Mann Ki Baat: ಪ್ರತಿಯೊಬ್ಬ ಭಾರತೀಯ ಯುವಕರಿಗೂ ಸ್ಫೂರ್ತಿ; ಭಗತ್ ಸಿಂಗ್ 118ನೇ ಜನ್ಮ ದಿನಾಚರಣೆಗೆ ಪ್ರಧಾನಿ ಮೋದಿ ಗೌರವ

ಶಹೀದ್ ಭಗತ್ ಸಿಂಗ್ ಅವರ 118ನೇ ಜನ್ಮ ದಿನಾಚರಣೆಯ ಹಿನ್ನೆಲೆಯಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಭಗತ್ ಸಿಂಗ್​ ಅವರನ್ನು ತಮ್ಮ ಮನ್ ಕಿ ಬಾತ್​​ನಲ್ಲಿ ಸ್ಮರಿಸುತ್ತಾ ಗೌರವ ಸಲ್ಲಿಸಿದರು. ಭಗತ್ ಸಿಂಗ್ ನಮ್ಮ ದೇಶದ ಯುವಕರಿಗೆ ಸ್ಫೂರ್ತಿ ಎಂದು ಮೋದಿ ಹೇಳಿದರು. ಇದೇ ವೇಳೆ ಭಾರತದ ಪ್ರಸಿದ್ಧ ಗಾಯಕಿ ಲತಾ ಮಂಗೇಶ್ಕರ್ ಅವರನ್ನೂ ಮೋದಿ ನೆನಪಿಸಿಕೊಂಡರು.

Mann Ki Baat: ಪ್ರತಿಯೊಬ್ಬ ಭಾರತೀಯ ಯುವಕರಿಗೂ ಸ್ಫೂರ್ತಿ; ಭಗತ್ ಸಿಂಗ್ 118ನೇ ಜನ್ಮ ದಿನಾಚರಣೆಗೆ ಪ್ರಧಾನಿ ಮೋದಿ ಗೌರವ
Pm Modi Mann Ki Baat

Updated on: Sep 28, 2025 | 12:45 PM

ನವದೆಹಲಿ, ಸೆಪ್ಟೆಂಬರ್ 28: ಪ್ರಧಾನಿ ನರೇಂದ್ರ ಮೋದಿ ಇಂದು (ಸೆಪ್ಟೆಂಬರ್ 28) ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ನ (Mann Ki Baat) 126ನೇ ಸಂಚಿಕೆಯನ್ನು ಉದ್ದೇಶಿಸಿ ಮಾತನಾಡಿದರು. ರೇಡಿಯೋ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಭಗತ್ ಸಿಂಗ್ ಅವರಿಗೆ ಗೌರವ ಸಲ್ಲಿಸಿದರು. ಭಗತ್ ಸಿಂಗ್ ಅವರು ಪ್ರತಿಯೊಬ್ಬ ಭಾರತೀಯರಿಗೆ, ವಿಶೇಷವಾಗಿ ದೇಶದ ಯುವಕರಿಗೆ ಸ್ಫೂರ್ತಿ ಎಂದು ಹೇಳಿದರು.

“ದೇಶಕ್ಕಾಗಿ ಗಲ್ಲು ಶಿಕ್ಷೆಯನ್ನು ಸ್ವೀಕರಿಸುವ ಮೊದಲು, ಭಗತ್ ಸಿಂಗ್ ಬ್ರಿಟಿಷರಿಗೆ ಪತ್ರ ಬರೆದಿದ್ದರು. ಅವರು, ‘ನನ್ನನ್ನು ಮತ್ತು ನನ್ನ ಒಡನಾಡಿಗಳನ್ನು ಯುದ್ಧ ಕೈದಿಗಳಂತೆ ನಡೆಸಿಕೊಳ್ಳಬೇಕೆಂದು ನಾನು ಬಯಸುತ್ತೇನೆ. ಆದ್ದರಿಂದ, ನಮಗೆ ನೇಣು ಹಾಕುವ ಬದಲಾಗಿ ನೇರವಾಗಿ ಗುಂಡು ಹಾರಿಸುವ ಮೂಲಕ ಸಾಯಿಸಬೇಕು’ ಎಂದು ಪತ್ರದಲ್ಲಿ ಬರೆದಿದ್ದರು. ಅಮರ್ ಶಹೀದ್ ಭಗತ್ ಸಿಂಗ್ ಪ್ರತಿಯೊಬ್ಬ ಭಾರತೀಯರಿಗೆ ಅದರಲ್ಲೂ ವಿಶೇಷವಾಗಿ ದೇಶದ ಯುವಕರಿಗೆ ಸ್ಫೂರ್ತಿ” ಎಂದು ಪ್ರಧಾನಿ ಮೋದಿ ಹೇಳಿದರು.
ಸೆಪ್ಟೆಂಬರ್ 28, 1907ರಂದು ಪಂಜಾಬ್‌ನ ಲ್ಯಾಲ್ಪುರ್ ಜಿಲ್ಲೆಯ ಬಂಗಾ ಗ್ರಾಮದಲ್ಲಿ ಪಂಜಾಬಿ ಸಿಖ್ ಕುಟುಂಬದಲ್ಲಿ ಜನಿಸಿದ ಭಗತ್ ಸಿಂಗ್ ಇದ್ದ ಪ್ರದೇಶ ಆಗ ಬ್ರಿಟಿಷ್ ಭಾರತದ ಭಾಗವಾಗಿತ್ತು. ಈಗ ಅದು ಪಾಕಿಸ್ತಾನವಾಗಿದೆ. ಭಗತ್ ಸಿಂಗ್ 20ನೇ ಶತಮಾನದ ಆರಂಭದಲ್ಲಿ ದೇಶದ ಸ್ವಾತಂತ್ರ್ಯ ಚಳವಳಿಯಲ್ಲಿ ಪ್ರಮುಖ ವ್ಯಕ್ತಿಯಾಗಿದ್ದರು. ಅವರು ಚಿಕ್ಕ ವಯಸ್ಸಿನಿಂದಲೇ ಕ್ರಾಂತಿಕಾರಿ ಹೋರಾಟದಲ್ಲಿ ಸಕ್ರಿಯರಾಗಿದ್ದರು ಮತ್ತು ಮಹಾತ್ಮ ಗಾಂಧಿಯವರ ಅಸಹಕಾರ ಚಳವಳಿಯೊಂದಿಗೆ ಸಂಬಂಧ ಹೊಂದಿದ್ದರು.

