ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಸಂಘಟನೆ (IS) ಇತ್ತೀಚೆಗೆ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ. ಭಾರತದಲ್ಲಿ ಒಟ್ಟು ಮೂರು ಭಯೋತ್ಪಾದಕ ಘಟಕಗಳ (modules)ನ್ನು ಸಿದ್ಧಪಡಿಸಲಾಗುತ್ತಿದೆ. ಮೂರು ವಿಭಿನ್ನ ಗುಂಪುಗಳಲ್ಲಿ ಇಸ್ಲಾಮಿಕ್ ಸ್ಟೇಟ್ಸ್ನ ಸದಸ್ಯತ್ವ ತೆಗೆದುಕೊಳ್ಳಲಾಗುತ್ತಿದೆ ಎಂದು ಈ ವಿಡಿಯೋದಲ್ಲಿ ಹೇಳಲಾಗಿದೆ. ಸುಮಾರು 4 ನಿಮಿಷಗಳ ವಿಡಿಯೋ ಇದಾಗಿದ್ದು, ಮಾರ್ಚ್ 25ರಂದು ಟೆಲಿಗ್ರಾಂನಲ್ಲಿ ಬಿಡುಗಡೆಗೊಂಡಿದೆ. ಐಎಸ್ ಹೋರಾಟಗಾರರು ಭಾರತದಲ್ಲಿ ಜಿಹಾದ್ ಪ್ರತಿಜ್ಞೆ ಮಾಡಿದ್ದಾಗಿಯೂ ಹೇಳಲಾಗಿದೆ.
ಈ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಭಾರತದಲ್ಲಿನ ಐಎಸ್ ಫೈಟರ್ಸ್ ತಮ್ಮ ಮುಖವನ್ನು ಮುಚ್ಚಿಕೊಂಡಿದ್ದಾರೆ. ವಿಡಿಯೋ ಎಡಿಟ್ ಮಾಡಲಾಗಿದ್ದು, ಕಣ್ಣುಗಳನ್ನು ಕೂಡ ಬ್ಲರ್ ಮಾಡಲಾಗಿದೆ. ಅಷ್ಟೇ ಅಲ್ಲ ಮಾತನಾಡುತ್ತಿರುವವರ ಸ್ವರದಲ್ಲೂ ಬದಲಾವಣೆ ಮಾಡಲಾಗಿದೆ. ಗುಪ್ತಚರ ಇಲಾಖೆಯವರು ಟ್ರ್ಯಾಕ್ ಮಾಡಬಾರದು, ಗುರುತು ಪತ್ತೆ ಸಾಧ್ಯವಾಗಬಾರದು ಎಂಬ ಕಾರಣಕ್ಕೆ ಈ ವಿಧಾನಗಳನ್ನು ಐಎಸ್ ಅನುಸರಿಸಿದೆ. ಇನ್ನು ವಿಡಿಯೋದಲ್ಲಿ ಮಾತನಾಡಿದ ಐಎಸ್ ಉಗ್ರ ಅಬು ತುರಬ್ ಅಲ್ ಹಿಂದಿ, ಭಾರತದಲ್ಲಿ ಹಲವು ಯುವಕರು ಇಸ್ಲಾಮಿಕ್ ಸ್ಟೇಟ್ಸ್ ಸಂಘಟನೆ ಸೇರುತ್ತಿದ್ದಾರೆ ಎಂದು ಹೇಳಿದ್ದಾನೆ.
ಭಾರತದಲ್ಲಿ ಐಎಸ್ ಪ್ರಾಬಲ್ಯ ಕಡಿಮೆ ಮಾಡಲು ರಾಷ್ಟ್ರೀಯ ತನಿಖಾ ದಳ ಕಾರ್ಯಾಚರಣೆಯನ್ನೂ ತೀವ್ರಗೊಳಿಸಿದೆ. ಗುಪ್ತಚರ ದಳಗಳ ಅಧಿಕಾರಿಗಳೊಂದಿಗೆ ಸೇರಿ ಎನ್ಐಎ, ಭಾರತದಲ್ಲಿ ಕಳೆದ 2ವರ್ಷಗಳಲ್ಲಿ 20ಕ್ಕೂ ಹೆಚ್ಚು ಜನರನ್ನು ಬಂಧಿಸಿದೆ. ಇವರೆಲ್ಲ ಐಎಸ್ ಸಂಘಟನೆಯೊಟ್ಟಿಗೆ ಸಂಪರ್ಕ ಹೊಂದಿರುವವರಾಗಿದ್ದರು. ಇವರನ್ನೆಲ್ಲ ಬಂಧಿಸುವ ಮೂಲಕ ಐಎಸ್ ಯೋಜನೆಯನ್ನು ವಿಫಲಗೊಳಿಸಲಾಗುತ್ತಿದೆ. ಮಾರ್ಚ್ 25ರಂದು ಬಿಡುಗಡೆಯಾಗಿರುವ ವಿಡಿಯೋವನ್ನು ವಿಧಿವಿಜ್ಞಾನ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅದರ ವರದಿ ಪ್ರಕಾರ ಕಾಶ್ಮೀರದಲ್ಲಿಯೇ ಈ ವಿಡಿಯೋ ಚಿತ್ರೀಕರಣವಾಗಿದೆ ಎಂದು ಹೇಳಲಾಗಿದೆ. ಅಷ್ಟೇ ಅಲ್ಲ, ಇದನ್ನು ಬಿಡುಗಡೆ ಮಾಡಿದ್ದು ಪಾಕಿಸ್ತಾನದಿಂದ ಎಂಬುದನ್ನು ಸೈಬರ್ ತಜ್ಞರು ಹೇಳಿದ್ದಾರೆ.
ಇದನ್ನೂ ಓದಿ: Tilak Varma: ಕಷ್ಟ ಕಾರ್ಪಣ್ಯಗಳನ್ನು ಮೆಟ್ಟಿ ನಿಂತು ಐಪಿಎಲ್ಗೆ ಪದಾರ್ಪಣೆ ಮಾಡಿದ ಬಡ ಪ್ರತಿಭೆ
Published On - 5:32 pm, Sun, 27 March 22