ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಉಳಿಸುವುದಕ್ಕಾಗಿ ಜೆಡಿಯು, ಅಕಾಲಿದಳ ಮತ್ತು ಶಿವಸೇನಾ ಬಿಜೆಪಿ ಮೈತ್ರಿ ತೊರೆದದ್ದು: ತೇಜಸ್ವಿ ಯಾದವ್
ಇದೇ ಸಭೆಯಲ್ಲಿ ಮಾತನಾಡಿದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಬಿಜೆಪಿಯನ್ನು ಎದುರಿಸಲು ಕಾಂಗ್ರೆಸ್ ಮತ್ತು ಎಡಪಕ್ಷಗಳು ಸೇರಿದಂತೆ ಎಲ್ಲಾ ವಿರೋಧ ಪಕ್ಷಗಳನ್ನು ಒಗ್ಗೂಡಿಸಬೇಕು ಎಂದು ಕರೆ ನೀಡಿದರು.
ದೆಹಲಿ: ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಲು ಜೆಡಿಯು, ಅಕಾಲಿದಳ ಮತ್ತು ಶಿವಸೇನಾ ಬಿಜೆಪಿ ನೇತೃತ್ವದ ಎನ್‌ಡಿಎ ತೊರೆದಿವೆ ಎಂದು ಆರ್‌ಜೆಡಿ (RJD) ನಾಯಕ ಮತ್ತು ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ (Tejashwi Yadav) ಹೇಳಿದ್ದಾರೆ. ಮಾಜಿ ಉಪಪ್ರಧಾನಿ ದೇವಿ ಲಾಲ್ ಅವರ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ಐಎನ್‌ಎಲ್‌ಡಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಯು ಸುಳ್ಳು ಭರವಸೆಗಳನ್ನು ನೀಡುತ್ತಿದೆ ಎಂದು ಆರೋಪಿಸಿದ್ದು ಇದು”ಬಡಾ ಜೂಟಾ ಪಾರ್ಟಿ” (ದೊಡ್ಡ ಸುಳ್ಳು ಪಕ್ಷ) ಎಂದಿದ್ದಾರೆ. ನಗರದಲ್ಲಿ ವಿಮಾನ ನಿಲ್ದಾಣವಿಲ್ಲದಿದ್ದರೂ ಗೃಹ ಸಚಿವ ಅಮಿತ್ ಶಾ ಅವರು ಬಿಹಾರದ ಪುರ್ನಿಯಾದಲ್ಲಿ ತಮ್ಮ ಇತ್ತೀಚಿನ ಸಾರ್ವಜನಿಕ ಸಭೆಯಲ್ಲಿ ವಿಮಾನ ನಿಲ್ದಾಣದ ಬಗ್ಗೆ ಮಾತನಾಡಿದರು ಎಂದಿದ್ದಾರೆ ತೇಜಸ್ವಿ. ಇದೇ ಸಭೆಯಲ್ಲಿ ಮಾತನಾಡಿದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಬಿಜೆಪಿಯನ್ನು ಎದುರಿಸಲು ಕಾಂಗ್ರೆಸ್ ಮತ್ತು ಎಡಪಕ್ಷಗಳು ಸೇರಿದಂತೆ ಎಲ್ಲಾ ವಿರೋಧ ಪಕ್ಷಗಳನ್ನು ಒಗ್ಗೂಡಿಸಬೇಕು ಎಂದು ಕರೆ ನೀಡಿದರು. ಈ ವಿರೋಧ ಪಕ್ಷಗಳ ಒಕ್ಕೂಟ 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯನ್ನು ಹೀನಾಯವಾಗಿ ಸೋಲಿಸುತ್ತದೆ ಎಂದು ಅವರು ಹೇಳಿದರು.
ಬಿಜೆಪಿಯೇತರ ಪಕ್ಷಗಳೆಲ್ಲ ಒಗ್ಗೂಡಿದರೆ ದೇಶವನ್ನು ನಾಶ ಮಾಡುವ ಕೆಲಸ ಮಾಡುತ್ತಿರುವವರನ್ನು ಕಿತ್ತೊಗೆಯಬಹುದು ಎಂದ ನಿತೀಶ್ ಕುಮಾರ್, ಹಿಂದೂ-ಮುಸ್ಲಿಮರ ನಡುವೆ ಯಾವುದೇ ಜಗಳವಿಲ್ಲ., ಬಿಜೆಪಿ ಗಲಭೆ ಸೃಷ್ಟಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿದರು. ರಾಷ್ಟ್ರಮಟ್ಟದಲ್ಲಿ ನಾವೆಲ್ಲರೂ ಒಗ್ಗೂಡಬೇಕು ಎಂಬುದಷ್ಟೇ ನನ್ನ ಆಶಯ.ಇನ್ನಷ್ಟು ಪಕ್ಷಗಳನ್ನು ಒಗ್ಗೂಡಿಸಬೇಕು ಎಂದರು.
