Ghulam Nabi Azad: ಜಮ್ಮು ಕಾಶ್ಮೀರದಲ್ಲಿ ಇಂದೇ ಘೋಷಣೆಯಾಗುತ್ತಾ ಗುಲಾಂ ನಬಿ ಆಜಾದ್ ಹೊಸ ರಾಜಕೀಯ ಪಕ್ಷ?

ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಗುಲಾಂ ನಬಿ ಆಜಾದ್ ಇಂದು ತಮ್ಮ ಹೊಸ ರಾಜಕೀಯ ಪಕ್ಷದ ಮಾಹಿತಿಯನ್ನು ನೀಡಲು ಪತ್ರಿಕಾಗೋಷ್ಠಿಯನ್ನು ನಡೆಸಲಿದ್ದಾರೆ.

Ghulam Nabi Azad: ಜಮ್ಮು ಕಾಶ್ಮೀರದಲ್ಲಿ ಇಂದೇ ಘೋಷಣೆಯಾಗುತ್ತಾ ಗುಲಾಂ ನಬಿ ಆಜಾದ್ ಹೊಸ ರಾಜಕೀಯ ಪಕ್ಷ?
ಗುಲಾಂ ನಬಿ ಆಜಾದ್
TV9kannada Web Team

| Edited By: Sushma Chakre

Sep 26, 2022 | 8:42 AM

ಶ್ರೀನಗರ: ಹಲವು ದಶಕಗಳಿಂದ ಕಾಂಗ್ರೆಸ್​​ ಕಟ್ಟಾಳುವಾಗಿ ಕೆಲಸ ಮಾಡಿದ್ದ ಗುಲಾಂ ನಬಿ ಆಜಾದ್ (Ghulam Nabi Azad) ಆ. 29ರಂದು ಕಾಂಗ್ರೆಸ್​ಗೆ (Congress) ರಾಜೀನಾಮೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದರು. ಸಾಲು ಸಾಲಾಗಿ ಕಾಂಗ್ರೆಸ್​ ನಾಯಕರ ರಾಜೀನಾಮೆಯಿಂದ ಕಂಗೆಟ್ಟಿದ್ದ ಕಾಂಗ್ರೆಸ್​ ಹೈಕಮಾಂಡ್​ಗೆ ಗುಲಾಂ ನಬಿ ಆಜಾದ್ ಅವರ ರಾಜೀನಾಮೆಯಿಂದ ಮತ್ತೊಂದು ಶಾಕ್ ಎದುರಾಗಿತ್ತು. ಕಾಂಗ್ರೆಸ್ ತೊರೆದಿರುವ ಗುಲಾಂ ನಬಿ ಆಜಾದ್ ಇಂದು (ಸೆ. 26) ತಮ್ಮ ಹೊಸ ರಾಜಕೀಯ ಪಕ್ಷವನ್ನು ಘೋಷಿಸುವ ನಿರೀಕ್ಷೆಯಿದೆ. ಮೂಲಗಳ ಪ್ರಕಾರ, ಅವರು ಇಂದು ತಮ್ಮ ಹೊಸ ರಾಜಕೀಯ ಪಕ್ಷದ ಹೆಸರು ಮತ್ತು ಸಿದ್ಧಾಂತಗಳನ್ನು ಬಹಿರಂಗಪಡಿಸಲಿದ್ದಾರೆ.

ANI ವರದಿಗಳ ಪ್ರಕಾರ, ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಗುಲಾಂ ನಬಿ ಆಜಾದ್ ಇಂದು ತಮ್ಮ ಹೊಸ ರಾಜಕೀಯ ಪಕ್ಷದ ಮಾಹಿತಿಯನ್ನು ನೀಡಲು ಪತ್ರಿಕಾಗೋಷ್ಠಿಯನ್ನು ನಡೆಸಲಿದ್ದಾರೆ. ಕಾಂಗ್ರೆಸ್​ಗೆ ರಾಜೀನಾಮೆ ನೀಡಿದ ಬಳಿಕ ಗುಲಾಂ ನಬಿ ಆಜಾದ್ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎನ್ನಲಾಗಿತ್ತು. ಆದರೆ, ಅಚ್ಚರಿಯೆಂಬಂತೆ ಜಮ್ಮು ಕಾಶ್ಮೀರದಲ್ಲಿ ತಮ್ಮದೇ ಸ್ವಂತ ಪಕ್ಷ ಕಟ್ಟುವುದಾಗಿ ಅವರು ಕಳೆದ ತಿಂಗಳು ಘೋಷಿಸಿದ್ದರು.

