ಗಣರಾಜ್ಯೋತ್ಸವ: ಭಾನುವಾರ ಬೆಂಗಳೂರಿನ ಈ ರಸ್ತೆಯಲ್ಲಿ ವಾಹನ ಸಂಚಾರ, ಪಾರ್ಕಿಂಗ್ ನಿಷೇಧ
ಬೆಂಗಳೂರಿನಲ್ಲಿ ಗಣರಾಜ್ಯೋತ್ಸವದಂದು ಕಬ್ಬನ್ ರಸ್ತೆಯಲ್ಲಿನ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಕವಾಯತು ಮೈದಾನದಲ್ಲಿವಿಶೇಷ ಕವಾಯತು ನಡೆಯಲಿದೆ. ಈ ಕಾರಣಕ್ಕಾಗಿ ಜನವರಿ 26ರಂದು ಬೆಳಗ್ಗೆ 8:30 ರಿಂದ 10:30ರವರೆಗೆ ಕಬ್ಬನ್ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಪರ್ಯಾಯ ಮಾರ್ಗಗಳನ್ನು ಸೂಚಿಸಲಾಗಿದೆ ಮತ್ತು ಸಾರ್ವಜನಿಕರು ಸಾರ್ವಜನಿಕ ಸಾರಿಗೆಯನ್ನು ಬಳಸುವಂತೆ ಮನವಿ ಮಾಡಲಾಗಿದೆ. ವಾಹನ ನಿಲುಗಡೆಗೂ ನಿರ್ಬಂಧ ವಿಧಿಸಲಾಗಿದೆ.
ಬೆಂಗಳೂರು, ಜನವರಿ 25: ಗಣರಾಜ್ಯೋತ್ಸವ (Republic Day) ದಿನಾಚರಣೆ ಅಂಗವಾಗಿ ರಸ್ತೆಯಲ್ಲಿರುವ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಕವಾಯತು ಮೈದಾನದಲ್ಲಿ ಭಾನುವಾರ (ಜನವರಿ 26) ರಂದು ಬೆಳಗ್ಗೆ 9 ಗಂಟೆಗೆ ಕಬ್ಬನ್ ರಸ್ತೆಯಲ್ಲಿರುವ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಕವಾಯತು ಮೈದಾನದಲ್ಲಿ ವಿಶೇಷ ಕವಾಯತು ನಡೆಯಲಿದೆ. ರಾಜ್ಯಪಾಲರು ಧ್ವಜಾರೋಹಣ ಮಾಡಿ, ಗೌರವ ವಂದನೆ ಸ್ವೀಕರಿಸಲಿದ್ದಾರೆ.
ಈ ಹಿನ್ನಲೆಯಲ್ಲಿ ಬೆಂಗಳೂರು ನಗರ ಸಂಚಾರ ಪೊಲೀಸರು (Bengaluru Traffic Police) ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಕವಾಯತು ಮೈದಾನದ ಬಂದೋಬಸ್ತ್ ವ್ಯವಸ್ಥೆಯನ್ನು ಮಾಡಿದ್ದಾರೆ. ಮತ್ತು ಮೈದಾನದ ಸುತ್ತ-ಮುತ್ತಲು ವಾಹನ ಸಂಚಾರ, ಪಾರ್ಕಿಂಗ್ ನಿಷೇಧಿಸಲಾಗಿದೆ. ಈ ಕುರಿತು ಬೆಂಗಳೂರು ಸಂಚಾರಿ ಪೊಲೀಸರು ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
