ಹೈದರ್ಪೋರಾ ಎನ್ಕೌಂಟರ್; ಟೀಕಿಸುವ ಹಕ್ಕು ನಿಮಗ್ಯಾರು ಕೊಟ್ಟವರು ಎಂದು ರಾಜಕಾರಣಿಗಳಿಗೆ, ಮಾಧ್ಯಮಗಳಿಗೆ ಖಡಕ್ ಎಚ್ಚರಿಕೆ ಕೊಟ್ಟ ಪೊಲೀಸ್ ಅಧಿಕಾರಿ
ನವೆಂಬರ್ 15ರಂದು ಶ್ರೀನಗರದ ಹೈದರ್ಪೋರಾದಲ್ಲಿ ಭದ್ರತಾ ಪಡೆಗಳು, ವಿದೇಶಿ ಉಗ್ರ ಸೇರಿ ನಾಲ್ವರನ್ನು ಹತ್ಯೆಗೈದಿದ್ದರು. ಈ ನಾಲ್ವರಲ್ಲಿ ಒಬ್ಬ ವೈದ್ಯ, ಒಬ್ಬ ಉದ್ಯಮಿ ಮತ್ತು ಇಬ್ಬರು ನಾಗರಿಕರಾಗಿದ್ದರು. ನಾಲ್ವರಿಗೂ ಉಗ್ರರ ನಂಟಿತ್ತು ಎಂದು ಪೊಲೀಸರು ಹೇಳಿದ್ದರು.
ಶ್ರೀನಗರ: ಕಳೆದ ತಿಂಗಳು ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ನಡೆದಿದ್ದ ವಿವಾದಾತ್ಮಕ ಎನ್ಕೌಂಟರ್ ಪ್ರಕರಣದಲ್ಲಿ ಭಾಗಿಯಾಗಿದ್ದ ಪೊಲೀಸರನ್ನು ಖುಲಾಸೆಗೊಳಿಸಿದ ಬಗ್ಗೆ ಟೀಕಿಸುವ ಅಧಿಕಾರ ಯಾವುದೇ ರಾಜಕಾರಣಿಗಳಿಗಾಗಲಿ, ಮಾಧ್ಯಮಗಳಿಗಾಗಲಿ ಇಲ್ಲ ಎಂದು ಜಮ್ಮು-ಕಾಶ್ಮೀರ ಐಜಿಪಿ ವಿಜಯ್ ಕುಮಾರ್ ಹೇಳಿದ್ದಾರೆ. ಶ್ರೀನಗರದ ಹೈದರ್ಪೋರಾದಲ್ಲಿ ಎನ್ಕೌಂಟರ್ ನಡೆದಿತ್ತು. ಆದರೆ ಸತ್ತವರು ಉಗ್ರರಲ್ಲ ಎಂದು ಕುಟುಂಬ ಹೇಳಿದ್ದರಿಂದ ಹಲವು ಅನುಮಾನಗಳು ಸೃಷ್ಟಿಯಾಗಿದ್ದವು. ಆದರೆ ಪೊಲೀಸರು ಈ ಬಗ್ಗೆ ತನಿಖೆ ನಡೆಸಿ, ಸಂಬಂಧಪಟ್ಟವರಿಗೆ ಕ್ಲೀನ್ಚಿಟ್ ಕೊಟ್ಟಿದ್ದೇವೆ. ಆದರೆ ಇದನ್ನು ಟೀಕಿಸುವ ಅಧಿಕಾರ ರಾಜಕಾರಣಿಗಳಿಗೆ, ಮೀಡಿಯಾಗಳಿಗೆ ಕೊಟ್ಟವರು ಯಾರೆಂದು ಕಟುವಾಗಿ ಪ್ರಶ್ನಿಸಿದ್ದಾರೆ.
