Shri Ramayana Yatra Train: ಭಾರತೀಯ ರೈಲ್ವೆ ಇಲಾಖೆಯಿಂದ ಶ್ರೀ ರಾಮಾಯಣ ಯಾತ್ರಾ ರೈಲು ಸಂಚಾರ ಆರಂಭ

| Updated By: ಸುಷ್ಮಾ ಚಕ್ರೆ

Updated on: Feb 22, 2022 | 6:37 PM

Indian Railways: ಈ ಶ್ರೀ ರಾಮಾಯಣ ಯಾತ್ರಾ ವಿಶೇಷ ರೈಲು ದೆಹಲಿಯಿಂದ ಫೆಬ್ರವರಿ 9ರಂದು ಸಂಚಾರ ಆರಂಭಿಸಬೇಕಿತ್ತು. ಆದರೆ, ಕೋವಿಡ್ -19 ಪ್ರಕರಣಗಳ ಉಲ್ಬಣದಿಂದಾಗಿ ಆ ದಿನಾಂಕವನ್ನು ಇಂದಿಗೆ (ಫೆ. 22ಕ್ಕೆ) ವಿಸ್ತರಿಸಲಾಯಿತು.

Shri Ramayana Yatra Train: ಭಾರತೀಯ ರೈಲ್ವೆ ಇಲಾಖೆಯಿಂದ ಶ್ರೀ ರಾಮಾಯಣ ಯಾತ್ರಾ ರೈಲು ಸಂಚಾರ ಆರಂಭ
ಭಾರತೀಯ ರೈಲ್ವೆ
Follow us on

ನವದೆಹಲಿ: ಭಾರತೀಯ ರೈಲ್ವೆಯಿಂದ ದೆಹಲಿಯಿಂದ ಇಂದಿನಿಂದ ಶ್ರೀ ರಾಮಾಯಣ ಯಾತ್ರೆ (Shri Ramayana Yatra) ವಿಶೇಷ ರೈಲು ಸಂಚಾರ ಆರಂಭವಾಗಿದೆ. ಹಿಂದಿನ ವೇಳಾಪಟ್ಟಿಯ ಪ್ರಕಾರ, ಈ ರೈಲು ದೆಹಲಿಯಿಂದ ಫೆಬ್ರವರಿ 9ರಂದು ಸಂಚಾರ ಆರಂಭಿಸಬೇಕಿತ್ತು. ಆದರೆ, ಕೋವಿಡ್ -19 ಪ್ರಕರಣಗಳ ಉಲ್ಬಣದಿಂದಾಗಿ ಆ ದಿನಾಂಕವನ್ನು ಇಂದಿಗೆ (ಫೆಬ್ರವರಿ 22ಕ್ಕೆ) ವಿಸ್ತರಿಸಲಾಯಿತು. ಶ್ರೀ ರಾಮಾಯಣ ಯಾತ್ರಾ ವಿಶೇಷ ರೈಲು ಧಾರ್ಮಿಕ ಪ್ರವಾಸೋದ್ಯಮವನ್ನು ಉತ್ತೇಜಿಸಲು IRCTCಯ ಶ್ರೀ ರಾಮಾಯಣ ಯಾತ್ರಾ ಪ್ರವಾಸಗಳ ಸರಣಿಯ ಒಂದು ಭಾಗವಾಗಿದೆ.

ಕಳೆದ ವರ್ಷ ನವೆಂಬರ್‌ನಲ್ಲಿ ಈ ವಿಶೇಷ ರೈಲು ದೆಹಲಿಯ ಸಫ್ದರ್‌ಜಂಗ್ ರೈಲ್ವೆ ನಿಲ್ದಾಣದಿಂದ ಉತ್ತರ ಪ್ರದೇಶದ ಅಯೋಧ್ಯೆ ಮತ್ತು ವಾರಾಣಸಿ ಮೂಲಕ ತಮಿಳುನಾಡಿನ ರಾಮೇಶ್ವರಂಗೆ ತನ್ನ ಮೊದಲ ಪ್ರಯಾಣವನ್ನು ಮಾಡಿದೆ.

ಶ್ರೀ ರಾಮಾಯಣ ಯಾತ್ರೆ ವಿಶೇಷ ರೈಲು ಅಯೋಧ್ಯೆ, ಸೀತಾಮಧಿ, ಜನಕ್‌ಪುರ, ವಾರಣಾಸಿ, ಪ್ರಯಾಗ್‌ರಾಜ್, ಚಿತ್ರಕೂಟ, ಶೃಂಗವೇರಪುರ, ನಾಸಿಕ್, ಬಕ್ಸರ್, ಕಾಂಚೀಪುರಂ ಮತ್ತು ಭದ್ರಾಚಲಂ ಪ್ರದೇಶಗಳಿಗೆ ಸಂಚರಿಸಲಿವೆ. ಒಟ್ಟು 19 ರಾತ್ರಿಗಳು, 20 ದಿನಗಳ ಕಾಲ ಈ ವಿಶೇಷ ರೈಲು ಸಂಚರಿಸಲಿದೆ. ಈ ರೈಲಿನ ಎರಡು ವಿಭಾಗಗಳಲ್ಲಿ 132 ಪ್ರಯಾಣಿಕರು ಪ್ರಯಾಣಿಸಬಹುದು. ಇತ್ತೀಚೆಗೆ, IRCTC ಈ ರಾಮಾಯಣ ಯಾತ್ರಾ ವಿಶೇಷ ರೈಲಿಗೆ ಪ್ರಯಾಣದ ದಿನಗಳು, ದರಗಳು ಮತ್ತು ಸ್ಥಳಗಳ ವಿಷಯದಲ್ಲಿ ಅನೇಕ ಬದಲಾವಣೆಗಳನ್ನು ಮಾಡಿದೆ.

ಈ ಹಿಂದೆ ಶ್ರೀರಾಮಾಯಣ ರೈಲಿನ ಪ್ರಯಾಣವು 17 ದಿನಗಳದ್ದಾಗಿತ್ತು. ಆದರೆ ಈಗ ರೈಲಿನ ಪ್ರಯಾಣವು 20 ದಿನಗಳವರೆಗೆ ಇರುತ್ತದೆ. ಹೊಸ ವೇಳಾಪಟ್ಟಿಯಲ್ಲಿ ಭಗವಾನ್ ಶ್ರೀರಾಮನಿಗೆ ಸಂಬಂಧಿಸಿದ 3 ಹೊಸ ಧಾರ್ಮಿಕ ಸ್ಥಳಗಳನ್ನು ಸಹ ಸೇರಿಸಲಾಗಿದೆ. ಈ ರೈಲಿನ ಮೂಲಕ ರಾಮಾಯಣ ಯಾತ್ರಾ ರೈಲು ಪ್ರಯಾಣಿಕರು ಬಿಹಾರದ ಬಕ್ಸರ್, ತಮಿಳುನಾಡಿನ ಕಾಂಚೀಪುರಂ ಮತ್ತು ತೆಲಂಗಾಣದ ಭದ್ರಾಚಲಂಗೆ ಭೇಟಿ ನೀಡಲಿದ್ದಾರೆ.

ಟಿಕೆಟ್ ದರ ಹೀಗಿದೆ:
ಸ್ಥಳಗಳ ಸಂಖ್ಯೆ ಮತ್ತು ಪ್ರಯಾಣದ ಸಮಯ ಕಡಿಮೆ ಇರುವ ಕಾರಣ ಮೊದಲಿನ ಟಿಕೆಟ್ ದರ ಕಡಿಮೆ ಇತ್ತು. ಆದರೆ, ಈಗ ದರ ಏರಿಕೆಯಾಗಿದೆ. ಇತ್ತೀಚಿನ ಅಪ್‌ಡೇಟ್‌ಗಳ ಪ್ರಕಾರ, ಮೊದಲ ಎಸಿಯ ದರವು 1.25 ಲಕ್ಷ ರೂ ಆಗಿರುತ್ತದೆ. ಇದು ಮೊದಲು 1.02 ಲಕ್ಷ ರೂ. ಇತ್ತು. ಮೊದಲು 82,000 ರೂ. ಇದ್ದ ಸೆಕೆಂಡ್ ಎಸಿಯ ದರವು 98,000 ರೂ.ಗೆ ಏರಿಕೆಯಾಗಿದೆ.

ಶ್ರೀ ರಾಮಾಯಣ ಯಾತ್ರೆ ವಿಶೇಷ ರೈಲು ಅಯೋಧ್ಯೆ, ನಂದಿಗ್ರಾಮ್, ಜನಕಪುರ, ಸೀತಾಮರ್ಹಿ, ಕಾಶಿ, ಪ್ರಯಾಗ, ಮತ್ತು ಶೃಂಗವೇರಪುರ ಸೇರಿದಂತೆ ಅನೇಕ ಧಾರ್ಮಿಕ ಸ್ಥಳಗಳ ದರ್ಶನವನ್ನು ಒದಗಿಸುತ್ತದೆ.

