ಡಿ.8ರ ಸಭೆ ಬರಲಾಗಲ್ಲ: ಕಾರಣ ಸಮೇತ ಸಿದ್ದರಾಮಯ್ಯಗೆ ಮರುಪತ್ರ ಬರೆದ ಸಚಿವ ಜೋಶಿ
ಕರ್ನಾಟಕದ ಅಭಿವೃದ್ಧಿ ಮತ್ತು ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೇಂದ್ರದ ಗಮನ ಸೆಳೆಯಲೆಂದು ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನವದೆಹಲಿಯಲ್ಲಿ ಡಿಸೆಂಬರ್ 8ರಂದು ರಾಜ್ಯವನ್ನು ಪ್ರತಿನಿಧಿಸುವ ಸಂಸದರ ಸಭೆ ಕರೆದಿದ್ದರು. ಆದ್ರೆ, ಸಂಸತ್ ಅಧಿವೇಶನ ನಡೆಯುತ್ತಿರುವುದರಿಂದ ಸಭೆಗೆ ಬರಲಾಗುವುದಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಿಎಂಗೆ ಮರುಪತ್ರ ಬರೆದಿದ್ದಾರೆ. ಹಾಗಾದ್ರೆ, ಪತ್ರದಲ್ಲೇನಿದೆ ಎನ್ನುವ ವಿವರ ಈ ಕೆಳಗಿನಂತಿದೆ.

ಬೆಂಗಳೂರು, (ಡಿಸೆಂಬರ್ 03): ಸಂಸತ್ ಚಳಿಗಾಲದ ಅಧಿವೇಶನ ಹಾಗೂ ಕಾರ್ಯದೊತ್ತಡದ ಕಾರಣ, ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಕರೆದಿರುವ ಸಂಸದರ ಸಭೆಯಲ್ಲಿ ಪಾಲ್ಗೊಳ್ಳುವುದು ಅಸಾಧ್ಯವೆಂದು ಧಾರವಾಡ ಸಂಸದರೂ ಆಗಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ತಿಳಿಸಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು, ಸಭೆಯಲ್ಲಿ ಪಾಲ್ಗೊಳ್ಳದಿರುವ ಬಗ್ಗೆ ಕಾರಣ ಸಮೇತ ಸ್ಪಷ್ಟಪಡಿಸಿದ್ದು, ತಾವು ಸಭೆ ನಿಗದಿಪಡಿಸುವ ಮೊದಲೇ ಚರ್ಚಿಸಿ ದಿನಾಂಕ ನಿಗದಿಪಡಿಸಿದ್ರೆ ಅನುಕೂಲವಾಗುತ್ತಿತ್ತು. ಡಿಸೆಂಬರ್ 8ರ ಬದಲು ಮತ್ತೊಂದು ದಿನಾಂಕ ನಿಗದಿಪಡಿಸುವಂತೆ ಪತ್ರದ ಮೂಲಕ ಸಲಹೆ ನೀಡಿದ್ದಾರೆ.
ರಾಜ್ಯದ ಅಭಿವೃದ್ಧಿ ಮತ್ತು ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೇಂದ್ರದ ಗಮನ ಸೆಳೆಯಲೆಂದು ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನವದೆಹಲಿಯಲ್ಲಿ ಡಿ.8ರಂದು ರಾಜ್ಯವನ್ನು ಪ್ರತಿನಿಧಿಸುವ ಸಂಸದರ ಸಭೆ ಕರೆದಿದ್ದರು. ಆದರೆ, ಈ ಬಗ್ಗೆ ಮೊದಲೇ ಸಂಸದರೊಂದಿಗೆ ಚರ್ಚಿಸಿ ದಿನಾಂಕ ನಿಗದಿಪಡಿಸಿಲ್ಲ. ಇನ್ನು ಸಂಸತ್ ಅಧಿವೇಶನ ಇರುವುದರಿಂದ ಕೇಂದ್ರ ಸಚಿವರು ಆಗಿರುವ ರಾಜ್ಯದ ಸಂಸದರ ಈ ಸಭೆಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಈ ಬಗ್ಗೆ ಎಲ್ಲರ ಪರವಾಗಿ ಸಿಎಂಗೆ ಮರುಪತ್ರ ಬರೆದಿದ್ದಾರೆ.
