ಅಪ್ಪನ ಪ್ರೀತಿ: ನಡೆಯಲು ಆಗದ ಮಗಳಿಗಾಗಿ ‘ಮಾ ರೋಬೋಟ್’ ನಿರ್ಮಿಸಿಕೊಟ್ಟ ದಿನಗೂಲಿ ಕಾರ್ಮಿಕ, ಅಪರೂಪದ ಆವಿಷ್ಕಾರಕ್ಕೆ ದೇಶವ್ಯಾಪಿ ಮೆಚ್ಚುಗೆ

‘ನಾನು ಕೆಲಸದಿಂದ ಹಿಂದಿರುಗುವಾಗ ನನ್ನ ಮಗಳು ನನ್ನನ್ನು ನೋಡಿ ನಗುತ್ತಾಳೆ. ಅದು ನನ್ನ ಎಲ್ಲ ಶ್ರಮವನ್ನೂ ಮರೆಸುತ್ತದೆ’ ಎಂದು ಹೆಮ್ಮೆಯಿಂದ ಹೇಳುತ್ತಾರೆ ಅವರು.

ಅಪ್ಪನ ಪ್ರೀತಿ: ನಡೆಯಲು ಆಗದ ಮಗಳಿಗಾಗಿ ‘ಮಾ ರೋಬೋಟ್’ ನಿರ್ಮಿಸಿಕೊಟ್ಟ ದಿನಗೂಲಿ ಕಾರ್ಮಿಕ, ಅಪರೂಪದ ಆವಿಷ್ಕಾರಕ್ಕೆ ದೇಶವ್ಯಾಪಿ ಮೆಚ್ಚುಗೆ
ವಿಕಲಚೇತನ ಮಗುವಿಗೆ ಆಹಾರ ಉಣಿಸುವ ‘ಮಾ ರೋಬೋಟ್’
TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Sep 26, 2022 | 7:17 AM


ಪಣಜಿ: ಮನೆಯಲ್ಲಿ ಅನಾರೋಗ್ಯ ಪೀಡಿತ ಪತ್ನಿ, ವಿಕಲಚೇತನ ಮಗಳು, ತನಗೆ ಕೆಲಸಕ್ಕೆ ಹೋಗಲೇಬೇಕಾದ ಅನಿವಾರ್ಯತೆ. ನಂಬಿದವರನ್ನು ಸರಿಯಾಗಿ ನೋಡಿಕೊಳ್ಳಲು ಆಗುತ್ತಿಲ್ಲ ಎನ್ನುವ ಅಸಹಾಯಕತೆಯಿಂದ ನೊಂದಿದ್ದ ಗೋವಾದ ದಿನಗೂಲಿ ಕಾರ್ಮಿಕನೊಬ್ಬ ಸ್ವಂತ ಪರಿಶ್ರಮದಿಂದ ರೋಬೋಟ್ (Feeding Robot) ಒಂದನ್ನು ತಯಾರಿಸಿ ಎಲ್ಲರ ಗಮನ ಸೆಳೆದಿದ್ದಾನೆ. ಉನ್ನತ ತಾಂತ್ರಿಕ ಜ್ಞಾನವಿಲ್ಲದ, ಯಾರ ಬೆಂಬಲವೂ ಸಿಗದ ಪರಿಸ್ಥಿತಿಯಲ್ಲಿ ಇವನು ನಿರ್ಮಿಸಿರುವ ರೋಬೋಟ್ ಬಾಲಕಿಗೆ ಆಹಾರ ಸೇವಿಸಲು ಸಹಾಯ ಮಾಡುತ್ತದೆ.