ಅಂದು ಬೆಳಗ್ಗೆ 8:30 ರಿಂದ 10:30ರ ವರೆಗೆ ಕಬ್ಬನ್ ರಸ್ತೆಯಲ್ಲಿ ಬಿ.ಆರ್.ವಿ ಜಂಕ್ಷನ್ನಿಂದ ಕಾಮರಾಜರಸ್ತೆ ಜಂಕ್ಷನ್ವರೆಗೆ ಎರಡೂ ದಿಕ್ಕುಗಳಲ್ಲಿನ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಪರ್ಯಾಯ ಮಾರ್ಗ
ಇನ್ಫೆಂಟ್ರಿರಸ್ತೆಯಲ್ಲಿ ಮಣಿಪಾಲ್ ಸೆಂಟರ್ ಕಡೆಗೆ ಸಂಚರಿಸುವ ವಾಹನಗಳು: ನೇರವಾಗಿ ಇನ್ ಫೆಂಟ್ರಿರಸ್ತೆ – ಸಫೀನಾ ಪ್ಲಾಜಾದಲ್ಲಿ ಎಡತಿರುವು ಪಡೆದು ಮೈನ್ಗಾರ್ಡ್ರಸ್ತೆ – ಆಲೀಸ್ ಸರ್ಕಲ್-ಡಿಸ್ಸೆನ್ಸರಿ ರಸ್ತೆ – ಕಾಮರಾಜರಸ್ತೆ ಮತ್ತು ಡಿಕನ್ಸನ್ ರಸ್ತೆ ಜಂಕ್ಷನ್ನಲ್ಲಿ ಬಲಕ್ಕೆ ತಿರುವು ಪಡೆದು ಕಾಮರಾಜ ರಸ್ತೆ – ಕಬ್ಬನ್‌ರಸ್ತೆ ಮತ್ತು ಕಾಮರಾಜ ರಸ್ತೆ ಜಂಕ್ಷನ್ನಲ್ಲಿ ಎಡಕ್ಕೆ ತಿರುವು ಪಡೆದು ಕಬ್ಬನ್‌ರಸ್ತೆ ಮುಖಾಂತರ ಮಣಿಪಾಲ್ ಸೆಂಟರ್ ಕಡೆಗೆ ಸಾಗಬೇಕು.
ಇದನ್ನೂ ಓದಿ: ಗಣರಾಜ್ಯೋತ್ಸವ: ಜಲಜೀವನ್ ಮಿಷನ್ಗೆ ಕೊಡುಗೆ ನೀಡಿದ ಕರ್ನಾಟಕದ ಐದು ಜಲ ಯೋಧರಿಗೆ ಆಹ್ವಾನ
ಕಬ್ಬನ್ ರಸ್ತೆಯಲ್ಲಿ, ಮಣಿಪಾಲ್ ಸೆಂಟರ್ ಜಂಕ್ಷನ್ನಿಂದ ಬಿ.ಆರ್.ವಿ. ಜಂಕ್ಷನ್ಕಡೆಗೆ ಬರುವ ವಾಹನಗಳ ಸಂಚಾರವನ್ನು ಮಣಿಪಾಲ್ ಸೆಂಟರ್ ಬಳಿ ನಿರ್ಬಂಧಿಸಿದ್ದು, ಸದರಿ ವಾಹನಗಳು ವೆಬ್ಸ್ ಜಂಕ್ಷನ್ ಬಳಿ ಬಲ ತಿರುವು ಪಡೆದು ಎಂ.ಜಿ. ರಸ್ತೆಯ ಮೂಲಕ ಮೆಯೋ ಹಾಲ್, ಕಾವೇರಿ ಎಂಪೋರಿಯಂ, ಅನಿಲ್ ಕುಂಬ್ಳೆ ವೃತ್ತದಲ್ಲಿ ಬಲ ತಿರುವು ಪಡೆದು ಮುಂದೆ ಸಾಗಬೇಕು.
