ಟಿಕೆಟ್​ ಇಲ್ಲದೆಯೂ ರೈಲಿನಲ್ಲಿ ಕಾನೂನುಬದ್ಧವಾಗಿ ಪ್ರಯಾಣ ಬೆಳೆಸಬಹುದು; ನೀವು ಮಾಡಬೇಕಾಗಿರುವುದು ಇಷ್ಟೇ

| Updated By: Digi Tech Desk

Updated on: Jun 17, 2021 | 3:16 PM

Railway Platform Ticket: ರೈಲ್ವೇ ನಿಲ್ದಾಣದ ಒಳಗೆ ಪ್ರವೇಶಿಸುವವರು ಪ್ಲಾಟ್​ಫಾರ್ಮ್​ ಟಿಕೆಟ್ ತೆಗೆದುಕೊಳ್ಳುವುದು ಕಡ್ಡಾಯ ಎನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಚಾರವೇ. ಆದರೆ, ತುರ್ತು ಸಂದರ್ಭದಲ್ಲಿ ಇದೇ ಪ್ಲಾಟ್​ಫಾರ್ಮ್​ ಟಿಕೆಟ್ ಹಿಡಿದುಕೊಂಡು ರೈಲು ಹತ್ತಲೂ ರೈಲ್ವೇ ಇಲಾಖೆಯ ನಿಯಮಾವಳಿಗಳ ಅಡಿಯಲ್ಲಿ ಅವಕಾಶವಿದೆ.

ಟಿಕೆಟ್​ ಇಲ್ಲದೆಯೂ ರೈಲಿನಲ್ಲಿ ಕಾನೂನುಬದ್ಧವಾಗಿ ಪ್ರಯಾಣ ಬೆಳೆಸಬಹುದು; ನೀವು ಮಾಡಬೇಕಾಗಿರುವುದು ಇಷ್ಟೇ
ಪ್ರಾತಿನಿಧಿಕ ಚಿತ್ರ
Follow us on

ಭಾರತದ ಸಂಚಾರ ವ್ಯವಸ್ಥೆಯಲ್ಲಿ ರೈಲ್ವೇಗೆ ಬಹುಮುಖ್ಯ ಸ್ಥಾನಮಾನವಿದೆ. ನಿತ್ಯವೂ ಲಕ್ಷಾಂತರ ಮಂದಿ ರೈಲ್ವೇ ಪ್ರಯಾಣವನ್ನೇ ಅವಲಂಬಿಸಿ ಒಂದೆಡೆಯಿಂದ ಇನ್ನೊಂದೆಡೆಗೆ ತೆರಳುತ್ತಾರೆ. ಎಷ್ಟೋ ಕಡೆಗಳಲ್ಲಿ ರೈಲಿನೊಳಗೆ ಕಾಲಿಡಲೂ ಜಾಗ ಸಾಕಾಗದೇ ಬಾಗಿಲಲ್ಲಿ, ಮುಂಭಾಗದಲ್ಲಿ ಜೋತು ಬಿದ್ದು, ಮೇಲೆ ಹತ್ತಿ ಕುಳಿತು ಪ್ರಯಾಣಿಸುವ ದೃಶ್ಯಗಳನ್ನು ಸಾಧಾರಣವಾಗಿ ನೋಡಿರುತ್ತೇವೆ. ರಸ್ತೆಯ ಮೂಲಕ ಹೋಗುವುದಕ್ಕಿಂತ ಸುರಕ್ಷಿತವಾಗಿ ಹಾಗೂ ನಿಗದಿತ ಸಮಯಕ್ಕೆ ಗಮ್ಯ ತಲುಪಬಹುದು ಎಂಬುದು ಇದಕ್ಕೆ ಒಂದು ಕಾರಣವಾದರೆ ಇನ್ನೊಂದು ಬಹುಮುಖ್ಯ ಕಾರಣ ಪ್ರಯಾಣಕ್ಕೆ ತಗಲುವ ಕನಿಷ್ಠ ದರ. ರೈಲಿನ ಸಾಮಾನ್ಯ ಬೋಗಿಯಲ್ಲಿ ಪಯಣಿಸುವುದಾದರೆ ಅತಿ ಕಡಿಮೆ ದರದಲ್ಲಿ ತಿರುಗಾಟ ಪೂರೈಸಬಹುದು. ಆದರೆ, ಇಂತಿಪ್ಪ ರೈಲಿನಲ್ಲಿ ಪ್ರಯಾಣಿಸಲು ಟಿಕೆಟ್​ ತೆಗೆದುಕೊಳ್ಳುವುದೆಂದರೆ ಹರಸಾಹಸವೇ ಸೈ. ಅದಕ್ಕಾಗಿಯೇ ರೈಲು ಹೋದ ಮೇಲೆ ಟಿಕೆಟ್ ತೆಗೆದುಕೊಂಡಂತೆ ಎಂಬ ಮಾತೂ ಹುಟ್ಟಿಕೊಂಡಿದೆ ನೋಡಿ! ಎಷ್ಟೋ ಜನರು ಎದ್ದುಬಿದ್ದು ರೈಲ್ವೇ ನಿಲ್ದಾಣಕ್ಕೆ ಬಂದರೂ ಟಿಕೆಟ್​ ಸಿಗದೇ ರೈಲು ತಪ್ಪಿಸಿಕೊಂಡವರಿದ್ದಾರೆ. ಆದರೆ, ರೈಲ್ವೇ ನೀಡಿರುವ ಒಂದು ಸೌಲಭ್ಯವನ್ನು ಬಳಸಿಕೊಂಡರೆ ನಿಮಗೆ ನಿಲ್ದಾಣದಲ್ಲಿ ಪ್ರಯಾಣದ ಟಿಕೆಟ್ ಸಿಗದಿದ್ದರೂ ರೈಲು ಹತ್ತುವ ಅವಕಾಶವಿದೆ. ಅದು ಹೇಗೆ? ಅದಕ್ಕಾಗಿ ನೀವು ಮಾಡಬೇಕಾಗಿದ್ದೇನು? ಎಂಬುದನ್ನು ಇಲ್ಲಿ ವಿವರಿಸಿದ್ದೇವೆ.

