
ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಪಿಒಕೆ ಮತ್ತು ಪಾಕಿಸ್ತಾನದ (Pakistan) ಕೆಲವು ಪ್ರದೇಶಗಳಲ್ಲಿರುವ ಉಗ್ರರ ನೆಲೆಗಳನ್ನು ಭಾರತೀಯ ಸೇನೆ (Indian Army) ಧ್ವಂಸಗೊಳಿಸಿತ್ತು. ಅದಾದ ನಂತರ ಪಾಕಿಸ್ತಾನ ಭಾರತದ ಕೆಲವು ನಗರಗಳ ಮೇಲೆ ದಾಳಿ ನಡೆಸಲು ಯತ್ನಿಸಿದ್ದನ್ನು ತಡೆದ ಭಾರತೀಯ ಸೇನೆ ಸೂಕ್ತ ತಿರುಗೇಟು ಕೊಟ್ಟಿದೆ. ಇದಕ್ಕೆ ಭಾರತದಲ್ಲಿ ಪ್ರತಿಪಕ್ಷಗಳ ನಾಯಕರು ಸೇರಿದಂತೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಶಾಂತಿ ಕಾಪಾಡಬೇಕು ಎಂದಿದ್ದರು. ಇದು ಪಾಕಿಸ್ತಾನಕ್ಕೆ ಅಸ್ತ್ರವಾಗಿದೆ. ಪಾಕ್ ಸೇನಾ ವಕ್ತಾರರು ಅದನ್ನೇ ಬಳಸಿ, ಭಾರತಕ್ಕೆ ತಿರುಗೇಟು ನೀಡಿದ್ದರು. ಇದೀಗ ಭಾರತದ ವಿದೇಶಾಂಗ ಕಾರ್ಯದರ್ಶಿ ಪಾಕ್ ಸೇನಾ ವಕ್ತಾರರಿಗೆ ತಿರುಗೇಟು ನೀಡಿದ್ದು, ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯ ಎಂಬುದು ಪ್ರಜಾಪ್ರಭುತ್ವದ ಹಾಲ್ ಮಾರ್ಕ್ ಎಂದು ಹೇಳಿದ್ದಾರೆ.
ಭಾರತ ಸರ್ಕಾರದ ಕ್ರಮಗಳನ್ನು ಕೆಲವು ಮಂದಿ ಪ್ರಭಾವಿಗಳು, ಪ್ರತಿಪಕ್ಷ ನಾಯಕರು ಹಾಗೂ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಸ್ ಟೀಕಿಸಿದ್ದರು. ಇದನ್ನು, ಪಾಕಿಸ್ತಾನ ಸೇನೆಯ ಮಾಧ್ಯಮ ವಿಭಾಗ ಐಎಸ್‌ಪಿಆರ್‌ನ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದಾಗ ಉಲ್ಲೇಖಿಸಿದ್ದರು. ಭಾರತದ ನಿರ್ಧಾರಕ್ಕೆ ಅವರದ್ದೇ ದೇಶದಲ್ಲಿ ವಿರೋಧವಿದೆ ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಂಬಿಸಲು ಮುಂದಾಗಿದ್ದರು.
ಭಾರತ ವಿದೇಶಾಂಗ ಇಲಾಖೆಯ ಕಾರ್ಯದರ್ಶಿ ವಿಕ್ರಂ ಮಿಸ್ತ್ರಿ ಪಾಕಿಸ್ತಾನದ ಅಹ್ಮದ್ ಷರೀಫ್ ಚೌಧರಿ ಟೀಕಾಸ್ತ್ರವನ್ನು ಅವರಿಗೇ ತಿರುಗುಬಾಣವನ್ನಾಗಿಸಿದ್ದಾರೆ. ಅವರ ಟೀಕೆಯನ್ನು ಮುಂದಿಟ್ಟುಕೊಂಡೇ ಅವರಿಗೆ ಕೌಂಟರ್ ಕೊಟ್ಟಿದ್ದಾರೆ.
ಅನೇಕ ವಿಷಯಗಳಿಗೆ ಸಂಬಂಧಪಟ್ಟಂತೆ ಭಾರತದ ಸಾರ್ವಜನಿಕರು ಸರ್ಕಾರವನ್ನು ಟೀಕಿಸಿರುವುದು ಪಾಕಿಸ್ತಾನದ ಸೇನಾ ವಕ್ತಾರರಿಗೆ ಖುಷಿ ಕೊಟ್ಟಿದೆ ಎಂದು ಕಾಣಿಸುತ್ತಿದೆ. ಸಾರ್ವಜನಿಕರು ಸರ್ಕಾರವನ್ನು ಟೀಕೆ ಮಾಡುತ್ತಾರೆ ಎಂಬುದು ಪಾಕಿಸ್ತಾನಕ್ಕೆ ಬಹಳ ಆಶ್ಚರ್ಯದ ವಿಚಾರ ಆಗಿರಬಹುದು. ಆದರೆ, ಅದುವೇ ಪ್ರಜಾಪ್ರಭುತ್ವದ ಹಾಲ್ ಮಾರ್ಕ್. ಈ ವಿಚಾರ ಪಾಕಿಸ್ತಾನಕ್ಕೆ ಗೊತ್ತಿಲ್ಲದೇ ಇದ್ದರೆ ಅದು ಅಚ್ಚರಿಯ ವಿಚಾರವೇನಲ್ಲ ಇಂದು ವಿಕ್ರಂ ಮಿಸ್ರಿ ವ್ಯಂಗ್ಯವಾಡಿದ್ದಾರೆ.
ಭಾರತ ರಕ್ಷಣಾ ಇಲಾಖೆ ಹಾಗೂ ವಿದೇಶಾಂಗ ಇಲಾಖೆ ಜಂಟಿಯಾಗಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡುವ ಸಂದರ್ಭದಲ್ಲಿ ಮಿಸ್ರಿ ಪಾಕಿಸ್ತಾನಕ್ಕೆ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: ಪಾಕಿಸ್ತಾನದ ಸುಳ್ಳಿನ ಸರಮಾಲೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಭಾರತ
ಒಟ್ಟಿನಲ್ಲಿ, ದೇಶದ ಭದ್ರತೆ, ಸಾರ್ವಭೌಮತೆಯ ವಿಚಾರ ಬಂದಾಗ ಹಾಗೂ ಸೂಕ್ಷ್ಮ ಸಂದರ್ಭದಲ್ಲಿ ಏನೋನೋ ಮಾತನಾಡಿದರೆ ಅದರ ಪರಿಣಾಮ ಏನಾಗುತ್ತದೆ ಎಂಬುದಕ್ಕೆ ಇದೊಂದು ಸ್ಪಷ್ಟ ಉದಾಹರಣೆಯಾಗಿದೆ. ಆದರೆ, ಪರಿಸ್ಥಿತಿಯನ್ನು ಚಾಣಾಕ್ಷವಾಗಿ ನಿಭಾಯಿಸಿದ ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ ಬಗ್ಗೆ ಇದೀಗ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