Gaganyaan: 2024ರಲ್ಲಿ ಮಾನವ ಸಹಿತ ಬಾಹ್ಯಾಕಾಶ ಯಾತ್ರೆ ‘ಗಗನಯಾನ್’; ಕೇಂದ್ರ
ಗಗನಯಾನ ಯೋಜನೆಯ ಮೊದಲ ಮಿಷನ್ ಮುಂದಿನ ವರ್ಷದ ಕೊನೆಯ ತ್ರೈಮಾಸಿಕ ಅವಧಿಯಲ್ಲಿ ಸಾಕಾರಗೊಳ್ಳಲಿದೆ. 2024ರಲ್ಲಿ ಗಗನಯಾನ್ 2 ಸಾಕಾರಗೊಳ್ಳಲಿದೆ ಎಂದು ಸಚಿವ ಡಾ. ಜಿತೇಂದ್ರ ಸಿಂಗ್ ಲೋಕಸಭೆಗೆ ತಿಳಿಸಿದ್ದಾರೆ.
ನವದೆಹಲಿ: ಮಹತ್ವಾಕಾಂಕ್ಷೆಯ ಮಾನವ ಸಹಿತ ಬಾಹ್ಯಾಕಾಶ ಯಾತ್ರೆ ಯೋಜನೆ ‘ಗಗನಯಾನ್ (Gaganyaan)’ 2024ರ ನಾಲ್ಕನೇ ತ್ರೈಮಾಸಿಕದಲ್ಲಿ ಸಾಕಾರಗೊಳ್ಳಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಈ ವಿಚಾರವಾಗಿ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ (Dr. Jitendra Singh) ಅವರು ಲೋಕಸಭೆಗೆ (Lok Sabha) ಲಿಖಿತ ಉತ್ತರ ನೀಡಿದ್ದಾರೆ. ಸಿಬ್ಬಂದಿ ಸುರಕ್ಷತೆಗಾಗಿ ಅಂತಿಮ ಹಂತದ ಯೋಜನೆ ಸಾಕಾರಕ್ಕೂ ಮುನ್ನ ಸಿಬ್ಬಂದಿರಹಿತ ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡಲಾಗುವುದು. ಇದರ ಫಲಿತಾಂಶವನ್ನು ನೋಡಿಕೊಂಡು ಮಾನವಹಸಹಿತ ಯಾನ ಕೈಗೊಳ್ಳಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
ಗಗನಯಾನ ಯೋಜನೆಯ ಮೊದಲ ಮಿಷನ್ ಮುಂದಿನ ವರ್ಷದ ಕೊನೆಯ ತ್ರೈಮಾಸಿಕ ಅವಧಿಯಲ್ಲಿ ಸಾಕಾರಗೊಳ್ಳಲಿದೆ. 2024ರಲ್ಲಿ ಗಗನಯಾನ್ 2 ಸಾಕಾರಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ. ಗಗನಯಾನ್ ಯೋಜನೆಯಡಿ ಬಾಹ್ಯಾಕಾಶಕ್ಕೆ ತೆರಳಲಿರುವ ಗಗನಯಾತ್ರಿಗಳನ್ನು ಈಗಾಗಲೇ ಗುರುತಿಸಲಾಗಿದೆ. ಅವರಿಗೆ ಬೆಂಗಳೂರಿನಲ್ಲಿ ತರಬೇತಿ ನೀಡಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಏನಿದು ಮಾನವ ಸಹಿತ ಗಗನಯಾನ್ ಯೋಜನೆ?
ಗಗನಯಾನ್ ದೇಶದ ಅತ್ಯಂತ ಮುಖ್ಯವಾದ ಬಾಹ್ಯಾಕಾಶ ಯೋಜನೆಯಾಗಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಈ ಯೋಜನೆಯ ನೇತೃತ್ವ ವಹಿಸಿದೆ. ಗಗನಯಾನ್ನಲ್ಲಿ ಮೂವರು ಗಗನಯಾತ್ರಿಗಳು ಬಾಹ್ಯಾಕಾಶಕ್ಕೆ ತೆರಳಲಿದ್ದು, 400 ಕಿಲೋಮೀಟರ್ ಎತ್ತರದ ಕಕ್ಷೆಯಲ್ಲಿ ಮೂರು ದಿನಗಳ ಕಾಲ ಇರಲಿದ್ದಾರೆ ಎನ್ನಲಾಗಿದೆ. ಆದರೆ, ಎಷ್ಟು ಮಂದಿ ಗಗನಯಾತ್ರಿಗಳು ಬಾಹ್ಯಾಕಾಶಕ್ಕೆ ತೆರಳಲಿದ್ದಾರೆ ಎಂಬುದನ್ನು ಅಧಿಕೃತವಾಗಿ ಸರ್ಕಾರ ಇನ್ನೂ ತಿಳಿಸಿಲ್ಲ. ಯೋಜನೆಗೆ 2018ರಲ್ಲಿ 10 ಸಾವಿರ ಕೋಟಿ ರೂಪಾಯಿಗಳ ಬಜೆಟ್‌ನೊಂದಿಗೆ ತಾತ್ವಿಕ ಒಪ್ಪಿಗೆ ನೀಡಲಾಗಿತ್ತು. ಯೋಜನೆಗೆ ಇಂಡಿಯನ್ ಸ್ಪೇಸ್‌ಫ್ಲೈಟ್ ಪ್ರೋಗ್ರಾಮ್‌ನ ಬಾಹ್ಯಾಕಾಶ ನೌಕೆಯನ್ನು ಬಳಸಲಾಗುತ್ತದೆ. ಮೂವರು ಗಗನಯಾನಿಗಳನ್ನು ಕೊಂಡೊಯ್ಯುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ.
ಕೋವಿಡ್ನಿಂದಾಗಿ ವಿಳಂಬ
ಈ ಮಾನವ ಸಹಿತ ಗಗನಯಾನ್ ಯೋಜನೆಯು 2021ರ ಡಿಸೆಂಬರ್ನಲ್ಲಿ ಸಾಕಾರಗೊಳ್ಳಬೇಕಿತ್ತು. ಅದಕ್ಕೆ ಪೂರ್ವಭಾವಿಯಾಗಿ ಮಾನವರಹಿತ ಬಾಹ್ಯಾಕಾಶ ನೌಕೆಯನ್ನು 2020ರ ಡಿಸೆಂಬರ್ ಹಾಗೂ 2021ರ ಜುಲೈಯಲ್ಲಿ ಉಡಾವಣೆ ಮಾಡಲು ಉದ್ದೇಶಿಸಲಾಗಿತ್ತು. ಆದರೆ, ಕೋವಿಡ್ ಸಾಂಕ್ರಾಮಿಕದ ಕಾರಣ ಯೋಜನೆ ವಿಳಂಬಗೊಂಡಿತ್ತು. ಯೋಜನೆ ಮತ್ತೆ ಮತ್ತೆ ಮುಂದೂಡಿಕೆಯಾಗುತ್ತಿರುವುದರಿಂದ ಲೋಕಸಭೆಯಲ್ಲಿ ಈ ಕುರಿತು ಪ್ರತಿಕ್ರಿಯೆ ಕೇಳಲಾಗಿತ್ತು.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:28 am, Thu, 22 December 22