ನವದೆಹಲಿ: ಕೊರೊನಾದಿಂದಾಗಿ ಎರಡು ವರ್ಷ ಸ್ಥಗಿತಗೊಂಡಿದ್ದ ಅಂತಾರಾಷ್ಟ್ರೀಯ ವಿಮಾನಗಳ (International Flights) ಹಾರಾಟ ಈ ತಿಂಗಳ ಅಂತ್ಯದಿಂದ ಮತ್ತೆ ಆರಂಭವಾಗಲಿದೆ. 2 ವರ್ಷಗಳ ಅಂತರದ ನಂತರ ಭಾರತ ಇಂದು ಅಂತಾರಾಷ್ಟ್ರೀಯ ವಿಮಾನಗಳ ಮೇಲಿನ ನಿಷೇಧವನ್ನು ಹಿಂತೆಗೆದುಕೊಂಡಿದೆ. ಕೊರೋನಾವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಸ್ಥಗಿತಗೊಂಡಿರುವ ಸಾಗರೋತ್ತರ ವಿಮಾನಗಳು ಮಾರ್ಚ್ 27ರಿಂದ ಪುನರಾರಂಭವಾಗಲಿವೆ. ಜಗತ್ತಿನಾದ್ಯಂತ ಬಹುತೇಕ ಜನರು ಕೊರೊನಾ ಲಸಿಕೆಯನ್ನು ಹಾಕಿಸಿಕೊಂಡಿರುವುದರಿಂದ ಮೊದಲಿಗಿಂತಲೂ ಇದೀಗ ಕೊರೊನಾವೈರಸ್ (Coronavirus) ಹರಡುವಿಕೆ ನಿಯಂತ್ರಣಕ್ಕೆ ಬಂದಿರುವುದರಿಂದ ಭಾರತ ಸರ್ಕಾರವು ಮಾರ್ಚ್ 27ರಿಂದ ಭಾರತಕ್ಕೆ ಮತ್ತು ಭಾರತದಿಂದ ಇತರೆ ದೇಶಗಳಿಗೆ ಅಂತಾರಾಷ್ಟ್ರೀಯ ವಿಮಾನ ಸೇವೆಗಳನ್ನು ಪುನರಾರಂಭಿಸಲು ನಿರ್ಧರಿಸಿದೆ.
ಏರ್ ಬಬಲ್ ವ್ಯವಸ್ಥೆಗಳ ಮೂಲಕ ಕೆಲವು ಷರತ್ತುಗಳಿಗೆ ಒಳಪಟ್ಟು ಎರಡು ದೇಶಗಳು ಪರಸ್ಪರರ ಪ್ರದೇಶಗಳಿಗೆ ವಿಮಾನಗಳನ್ನು ನಿರ್ವಹಿಸಲು ಅನುವು ಮಾಡಿಕೊಡಲಾಗುತ್ತಿತ್ತು. ಈ ವ್ಯವಸ್ಥೆ ಅಡಿಯಲ್ಲಿ ಜುಲೈ 2020ರಿಂದ ಭಾರತ ಮತ್ತು 37 ದೇಶಗಳ ನಡುವೆ ವಿಶೇಷ ಅಂತಾರಾಷ್ಟ್ರೀಯ ವಿಮಾನಗಳು ಕಾರ್ಯನಿರ್ವಹಿಸುತ್ತಿವೆ.
ಅಂತಾರಾಷ್ಟ್ರೀಯ ವಿಮಾನದ ಕಾರ್ಯಾಚರಣೆಗಳು, ಅಂತಾರಾಷ್ಟ್ರೀಯ ಪ್ರಯಾಣಕ್ಕಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ವಿಮಾನಯಾನ ಸಚಿವಾಲಯ ಹೇಳಿದೆ. 25 ತಿಂಗಳ ನಿಷೇಧದ ನಂತರ ಭಾರತಕ್ಕೆ ಮತ್ತು ಭಾರತದಿಂದ ಅಂತಾರರಾಷ್ಟ್ರೀಯ ಕಮರ್ಷಿಯಲ್ ವಿಮಾನಗಳು ಮಾರ್ಚ್ 27ರಿಂದ ಪುನರಾರಂಭಗೊಳ್ಳಲಿವೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.
After deliberation with stakeholders &keeping in view the decline in the #COVID19 caseload,we have decided to resume international travel from Mar 27 onwards.Air Bubble arrangements will also stand revoked thereafter.With this step,I’m confident the sector will reach new heights!
— Jyotiraditya M. Scindia (@JM_Scindia) March 8, 2022
2020ರ ಮಾರ್ಚ್ 23ರಿಂದ ಭಾರತದಲ್ಲಿ ನಿಗದಿತ ಅಂತಾರಾಷ್ಟ್ರೀಯ ಪ್ರಯಾಣಿಕ ವಿಮಾನಗಳ ಮೇಲಿನ ನಿಷೇಧ ಜಾರಿಯಲ್ಲಿದೆ. ಆದರೂ ವಿಶೇಷ ಅಂತಾರಾಷ್ಟ್ರೀಯ ವಿಮಾನಗಳು ಮೇ 2020ರಿಂದ ವಂದೇ ಭಾರತ್ ಮಿಷನ್ ಅಡಿಯಲ್ಲಿ ಮತ್ತು ದ್ವಿಪಕ್ಷೀಯ ಏರ್ ಬಬಲ್ ವ್ಯವಸ್ಥೆಗಳ ಅಡಿಯಲ್ಲಿ ವಿಶೇಷ ಪ್ರಯಾಣಿಕ ವಿಮಾನಗಳು ಕಾರ್ಯ ನಿರ್ವಹಿಸುತ್ತಿವೆ. 2020ರ ಮಾರ್ಚ್ 23ರಿಂದ ಏಕಾಏಕಿ ಭಾರತದಲ್ಲಿ ಕೊರೊನಾವೈರಸ್ ಹೆಚ್ಚಾಗಿದ್ದರಿಂದ ಅಂತಾರಾಷ್ಟ್ರೀಯ ಪ್ರಯಾಣಿಕ ವಿಮಾನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ, ವಿಶೇಷ ಪ್ರಯಾಣಿಕ ವಿಮಾನಗಳು ಜುಲೈ 2020 ರಿಂದ ಭಾರತ ಮತ್ತು ಸುಮಾರು 45 ದೇಶಗಳ ನಡುವೆ ಏರ್ ಬಬಲ್ ವ್ಯವಸ್ಥೆಗಳ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ.
ಇದನ್ನೂ ಓದಿ: Covid 4th Wave: ಕೊವಿಡ್ 4ನೇ ಅಲೆ ಡೆಲ್ಟಾದಷ್ಟೇ ಅಪಾಯಕಾರಿಯಾಗಿರುತ್ತಾ?; ವಿಜ್ಞಾನಿಗಳ ಉತ್ತರ ಹೀಗಿದೆ