International Cheetah Day: ಭಾರತದಲ್ಲಿ ಚೀತಾಗಳನ್ನು ಉಳಿಸಿಕೊಳ್ಳುವುದೇ ದೊಡ್ಡ ಸವಾಲು, ಪ್ರಾಜೆಕ್ಟ್​ ಚೀತಾಗೆ ಸಿಕ್ಕಿದೆಯಾ ಯಶಸ್ಸು?

ಭಾರತದಲ್ಲಿ ಚೀತಾ(Cheetah)ಗಳು ಬದುಕುಳಿಯಲು ಹೆಣಗಾಡುತ್ತಿವೆ, ಕೆಲವು ಪರಿಸ್ಥಿತಿಗಳು ಇನ್ನೂ ಸವಾಲಿನದ್ದಾಗಿವೆ. ಪ್ರಾಜೆಕ್ಟ್ ಚೀತಾ ಆರಂಭವಾಗಿ ಎರಡು ವರ್ಷಗಳ ನಂತರವೂ, ಅನೇಕ ಚೀತಾಗಳು ಇನ್ನೂ ಆವರಣಗಳಿಗೆ ಸೀಮಿತವಾಗಿವೆ ಮತ್ತು ಎಲ್ಲವನ್ನೂ ಯಶಸ್ವಿಯಾಗಿ ಕಾಡಿಗೆ ಬಿಡಲು ಸಾಧ್ಯವೇ ಆಗಿಲ್ಲ. ಚೀತಾಗಳನ್ನು ಒಂದೆಡೆ ಇರಿಸಿ, ಅಲ್ಲಿ ಅವುಗಳ ಆರೋಗ್ಯವನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ. ಆದರೆ ಪವನ್ ಎಂಬ ಒಂದೇ ಒಂದು ಚೀತಾ ಮಾತ್ರ ಮುಕ್ತವಾಗಿ ತಿರುಗಾಡುತ್ತಿದೆ. ತೀವ್ರ ಶಾಖ ಹಲವು ಚೀತಾ ಮರಿಗಳ ಸಾವು, ಅವರ ದೇಹದ ಮೇಲಾಗಿರುವ ಗಾಯ ಸವಾಲುಗಳನ್ನು ಉಂಟು ಮಾಡುತ್ತಿದೆ.

International Cheetah Day: ಭಾರತದಲ್ಲಿ ಚೀತಾಗಳನ್ನು ಉಳಿಸಿಕೊಳ್ಳುವುದೇ ದೊಡ್ಡ ಸವಾಲು, ಪ್ರಾಜೆಕ್ಟ್​ ಚೀತಾಗೆ ಸಿಕ್ಕಿದೆಯಾ ಯಶಸ್ಸು?
ಚೀತಾ

Updated on: Dec 04, 2025 | 10:20 AM

ನವದೆಹಲಿ, ಡಿಸೆಂಬರ್ 04: ಭಾರತದಲ್ಲಿ ಚೀತಾ(Cheetah)ಗಳು ಬದುಕುಳಿಯಲು ಹೆಣಗಾಡುತ್ತಿವೆ, ಕೆಲವು ಪರಿಸ್ಥಿತಿಗಳು ಇನ್ನೂ ಸವಾಲಿನದ್ದಾಗಿವೆ. ಪ್ರಾಜೆಕ್ಟ್ ಚೀತಾ ಆರಂಭವಾಗಿ ಎರಡು ವರ್ಷಗಳ ನಂತರವೂ, ಅನೇಕ ಚೀತಾಗಳು ಇನ್ನೂ ಆವರಣಗಳಿಗೆ ಸೀಮಿತವಾಗಿವೆ ಮತ್ತು ಎಲ್ಲವನ್ನೂ ಯಶಸ್ವಿಯಾಗಿ ಕಾಡಿಗೆ ಬಿಡಲು ಸಾಧ್ಯವೇ ಆಗಿಲ್ಲ. ಚೀತಾಗಳನ್ನು ಒಂದೆಡೆ ಇರಿಸಿ, ಅಲ್ಲಿ ಅವುಗಳ ಆರೋಗ್ಯವನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ. ಆದರೆ ಪವನ್ ಎಂಬ ಒಂದೇ ಒಂದು ಚೀತಾ ಮಾತ್ರ ಮುಕ್ತವಾಗಿ ತಿರುಗಾಡುತ್ತಿದೆ. ತೀವ್ರ ಶಾಖದಿಂದಾಗಿ ಹಲವು ಚೀತಾ ಮರಿಗಳ ಸಾವು, ಅವರ ದೇಹದ ಮೇಲಾಗಿರುವ ಗಾಯ ಸವಾಲುಗಳನ್ನು ಉಂಟು ಮಾಡುತ್ತಿದೆ.

