NASA Report: ಮುಳುಗುವುದು ಮಂಗಳೂರಷ್ಟೇ ಅಲ್ಲ; ಕೆಲವೇ ವರ್ಷಗಳಲ್ಲಿ ಈ ಊರುಗಳು ಕೂಡಾ ನಿಮ್ಮ ಕಣ್ಣಿಗೆ ಕಾಣುವುದಿಲ್ಲ

| Updated By: Skanda

Updated on: Aug 11, 2021 | 2:34 PM

ಅರಬ್ಬಿ ಸಮುದ್ರದ ದಂಡೆಯ ಮೇಲಿರುವ ಮಂಗಳೂರು, ಗೋವಾ ಜಲಾವೃತವಾಗಲಿದ್ದು, ದಕ್ಷಿಣ ಗೋವಾ ಇನ್ನೊಂದು 30 ವರ್ಷಗಳಲ್ಲಿ ಅಂದರೆ 2050ರ ವೇಳೆಗೆ ಮುಳುಗಡೆಯಾದರೂ ಅಚ್ಚರಿಯಿಲ್ಲ ಎಂದು ವರದಿಗಳು ತಿಳಿಸಿವೆ.

NASA Report: ಮುಳುಗುವುದು ಮಂಗಳೂರಷ್ಟೇ ಅಲ್ಲ; ಕೆಲವೇ ವರ್ಷಗಳಲ್ಲಿ ಈ ಊರುಗಳು ಕೂಡಾ ನಿಮ್ಮ ಕಣ್ಣಿಗೆ ಕಾಣುವುದಿಲ್ಲ
ಪ್ರಾತಿನಿಧಿಕ ಚಿತ್ರ (ಕೃಪೆ: ಪಿಟಿಐ)
Follow us on

ಜಾಗತಿಕ ತಾಪಮಾನ ಏರಿಕೆ ಇಡೀ ಭೂಮಂಡಲವನ್ನೇ ಕಾಡುತ್ತಿರುವ ಅತಿ ದೊಡ್ಡ ಸಮಸ್ಯೆ. ಮಾನವ ಅಭಿವೃದ್ಧಿ ನೆಪದಲ್ಲಿ ಪ್ರಕೃತಿಯ ಒಡಲಿಗೆ ಕೈ ಹಾಕಲಾರಂಭಿಸಿ, ಪರಿಸರವನ್ನು ನಾಶ ಮಾಡಲು ಶುರು ಮಾಡಿದ ನಂತರ ಸಹಜವಾಗಿ ವಾತಾವರಣ ಬದಲಾಗುತ್ತಾ (Climate Change)) ಬಂದಿದೆ. ಕಳೆದ ಅನೇಕ ವರ್ಷಗಳಿಂದ ತಜ್ಞರು, ಪರಿಸರ ಪ್ರೇಮಿಗಳು ಈ ಬಗ್ಗೆ ಸಾಕಷ್ಟು ಎಚ್ಚರಿಕೆಯನ್ನು ನೀಡುತ್ತಾ, ಪ್ರಳಯದ ಮುನ್ಸೂಚನೆಯನ್ನು ನೀಡಲಾಗುತ್ತಿದ್ದರೂ ನಾವು ತಿದ್ದಿಕೊಳ್ಳದ ಕಾರಣ ಅಪಾಯ ಮತ್ತಷ್ಟು ಸನಿಹಕ್ಕೆ ಬಂದಿದೆ. ಇದೀಗ ನಾಸಾ (NASA) ಬಿಡುಗಡೆ ಮಾಡಿದ ವರದಿಯೊಂದು (Report) ಈ ಆತಂಕ ನಿಜವಾಗುವ ಬಗ್ಗೆ ಸೂಚನೆ ನೀಡಿದ್ದು ಇನ್ನು 100 ವರ್ಷಗಳ ಒಳಗಾಗಿ ಅಂದರೆ 21ನೇ ಶತಮಾನ ಅಂತ್ಯವಾಗುವ ಹೊತ್ತಿನಲ್ಲಿ ಭಾರತದ ಕರಾವಳಿ ಪ್ರದೇಶದ ಅನೇಕ ನಗರಗಳು ಜಲಾವೃತಗೊಳ್ಳಲಿವೆ ಎಂದು ಹೇಳಿದೆ.