ಅನಿಲ್ ಕುಂಬ್ಳೆ ವೃತ್ತದಿಂದ ಕಬ್ಬನ್ ರಸ್ತೆ ಕಡೆಗೆ ಬರುವ ವಾಹನಗಳು ನೇರವಾಗಿ ಸೆಂಟ್ರಲ್ ಸ್ಟ್ರೀಟ್ನಲ್ಲಿ ಸಾಗಿ, ಬಲಕ್ಕೆ ತಿರುವು ಪಡೆದು ಇನ್ಫೆಂಟ್ರಿರಸ್ತೆ – ಸಫೀನಾ ಪ್ಲಾಜಾದಲ್ಲಿ ಎಡ ತಿರುವು ಪಡೆದು ಮೈನ್ ಗಾರ್ಡ್ ರಸ್ತೆ – ಅಲಿ ಸರ್ಕಲ್ – ಡಿಸ್ಪೆನ್ಸರಿರಸ್ತೆ – ಕಾಮರಾಜರಸ್ತೆ ಮತ್ತು ಡಿಕನ್ಸನ್ ರಸ್ತೆ ಜಂಕ್ಷನ್ನಲ್ಲಿ ಬಲ ತಿರುವು ಪಡೆದು ಕಾಮರಾಜ ರಸ್ತೆ – ಕಬ್ಬನ್ ರಸ್ತೆ ಮತ್ತು ಕಾಮರಾಜ ರಸ್ತೆ ಜಂಕ್ಷನ್ನಲ್ಲಿ ಎಡ ತಿರುವು ಪಡೆದು, ಕಬ್ಬನ್ ರಸ್ತೆ ಮುಖಾಂತರ ಮಣಿಪಾಲ್ ಸೆಂಟರ್ ಕಡೆಗೆ ಸಾಗಬೇಕು.
ಸೂಚನೆಗಳು
ಕಾರ್ ಪಾಸ್‌ಗಳನ್ನು ಹೊಂದಿರುವ ಎಲ್ಲ ಆಹ್ವಾನಿತರು ಅವರುಗಳ ಪಾಸ್‌ಗಳಲ್ಲಿ ನಿಗಧಿಪಡಿಸಿದ ಗೇಟ್ಗಳಲ್ಲಿ ಇಳಿದುಕೊಳ್ಳುವುದು ಹಾಗೂ ಪಾಸ್‌ನಲ್ಲಿ ನಿಗಧಿಪಡಿಸಿರುವ ಸ್ಥಳಗಳಲ್ಲಿ ವಾಹನಗಳನ್ನು ನಿಲುಗಡೆಮಾಡಬೇಕು. ತುರ್ತು ಸೇವಾ ವಾಹನಗಳಾದ ಅಂಬುಲೆನ್ಸ್, ಅಗ್ನಿಶಾಮಕ ದಳದ ವಾಹನಗಳು, ನೀರಿನ ಟ್ಯಾಂಕರ್, ಕೆ.ಎಸ್.ಆರ್.ಪಿ. ಕ್ಯೂ.ಆರ್.ಟಿ, ಬಿ.ಬಿ.ಎಂ.ಪಿ. ಹಾಗೂ ಪಿಡಬ್ಲ್ಯೂಡಿ ವಾಹನಗಳು ಪ್ರವೇಶ ದ್ವಾರ-2 ರ ಮುಖಾಂತರ ಪರೇಡ್ ಮೈದಾನದ ಒಳಗೆ ಪ್ರವೇಶಿಸಿ ನಂತರ ಪೋರ್ಟ್ ವಾಲ್ ಹಿಂಭಾಗದಲ್ಲಿ (ದಕ್ಷಿಣದ ಕಡೆಗೆ) ವಾಹನಗಳನ್ನು ನಿಲುಗಡೆ ಮಾಡಬೇಕು.
ಕಾರ್ಯಕ್ರಮಕ್ಕೆ ಬರುವ ಎಲ್ಲ ಮಾಧ್ಯಮ ಪ್ರತಿನಿಧಿಗಳ ವಾಹನಗಳು ಪ್ರವೇಶ ದ್ವಾರ-4 ರ ಮೂಲಕ ಒಳ ಪ್ರವೇಶಿಸಿ ಮೈದಾನದ ಪೂರ್ವ ಭಾಗದಲ್ಲಿ ನಿಗಧಿತ ಸ್ಥಳದಲ್ಲಿ ವಾಹನ ನಿಲುಗಡೆ ಮಾಡಬೇಕು.
ಭದ್ರತಾ ದೃಷ್ಟಿಯಿಂದ ಪೆರೇಡ್ ಗೆ ಬರುವ ಎಲ್ಲಾ ಆಹ್ವಾನಿತರು ಹಾಗೂ ಸಾರ್ವಜನಿಕರು ಮೊಬೈಲ್ ಫೋನ್. ಹೆಲ್ಮೆಟ್, ಕ್ಯಾಮೆರಾ, ರೇಡಿಯೋ, ಕೊಡೆ ಮುಂತಾದ ವಸ್ತುಗಳನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗಬಾರದು. ಇಂತಹ ವಸ್ತುಗಳನ್ನು ಹೊಂದಿರುವವರನ್ನು ಒಳಗೆ ಬಿಡುವುದಿಲ್ಲ. ಎಲ್ಲರೂ ಬೆಳಗ್ಗೆ 8 ಒಳಗೆ ಮೈದಾನದ ಒಳಗೆ ಬರಬೇಕೆಂದು ಮನವಿ ಮಾಡಿದ್ದಾರೆ
ವಾಹನ ನಿಲುಗಡೆ ನಿಷಿದ್ದ ರಸ್ತೆಗಳು:
- ಸೆಂಟ್ರಲ್ ಸ್ಟ್ರೀಟ್, ಅನಿಲ್ ಕುಂಬ್ಳೆವೃತ್ತದಿಂದ ಶಿವಾಜಿನಗರ ಬಸ್ ನಿಲ್ದಾಣದವರೆಗೆ.
- ಕಬ್ಬನ್ ರಸ್ತೆ, ಸಿ.ಟಿ.ಓ. ವೃತ್ತದಿಂದ ಕೆ.ಆರ್.ರಸ್ತೆ ಮತ್ತು ಕಬ್ಬನ್ ರಸ್ತೆ ಜಂಕ್ಷನ್ವರೆಗೆ.
- ಎಂ.ಜಿ.ರಸ್ತೆ, ಅನಿಲ್ ಕುಂಬ್ಳೆ ವೃತ್ತದಿಂದ ಕ್ಷೀನ್ಸ್ ವೃತ್ತದವರೆಗೆ
ವಿಶೇಷ ಸೂಚನೆಗಳು:
- ಮಾಣಿಕ್ ಪಾ ಪೆರೇಡ್ ಮೈದಾನ ಹಾಗೂ ಸುತ್ತಮುತ್ತ ವಾಹನಗಳ ನಿಲುಗಡೆಗೆ ಸ್ಥಳಾವಕಾಶ ಕೊರತೆ ಇರುವುದರಿಂದ ಹಾಗೂ ಸಂಚಾರ ದಟ್ಟಣೆಯನ್ನ ಕಡಿಮೆ ಮಾಡಲು ಸಾರ್ವಜನಿಕರು, ಸಾರ್ವಜನಿಕ ಸಾರಿಗೆ ವ್ಯವಸ್ಥೆ ಮತ್ತು ಮೆಟ್ರೋ ಸೇವೆಯನ್ನು ಬಳಸುವಂತೆ ಸೂಚಿಸಿದ್ದಾರೆ.
- ಯಾವುದೇ ಸಹಾಯಕ್ಕಾಗಿ ಪೊಲೀಸರು ಸದಾ ನಿಮ್ಮೊಂದಿಗಿರುತ್ತಾರೆ. ದಯವಿಟ್ಟು ಸ್ಥಳದಲ್ಲಿರುವ ಪೊಲೀಸರನ್ನು ಸಂಪರ್ಕಿಸಿ ಅಥವಾ ಪೊಲೀಸ್ ಸಹಾಯವಾಣಿ ಸಂಖ್ಯೆ 112 ಗೆ ಕರೆ ಮಾಡಬಹುದಾಗಿದೆ ಎಂದಿದ್ದಾರೆ.
- ಗಣರಾಜ್ಯೋತ್ಸವ ದಿನಾಚರಣೆ ಸಂಭ್ರಮಾಚರಣೆಯನ್ನು ಯಶಸ್ವಿಗೊಳಿಸಲು ತಮ್ಮ ಸಹಕಾರವನ್ನು ಬಯಸುತ್ತೇವೆ ಎಂದರು.
- ಕುಡಿಯುವ ನೀರಿನ ವ್ಯವಸ್ಥೆ ಮತ್ತು ಶೌಚಾಲಯಗಳನ್ನು ಬಿ.ಬಿ.ಎಂ.ಪಿ. ವತಿಯಿಂದ ಏರ್ಪಡಿಸಿದ್ದು, ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:56 am, Sat, 25 January 25