ನವದೆಹಲಿ: ಭಾರತದ ಸ್ಟೀಲ್ ಮ್ಯಾನ್ (Steel Man) ಎಂದೇ ಪ್ರಸಿದ್ಧರಾಗಿದ್ದ ಟಾಟಾ ಸ್ಟೀಲ್‌ನ ಮಾಜಿ ವ್ಯವಸ್ಥಾಪಕ ನಿರ್ದೇಶಕ 86 ವರ್ಷದ ಜಮ್ಶೆಡ್ ಜೆ. ಇರಾನಿ (Jamshed J Irani) ಸೋಮವಾರ ತಡರಾತ್ರಿ ಜೆಮ್‌ಶೆಡ್‌ಪುರದಲ್ಲಿ ನಿಧನರಾಗಿದ್ದಾರೆ ಎಂದು ಟಾಟಾ ಸ್ಟೀಲ್ ತಿಳಿಸಿದೆ. ಅಕ್ಟೋಬರ್ 31ರಂದು ರಾತ್ರಿ 10 ಗಂಟೆಗೆ ಜೆಮ್‌ಶೆಡ್‌ಪುರದ ಟಾಟಾ ಆಸ್ಪತ್ರೆಯಲ್ಲಿ ಜಮ್ಶಡ್ ಇರಾನಿ ನಿಧನರಾಗಿದ್ದಾರೆ. ಇರಾನಿ ಅವರು 40ಕ್ಕೂ ಹೆಚ್ಚು ವರ್ಷದಿಂದ ಟಾಟಾ ಸ್ಟೀಲ್ನಲ್ಲಿ (Tata Steel) ಕೆಲಸ ಮಾಡುತ್ತಿದ್ದರು.
“ಭಾರತದ ಸ್ಟೀಲ್ ಮ್ಯಾನ್ ನಿಧನರಾಗಿದ್ದಾರೆ. ಪದ್ಮಭೂಷಣ ಡಾ. ಜಮ್ಶೆಡ್ ಜೆ ಇರಾನಿ ಅವರ ನಿಧನದ ಬಗ್ಗೆ ಟಾಟಾ ಸ್ಟೀಲ್ ತೀವ್ರ ದುಃಖತಪ್ತವಾಗಿದೆ” ಎಂದು ಟಾಟಾ ಸ್ಟೀಲ್ ತಿಳಿಸಿದೆ. 2011ರ ಜೂನ್ ತಿಂಗಳಲ್ಲಿ ಟಾಟಾ ಸ್ಟೀಲ್ ಮಂಡಳಿಯಿಂದ ನಿವೃತ್ತರಾದ ಜಮ್ಷಡ್ ಇರಾನಿ 43 ವರ್ಷಗಳ ಕಾಲ ಟಾಟಾ ಸ್ಟೀಲ್ನಲ್ಲಿ ಕರ್ತವ್ಯ ನಿರ್ವಹಿಸಿದ್ದರು.
1936ರ ಜೂನ್ 2ರಂದು ನಾಗ್ಪುರದಲ್ಲಿ ಜಿಜಿ ಇರಾನಿ ಮತ್ತು ಖೋರ್ಶೆಡ್ ಇರಾನಿ ದಂಪತಿಗೆ ಜನಿಸಿದ ಡಾ. ಜಮ್ಶಡ್ ಇರಾನಿ ಅವರು 1956ರಲ್ಲಿ ನಾಗ್ಪುರದ ವಿಜ್ಞಾನ ಕಾಲೇಜಿನಲ್ಲಿ ತಮ್ಮ ಬಿಎಸ್ಸಿ ಮತ್ತು 1958ರಲ್ಲಿ ನಾಗ್ಪುರ ವಿಶ್ವವಿದ್ಯಾಲಯದಿಂದ ಭೂವಿಜ್ಞಾನದಲ್ಲಿ ಎಂಎಸ್ಸಿ ಪದವಿ ಪಡೆದರು. ನಂತರ ಅವರು ಜೆ.ಎನ್ ಟಾಟಾ ವಿದ್ವಾಂಸರಾಗಿ ಇಂಗ್ಲೆಂಡ್ನ ಶೆಫೀಲ್ಡ್ ವಿಶ್ವವಿದ್ಯಾಲಯಕ್ಕೆ ಹೋದರು. ಅಲ್ಲಿ ಅವರು 1960ರಲ್ಲಿ ಮೆಟಲರ್ಜಿಯಲ್ಲಿ ಸ್ನಾತಕೋತ್ತರ ಮತ್ತು 1963ರಲ್ಲಿ ಲೋಹಶಾಸ್ತ್ರದಲ್ಲಿ ಪಿಎಚ್‌ಡಿ ಪಡೆದರು.