ಮುಂದಿನ ಎರಡು ದಶಕಗಳಲ್ಲಿ ಭೂಮಿಯ ತಾಪಮಾನದಲ್ಲಿ ವಿಪರೀತ ಏರಿಕೆಯಾಗಲಿದೆ ಎನ್ನುವುದು ತಜ್ಞರ ಲೆಕ್ಕಾಚಾರ. ಪ್ರತೀ ಐದರಿಂದ ಏಳು ವರ್ಷಗಳಿಗೆ ಒಮ್ಮೆ ಜಾಗತಿಕ ತಾಪಮಾನ, ಸಮುದ್ರ ಮಟ್ಟದ ಬಗ್ಗೆ ಕೂಲಂಕಷ ಅಧ್ಯಯನ ನಡೆಸುವ ಪದ್ಧತಿ ಚಾಲ್ತಿಯಲ್ಲಿದ್ದು, ಕಾಲಕ್ರಮೇಣ ಆಗುವ ಬದಲಾವಣೆಗಳ ಬಗ್ಗೆ ಬೆಳಕು ಚೆಲ್ಲಲಾಗುತ್ತದೆ. ಇದೀಗ ಬಿಡುಗಡೆಯಾಗಿರುವ ವರದಿ ಭಾರತದ ಬೇರೆ ಬೇರೆ ರಾಜ್ಯಗಳ ಕರಾವಳಿ ಪ್ರದೇಶಗಳ ಜತೆಗೆ ಕರ್ನಾಟಕದ ಪ್ರಮುಖ ನಗರವಾದ ಮಂಗಳೂರು ಸಹ ಅಪಾಯದಲ್ಲಿದೆ ಎಂಬ ವರದಿ ಸಿಕ್ಕಿದೆ.

ಭೂಮಿಯ ನಕ್ಷೆಯನ್ನು ಆಧರಿಸಿ ಜಗತ್ತಿನ ಯಾವೆಲ್ಲಾ ಭಾಗದಲ್ಲಿ ವಾತಾವರಣ ಬದಲಾಗುತ್ತಿದೆ. ಏನೆಲ್ಲಾ ಅಡ್ಡಪರಿಣಾಮ ಆಗುತ್ತಿದೆ ಎಂದು ಅಂತರಿಕ್ಷದಿಂದಲೇ ನಾಸಾ ಲೆಕ್ಕಾಚಾರ ಮಾಡಿದ್ದು, ಅದರನ್ವಯ ಭಾರತದ ಸುಮಾರು 12 ನಗರಗಳು 2100ರ ಒಳಗೆ ಜಲಸಮಾಧಿಯಾಗುವ ಸಾಧ್ಯತೆ ಇದೆ. ಕರ್ನಾಟಕದ ಮಂಗಳೂರು, ವಾಣಿಜ್ಯ ನಗರಿ ಮುಂಬೈ, ಪ್ರವಾಸಿಗರ ಸ್ವರ್ಗ ಎಂದೇ ಹೆಸರಾದ ಗೋವಾ ಸೇರಿದಂತೆ ಕೆಲ ನಗರಗಳನ್ನು ಸಮುದ್ರ ತನ್ನೊಡಲಿಗೆ ಸೇರಿಸಿಕೊಳ್ಳಲಿದೆ.

ಜಾಗತಿಕ ತಾಪಮಾನ ಏರಿಕೆಯಾದಾಗ ಹಿಮ ಕರಗಿ ಸಮುದ್ರಕ್ಕೆ ಸೇರುವುದರಿಂದ ಸಾಗರದ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗುತ್ತದೆ. ಇದರ ನೇರ ಪರಿಣಾಮ ಕರಾವಳಿ ಪ್ರದೇಶಗಳ ಮೇಲೆ ಮೊದಲು ಬೀರಲಿದ್ದು, ಅವೆಲ್ಲವೂ ಮುಳುಗಡೆಯಾಗುತ್ತಾ ಹೋಗಲಿವೆ. ಈಗ ವಾತಾವರಣದಲ್ಲಿ ಈ ರೀತಿಯ ಬೆಳವಣಿಗೆಗಳು ಆಗುತ್ತಿರುವುದನ್ನು ಗಮನಿಸಿದರೆ ಇನ್ನು 100 ವರ್ಷಗಳಲ್ಲಿ ಕೆಲ ಕರಾವಳಿ ಪ್ರದೇಶಗಳು ನಾಪತ್ತೆಯಾಗುವುದು ನಿಶ್ಚಿತ ಎನ್ನುವುದು ತಜ್ಞರ ಅಭಿಪ್ರಾಯ.