ಚೀತಾಗಳ ಉಳಿವು ದೊಡ್ಡ ಸವಾಲು

ಚೀತಾಗಳು ಭಾರತೀಯ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವಲ್ಲಿ ಸವಾಲುಗಳನ್ನು ಎದುರಿಸುತ್ತಿವೆ. ಕಳೆದ ವರ್ಷ, ಹಲವಾರು ಚೀತಾ ಮರಿಗಳು ತೀವ್ರ ಶಾಖದಿಂದಾಗಿ ಸಾವನ್ನಪ್ಪಿವೆ. ಕೆಲವು ಚೀತಾಗಳಲ್ಲಿ ಸೋಂಕುಗಳು ಮತ್ತು ರೋಗಗಳು ಇರುವುದು ಪತ್ತೆಯಾಗಿದ್ದು, ಚಿಕಿತ್ಸೆಗಾಗಿ ಅವುಗಳನ್ನು ಕ್ವಾರಂಟೈನ್ ಮಾಡಲಾಗಿತ್ತು. ಕೆಲವು ಚೀತಾಗಳ ನಡುವೆ ಘರ್ಷಣೆಯುಂಟಾಗಿ ಗಾಯಗೊಂಡಿವೆ.

ಚೀತಾಗಳ ಮರಣ ಪ್ರಮಾಣವನ್ನು ಕಡಿಮೆ ಮಾಡಲು ಮತ್ತು ಚೀತಾ ಮರಿಗಳ ಬದುಕುಳಿಯುವಿಕೆಯ ಪ್ರಮಾಣವನ್ನು ಹೆಚ್ಚಿಸಲು ಸೌರಶಕ್ತಿ ಚಾಲಿತ ನೀರು ಪಂಪ್ ಮಾಡುವ ವ್ಯವಸ್ಥೆಗಳಂತಹ ತಂತ್ರಜ್ಞಾನಗಳನ್ನು ಬಳಸಲಾಗಿದೆ.

ಮತ್ತಷ್ಟು ಓದಿ: ಕುನೋ ನ್ಯಾಷನಲ್ ಪಾರ್ಕ್​​ನಲ್ಲಿ 5 ಮರಿಗಳಿಗೆ ಜನ್ಮ ನೀಡಿದ ಭಾರತೀಯ ಚೀತಾ

ಚೀತಾಗಳಿಗೆ ಹೆಚ್ಚಿನ ಆವಾಸಸ್ಥಾನವನ್ನು ಒದಗಿಸಲು ಮತ್ತು ಅವುಗಳ ಬೇಟೆಗೆ ಆಹಾರವನ್ನು ಒದಗಿಸಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ.

ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನಕ್ಕೆ ಒಟ್ಟು 20 ಚೀತಾಗಳನ್ನು ಬಿಡಲಾಯಿತು. ಸೆಪ್ಟೆಂಬರ್ 2022 ರಲ್ಲಿ ನಮೀಬಿಯಾದಿಂದ ಎಂಟು ಮತ್ತು ಫೆಬ್ರವರಿ 2023 ರಲ್ಲಿ ದಕ್ಷಿಣ ಆಫ್ರಿಕಾದಿಂದ ಹನ್ನೆರಡು ತರಲಾಗಿತ್ತು. ಡಿಸೆಂಬರ್ 2025 ರ ಹೊತ್ತಿಗೆ, ಭಾರತವು 32 ಚೀತಾಗಳನ್ನು ಹೊಂದಿತ್ತು. ಅದರಲ್ಲಿ 21 ಭಾರತದಲ್ಲಿ ಜನಿಸಿದ ಮರಿಗಳಾಗಿವೆ. ಭಾರತದಲ್ಲಿ ಜನಿಸಿದ ಚೀತಾ ನವೆಂಬರ್ 2025 ರಲ್ಲಿ ಐದು ಆರೋಗ್ಯಕರ ಮರಿಗಳಿಗೆ ಜನ್ಮ ನೀಡಿತ್ತು.