ಇಂಥ ಅಪರೂಪದ ಸಾಧನೆ ಮಾಡಿರುವ ವ್ಯಕ್ತಿಯ ಹೆಸರು ಬಿಪಿನ್ ಕದಮ್. ಅವರ ಆವಿಷ್ಕಾರಕ್ಕಾಗಿ ಗೋವಾ ರಾಜ್ಯದ ನಾವೀನ್ಯತಾ ಮಂಡಳಿಯು (Goa State Innovation Council) ಕದಮ್ ಅವರನ್ನು ಶ್ಲಾಘಿಸಿದೆ. ಈ ರೋಬೋಟ್​ಗೆ ಅವರು ‘ಮಾ ರೋಬೋಟ್’ ಎಂದು ಹೆಸರಿಸಿದ್ದಾರೆ. ರೋಬೊಟ್​ ಮತ್ತಷ್ಟು ಸುಧಾರಿಸಲು ಮತ್ತು ಅದರ ವಾಣಿಜ್ಯ ಬಳಕೆಯ ಸಾಧ್ಯತೆಯನ್ನು ಅನ್ವೇಷಿಸಲು ಮಂಡಳಿಯು ಕದಮ್ ಅವರಿಗೆ ಆರ್ಥಿಕ ಬೆಂಬಲವನ್ನು ಒದಗಿಸಲು ಮುಂದಾಗಿದೆ.

ಈ ರೋಬೊಟ್ ಸರಳವಾಗಿ ಕಾರ್ಯನಿರ್ಹವಿಸುತ್ತದೆ. ಇದರ ಭಾಗವಾಗಿರುವ ತಟ್ಟೆಯಲ್ಲಿ ಆಹಾರವನ್ನು ಇರಿಸಲಾಗುತ್ತದೆ. ತರಕಾರಿಗಳು, ಅನ್ನ-ಸಾರು ಅಥವಾ ಇತರ ವಸ್ತುಗಳನ್ನು ಒಂದೆಡೆ ಇರಿಸಲಾಗುತ್ತದೆ. ಮಗಳು ಏನು ತಿನ್ನಬೇಕೆಂದು ಬಯಸುತ್ತಾಳೋ ಎಂಬುದನ್ನು ನಿರ್ದಿಷ್ಟ ಧ್ವನಿ ಸಂಕೇತರದ ಮೂಲಕ ಮೂಲಕ ರೋಬೊಟ್​ಗೆ ತಿಳಿಸಿದರೆ ಅದು ಅಂಥದ್ದೇ ಆಹಾರವನ್ನು ನೀಡುತ್ತದೆ. ಅಂಗವೈಕಲ್ಯದಿಂದಾಗಿ ಚಲಿಸಲು ಮತ್ತು ತನ್ನ ಕೈಗಳನ್ನು ಎತ್ತಲು ಸಾಧ್ಯವಾಗದ ಹುಡುಗಿಗೆ ಈ ರೋಬೊಟ್ ಆಹಾರ ನೀಡುತ್ತದೆ.

ದಕ್ಷಿಣ ಗೋವಾದ ಪೋಂಡಾ ತಾಲ್ಲೂಕಿನ ಬೆಥೋರಾ ಗ್ರಾಮದ ನಿವಾಸಿಯಾಗಿರುವ 40ರ ಹರೆಯದ ಕದಂ ದಿನಗೂಲಿ ಕಾರ್ಮಿಕನಾಗಿ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಿದ್ದಾನೆ. ತನ್ನ 14 ವರ್ಷದ ಮಗಳು ವಿಕಲಚೇತನಳಾಗಿದ್ದು, ತನ್ನಷ್ಟಕ್ಕೆ ತಾನೇ ತಿನ್ನಲು ಸಾಧ್ಯವಿಲ್ಲ. ಅವಳಿಗೆ ಯಾರಾದರೂ ಒಬ್ಬರು ಊಟ ತಿನ್ನಿಸಬೇಕಿತ್ತು. ಆದರೆ ನನ್ನ ಹೆಂಡಂತೆ ಅಂದರೆ ಅವಳ ತಾಯಿಯೂ ಅನಾರೋಗ್ಯದಿಂದ ಹಾಸಿಗೆ ಹಿಡಿದ ನಂತರ ಮನೆಯ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತು ಎಂದು ಕದಮ್ ತಮ್ಮ ಪರಿಸ್ಥಿತಿ ವಿವರಿಸಿದರು.