ಇದನ್ನೂ ಓದಿ: ಕರ್ನಾಟಕಕ್ಕೆ 6862 ಎಲೆಕ್ಟ್ರಿಕ್ ಬಸ್: ಪರಿಸರ ಸ್ನೇಹಿ ವಾತಾವರಣಕ್ಕೆ ಮೋದಿ ಸರ್ಕಾರ ಬದ್ಧ ಎಂದ ತೇಜಸ್ವಿ ಸೂರ್ಯ
ಸಿಎಂಗೆ ಜೋಶಿ ಬರೆದ ಪತ್ರದಲ್ಲೇನಿದೆ?
ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ತಾವು ಡಿಸೆಂಬರ್ 8ಕ್ಕೆ ನವದೆಹಲಿಯಲ್ಲಿ ರಾಜ್ಯದ ಸಂಸದರೊಂದಿಗೆ ಸಭೆ ನಡೆಸಲಿರುವ ಬಗ್ಗೆ ಬರೆದ ಪತ್ರ ಡಿ.2ರಂದು ಸ್ವೀಕೃತವಾಗಿದೆ. ಆದರೆ, ತಮಗೇ ತಿಳಿದಿರುವಂತೆ ಸಂಸತ್ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಅಧಿವೇಶನ ವೇಳೆ ಕಾರ್ಯ ಬಾಹುಳ್ಯ ಸಾಕಷ್ಟಿರುವುದು ತಮಗೆ ಗೊತ್ತಿರುವ ವಿಷಯವೇ. ಹಣಕಾಸು ಇಲಾಖೆ ಮಸೂದೆ ಮಂಡನೆಯಾಗುತ್ತಿವೆ. ಹಾಗಾಗಿ ಸಚಿವರಾದ ನಮಗೆಲ್ಲ ಸಂಸತ್ ಅಧಿವೇಶನ ಹಾಗೂ ಇಲಾಖೆಗಳ ಕಾರ್ಯದೊತ್ತಡವಿದೆ. ಅಲ್ಲದೇ, ಡಿ.8ರಂದೇ ಹೊಸ ಮತ್ತು ನವೀಕೃತ ಇಂಧನ ಇಲಾಖೆ ಸಂಬಂಧ ಪ್ರಧಾನಿ ವಿಶೇಷ ಸಭೆಯಿದೆ. ಹಣಕಾಸು ಸಚಿವಾಲಯದಿಂದ ಸಂಸತ್ತಿನಲ್ಲಿ ಬಿಲ್ ಮಂಡನೆಗೊಳಿಸುವುದು ಪೂರ್ವದಲ್ಲೇ ನಿಗದಿಗೊಂಡಿದೆ. ಅದೇ ದಿನ “ವಂದೇ ಮಾತರಂ” ಗೀತೆಯ 150ನೇ ವರ್ಷಾಚರಣೆ ಬಗ್ಗೆ ಸಂಸತ್ ಅಧಿವೇಶನದಲ್ಲಿ ಚರ್ಚೆ ನಿಗದಿಯಾಗಿದೆ. ಈ ಹಿನ್ನೆಲೆಯಲ್ಲಿ ಡಿ.8ರಂದು ನಿಗದಿಪಡಿಸಿದ ಸಭೆಯಲ್ಲಿ ನಾವುಗಳು ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ’ ಎಂದು ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಎಲ್ಲಾ ಕೇಂದ್ರ ಸಚಿವರೂ ಸಿಎಂಗೆ ಮರುಪತ್ರ ಬರೆದು ತಿಳಿಸಿದ್ದಾರೆ.
