ್ರದರ್ಶನ ಗಮನಸೆಳೆದಿತ್ತು.
ಇದನ್ನೂ ಓದಿ: Brigadier in Indian Army: ಭಾರತೀಯ ಸೇನೆಯಲ್ಲಿ ಬ್ರಿಗೇಡಿಯರ್ ಆಗುವುದು ಹೇಗೆ? ಸಂಪೂರ್ಣ ಪ್ರಕ್ರಿಯೆಯನ್ನು ತಿಳಿಯಿರಿ
ಆತ್ಮನಿರ್ಭರ ಭಾರತ್ ಮತ್ತು ಮೇಕ್ ಇನ್ ಇಂಡಿಯಾದ ದೃಷ್ಟಿಕೋನದಡಿಯಲ್ಲಿ ಭಾರತೀಯ ಸೇನೆಯು ಮುಧೋಳ ಹೌಂಡ್, ರಾಂಪುರ್ ಹೌಂಡ್, ಚಿಪ್ಪಿಪರೈ, ಕೊಂಬೈ ಮತ್ತು ರಾಜಪಾಳ್ಯಂನಂತಹ ಸ್ಥಳೀಯ ನಾಯಿ ತಳಿಗಳನ್ನು ಹೆಚ್ಚಾಗಿ ಸೇರಿಸಿಕೊಳ್ಳುತ್ತಿದೆ. ಈ ಪ್ರಾಣಿಗಳ ತಂಡವು 2026ರ ಗಣರಾಜ್ಯೋತ್ಸವದಂದು ಮೆರವಣಿಗೆ ನಡೆಸುವ ಮೂಲಕ ಭಾರತದ ರಕ್ಷಣಾ ಬಲವು ಯಂತ್ರಗಳು ಮತ್ತು ಸೈನಿಕರಿಂದ ಮಾತ್ರ ನಿರ್ಮಿಸಲ್ಪಟ್ಟಿಲ್ಲ ಎಂಬುದನ್ನು ನೆನಪಿಸುತ್ತದೆ. ಸಿಯಾಚಿನ್‌ನ ಹಿಮಾವೃತ ಎತ್ತರದಿಂದ ಲಡಾಖ್‌ನ ಶೀತ ಮರುಭೂಮಿಗಳು ಮತ್ತು ವಿಪತ್ತು ಪೀಡಿತ ನಾಗರಿಕ ಪ್ರದೇಶಗಳವರೆಗೆ, ಈ ಪ್ರಾಣಿಗಳು ಕರ್ತವ್ಯ, ಧೈರ್ಯ ಮತ್ತು ತ್ಯಾಗದ ಹೊರೆಯನ್ನು ಮೌನವಾಗಿಯೇ ಹಂಚಿಕೊಂಡಿವೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:06 pm, Wed, 31 December 25