ಇದನ್ನೂ ಓದಿ: ತಮಿಳುನಾಡಿನ ಕಾಲ್ತುಳಿತ ದುರಂತಕ್ಕೆ ಪ್ರಧಾನಿ ಮೋದಿ ಸಂತಾಪ; ಕರೂರಿಗೆ ನಾಳೆ ಸಿಎಂ ಸ್ಟಾಲಿನ್ ಭೇಟಿ


ಭಗತ್ ಸಿಂಗ್ ಅವರ ನಾಯಕತ್ವದಲ್ಲಿ ಹಿಂದೂಸ್ತಾನ್ ರಿಪಬ್ಲಿಕನ್ ಅಸೋಸಿಯೇಷನ್ ​​ಅನ್ನು ಹಿಂದೂಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್ ​​(HSRA) ಎಂದು ಮರುನಾಮಕರಣ ಮಾಡಲಾಯಿತು. ಇದು ಭಾರತೀಯ ಸ್ವಾತಂತ್ರ್ಯ ಚಳವಳಿಯಲ್ಲಿ ಹೊಸ ಪ್ರಾಮುಖ್ಯತೆಯನ್ನು ಪಡೆದುಕೊಂಡಿತು.

ಸಿಂಗ್ ಅವರ ‘ಇಂಕ್ವಿಲಾಬ್ ಜಿಂದಾಬಾದ್’ ಎಂಬ ಘೋಷಣೆ ಇನ್ನೂ ಜನರ ಮನಸ್ಸಿನಲ್ಲಿ ಪ್ರತಿಧ್ವನಿಸುತ್ತಿದೆ. ಅವರ ರಾಜಕೀಯ ಚಿಂತನೆಗಳು ಗಾಂಧಿವಾದಿ ರಾಷ್ಟ್ರೀಯತೆಯಿಂದ ಕ್ರಾಂತಿಕಾರಿ ಮಾರ್ಕ್ಸ್​ವಾದಕ್ಕೆ ವಿಕಸನಗೊಂಡಿವೆ. ಮಾರ್ಚ್ 23, 1931ರಂದು, ಲಾಹೋರ್ ಪಿತೂರಿ ಪ್ರಕರಣದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರನ್ನು ಗಲ್ಲಿಗೇರಿಸಲಾಯಿತು.


ಇದನ್ನೂ ಓದಿ: Mann Ki Baat: ಛತ್ ಪೂಜೆಯನ್ನು ಯುನೆಸ್ಕೋ ಪಟ್ಟಿಯಲ್ಲಿ ಸೇರಿಸಲು ಸರ್ಕಾರ ಶ್ರಮ; ಮನ್ ಕಿ ಬಾತ್​​ನಲ್ಲಿ ಪ್ರಧಾನಿ ಮೋದಿ

ಲತಾ ಮಂಗೇಶ್ಕರ್​ಗೆ ಗೌರವ:

ಮನ್ ಕಿ ಬಾತ್​​ನಲ್ಲಿ ಪ್ರಧಾನಿಯವರು ಲತಾ ಮಂಗೇಶ್ಕರ್ ಅವರ ಜನ್ಮ ವಾರ್ಷಿಕೋತ್ಸವದಂದು ಅವರನ್ನು ಸ್ಮರಿಸಿದರು ಮತ್ತು ಅವರ ಹಾಡುಗಳು ಮಾನವ ಭಾವನೆಗಳನ್ನು ಕಲಕುವ ಎಲ್ಲವನ್ನೂ ಒಳಗೊಂಡಿವೆ ಎಂದು ಹೇಳಿದರು. ಅವರು ಹಾಡಿದ ದೇಶಭಕ್ತಿ ಗೀತೆಗಳು ಜನರ ಮೇಲೆ ಆಳವಾದ ಪ್ರಭಾವ ಬೀರಿವೆ ಎಂದು ಅವರು ಹೇಳಿದರು. “ಇಂದು ಲತಾ ಮಂಗೇಶ್ಕರ್ ಅವರ ಜನ್ಮ ವಾರ್ಷಿಕೋತ್ಸವವೂ ಆಗಿದೆ. ಅವರ ಹಾಡುಗಳು ಮಾನವ ಭಾವನೆಗಳನ್ನು ಕಲಕುವ ಎಲ್ಲವನ್ನೂ ಒಳಗೊಂಡಿವೆ. ಅವರು ಹಾಡಿದ ದೇಶಭಕ್ತಿ ಗೀತೆಗಳು ಜನರನ್ನು ಪ್ರೇರೇಪಿಸಿದವು. ಅವರು ಭಾರತೀಯ ಸಂಸ್ಕೃತಿಯೊಂದಿಗೆ ಆಳವಾದ ಸಂಪರ್ಕವನ್ನು ಹೊಂದಿದ್ದರು. ನಾನು ಲತಾ ದೀದಿಗೆ ನನ್ನ ಹೃತ್ಪೂರ್ವಕ ಗೌರವ ಸಲ್ಲಿಸುತ್ತೇನೆ. ಲತಾ ದೀದಿಯೊಂದಿಗಿನ ನನ್ನ ಪ್ರೀತಿಯ ಬಂಧ ಯಾವಾಗಲೂ ಹಾಗೆಯೇ ಉಳಿದಿದೆ. ಅವರು ಪ್ರತಿ ವರ್ಷವೂ ನನಗೆ ರಾಖಿಯನ್ನು ಕಳುಹಿಸುತ್ತಿದ್ದರು. ಅವರು ಹಾಡಿದ ಮತ್ತು ಸುಧೀರ್ ಫಡ್ಕೆ ಜಿ ಸಂಯೋಜಿಸಿದ ‘ಜ್ಯೋತಿ ಕಲಾಶ್ ಛಲ್ಕೆ’ ಹಾಡು ನನಗೆ ತುಂಬಾ ಇಷ್ಟವಾದ ಹಾಡು ಎಂದು ನಾನು ಅವರಿಗೆ ಹೇಳುತ್ತಿದ್ದೆ” ಎಂದು ಪ್ರಧಾನಿ ಹೇಳಿದ್ದಾರೆ.


ಈ ವೇಳೆ ಪ್ರಧಾನಿ ಮೋದಿ ಅವರು ಭಾರತೀಯ ನೌಕಾಪಡೆಯ ಇಬ್ಬರು ಅಧಿಕಾರಿಗಳಾದ ಲೆಫ್ಟಿನೆಂಟ್ ಕಮಾಂಡರ್ ದಿಲ್ನಾ ಮತ್ತು ಇನ್ನೊಬ್ಬರು ಲೆಫ್ಟಿನೆಂಟ್ ಕಮಾಂಡರ್ ರೂಪ ಅವರೊಂದಿಗೆ ಸಂವಾದ ನಡೆಸಿದರು. “ಭಾರತೀಯ ನೌಕಾಪಡೆಯ ಇಬ್ಬರು ಧೈರ್ಯಶಾಲಿ ಅಧಿಕಾರಿಗಳು ನಾವಿಕ ಸಾಗರ ಪರಿಕ್ರಮದ ಸಮಯದಲ್ಲಿ ಧೈರ್ಯ ಮತ್ತು ದೃಢಸಂಕಲ್ಪವನ್ನು ಪ್ರದರ್ಶಿಸಿದ್ದಾರೆ. ‘ಮನ್ ಕಿ ಬಾತ್’ ಕೇಳುಗರಿಗೆ ಈ ಇಬ್ಬರು ಧೈರ್ಯಶಾಲಿ ಅಧಿಕಾರಿಗಳಿಗೆ ನಾನು ಪರಿಚಯಿಸಲು ಬಯಸುತ್ತೇನೆ. ಒಬ್ಬರು ಲೆಫ್ಟಿನೆಂಟ್ ಕಮಾಂಡರ್ ದಿಲ್ನಾ ಮತ್ತು ಇನ್ನೊಬ್ಬರು ಲೆಫ್ಟಿನೆಂಟ್ ಕಮಾಂಡರ್ ರೂಪ” ಎಂದು ಪರಿಚಯಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