ಇದನ್ನೂ ಓದಿ: Big News: ಕಾಂಗ್ರೆಸ್​​ಗೆ ರಾಜೀನಾಮೆ ಬೆನ್ನಲ್ಲೇ ಹೊಸ ರಾಜಕೀಯ ಪಕ್ಷ ಕಟ್ಟಲು ಗುಲಾಂ ನಬಿ ಆಜಾದ್ ನಿರ್ಧಾರ

ಕಾಂಗ್ರೆಸ್ ತೊರೆದಿರುವ ಗುಲಾಂ ನಬಿ ಆಜಾದ್ ಜಮ್ಮು ಕಾಶ್ಮೀರದಲ್ಲಿ ಹೊಸ ಪಕ್ಷವನ್ನು ಪ್ರಾರಂಭಿಸಲಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿಯಾಗಿರುವ ಗುಲಾಂ ನಬಿ ಆಜಾದ್ ತಮ್ಮ ತವರು ನೆಲದಲ್ಲಿ ತಮ್ಮ ಹೊಸ ಪಕ್ಷವನ್ನು ಪ್ರಾರಂಭಿಸಲು ಬಯಸಿದ್ದಾರೆ. “ನಾನು ಜಮ್ಮು ಮತ್ತು ಕಾಶ್ಮೀರಕ್ಕೆ ಹೋಗುತ್ತೇನೆ. ನಾನು ನನ್ನ ರಾಜ್ಯದಲ್ಲಿ ನನ್ನದೇ ಆದ ಪಕ್ಷವನ್ನು ರಚಿಸುತ್ತೇನೆ. ನಂತರ ರಾಷ್ಟ್ರ ರಾಜಕಾರಣದ ಬಗ್ಗೆ ಪರಿಶೀಲಿಸುತ್ತೇನೆ” ಎಂದು ಗುಲಾಂ ನಬಿ ಆಜಾದ್ ಹೇಳಿದ್ದರು. ಈ ವರ್ಷದ ಕೊನೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ನಡೆಯಲಿದೆ.

73 ವರ್ಷದ ಗುಲಾಂ ನಬಿ ಆಜಾದ್ ಕಳೆದ ತಿಂಗಳ ಅಂತ್ಯದಲ್ಲಿ ಕಾಂಗ್ರೆಸ್​ನ ತನ್ನ ಪ್ರಾಥಮಿಕ ಸದಸ್ಯತ್ವ ಸೇರಿದಂತೆ ಎಲ್ಲಾ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರು. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಬರೆದಿದ್ದ 5 ಪುಟಗಳ ಸುದೀರ್ಘ ಪತ್ರದಲ್ಲಿ ಗುಲಾಂ ನಬಿ ಆಜಾದ್ ತಾವು ಕಾಂಗ್ರೆಸ್​ನಿಂದ ದೂರ ಸರಿಯುತ್ತಿರುವುದಕ್ಕೆ ಪಕ್ಷದಲ್ಲಿ ಹಿರಿಯ ನಾಯಕರನ್ನು ದೂರವಿಡುವುದು ಮತ್ತು ಪಕ್ಷದಲ್ಲಿ ಬೆಳೆಯುತ್ತಿರುವ ಪಕ್ಷಪಾತವೇ ಕಾರಣ ಎಂದು ಆರೋಪಿಸಿದ್ದರು. ಅಲ್ಲದೆ, ರಾಹುಲ್ ಗಾಂಧಿಯನ್ನು “ಅಪ್ರಬುದ್ಧ” ಎಂದು ಗುಲಾಂ ನಬಿ ಆಜಾದ್ ಟೀಕಿಸಿದ್ದರು.