ವರದಿಗಳ ಪ್ರಕಾರ ಮುಂಬೈನ ಶೇಕಡಾ 65ರಷ್ಟು ಭಾಗ 2100ರ ವೇಳೆಗೆ ಸಮುದ್ರದಲ್ಲಿ ಮುಳುಗಲಿದೆ. ಜತೆಗೆ ಕೊಲಾಬಾ, ಬಾಂದ್ರಾ ಮುಂತಾದ ಪ್ರಮುಖ ಪ್ರದೇಶಗಳು ನೀರುಪಾಲಾಗಲಿವೆ. ಅರಬ್ಬಿ ಸಮುದ್ರದ ದಂಡೆಯ ಮೇಲಿರುವ ಮಂಗಳೂರು, ಗೋವಾ ಜಲಾವೃತವಾಗಲಿದ್ದು, ದಕ್ಷಿಣ ಗೋವಾ ಇನ್ನೊಂದು 30 ವರ್ಷಗಳಲ್ಲಿ ಅಂದರೆ 2050ರ ವೇಳೆಗೆ ಮುಳುಗಡೆಯಾದರೂ ಅಚ್ಚರಿಯಿಲ್ಲ ಎಂದು ವರದಿಗಳು ತಿಳಿಸಿವೆ. ಒಂದು ಅಂದಾಜಿನ ಪ್ರಕಾರ ಇನ್ನು ಕೇವಲ 10 ವರ್ಷಗಳಲ್ಲಿ ಮಂಗಳೂರಿನ ಸಮುದ್ರ 2.75 ಇಂಚು ಮೇಲೇರುತ್ತದೆ. 2100ರ ವೇಳೆಗೆ ಮಂಗಳೂರಿನ ನೆಲದ ಮೇಲೆ ಸುಮಾರು 1.87 ಅಡಿ ನೀರು ನಿಲ್ಲಲಿದೆ.

ಇತ್ತ ತಮಿಳುನಾಡಿನ ಚಿದಂಬರಂ, ಮಹಾಬಲಿಪುರಂ, ಕಲ್ಪಕ್ಕಂ, ಚೂನಂಪೇಟ್ ಮುಂತಾದ ಸಮುದ್ರ ತೀರದ ನಗರಗಳು ಕೂಡಾ ಅಪಾಯದ ಹೊಸ್ತಿಲಲ್ಲಿದ್ದು, ಚೆನ್ನೈ ಕೊಂಚ ಹೆಚ್ಚೇ ಅಪಾಯವನ್ನು ಎದುರಿಸಲಿದೆ. ಅಂದಾಜಿನ ಅನ್ವಯ ಶೇಕಡಾ 45ರಷ್ಟು ಚೆನ್ನೈ ಭೂ ಪ್ರದೇಶ 2100ರ ವೇಳೆಗೆ ಸಮುದ್ರದ ಪಾಲಾಗುವ ಸಾಧ್ಯತೆ ಇದೆ. ನೆರೆಯ ಕೇರಳದ ಕೊಚ್ಚಿ. ಟ್ಯೂಟಿಕಾರ್ನ್ ಅಥವಾ ತೂತುಕ್ಕುಡಿ ಸೇರಿದಂತೆ ಅದೆಷ್ಟೋ ಊರುಗಳು ನೀರೊಳಗೆ ಮುಳುಗಿ ನಿರ್ನಾಮವಾಗಲಿದ್ದು, ಪ್ರಳಯ ಎಂದರೇನು ಎನ್ನುವುದು ಕಣ್ಣೆದುರೇ ಘಟಿಸಲಿದೆ.

(Indian cities like Mangaluru Goa Mumbai and many more likely to be underwater by 2100 says Nasa report)

ಇದನ್ನೂ ಓದಿ:
Greenland Ice Melt: ಕರಗಿ ಕರಗಿ ಸಮುದ್ರ ಸೇರುತ್ತಿವೆ ಬಿಲಿಯನ್​ ಟನ್ ಪ್ರಮಾಣದ ಹಿಮ; ಕಾದಿದೆ ಅಪಾಯ 

ಸಮುದ್ರಕ್ಕೆ ಜಾರಿಬಿತ್ತು ವಿಶ್ವದ ಅತಿದೊಡ್ಡ ಹಿಮಗಡ್ಡೆ; ದೆಹಲಿಗಿಂತಲೂ ಮೂರು ಪಟ್ಟು ದೊಡ್ಡದಿದೆ ಅಳತೆ