ಇದನ್ನೂ ಓದಿ: Ratan Tata: ಹಿರಿಯ ನಾಗರಿಕರಿಗೆ ಕಂಪಾನಿಯನ್ ನೀಡುವ ಸಂಸ್ಥೆಗೆ ಟಾಟಾ ಹೂಡಿಕೆ
ಅವರು 1963ರಲ್ಲಿ ಶೆಫೀಲ್ಡ್‌ನಲ್ಲಿ ಬ್ರಿಟಿಷ್ ಐರನ್ ಮತ್ತು ಸ್ಟೀಲ್ ರಿಸರ್ಚ್ ಅಸೋಸಿಯೇಷನ್‌ನೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು 1968ರಲ್ಲಿ ಟಾಟಾ ಐರನ್ ಆ್ಯಂಡ್ ಸ್ಟೀಲ್ ಕಂಪನಿಗೆ (ಈಗಿನ ಟಾಟಾ ಸ್ಟೀಲ್) ಸೇರಲು ಭಾರತಕ್ಕೆ ಮರಳಿದರು. ಅಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯ ಉಸ್ತುವಾರಿ ನಿರ್ದೇಶಕರ ಸಹಾಯಕರಾಗಿ ಕೆಲಸ ನಿರ್ವಹಿಸಿದರು.
ಅವರು 1978ರಲ್ಲಿ ಜನರಲ್ ಸೂಪರಿಂಟೆಂಡೆಂಟ್, 1979ರಲ್ಲಿ ಜನರಲ್ ಮ್ಯಾನೇಜರ್ ಮತ್ತು 1985ರಲ್ಲಿ ಟಾಟಾ ಸ್ಟೀಲ್ ಅಧ್ಯಕ್ಷರಾದರು. ಅವರು 1988ರಲ್ಲಿ ಟಾಟಾ ಸ್ಟೀಲ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕರಾದರು. 2001ರಲ್ಲಿ ನಿವೃತ್ತರಾಗುವ ಮೊದಲು 1992ರಲ್ಲಿ ಟಾಟಾ ಸ್ಟೀಲ್ ವ್ಯವಸ್ಥಾಪಕ ನಿರ್ದೇಶಕರಾದರು. ಅವರು ಟಾಟಾ ಸ್ಟೀಲ್ ಮತ್ತು ಟಾಟಾ ಸನ್ಸ್ ಜೊತೆಗೆ ಟಾಟಾ ಮೋಟಾರ್ಸ್ ಮತ್ತು ಟಾಟಾ ಟೆಲಿಸರ್ವಿಸಸ್ ಸೇರಿದಂತೆ ಹಲವಾರು ಟಾಟಾ ಗ್ರೂಪ್ ಕಂಪನಿಗಳ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಖತಮ್, ಟಾಟಾ ವಿಡಿಯೊ ಮೂಲಕ ರಾಹುಲ್ ಗಾಂಧಿಯನ್ನು ಲೇವಡಿ ಮಾಡಿದ ಬಿಜೆಪಿ, ಬರೀ ಟ್ರೋಲ್ ಮಾಡುವುದೇ ನಿಮ್ಮ ಕೆಲಸ ಎಂದ ಕಾಂಗ್ರೆಸ್
ಉದ್ಯಮ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ 2007ರಲ್ಲಿ ಅವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಯಿತು. ಡಾ. ಜಮ್ಶಡ್ ಇರಾನಿ ಅವರು ಲೋಹಶಾಸ್ತ್ರ ಕ್ಷೇತ್ರದಲ್ಲಿ ನೀಡಿದ ಸೇವೆಗಳನ್ನು ಗುರುತಿಸಿ 2008ರಲ್ಲಿ ಭಾರತ ಸರ್ಕಾರದಿಂದ ಜೀವಮಾನ ಸಾಧನೆ ಪ್ರಶಸ್ತಿ ಪಡೆದಿದ್ದಾರೆ. ಡಾ ಇರಾನಿ ಅವರು ಪತ್ನಿ ಡೈಸಿ ಇರಾನಿ ಮತ್ತು ಅವರ ಮೂವರು ಮಕ್ಕಳಾದ ಜುಬಿನ್, ನಿಲೋಫರ್ ಮತ್ತು ತನಾಜ್ ಅವರನ್ನು ಅಗಲಿದ್ದಾರೆ.