ಇದನ್ನೂ ಓದಿ: Ghulam Nabi Azad: ಹೊಸ ಪಕ್ಷ, ಧ್ವಜದ ಬಗ್ಗೆ ಜಮ್ಮು ಕಾಶ್ಮೀರದ ಜನರು ತೀರ್ಮಾನಿಸುತ್ತಾರೆ: ಗುಲಾಂ ನಬಿ ಆಜಾದ್

ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದ ಗುಲಾಂ ನಬಿ ಆಜಾದ್, ನನಗೆ ವೈಯಕ್ತಿಕ ಮಟ್ಟದಲ್ಲಿ ಇಡೀ ಗಾಂಧಿ ಕುಟುಂಬದ ಬಗ್ಗೆ ಅಪಾರ ಗೌರವವಿದೆ. ಇಲ್ಲಿ ನಾನು ವೈಯಕ್ತಿಕ ಸಂಬಂಧದ ಬಗ್ಗೆ ಮಾತನಾಡುತ್ತಿಲ್ಲ. ಕಾಂಗ್ರೆಸ್ ಪತನದ ಬಗ್ಗೆ ಮಾತನಾಡುತ್ತಿದ್ದೇನೆ. ರಾಹುಲ್ ಗಾಂಧಿ ರಾಜಕೀಯಕ್ಕೆ ಬಂದ ನಂತರ ಮತ್ತು ವಿಶೇಷವಾಗಿ ಜನವರಿ 2013ರ ನಂತರ ರಾಹುಲ್ ಗಾಂಧಿಯನ್ನು ಉಪಾಧ್ಯಕ್ಷರನ್ನಾಗಿ ನೇಮಿಸಿದ ನಂತರ ಕಾಂಗ್ರೆಸ್​ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ. ಕಾಂಗ್ರೆಸ್ ಪೂರ್ತಿ ನಾಶವಾಗುತ್ತಿದೆ. ಕಾಂಗ್ರೆಸ್ ರಾಷ್ಟ್ರೀಯ ಮಟ್ಟದಲ್ಲಿ ತನಗೆ ಲಭ್ಯವಿರುವ ರಾಜಕೀಯ ಜಾಗವನ್ನು ಬಿಜೆಪಿಗೆ ಮತ್ತು ರಾಜ್ಯ ಮಟ್ಟದ ಜಾಗವನ್ನು ಪ್ರಾದೇಶಿಕ ಪಕ್ಷಗಳಿಗೆ ಬಿಟ್ಟುಕೊಟ್ಟಿದೆ ಎಂದು ಹೇಳಿದ್ದರು.

“ನನ್ನ ಪಕ್ಷಕ್ಕೆ ನಾನು ಇನ್ನೂ ಧ್ವಜ, ಹೆಸರನ್ನು ನಿರ್ಧರಿಸಿಲ್ಲ. ಅದರ ಬಗ್ಗೆ ಜಮ್ಮು ಕಾಶ್ಮೀರದ ಜನರು ನಿರ್ಧರಿಸುತ್ತಾರೆ. ಆದರೆ, ನಾನು ನನ್ನ ಪಕ್ಷಕ್ಕೆ ಹಿಂದೂಸ್ತಾನಿ ಹೆಸರನ್ನು ಇಡುತ್ತೇನೆ, ಅದು ಎಲ್ಲರಿಗೂ ಅರ್ಥವಾಗುತ್ತದೆ” ಎಂದು ಗುಲಾಂ ನಬಿ ಆಜಾದ್ ಹೇಳಿದ್ದಾರೆ. ಕಳೆದ 50 ವರ್ಷಗಳಿಂದ ಕಾಂಗ್ರೆಸ್​ನಲ್ಲಿ ಗುರುತಿಸಿಕೊಂಡಿದ್ದ ಗುಲಾಂ ನಬಿ ಆಜಾದ್ 5 ದಶಕಗಳ ಕಾಲದ ಕಾಂಗ್ರೆಸ್​ನೊಂದಿಗಿನ ತಮ್ಮ ರಾಜಕೀಯ ಸಂಬಂಧಕ್ಕೆ ಇತಿಶ್ರೀ ಹಾಡಿ ಹೊಸ ಪಕ್ಷ ಸ್ಥಾಪನೆ ಮಾಡಲಿದ್ದಾರೆ. ಗುಲಾಂ ನಬಿ ಆಜಾದ್ ತಮ್ಮ ಹೊಸ ಪಕ್ಷದಿಂದ ಜಮ್ಮು ಮತ್ತು ಕಾಶ್ಮೀರದ ಸಂಪೂರ್ಣ ರಾಜ್ಯತ್ವ, ಭೂಮಿಯ ಹಕ್ಕು ಮತ್ತು ಸ್ಥಳೀಯ ನಿವಾಸಿಗಳಿಗೆ ಉದ್ಯೋಗ ನೀಡುವ ಭರವಸೆ ನೀಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada