ತನ್ನ ಮುಖ್ಯಸ್ಥ ಮೃತಪಟ್ಟಿದ್ದನ್ನು ದೃಢಪಡಿಸಿದ ಐಸಿಸ್; ಹೊಸ ಮುಖ್ಯಸ್ಥನ ಹೆಸರು ಬಹಿರಂಗ ಪಡಿಸಿದ ಉಗ್ರ ಸಂಘಟನೆ
ಐಸಿಸ್ನ ಹಿಂದಿನ ಮುಖ್ಯಸ್ಥ ಅಬು ಬಕರ್ ಅಲ್ ಬಾಗ್ದಾದಿಯನ್ನೂ ಸಿರಿಯಾದಲ್ಲಿ ಅಮೆರಿಕ ಪಡೆ 2019ರಲ್ಲಿ ಹತ್ಯೆಗೈದಿತ್ತು.ಆಗಲೂ ಸಹ ಬಾಂಬ್ ದಾಳಿ ನಡೆಸಲಾಗಿತ್ತು. ಇದರಲ್ಲಿ ಬಾಗ್ದಾದಿ ಮತ್ತು ಆತನ ಕುಟುಂಬದವರು ಮೃತಪಟ್ಟಿದ್ದರು.
ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಸಿರಿಯಾ (ಐಸಿಸ್ ಉಗ್ರ ಸಂಘಟನೆ-ISIS) ಭಯೋತ್ಪಾದಕ ಸಂಘಟನೆ ತನ್ನ ನೂತನ ಮುಖ್ಯಸ್ಥನ ಹೆಸರನ್ನು ಬಹಿರಂಗಪಡಿಸಿದೆ. ಈ ಹಿಂದಿನ ಮುಖ್ಯಸ್ಥನಾಗಿದ್ದ ಅಬು ಇಬ್ರಾಹಿಂ ಅಲ್ ಹಾಶಿಮಿ ಅಲ್ ಕುರೈಶಿ ಮತ್ತು ವಕ್ತಾರ ಅಬು ಹಮ್ಜಾ ಅಲ್ ಕುರೈಶಿ ಇಬ್ಬರೂ ಮೃತಪಟ್ಟಿದ್ದಾಗಿ ಐಸಿಸ್ ತಿಳಿಸಿದ್ದು, ನೂತನ ಮುಖ್ಯಸ್ಥನನ್ನಾಗಿ ಅಬು ಅಲ್ ಹಸನ್ ಅಲ್ ಹಾಶಿಮಿ ಅಲ್ ಕುರೈಶಿ ಎಂಬುವನನ್ನು ನೇಮಕ ಮಾಡಿದ್ದಾಗಿ ಹೇಳಿದೆ.
ಅಬು ಇಬ್ರಾಹಿಂ ಅಲ್ ಹಾಶಿಮಿ ಅಲ್ ಕುರೈಶಿಯನ್ನು 2022ರ ಫೆಬ್ರವರಿಯಲ್ಲಿ ಯುಎಸ್ ಸೇನಾಪಡೆ ಸಿರಿಯಾದಲ್ಲಿ ಹತ್ಯೆ ಗೈದಿದೆ. ಈ ಬಗ್ಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಈಗಾಗಲೇ ಮಾಹಿತಿ ನೀಡಿದ್ದರು. ಉತ್ತರ ಸಿರಿಯಾದ ಮನೆಯೊಂದರಲ್ಲಿ ಇದ್ದ ಅಬು ಇಬ್ರಾಹಿಂ ಅಲ್ ಹಾಶಿಮಿ ಅಲ್ ಕುರೈಶಿ ಮತ್ತು ಆತನ ಕುಟುಂಬದವರನ್ನ ಬಾಂಬ್ ಹಾಕಿ ಕೊಲ್ಲಲಾಗಿತ್ತು. ಇದೀಗ ಐಸಿಸ್, ಹಾಶಿಮಿ ಅಲ್ ಕುರೈಶಿ ಮೃತಪಟ್ಟಿದ್ದಾಗಿ ತಿಳಿಸಿದ್ದರೂ ಕೂಡ ಆತನನ್ನು ಕೊಂದಿದ್ದು ಯುಎಸ್ ಸೇನೆ ಎಂಬುದನ್ನು ಎಲ್ಲಿಯೂ ಹೇಳಿಲ್ಲ. ಗುರುವಾರ ಒಂದು ರಿಕಾರ್ಡೆಡ್ ಸ್ಪೀಚ್ ಬಿಡುಗಡೆ ಮಾಡಿದ ಐಎಸ್ನ ಹೊಸ ವಕ್ತಾರ ಅಬು ಉಮಾರ್ ಅಲ್ ಮುಜಾಹಿರ್, ಅಬು ಇಬ್ರಾಹಿಂ ಅಲ್ ಹಾಶಿಮಿ ಕೊನೇದಾಗಿ ಭಾಗವಹಿಸಿದ್ದು, ಈಶಾನ್ಯ ಸಿರಿಯಾದ ನಗರವಾದ ಹಸಾಕಾದ ಘುವೈರಾನ್ ಜೈಲಿನ ಮೇಲೆ ನಡೆಸಲಾದ ದಾಳಿಯಲ್ಲಿ ಎಂದು ತಿಳಿಸಿದ್ದಾರೆ. ಈ ದಾಳಿ ಜನವರಿಯಲ್ಲಿ ನಡೆದಿತ್ತು. ಬಂಧಿತ ಉಗ್ರರರನ್ನು ಬಿಡುಗಡೆ ಮಾಡುವಂತೆ ಐಸಿಸ್ ಭಯೋತ್ಪಾದಕರು ಜೈಲಿನ ಮೇಲೆ ದಾಳಿ ಮಾಡಿದ್ದರು. ಇದರಲ್ಲಿ ಸುಮಾರು 200ಕ್ಕೂ ಹೆಚ್ಚು ಕೈದಿಗಳು, 30ಕ್ಕೂ ಅಧಿಕ ಭದ್ರತಾ ಸಿಬ್ಬಂದಿ ಮತ್ತೂ ಕೆಲವು ಭಯೋತ್ಪಾದಕರೂ ಸಾವನ್ನಪ್ಪಿದ್ದರು.
ಐಸಿಸ್ನ ಹಿಂದಿನ ಮುಖ್ಯಸ್ಥ ಅಬು ಬಕರ್ ಅಲ್ ಬಾಗ್ದಾದಿಯನ್ನೂ ಸಿರಿಯಾದಲ್ಲಿ ಅಮೆರಿಕ ಪಡೆ 2019ರಲ್ಲಿ ಹತ್ಯೆಗೈದಿತ್ತು.ಆಗಲೂ ಸಹ ಬಾಂಬ್ ದಾಳಿ ನಡೆಸಲಾಗಿತ್ತು. ಇದರಲ್ಲಿ ಬಾಗ್ದಾದಿ ಮತ್ತು ಆತನ ಕುಟುಂಬದವರು ಮೃತಪಟ್ಟಿದ್ದರು. ಅದಾದ ಬಳಿಕ ಈ ಕುರೈಶಿ ಮುಖ್ಯಸ್ಥನಾಗಿದ್ದ. ಆದರೆ 45ವರ್ಷದ ಕುರೈಶಿ ಎರಡೇ ವರ್ಷದಲ್ಲಿ ಯುಎಸ್ ಸೇನೆಯ ದಾಳಿಗೆ ಬಲಿಯಾಗಿದ್ದಾನೆ.
ಇದನ್ನೂ ಓದಿ: US Inflation: ಅಮೆರಿಕದಲ್ಲಿ 40 ವರ್ಷಗಳಲ್ಲೇ ಗರಿಷ್ಠ ವಾರ್ಷಿಕ ಹಣದುಬ್ಬರ ಫೆಬ್ರವರಿಯಲ್ಲಿ ದಾಖಲು