ಸಾಧಾರಣವಾಗಿ ಮುಂಚಿತವಾಗಿ ಯೋಜಿಸಲಾದ ಪ್ರಯಾಣವಾದರೆ ಆನ್​ಲೈನ್ ಮೂಲಕ ಅಥವಾ ರೈಲ್ವೇ ನಿಲ್ದಾಣಕ್ಕೆ ಬಂದು ಟಿಕೆಟ್​ ಪಡೆದು ಸೀಟು ಕಾಯ್ದಿರಿಸಬಹುದು. ಆದರೆ, ತುರ್ತು ಸಂದರ್ಭದಲ್ಲಿ ಪ್ರಯಾಣ ಮಾಡಬೇಕಾಗಿ ಬಂದರೆ ಬುಕ್​ ಮಾಡಲು ಸಮಯ ಸಿಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ರೈಲ್ವೇ ನಿಲ್ದಾಣಕ್ಕೆ ಧಾವಿಸಿ ಸರತಿಯಲ್ಲಿ ನಿಂತು ನಿಮಿಷಕ್ಕೆ ನಾಲ್ಕು ಬಾರಿ ಕೈಗಡಿಯಾರ ನೋಡಿಕೊಳ್ಳುವವರೇ ಹೆಚ್ಚು. ಕೆಲವರು ತತ್ಕಾಲ್​ ಟಿಕೆಟ್ ಮೊರೆ ಹೋಗುತ್ತಾರಾದರೂ ಅದಕ್ಕೆ ಪರ್ಯಾಯವಾದ ಇನ್ನೊಂದು ಕಾನೂನು ಬದ್ಧ ಮಾರ್ಗವೂ ಇದೆ ಎನ್ನುವುದು ಬಹುತೇಕರಿಗೆ ತಿಳಿದಿರುವುದಿಲ್ಲ.

ಪ್ಲಾಟ್​ಫಾರ್ಮ್​ ಟಿಕೆಟ್​ ಇದ್ದರೂ ರೈಲು ಹತ್ತಬಹುದು
ರೈಲ್ವೇ ನಿಲ್ದಾಣದ ಒಳಗೆ ಪ್ರವೇಶಿಸುವವರು ಪ್ಲಾಟ್​ಫಾರ್ಮ್​ ಟಿಕೆಟ್ ತೆಗೆದುಕೊಳ್ಳುವುದು ಕಡ್ಡಾಯ ಎನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಚಾರವೇ. ಆದರೆ, ತುರ್ತು ಸಂದರ್ಭದಲ್ಲಿ ಇದೇ ಪ್ಲಾಟ್​ಫಾರ್ಮ್​ ಟಿಕೆಟ್ ಹಿಡಿದುಕೊಂಡು ರೈಲು ಹತ್ತಲೂ ರೈಲ್ವೇ ಇಲಾಖೆಯ ನಿಯಮಾವಳಿಗಳ ಅಡಿಯಲ್ಲಿ ಅವಕಾಶವಿದೆ. ಒಂದುವೇಳೆ ಸರತಿಯಲ್ಲಿ ನಿಂತು ರೈಲು ಹೊರಡುವ ವೇಳೆಯಾದರೂ ಟಿಕೆಟ್ ಸಿಗುವುದು ಅನುಮಾನವಿದೆ ಎಂದಾದಲ್ಲಿ ತಕ್ಷಣ ಪ್ಲಾಟ್​ಫಾರ್ಮ್​ ಟಿಕೆಟ್ ಹಿಡಿದುಕೊಂಡು ರೈಲು ಹತ್ತಬಹುದು. ಆದರೆ, ರೈಲು ಹತ್ತಿದ ತಕ್ಷಣ ಕೆಲವೇ ಅವಧಿಯಲ್ಲಿ ಟಿಟಿಇ ಅಧಿಕಾರಿಯನ್ನು ಕಡ್ಡಾಯವಾಗಿ ಸಂಪರ್ಕಿಸಿ ಅನಿವಾರ್ಯತೆಯ ಬಗ್ಗೆ ತಿಳಿಸಿ ಪ್ರಯಾಣದ ಟಿಕೆಟ್ ಪಡೆದುಕೊಳ್ಳಬೇಕಿದೆ.