ಮೊದಲೇ ಚರ್ಚಿಸಿ ಸಭೆ ನಿಗದಿಪಡಿಸಿದ್ರೆ ಅನುಕೂಲ
ಮುಖ್ಯಮಂತ್ರಿಗಳು ಮೊದಲೇ ಚರ್ಚಿಸಿ ದಿನಾಂಕ ನಿಗದಿಪಡಿಸಿದ್ದರೆ ಅನುಕೂಲವಾಗುತ್ತಿತ್ತು ಎಂದಿರುವ ಸಚಿವ ಜೋಶಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ರಾಜ್ಯ ರೈಲ್ವೆ ಮತ್ತು ಜಲಶಕ್ತಿ ಸಚಿವ ವಿ.ಸೋಮಣ್ಣ, ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಮತ್ತು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ ಸಚಿವಾಲಯದ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರೂ ಸಭೆಗೆ ಪಾಲ್ಗೊಳ್ಳಲು ಸಾಧ್ಯವಾಗದಿರುವ ಬಗ್ಗೆ ತಿಳಿಸಿಯಪಡಿಸಿದ್ದಾರೆ ಎಂದು ಸಿಎಂಗೆ ಪತ್ರ ಮುಖೇನವೇ ಪ್ರತ್ಯುತ್ತರ ನೀಡಿದ್ದಾರೆ.
ರಾಜ್ಯದ ಸಮಗ್ರ ಅಭಿವೃದ್ಧಿ ಜನಕಲ್ಯಾಣದ ವಿಷಯದಲ್ಲಿ ತಾವು ಬದ್ಧವಾಗಿದ್ದೇವೆ ಮತ್ತು ತಮ್ಮೊಂದಿಗೆ ಚರ್ಚಿಸಲು ಉತ್ಸುಕರಾಗಿದ್ದೇವೆ. ದಯಮಾಡಿ ಡಿ.8ರ ಬದಲಾಗಿ ಮತ್ತೊಂದು ದಿನವನ್ನು ಗೊತ್ತುಪಡಿಸಿ. ಆದರೆ, ಇದಕ್ಕೂ ಮುನ್ನ ಒಮ್ಮೆ ರಾಜ್ಯದ ಕೇಂದ್ರ ಸಚಿವರೊಂದಿಗೆ ಒಮ್ಮೆ ಸಮಾಲೋಚಿಸಿ ದಿನಾಂಕ ನಿಗದಿಪಡಿಸಿದಲ್ಲಿ ಅನುಕೂಲವಾಗುತ್ತದೆ ಎಂದಿದ್ದಾರೆ.
ಮತ್ತೊಂದು ದಿನಾಂಕ ನಿಗದಿ ಎಂದ ಡಿಕೆಶಿ
ಈ ಬಗ್ಗೆ ನವದೆಹಲಿಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಡಿಸೆಂಬರ್ 8ರಂದು ಸರ್ವ ಪಕ್ಷಗಳ ಸಭೆ ಕರೆಯಲಾಗಿತ್ತು. ಆದ್ರೆ, ಸಂಸತ್ ಅಧಿವೇಶನ ಹಿನ್ನೆಲೆ ಸಭೆಗೆ ಬರೋದು ಕಷ್ಟ ಎಂದು ಹೇಳಿದ್ದಾರೆ. ಕೇಂದ್ರ ಸಚಿವರಾದ ವಿ.ಸೋಮಣ್ಣ, ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ರಿವ್ಯೂ ಮೀಟಿಂಗ್ ಇದಾವೆ, ಹೀಗಾಗಿ ಕಷ್ಟ ಇದೆ ಅಂತಾ ಹೇಳಿದ್ದಾರೆ. ಸಿಎಂ ಜೊತೆ ಮಾತಾಡಿ ಮತ್ತೊಂದು ದಿನಾಂಕ ನಿಗದಿ ಮಾಡಲಾಗುವುದು.ಸದ್ಯಕ್ಕೆ ಡಿಸೆಂಬರ್ 8ರಂದು ಮಾಡಿಕೊಂಡಿದ್ದ ಪ್ಲ್ಯಾನ್ ಮುಂದೂಡಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:05 pm, Wed, 3 December 25




