Jallikattu: ಕೊವಿಡ್ ಹೆಚ್ಚಳದ ನಡುವೆಯೂ ಜಲ್ಲಿಕಟ್ಟು ಕ್ರೀಡೆಗೆ ತಮಿಳುನಾಡು ಸರ್ಕಾರ ಅನುಮತಿ; ನಿಯಮಗಳು ಹೀಗಿವೆ

300 ಆಟಗಾರರಿಗೆ ‘ಜಲ್ಲಿಕಟ್ಟು’ ಅಥವಾ ಗೂಳಿ ಪಳಗಿಸಲು ಅವಕಾಶವಿದ್ದರೆ, 150 ಆಟಗಾರರಿಗೆ ತಮಿಳಿನಲ್ಲಿ ‘ಎರುತು ಬಿಡುತಾಳ್’ ಎಂದು ಕರೆಯಲಾಗುವ ಬುಲ್ ರೇಸಿಂಗ್ ಕ್ರೀಡೆಯಲ್ಲಿ ಭಾಗವಹಿಸಲು ಅನುಮತಿ ನೀಡಲಾಗಿದೆ.

Jallikattu: ಕೊವಿಡ್ ಹೆಚ್ಚಳದ ನಡುವೆಯೂ ಜಲ್ಲಿಕಟ್ಟು ಕ್ರೀಡೆಗೆ ತಮಿಳುನಾಡು ಸರ್ಕಾರ ಅನುಮತಿ; ನಿಯಮಗಳು ಹೀಗಿವೆ
ಜಲ್ಲಿಕಟ್ಟು
Edited By:

Updated on: Jan 10, 2022 | 4:57 PM

ಚೆನ್ನೈ: ಗೂಳಿಗಳನ್ನು ಪಳಗಿಸುವ ಜನಪ್ರಿಯ ಕ್ರೀಡೆಯಾದ ಜಲ್ಲಿಕಟ್ಟುಗೆ ತಮಿಳುನಾಡು ಸರ್ಕಾರ ಕೆಲವು ನಿರ್ಬಂಧಗಳೊಂದಿಗೆ ಅನುಮತಿ ನೀಡಿದೆ. ದೇಶಾದ್ಯಂತ ಕೊರೊನಾ ಕೇಸುಗಳು ಹೆಚ್ಚಾಗಿರುವುದರಿಂದ ಈಗಾಗಲೇ ಲಾಕ್​ಡೌನ್, ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂನಂತಹ ನಿಯಮಗಳನ್ನು ಜಾರಿಗೊಳಿಸಲಾಗಿದೆ. ತಮಿಳುನಾಡಿನಲ್ಲಿ ಕೊರೊನಾ ಸೋಂಕಿನ ಪ್ರಮಾಣ ಹೆಚ್ಚಾಗಿರುವುದರಿಂದ ಒಂದೇ ಕಡೆ ಹೆಚ್ಚು ಜನ ಸೇರದಂತೆ ನಿಗಾ ವಹಿಸಲಾಗಿದೆ. ಇದರ ನಡುವೆ ಜಲ್ಲಿಕಟ್ಟುಗೆ ಸರ್ಕಾರ ಅನುಮತಿ ನೀಡಿದ್ದು, ತಮಿಳುನಾಡು ಸರ್ಕಾರವು ಪ್ರತಿ ಗೂಳಿಯೊಡನೆ ಅಖಾಡದೊಳಗೆ ಇಬ್ಬರನ್ನು ಮಾತ್ರ – ಗೂಳಿಯ ಮಾಲೀಕರು ಮತ್ತು ಸಹಾಯಕರು ಮಾತ್ರ ಇರುವಂತೆ ಅನುಮತಿ ನೀಡಿದೆ.

ಹೆಚ್ಚುತ್ತಿರುವ ಕೊವಿಡ್-19 ಸೋಂಕುಗಳ ಮಧ್ಯೆ ತಮಿಳುನಾಡು ಸರ್ಕಾರ ಇಂದು ‘ಜಲ್ಲಿಕಟ್ಟು’ ಕಾರ್ಯಕ್ರಮಕ್ಕೆ ಅನುಮತಿ ನೀಡಿದೆ. ಸಾಮಾನ್ಯವಾಗಿ ಜನವರಿಯಲ್ಲಿ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ತಮಿಳುನಾಡಿನಲ್ಲಿ ನಡೆಯುವ ಗೂಳಿ ಪಳಗಿಸುವ ಕ್ರೀಡೆಯಾದ ಜಲ್ಲಿಕಟ್ಟು ಕ್ರೀಡೆಗೆ ಅನುಮತಿ ನೀಡಲಾಗಿದ್ದರೂ, ಪ್ರೇಕ್ಷಕರ ಸಂಖ್ಯೆಯ ಮೇಲೆ ನಿರ್ಬಂಧ ವಿಧಿಸಲಾಗಿದೆ. ಮತ್ತು ಕಡ್ಡಾಯವಾಗಿ ಕೊವಿಡ್ ಲಸಿಕೆ ಪಡೆಯಲು ಆದೇಶಿಸಲಾಗಿದೆ.