ವಿಶೇಷ ರೈಲಿನ ಸೌಲಭ್ಯಗಳು:
ಶ್ರೀ ರಾಮಾಯಣ ಯಾತ್ರೆ ವಿಶೇಷ ರೈಲಿನಲ್ಲಿ ಎರಡು ರೈಲ್ ಡೈನಿಂಗ್ ರೆಸ್ಟೊರೆಂಟ್‌ಗಳು, ಆಧುನಿಕ ಕಿಚನ್ ಕಾರ್, ಪ್ರಯಾಣಿಕರಿಗೆ ಫೂಟ್ ಮಸಾಜ್, ಲೈಬ್ರರಿ, ಕ್ಲೀನ್ ಟಾಯ್ಲೆಟ್‌ಗಳು ಮುಂತಾದ ಹಲವು ಸೌಲಭ್ಯಗಳನ್ನು ಅಳವಡಿಸಲಾಗಿದೆ. ಇದಲ್ಲದೆ, ಶ್ರೀ ರಾಮಾಯಣ ಎಕ್ಸ್‌ಪ್ರೆಸ್ ಪ್ರವಾಸದ ಪ್ಯಾಕೇಜ್ ಸಸ್ಯಾಹಾರಿ ಆಹಾರವನ್ನು ಒಳಗೊಂಡಿದೆ, ಬಸ್​ಗಳ ಮೂಲಕ ಪ್ರವಾಸಿ ದೃಶ್ಯ ವೀಕ್ಷಣೆ ಮತ್ತು AC ಹೋಟೆಲ್‌ಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು.

ಶ್ರೀ ರಾಮಾಯಣ ಯಾತ್ರೆ ವಿಶೇಷ ರೈಲಿನ ಟಿಕೆಟ್​ಗಳನ್ನು IRCTC ಯಲ್ಲಿ ಹೇಗೆ ಬುಕ್ ಮಾಡುವುದು ಎಂಬ ಮಾಹಿತಿ ಇಲ್ಲಿದೆ:

ಹಂತ 1: irctc.co.in ಗೆ ಭೇಟಿ ನೀಡಿ

ಹಂತ 2: ಹೋಂ ಪೇಜಿನಲ್ಲಿ ಲಾಗ್ ಇನ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ

ಹಂತ 3: ಲಾಗಿನ್ ಆದ ನಂತರ ನೀವು ‘ನಿಮ್ಮ ಟಿಕೆಟ್ ಬುಕ್ ಮಾಡಿ’ ಪೇಜ್​ಗೆ ಹೋಗಬೇಕು

ಹಂತ 4: ರೈಲಿನ ಪ್ರಾರಂಭ ಮತ್ತು ಅಂತ್ಯದ ನಿಲ್ದಾಣ, ಬೋರ್ಡಿಂಗ್ ಮತ್ತು ಡೆಸ್ಟಿನೇಷನ್ ನಿಲ್ದಾಣವನ್ನು ನಮೂದಿಸಿ

ಹಂತ 5: ನಿಮ್ಮ ಪ್ರಯಾಣದ ದಿನಾಂಕ ಮತ್ತು ನೀವು ಪ್ರಯಾಣಿಸಲು ಬಯಸುವ ವರ್ಗವನ್ನು ಆಯ್ಕೆ ಮಾಡಿ

ಹಂತ 6: ನಿಮ್ಮ ಆಯ್ಕೆಯ ರೈಲಿನಲ್ಲಿ ಆಸನ ಲಭ್ಯವಿದೆಯೇ ಎಂದು ಪರಿಶೀಲಿಸಿ

ಹಂತ 7: ಆಸನಗಳು ಲಭ್ಯವಿದ್ದರೆ, ಬುಕ್ ನೌ ಆಯ್ಕೆಯನ್ನು ಕ್ಲಿಕ್ ಮಾಡಿ

ಹಂತ 8: ಟಿಕೆಟ್‌ಗಳನ್ನು ಕಾಯ್ದಿರಿಸಲು ಅಗತ್ಯವಿರುವ ವಿವರಗಳನ್ನು ಒದಗಿಸಿ

ಹಂತ 9: ಮೊಬೈಲ್ ಸಂಖ್ಯೆ ಮತ್ತು ಕ್ಯಾಪ್ಚಾ ನಮೂದಿಸಿ

ಹಂತ 10: ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಅಥವಾ UPI ಬಳಸಿ ಆನ್‌ಲೈನ್‌ನಲ್ಲಿ ಶುಲ್ಕವನ್ನು ಪಾವತಿಸಿ

ಹಂತ 11: ಅಂತಿಮವಾಗಿ, ನಿಮ್ಮ ಫೋನ್‌ನಲ್ಲಿ ನೀವು ಸಂದೇಶವನ್ನು ಸ್ವೀಕರಿಸುತ್ತೀರಿ

ಇದನ್ನೂ ಓದಿ: Shri Ramayana Yatra ದೆಹಲಿಯಿಂದ ಶ್ರೀ ರಾಮಾಯಣ ಯಾತ್ರೆಯ ವಿಶೇಷ ರೈಲು ಆರಂಭಿಸಿದ ಐಆರ್​​ಸಿಟಿಸಿ; ದರ, ವೇಳಾಪಟ್ಟಿ ಇಲ್ಲಿವೆ

Festival Special Trains: ದಸರಾ, ದೀಪಾವಳಿ ಪ್ರಯಾಣಕ್ಕೆ ವಿಶೇಷ ರೈಲು ಸೇವೆ; 18 ರೈಲುಗಳ ವೇಳಾಪಟ್ಟಿ ಬಿಡುಗಡೆ