ನವೆಂಬರ್ 15ರಂದು ಶ್ರೀನಗರದ ಹೈದರ್ಪೋರಾದಲ್ಲಿ ಭದ್ರತಾ ಪಡೆಗಳು, ವಿದೇಶಿ ಉಗ್ರ ಸೇರಿ ನಾಲ್ವರನ್ನು ಹತ್ಯೆಗೈದಿದ್ದರು. ಈ ನಾಲ್ವರಲ್ಲಿ ಒಬ್ಬ ವೈದ್ಯ, ಒಬ್ಬ ಉದ್ಯಮಿ ಮತ್ತು ಇಬ್ಬರು ನಾಗರಿಕರಾಗಿದ್ದರು. ನಾಲ್ವರಿಗೂ ಉಗ್ರರ ನಂಟಿತ್ತು ಎಂದು ಪೊಲೀಸರು ಹೇಳಿದ್ದರು. ಆದರೆ ಆ ವಿದೇಶಿ ಭಯೋತ್ಪಾದಕನನ್ನು ಹೊರತುಪಡಿಸಿ ಮೃತಪಟ್ಟ ಮೂವರ ಕುಟುಂಬದವರೂ ಅದನ್ನು ಅಲ್ಲಗಳೆದಿದ್ದರು. ಇದು ತಪ್ಪಾದ ಎನ್ಕೌಂಟರ್. ನಮ್ಮವರು ಯಾರೂ ಭಯೋತ್ಪಾದಕರೊಂದಿಗೆ ನಂಟು ಹೊಂದಿರಲಿಲ್ಲ. ಆದರೆ ಭದ್ರತಾ ಪಡೆಗಳು ಅವರನ್ನು ಹತ್ಯೆ ಮಾಡಿ, ಈಗ ಸುಳ್ಳು ಕತೆ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಅದರ ಬೆನ್ನಲ್ಲೇ, ಈ ಎನ್ಕೌಂಟರ್ ಸಂಬಂಧಪಟ್ಟ ತನಿಖೆಗೆ ಎಸ್ಐಟಿ ರಚನೆ ಮಾಡಲಾಗಿತ್ತು. ವಿಶೇಷ ತನಿಖೆ ನಡೆಸಿದ ಎಸ್ಐಟಿ ತಂಡ, ಕಳೆದ ಮೂರು ದಿನಗಳ ಹಿಂದೆ ಈ ಎನ್ಕೌಂಟರ್ನಲ್ಲಿ ಭಾಗಿಯಾದ ಎಲ್ಲ ಭದ್ರತಾ ಸಿಬ್ಬಂದಿಗೆ ಕ್ಲೀನ್ ಚಿಟ್ ಕೊಟ್ಟಿದೆ. ಇವರು ಯಾವುದೇ ತಪ್ಪು ಮಾಡಿಲ್ಲ. ಮೃತರು ಎಲ್ಲರೂ ಉಗ್ರರೊಂದಿಗೆ ನಂಟು ಹೊಂದಿದವರೇ ಆಗಿದ್ದರು ಎಂದು ಎಸ್ಐಟಿ ಹೇಳಿತ್ತು. ಆದರೆ ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿಗಳಾದ ಮೆಹಬೂಬಾ ಮುಫ್ತಿ, ಫಾರೂಕ್ ಅಬ್ದುಲ್ಲಾ ಸೇರಿ ಹಲವು ರಾಜಕಾರಣಿಗಳು ಪೊಲೀಸರನ್ನು ಟೀಕಿಸಿದ್ದರು. ಈ ಎಸ್ಐಟಿ ತನಿಖೆ ಎಂಬುದೇ ಕಟ್ಟುಕತೆ. ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದ್ದರು.
ಆದರೆ ನಿನ್ನೆ ಜಮ್ಮು-ಕಾಶ್ಮೀರ ಐಜಿಪಿ ವಿಜಯ್ ಕುಮಾರ್ ರಾಜಕಾರಣಿಗಳು ಮತ್ತು ಮಾಧ್ಯಮದವರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ನಮ್ಮ ತನಿಖೆ ಸರಿಯೋ, ತಪ್ಪೋ ಎಂಬುದನ್ನು ನ್ಯಾಯಾಲಯ ಅಥವಾ ನ್ಯಾಯಾಧೀಶರಷ್ಟೇ ನಿರ್ಧಾರ ಮಾಡುತ್ತಾರೆ. ಮೃತರ ಕುಟುಂಬದವರು, ರಾಜಕಾರಣಿಗಳು ಅಥವಾ ಮಾಧ್ಯಮದವರಿಗೆ ಅದನ್ನು ಟೀಕಿಸುವ, ಪ್ರಶ್ನಿಸುವ ಹಕ್ಕಿಲ್ಲ. ಇದೀಗ ಮುಖ್ಯಮಂತ್ರಿ ಹುದ್ದೆ ನಿರ್ವಹಿಸಿದವರು, ಗೃಹ ಇಲಾಖೆಯನ್ನು ನಿಯಂತ್ರಣ ಮಾಡಿದವರೆಲ್ಲ ನಮ್ಮ ತನಿಖೆ ಬಗ್ಗೆ ಮಾತನಾಡುತ್ತಿದ್ದಾರೆ ಎಂದರೆ, ಅವರಿಗೆ ಆ ವೃತ್ತಿಯ ಅರ್ಥವೇ ಗೊತ್ತಿಲ್ಲ. ಅಂಥ ಜವಾಬ್ದಾರಿ ಹುದ್ದೆಗಳನ್ನು ನಿಭಾಯಿಸಿದ ನೀವು, ಜನರನ್ನು ಪ್ರಚೋದಿಸಬೇಡಿ ಎಂದು ನಾನು ಮನವಿ ಮಾಡುತ್ತೇನೆ ಎಂದು ವಿಜಯ್ ಕುಮಾರ್ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: KL Rahul: ಟೀಮ್ ಇಂಡಿಯಾ ನಾಯಕನಾಗುವ ಈ ಸ್ಟಾರ್ ಆಟಗಾರನ ಕನಸು ಭಗ್ನ: ಬಿಸಿಸಿಐಯಿಂದ ದೊಡ್ಡ ಶಾಕ್
Published On - 9:55 am, Sat, 1 January 22