ತಮಿಳುನಾಡು ಸರ್ಕಾರವು ಪ್ರತಿ ಗೂಳಿಯ ಜೊತೆಗೆ ಕೇವಲ ಇಬ್ಬರು ವ್ಯಕ್ತಿಗಳನ್ನು ಅಂದರೆ ಗೂಳಿಯ ಮಾಲೀಕರು ಮತ್ತು ಸಹಾಯಕರನ್ನು ಮಾತ್ರ ಅಖಾಡದೊಳಗೆ ಇರಲು ಅನುಮತಿಸಲಾಗುವುದು ಎಂದು ಹೇಳಿದೆ. ಅಲ್ಲದೆ, ಜಿಲ್ಲಾಡಳಿತವು ಇಬ್ಬರಿಗೆ ಗುರುತಿನ ಚೀಟಿಯನ್ನು ನೀಡಲಿದ್ದು, ಕಾರ್ಡ್ ಇಲ್ಲದವರನ್ನು ರಿಂಗ್ ಒಳಗೆ ಬಿಡಲಾಗುವುದಿಲ್ಲ. ಭಾಗವಹಿಸುವವರಿಗೆ ಪೂರ್ಣ ವ್ಯಾಕ್ಸಿನೇಷನ್ ಮತ್ತು 48 ಗಂಟೆಗಳ ಹಿಂದೆ ಮಾಡಿಸಲಾದ ಕೊವಿಡ್ ನೆಗೆಟಿವ್ ವರದಿ ಕಡ್ಡಾಯವಾಗಿದೆ.

ಜಲ್ಲಿಕಟ್ಟು ಕ್ರೀಡೆಯಲ್ಲಿ ಭಾಗವಹಿಸುವ ಎಲ್ಲಾ ಆಟಗಾರರಿಗೆ ಎರಡು ಡೋಸ್ ಕೊವಿಡ್ ಲಸಿಕೆ ಮತ್ತು RT PCR ನೆಗೆಟಿವ್ ಸರ್ಟಿಫಿಕೆಟ್​ ಅನ್ನು ಕಡ್ಡಾಯಗೊಳಿಸಲಾಗಿದೆ. ಗೂಳಿ ಮಾಲೀಕರಂತೆ ಆಟಗಾರರಿಗೂ ಆಯಾ ಜಿಲ್ಲಾಡಳಿತಗಳು ಗುರುತಿನ ಚೀಟಿ ನೀಡಲಿವೆ. ಕಜಲ್ಲಿಕಟ್ಟುಗೂ ಮೂರು ದಿನಗಳ ಮೊದಲು ಮಾಲೀಕರು ಮತ್ತು ಆಟಗಾರರಿಗೆ ಗುರುತಿನ ಚೀಟಿ ನೀಡುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಜಿಲ್ಲೆಗಳಿಗೆ ಸೂಚಿಸಲಾಗಿದೆ.

300 ಆಟಗಾರರಿಗೆ ‘ಜಲ್ಲಿಕಟ್ಟು’ ಅಥವಾ ಗೂಳಿ ಪಳಗಿಸಲು ಅವಕಾಶವಿದ್ದರೆ, 150 ಆಟಗಾರರಿಗೆ ತಮಿಳಿನಲ್ಲಿ ‘ಎರುತು ಬಿಡುತಾಳ್’ ಎಂದು ಕರೆಯಲಾಗುವ ಬುಲ್ ರೇಸಿಂಗ್ ಕ್ರೀಡೆಯಲ್ಲಿ ಭಾಗವಹಿಸಲು ಅನುಮತಿ ನೀಡಲಾಗಿದೆ. ಅಲ್ಲದೆ, ಸಿದ್ಧತೆಗಳನ್ನು ಮೇಲ್ವಿಚಾರಣೆ ಮಾಡುವ ಅಧಿಕಾರಿಗಳು, ಕ್ರೀಡೆಯ ಸಂಘಟಕರು ಮತ್ತು ಪ್ರೇಕ್ಷಕರು ಎರಡು ಡೋಸ್​ಗಳ ಕೊವಿಡ್-19 ಲಸಿಕೆಯನ್ನು ಪಡೆದಿರಬೇಕು ಎಂದು ಸರ್ಕಾರ ಹೇಳಿದೆ.

ಇದನ್ನೂ ಓದಿ: ಜಲ್ಲಿಕಟ್ಟು ಕ್ರೀಡೆಯಲ್ಲಿ ವಿದೇಶಿ ತಳಿಗಳ ಎತ್ತುಗಳನ್ನು ಬಳಸುವಂತಿಲ್ಲ: ಮದ್ರಾಸ್​ ಹೈಕೋರ್ಟ್ ಆದೇಶ

Jallikattu: ಜಲ್ಲಿಕಟ್ಟು ಹೋರಿಗೆ ಕಟ್ಟಿದ್ದ ಹಗ್ಗ ವ್ಯಕ್ತಿಯ ಕಾಲಿಗೆ ಸಿಲುಕಿ ಕಿಲೋಮೀಟರ್​ಗಟ್ಟಲೆ ಎಳೆದೊಯ್ದಿತು; ವ್ಯಕ್ತಿ ಚಿಂತಾಜನಕ

Published On - 4:57 pm, Mon, 10 January 22