ನವದೆಹಲಿ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ತಮ್ಮ ಇಬ್ಬರು ಮಕ್ಕಳ ಇನ್‌ಸ್ಟಾಗ್ರಾಂ (Instagram) ಖಾತೆ ಹ್ಯಾಕ್ ಆಗಿದೆ ಎಂದು ನಿನ್ನೆ ಆರೋಪ ಮಾಡಿದ್ದರು. ಸರ್ಕಾರವು ತನ್ನ ಮಕ್ಕಳ ಇನ್‌ಸ್ಟಾಗ್ರಾಂ ಖಾತೆಗಳನ್ನು ಹ್ಯಾಕ್ ಮಾಡಿದೆ ಎಂಬ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಆರೋಪವನ್ನು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯವು ಗಂಭೀರವಾಗಿ ಪರಿಗಣಿಸಿದ್ದು, ಈ ಆರೋಪದ ಕುರಿತು ತನಿಖೆಗೆ ಆದೇಶಿಸಿದೆ.
ಮಂಗಳವಾರ ಪ್ರಿಯಾಂಕಾ ಗಾಂಧಿ ಅವರು ತಮ್ಮ ಮಕ್ಕಳ ಇನ್‌ಸ್ಟಾಗ್ರಾಂ ಖಾತೆಗಳನ್ನು ಸರ್ಕಾರ ಹ್ಯಾಕ್ ಮಾಡಿದೆ ಎಂದು ಆರೋಪಿಸಿದ್ದರು. ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಮಾಡಿರುವ ಫೋನ್ ಕದ್ದಾಲಿಕೆ ಆರೋಪಗಳನ್ನು ಅವರು ಉಲ್ಲೇಖಿಸಿದ್ದರು. ಅವರು ಫೋನ್ ಟ್ಯಾಪಿಂಗ್ ಮಾಡುವುದು ಮಾತ್ರವಲ್ಲದೆ ನನ್ನ ಮಕ್ಕಳ ಇನ್‌ಸ್ಟಾಗ್ರಾಂ ಖಾತೆಗಳನ್ನು ಸಹ ಹ್ಯಾಕ್ ಮಾಡುತ್ತಿದ್ದಾರೆ. ಅವರಿಗೆ ಬೇರೆ ಕೆಲಸವಿಲ್ಲವೇ? ಎಂದು ಪ್ರಿಯಾಂಕಾ ಪ್ರಶ್ನಿಸಿದ್ದರು. ಇದು ಭಾರೀ ಚರ್ಚೆಗೆ ಕಾರಣವಾಗಿತ್ತು.
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ‘ಫೋನ್ ಕದ್ದಾಲಿಕೆ’ ಮಾಡಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಅಖಿಲೇಶ್ ಯಾದವ್ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿಎಂ ಯೋಗಿ ಆದಿತ್ಯನಾಥ್, ಬಹುಶಃ ಅಖಿಲೇಶ್ ಅವರು ಅಧಿಕಾರದಲ್ಲಿದ್ದಾಗ ಇದೇ ರೀತಿ ಮಾಡಿರಬಹುದು. ಆದ್ದರಿಂದ ಅವರು ಈಗ ಇತರರ ಮೇಲೆ ಫೋನ್ ಕದ್ದಾಲಿಕೆಯ ಆರೋಪ ಮಾಡುತ್ತಿದ್ದಾರೆ ಎಂದಿದ್ದರು.
ಪ್ರಿಯಾಂಕಾ ಗಾಂಧಿಗೆ ಒಬ್ಬ ಮಗ ಮತ್ತು ಮಗಳಿದ್ದಾಳೆ ಮಗಳು ಮಿರಾಯಾ ವಾದ್ರ 18 ವರ್ಷದವಳಾಗಿದ್ದು, ಮಗ ರೇಹಾನ್ ವಾದ್ರಾ 20 ವರ್ಷದವನಾಗಿದ್ದಾನೆ. ಇವರಿಬ್ಬರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಅಪರೂಪ.
ಇದನ್ನೂ ಓದಿ: ನನ್ನ ಇಬ್ಬರು ಮಕ್ಕಳ ಇನ್‌ಸ್ಟಾಗ್ರಾಂ ಖಾತೆಗಳು ಹ್ಯಾಕ್ ಆಗಿವೆ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