‘ಸುಮಾರು ಎರಡು ವರ್ಷಗಳ ಹಿಂದೆ, ನನ್ನ ಹೆಂಡತಿ ಹಾಸಿಗೆ ಹಿಡಿದಿದ್ದಳು. ನಮ್ಮ ಮಗಳಿಗೆ ಹಾಲುಣಿಸಲು ಸಾಧ್ಯವಾಗದ ಕಾರಣ ಅವಳು ದುಃಖದಿಂದ ಅಳುತ್ತಿದ್ದಳು. ಮಗಳಿಗೆ ಆಹಾರ ನೀಡಲು ನಾನು ಕೆಲಸದಿಂದ ಮನೆಗೆ ವಾಪಸ್ ಬರಬೇಕಾಗಿತ್ತು. ಮಗಳು ಯಾರ ಮೇಲೂ ಅವಲಂಬಿತಳಾಗದೆ ಸಮಯಕ್ಕೆ ಸರಿಯಾಗಿ ಊಟ ಮಾಡಲು ಏನಾದರೂ ಮಾಡಬೇಕೆಂದು ನನ್ನ ಹೆಂಡತಿ ಒತ್ತಾಯಿಸಿದಳು. ಇದು ನನ್ನನ್ನು ಊಟ ಕೊಡುವ ರೋಬೋಟ್ ತಯಾರಿಸಲು ಪ್ರೇರೇಪಿಸಿತು’ ಎನ್ನುತ್ತಾರೆ ಅವರು.

‘ನಮಗೆ ಬೇಕಿರುವ ರೋಬೊಟ್ ಎಲ್ಲಿಯೂ ಸಿಗಲಿಲ್ಲ. ಕೊನೆಗೆ ನಾನೇ ಅದನ್ನು ರೂಪಿಸಲು ಮುಂದಾದೆ ಸಾಫ್ಟ್​ವೇರ್​ನ ಮೂಲಭೂತ ಅಂಶಗಳನ್ನು ಕಲಿಯಲು ಆನ್​ಲೈನ್​ನಲ್ಲಿ ಹುಡುಕಾಡಿದೆ. ಪ್ರತಿದಿನ ನಾನು 12 ಗಂಟೆ ಕೆಲಸ ಮಾಡಬೇಕಿದೆ. ಉಳಿದ ಅಲ್ಪಸ್ವಲ್ಪ ಸಮಯದಲ್ಲಿ ರೋಬೋಟ್​ಗೆ ಸಂಬಂಧಿಸಿದ ಮಾಹಿತಿ ತಿಳಿಯಲು, ಕಲಿಯಲು ಮುಂದಾದೆ. ನಾಲ್ಕು ತಿಂಗಳ ನಿರಂತರ ಸಂಶೋಧನೆಯ ನಂತರ ಈ ರೋಬೊಟ್ ಸಿದ್ಧವಾಯಿತು. ನಾನು ಕೆಲಸದಿಂದ ಹಿಂದಿರುಗುವಾಗ ನನ್ನ ಮಗಳು ನನ್ನನ್ನು ನೋಡಿ ನಗುತ್ತಾಳೆ. ಅದು ನನ್ನ ಎಲ್ಲ ಶ್ರಮವನ್ನೂ ಮರೆಸುತ್ತದೆ’ ಎಂದು ಹೆಮ್ಮೆಯಿಂದ ಹೇಳುತ್ತಾರೆ ಅವರು.

ಹುಡುಗಿಯ ಮಾತು ಆಧರಿಸಿ ‘ಮಾ ರೋಬೋಟ್’ ಆಹಾರವನ್ನು ನೀಡುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ಆತ್ಮನಿರ್ಭರ ಭಾರತವನ್ನು ಉತ್ತೇಜಿಸುತ್ತಿದ್ದಾರೆ. ಅದೇ ರೀತಿ, ನನ್ನ ಮಗುವನ್ನು ಆತ್ಮನಿರ್ಭರ (ಸ್ವಾವಲಂಬಿ) ಮಾಡಲು ನಾನು ಬಯಸಿದ್ದೆ’ ಎಂದು ಕದಮ್ ಹೇಳಿದರು.

 

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada