Viral: ಇದು ವಿದ್ಯಾದೇಗುಲವೋ ಅಥವಾ ವ್ಯಾಪಾರ ಕೇಂದ್ರವೋ, ಬೆಂಗಳೂರಿನಲ್ಲಿ 3ನೇ ತರಗತಿಗೆ 2.1 ಲಕ್ಷ ಶುಲ್ಕವಂತೆ
ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಶಾಲಾ ಶುಲ್ಕದ ಬಗ್ಗೆ ಪೋಷಕರು ಆತಂಕಗೊಂಡಿದ್ದಾರೆ. ವರ್ಷದಿಂದ ವರ್ಷಕ್ಕೆ ಖಾಸಗಿ ಶಾಲಾ ಶುಲ್ಕವು ಗಗನಕ್ಕೇರುತ್ತಿವೆ. ಇದೀಗ ಖಾಸಗಿ ಶಾಲಾ ಮಕ್ಕಳ ವಾರ್ಷಿಕ ಶುಲ್ಕಕ್ಕೆ ಸಂಬಂಧ ಪಟ್ಟ ಪೋಸ್ಟ್ ವೊಂದು ವೈರಲ್ ಆಗಿದ್ದು, ಇದರಲ್ಲಿ ಮೂರನೇ ತರಗತಿಗೆ 2.1 ಲಕ್ಷ ರೂ ಶುಲ್ಕವನ್ನು ವಿಧಿಸಿದೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮ್ಮ ಜೀವನದಂತೆ ನಮ್ಮ ಮಕ್ಕಳ ಜೀವನ ಆಗಬಾರದು. ಒಂದೊಳ್ಳೆ ವಿದ್ಯಾಭ್ಯಾಸ ಸಿಗಲಿ ಎನ್ನುವ ಕಾರಣಕ್ಕೆ ಪೋಷಕರು ತಮಗೆಷ್ಟೇ ಕಷ್ಟವಾದರೂ ಸರಿಯೇ ಖಾಸಗಿ ಶಾಲೆಯಲ್ಲಿ ಓದಿಸಲು ಇಷ್ಟ ಪಡುತ್ತಾರೆ. ಲಕ್ಷಾನುಗಟ್ಟಲೇ ಶುಲ್ಕ ಕಟ್ಟಿ ಮಕ್ಕಳ ಜೀವನವನ್ನು ರೂಪಿಸುತ್ತಾರೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಯಾವುದನ್ನು ಲೆಕ್ಕಿಸದೇ ಬೇಕಾ ಬಿಟ್ಟಿಯಾಗಿ ಮನಸ್ಸಿಗೆ ಬಂದಂತೆ ಶುಲ್ಕವನ್ನು ವಿಧಿಸಿ ಶುಲ್ಕದ ನೆಪದಲ್ಲಿ ಸುಲಿಗೆ ಮಾಡುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಖಾಸಗಿ ಶಾಲೆಗಳ ಶುಲ್ಕಗಳು ಗಗನಕ್ಕೇರುತ್ತಿವೆ. ಇದಕ್ಕೆ ಸಂಬಂಧ ಪಟ್ಟ ಪೋಸ್ಟ್ ವೊಂದು ಇದೀಗ ಎಲ್ಲಡೆ ಹರಿದಾಡುತ್ತಿದೆ. ಇಲ್ಲೊಂದು ಖಾಸಗಿ ಶಾಲೆಯೂ ಮೂರನೇ ತರಗತಿ ವಿದ್ಯಾರ್ಥಿಗೆ ಒಂದು ವರ್ಷಕ್ಕೆ ಬರೋಬ್ಬರಿ 2.1 ಲಕ್ಷ ರೂ. ಶಾಲಾ ಶುಲ್ಕವನ್ನು ವಿಧಿಸಿದೆ.