ನೀವು ಯಾವ ನಿಲ್ದಾಣದಿಂದ ಪ್ಲಾಟ್​ಫಾರ್ಮ್​ ಟಿಕೆಟ್ ಪಡೆದು ರೈಲು ಹತ್ತಿರುತ್ತೀರೋ ಅಲ್ಲಿಂದ ನೀವು ತಲುಪಬೇಕಾದ ಜಾಗಕ್ಕೆ ತಗುಲುವ ವೆಚ್ಚವನ್ನೇ ಟಿಟಿಇ ನಿಮ್ಮಿಂದ ಪಡೆಯುತ್ತಾರೆ. ಇನ್ನೊಂದು ವಿಚಾರವೆಂದರೆ ಪ್ಲಾಟ್​ಫಾರ್ಮ್​ ಟಿಕೆಟ್ ಪಡೆದು ನೀವು ಯಾವ ಕೋಚ್​ನಲ್ಲಿ ಪ್ರಯಾಣಿಸುತ್ತಿರುತ್ತೀರೋ ಅದಕ್ಕೆ ಸಮವಾದ ಮೊತ್ತವನ್ನೇ ತೆರಬೇಕಾಗುತ್ತದೆ. ಒಂದು ವೇಳೆ ನಿಮಗೆ ಟಿಕೆಟ್ ಪಡೆಯಲು ಅವಕಾಶವಿದ್ದೂ ಇದನ್ನು ದುರುಪಯೋಗಪಡಿಸಿಕೊಳ್ಳಲಿಕ್ಕಾಗಿ ಪ್ಲಾಟ್​ಫಾರ್ಮ್​ ಟಿಕೆಟ್ ಪಡೆದು ರೈಲು ಹತ್ತಿ ಕದ್ದುಮುಚ್ಚಿ ಪ್ರಯಾಣಿಸಿದರೆ ನಂತರ ದಂಡವೂ ಕಟ್ಟಿಟ್ಟ ಬುತ್ತಿ ಎನ್ನುವುದು ನೆನಪಿರಲಿ.

ಅಂದಹಾಗೆ, ನಿಮ್ಮ ಬಳಿ ಸ್ಮಾರ್ಟ್​ಫೋನ್ ಇದ್ದು ಅದನ್ನು ಬಳಸುವ ವಿಧಾನ ಚೆನ್ನಾಗಿ ಗೊತ್ತಿದ್ದರೆ ಐಆರ್​ಸಿಟಿಸಿ ಆ್ಯಪ್​ ಮೂಲಕವೂ ಟಿಕೆಟ್ ಪಡೆಯಲು ಅವಕಾಶವಿದೆ. ಹೀಗಾಗಿ ತೀರಾ ಗೊಂದಲಕ್ಕೆ ಒಳಗಾಗದೇ ನಿಮ್ಮ ಮೊಬೈಲ್​ನಲ್ಲೇ ಟಿಕೆಟ್ ಪಡೆದು ಪ್ರಯಾಣಿಸುವುದು ಕೂಡಾ ಉತ್ತಮ.

ಇದನ್ನೂ ಓದಿ:
ರೈಲ್ವೆ ಸಂವಹನ ನೆಟ್‌ವರ್ಕ್ ಆಧುನೀಕರಣಕ್ಕಾಗಿ ₹25000 ಕೋಟಿ: ಕೇಂದ್ರ ಅನುಮೋದನೆ 

Indian Railway: ವಿಶ್ವದಲ್ಲೇ ಬೃಹತ್ ಪರಿಸರ ಸ್ನೇಹಿ ರೈಲ್ವೆ ವ್ಯವಸ್ಥೆಯಾಗಿ ಮಾರ್ಪಡಲು ಭಾರತೀಯ ರೈಲ್ವೆಯ ಸಿದ್ಧತೆ

Published On - 3:01 pm, Thu, 17 June 21