
ನವದೆಹಲಿ, ಏಪ್ರಿಲ್ 24: ದೆಹಲಿಯಲ್ಲಿ ನಡೆದ ಯುಪಿಎಸ್ಸಿ ಆಕಾಂಕ್ಷಿಯ ಹತ್ಯೆ(Murder) ಮತ್ತು ಅತ್ಯಾಚಾರ ಪ್ರಕರಣದ ತನಿಖೆ ಚುರುಕುಗೊಂಡಿದೆ. ವಿಚಾರಣೆ ವೇಳೆ ಆರೋಪಿ ರಾಹುಲ್ ಮೀನಾ ನೀಡುತ್ತಿರುವ ಹೇಳಿಕೆಗಳು ಆತನ ವಿಕೃತ ಮನಸ್ಥಿತಿಯನ್ನು ಅನಾವರಣಗೊಳಿಸಿದೆ. ರಾಹುಲ್ ಮೀನಾ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದು, ಆ ಅಕ್ಕ ಹಣ ಕೊಟ್ಟಿದ್ದರೆ ಈ ರೀತಿ ಪರಿಸ್ಥಿತಿ ಬರುತ್ತಲೇ ಇರಲಿಲ್ಲ ಎಂದು ಆತ ಆ ಯುವತಿಯನ್ನು ಅಕ್ಕ ಎಂದು ಕರೆದಿದ್ದಾನೆ.
ದರೋಡೆ ಮಾಡುವ ಉದ್ದೇಶದಿಂದ ಬಂದಿದ್ದ ತನಗೆ, ಯುವತಿ ಪ್ರತಿರೋಧ ಒಡ್ಡಿದ್ದರಿಂದಲೇ ಈ ಕೃತ್ಯ ನಡೆದಿದೆ ಎಂದು ಆತ ವಾದಿಸಿದ್ದಾನೆ. ನಾನು ಹಣ ಮತ್ತು ಆಭರಣಕ್ಕಾಗಿ ಬಂದಿದ್ದೆ. ಆಕೆ ಕೂಗಾಡಲು ಶುರು ಮಾಡಿದಾಗ ದೀಪದಿಂದ ಹೊಡೆದೆ, ಆಗ ಆಕೆ ಪ್ರಜ್ಞೆ ತಪ್ಪಿದಳು ಎಂದು ಅವನು ವಿವರಿಸಿದ್ದಾನೆ.
ಮತ್ತಷ್ಟು ಓದಿ: ನನ್ನಿಂದ ತಪ್ಪಾಗಿದೆ, ಐಆರ್ಎಸ್ ಅಧಿಕಾರಿ ಮಗಳ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದ ಆರೋಪಿ ಹೇಳಿದ್ದೇನು?
ಹತ್ಯೆಯ ನಂತರದ ಘಟನೆ ಮತ್ತಷ್ಟು ಭಯಾನಕವಾಗಿವೆ. ಯುವತಿಯ ಕತ್ತು ಹಿಸುಕಿ ಕೊಂದ ನಂತರ, ಆರೋಪಿ ಆಕೆಯನ್ನು ಕೆಳಮಹಡಿಗೆ ಎಳೆದುಕೊಂಡು ಹೋಗಿದ್ದಾನೆ. ಹಣದ ಹಪಾಹಪಿಯಿಂದಾಗಿ ಆತ ಮೃತ ಯುವತಿಯ ರಕ್ತಸಿಕ್ತ ಬೆರಳನ್ನು ಲಾಕರ್‌ನ ಸ್ಕ್ಯಾನರ್‌ಗೆ ಒತ್ತಿ ಅದನ್ನು ತೆರೆಯಲು ಪ್ರಯತ್ನಿಸಿದ್ದಾನೆ. ಆದರೆ ಯುವತಿ ಅಷ್ಟರಲ್ಲೇ ಮೃತಪಟ್ಟಿದ್ದರಿಂದ ಅದು ಸಾಧ್ಯವಾಗಲಿಲ್ಲ. ನಂತರ ಸ್ಕ್ರೂಡ್ರೈವರ್‌ನಿಂದ ಲಾಕರ್ ಒಡೆದು ಆಭರಣಗಳನ್ನು ದೋಚಿದ್ದಾನೆ.
ದೆಹಲಿಗೆ ಬರುವ ಮುನ್ನವೇ ರಾಹುಲ್ ಅಲ್ವಾರ್‌ನಲ್ಲಿ ತನ್ನ ಸ್ನೇಹಿತನ ಪತ್ನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಮೊಬೈಲ್ ಕದ್ದಿದ್ದ. ಪತ್ತೆಹಚ್ಚುವುದನ್ನು ತಡೆಯಲು ಮೊಬೈಲ್‌ಗಳನ್ನು ಮಾರಿ 6,000 ರೂ.ಗೆ ಕ್ಯಾಬ್ ಬಾಡಿಗೆಗೆ ಪಡೆದು ದೆಹಲಿಗೆ ಬಂದಿದ್ದ. ಆ ಹಣದ ಒಂದು ಭಾಗವನ್ನು ಆತ ಆನ್‌ಲೈನ್ ಬೆಟ್ಟಿಂಗ್‌ಗೆ ಬಳಸಿದ್ದ ಎನ್ನುವುದು ತನಿಖೆಯಿಂದ ತಿಳಿದುಬಂದಿದೆ.
ಪೊಲೀಸ್ ಮೂಲಗಳ ಪ್ರಕಾರ, ನಾಲ್ಕು ದಿನಗಳ ಪೊಲೀಸ್ ಕಸ್ಟಡಿಯಲ್ಲಿರುವ ಮೀನಾ ಯಾವುದೇ ಪಶ್ಚಾತ್ತಾಪ ವ್ಯಕ್ತಪಡಿಸುತ್ತಿಲ್ಲ. ಅ ಮನೆಯವರು ನನಗೆ ದೇವರಂತೆ ಇದ್ದರು, ತುಂಬಾ ಒಳ್ಳೆಯವರು. ಆದರೆ ನನಗೆ ಹಣ ಬೇಕಿತ್ತು, ಈ ಘಟನೆ ಬಳಿಕ ತಾನು ಸಿಕ್ಕಿ ಹಾಕಿಕೊಳ್ಳುತ್ತೇನೆ ಎಂದು ತನಗೆ ತಿಳಿದಿತ್ತು, ಆದರೆ ಹಣವನ್ನು ತನ್ನ ಕುಟುಂಬದವರಿಗೆ ತಲುಪಿಸುವ ಅಗತ್ಯ ಹೆಚ್ಚಿತ್ತು ಎಂದು ಹೇಳಿದ್ದಾನೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