ವಾಯ್ಸ್ ಆಫ್ ಪೇರೆಂಟ್ಸ್ ಅಸೋಸಿಯೇಷನ್ ಹೆಸರಿನ ಖಾತೆಯಲ್ಲಿ ಶುಲ್ಕದ ವಿವರವಾದ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. ಈ ಪೋಸ್ಟ್ ನಲ್ಲಿ ಬೋಧನೆಗಾಗಿ 1.9 ಲಕ್ಷ ರೂ, ವಾರ್ಷಿಕ ಶುಲ್ಕ ರೂ 9,000 ಹಾಗೂ “ಇಂಪ್ರೆಸ್ಟ್” ಅಡಿಯಲ್ಲಿ 11,449 ರೂ ಸೇರಿದಂತೆ ಒಟ್ಟಾರೆಯಾಗಿ 2.1 ರೂ ಶುಲ್ಕದ ವಿವರವನ್ನು ಕಾಣಬಹುದು. ಇದೀಗ ಬೆಂಗಳೂರಿನಲ್ಲಿ 3ನೇ ತರಗತಿಗೆ 2.1 ಲಕ್ಷ ರೂ ಶುಲ್ಕ ವಿಧಿಸಿರುವುದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ:
2.1 lakhs fees for 3rd standard in Bengaluru
No amount of inflation can justify the rise in school fees.
Govt can regulate engineering college fees but dare touch school fees topic. Such is fear schools have created
There is no business like school business. pic.twitter.com/NotIZjf2UG
— Voice Of Parents Association ® (@VoiceOfParents2) January 23, 2025
ಖಾಸಗಿ ಶಾಲೆಗಳು ಶಿಕ್ಷಣವನ್ನು ವ್ಯಾಪಾರವನ್ನಾಗಿಸಿಕೊಂಡಿವೆ ಎಂದು ಪಾಲಕರ ಸಂಘವು ಆರೋಪಿಸಿದೆ. ಸಂವಿಧಾನದ ಪರಿಚ್ಛೇದ 29, 30 ಮತ್ತು 19(1)(ಜಿ) ಅಡಿಯಲ್ಲಿ ಶಾಲೆಗಳು ಸಂಸ್ಥೆಗಳನ್ನು ಸ್ಥಾಪಿಸುವ ಹಕ್ಕನ್ನು ಹೊಂದಿವೆ. ಆದರೆ ಸರ್ಕಾರವು ಲೋಪದೋಷಗಳಿಲ್ಲದೆ ಕಟ್ಟುನಿಟ್ಟಾದ ನಿಯಮಗಳನ್ನು ಜಾರಿಗೊಳಿಸಬೇಕು, ಶುಲ್ಕ ನಿರ್ಣಯ ಸಮಿತಿಗಳನ್ನು ನೇಮಿಸಬೇಕು ಎಂದು ಅಗ್ರಹಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಟ್ಯಾಕ್ಸಿ ಹಗರಣ; ಪ್ರಯಾಣಕ್ಕೆ 450 ರೂ. ಎಂದು ಹೇಳಿ ಮಹಿಳೆಯಿಂದ 3,000 ರೂ. ವಸೂಲಿ ಮಾಡಿದ ಡ್ರೈವರ್
ಈ ಪೋಸ್ಟ್ ವೊಂದು ವೈರಲ್ ಆಗುತ್ತಿದ್ದಂತೆ, ಬಳಕೆದಾರರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಬಳಕೆದಾರರೊಬ್ಬರು,’ಉತ್ತಮ ಮೂಲಸೌಕರ್ಯದೊಂದಿಗೆ ಶಾಲೆಯನ್ನು ನಡೆಸುವುದು ದುಬಾರಿಯಾಗಿದೆ. ಆದರೆ ಸರ್ಕಾರಿ ಶಾಲೆಗಳ ಗುಣಮಟ್ಟವನ್ನು ಸುಧಾರಿಸುವುದೇ ಇದಕ್ಕೆ ಪರಿಹಾರ’ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ‘ಸಮಾಜದಲ್ಲಿನ ಶ್ರೀಮಂತ ವ್ಯಕ್ತಿಗಳು ಸರ್ಕಾರಿ ಶಾಲೆಗಳನ್ನು ಆಯ್ಕೆ ಮಾಡಿಕೊಂಡಾಗ, ಅದರ ಗುಣಮಟ್ಟವು ಸುಧಾರಿಸುತ್ತದೆ’ ಎಂದಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:51 am, Sat, 25 January 25