ಇಂದು ಅಂತಾರಾಷ್ಟ್ರೀಯ ಚೀತಾ ದಿನ. ಪ್ರಧಾನಿ ನರೇಂದ್ರ ಮೋದಿ ಈ ಕುರಿತು ಪೋಸ್ಟ್​ ಹಂಚಿಕೊಂಡಿದ್ದು, ನಮ್ಮ ಗ್ರಹದ ಅತ್ಯಂತ ಅದ್ಭುತ ಜೀವಿಗಳಲ್ಲಿ ಒಂದಾದ ಚೀತಾಗಳನ್ನು ರಕ್ಷಿಸಲು ಸಮರ್ಪಿತವಾಗಿರುವ ಎಲ್ಲಾ ವನ್ಯಜೀವಿ ಪ್ರಿಯರು ಮತ್ತು ಸಂರಕ್ಷಣಾಕಾರರಿಗೆ ಶುಭಾಶಯ ತಿಳಿಸಿದ್ದಾರೆ. ಮೂರು ವರ್ಷಗಳ ಹಿಂದೆ, ನಮ್ಮ ಸರ್ಕಾರವು ಈ ಪ್ರಾಣಿಯನ್ನು ರಕ್ಷಿಸುವ ಮತ್ತು ಅದು ನಿಜವಾಗಿಯೂ ಅಭಿವೃದ್ಧಿ ಹೊಂದಬಹುದಾದ ಪರಿಸರ ವ್ಯವಸ್ಥೆಯನ್ನು ಪುನಃಸ್ಥಾಪಿಸುವ ಉದ್ದೇಶದಿಂದ ಪ್ರಾಜೆಕ್ಟ್ ಚೀತಾವನ್ನು ಪ್ರಾರಂಭಿಸಿತು. ಕಳೆದುಹೋದ ಪರಿಸರ ಪರಂಪರೆಯನ್ನು ಪುನರುಜ್ಜೀವನಗೊಳಿಸುವ ಮತ್ತು ನಮ್ಮ ಜೀವವೈವಿಧ್ಯತೆಯನ್ನು ಬಲಪಡಿಸುವ ಪ್ರಯತ್ನವೂ ಇದಾಗಿತ್ತು ಎಂದು ಬರೆದಿದ್ದಾರೆ.

ಪ್ರಧಾನಿ ಮೋದಿ ಪೋಸ್ಟ್​ 

ಮುಖ್ಯಮಂತ್ರಿ ಡಾ. ಮೋಹನ್ ಯಾದವ್ ಇಂದು ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಮೂರು ಚೀತಾಗಳನ್ನು ಕಾಡಿಗೆ ಬಿಡಲಿದ್ದಾರೆ. ಪ್ರಾಜೆಕ್ಟ್​ ಚೀತಾ ಅಡಿಯಲ್ಲಿ ಚೀತಾಗಳ ಚಲನವಲನಗಳನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲು ಸುಧಾರಿತ ಟ್ರ್ಯಾಕಿಂಗ್ ವ್ಯವಸ್ಥೆಗಳು, ಮೇಲ್ವಿಚಾರಣಾ ತಂಡಗಳು ಮತ್ತು ಭದ್ರತಾ ಸಾಧನಗಳನ್ನು ನಿಯೋಜಿಸಲಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.

ಹೆಣ್ಣು ಚೀತಾ  ಮತ್ತು ಅದರ ಎರಡು 10 ತಿಂಗಳ ಮರಿಗಳು ಸೇರಿದಂತೆ ಆವರಣದಲ್ಲಿರುವ ಮೂರು ಚೀತಾಗಳನ್ನು ತೆರೆದ ಕಾಡಿಗೆ ಬಿಡಲಾಗುವುದು. ಚಿರತೆಗಳನ್ನು ಅವುಗಳ ನೈಸರ್ಗಿಕ ಪರಿಸರಕ್ಕೆ ಒಗ್ಗಿಸಿಕೊಳ್ಳುವುದು,  ಕಾಡು ನಡವಳಿಕೆಗೆ ಹೊಂದಿಕೊಳ್ಳುವುದು ಮತ್ತು ನೈಸರ್ಗಿಕ ಬೇಟೆಯ ಮೇಲಿನ ಅವಲಂಬನೆಯನ್ನು ಹೆಚ್ಚಿಸುವುದು ಈ ಬಿಡುಗಡೆಯ ಗುರಿಯಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