2024 ರ ಲೋಕಸಭಾ ಚುನಾವಣೆಗೆ ಮುನ್ನ ತೃತೀಯ ರಂಗದ ಶಕ್ತಿ ಪ್ರದರ್ಶನದಲ್ಲಿ, ಹರಿಯಾಣದ ಭಾರತೀಯ ರಾಷ್ಟ್ರೀಯ ಲೋಕದಳವು ತ ‘ದೇವಿ ಲಾಲ್ ಸಮ್ಮಾನ್ ರ್ಯಾಲಿ’ಗೆ ವಿರೋಧ ಪಕ್ಷದ ನಾಯಕರನ್ನು ಆಹ್ವಾನಿಸಿದೆ. ಈ ರ್ಯಾಲಿಯಲ್ಲಿ ನಿತೀಶ್ ಕುಮಾರ್, ಶರದ್ ಪವಾರ್, ಕೆಸಿ ತ್ಯಾಗಿ, ಸುಖಬೀರ್ ಸಿಂಗ್ ಬಾದಲ್, ಸೀತಾರಾಮ್ ಯೆಚೂರಿ, ತೇಜಸ್ವಿ ಯಾದವ್, ಎನ್‌ಸಿ ನಾಯಕ ಫಾರೂಕ್ ಅಬ್ದುಲ್ಲಾ ಮತ್ತು ಶಿವಸೇನೆಯ ಅರವಿಂದ್ ಸಾವಂತ್ ಸೇರಿದಂತೆ ಪ್ರತಿಪಕ್ಷಗಳ ಉನ್ನತ ನಾಯಕರು ಪಾಲ್ಗೊಳ್ಳುವ ನಿರೀಕ್ಷೆಯಿದೆ.
2024ರ ಲೋಕಸಭೆ ಚುನಾವಣೆಗೆ ಪೂರ್ವಭಾವಿಯಾಗಿ ಆಡಳಿತಾರೂಢ ಬಿಜೆಪಿ ವಿರುದ್ಧ ಸಮಾನ ಮನಸ್ಕ ಶಕ್ತಿಗಳ ಬಲವರ್ಧನೆಯನ್ನು ಗುರುತಿಸುವ ಐತಿಹಾಸಿಕ ಸಭೆ ಇದಾಗಿದೆ ಎಂದು ಜೆಡಿಯು ನಾಯಕ ಕೆಸಿ ತ್ಯಾಗಿ ಹೇಳಿದ್ದಾರೆ. ಆದಾಗ್ಯೂ, ಕಾಂಗ್ರೆಸ್ ಈ ಸಭೆಗೆ ಗೈರಾಗಿದೆ. ಕಾಂಗ್ರೆಸ್ ಮತ್ತು ಐಎನ್‌ಎಲ್‌ಡಿ ಹರ್ಯಾಣದಲ್ಲಿ ಪ್ರತಿಸ್ಪರ್ಧಿಗಳಾಗಿವೆ.ಆದರೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಈಗ ಕಾಂಗ್ರೆಸ್ ಜೊತೆ ಕೈಜೋಡಿಸಲು ಸಿದ್ಧ ಎಂದು ಎನ್‌ಎಲ್‌ಡಿ ಹೇಳಿದೆ.
ಬಿಹಾರದಲ್ಲಿ ಬಿಜೆಪಿಯೊಂದಿಗಿನ ಮೈತ್ರಿಯನ್ನು ಕೊನೆಗೊಳಿಸಿದ ನಂತರ ವಿರೋಧ ಪಕ್ಷಗಳನ್ನು ಒಂದೇ ಛತ್ರಿಯಡಿಯಲ್ಲಿ ತರಲು ಪ್ರಯತ್ನಿಸುತ್ತಿರುವ ನಿತೀಶ್ ಕುಮಾರ್, ಈ ರ್ಯಾಲಿಯ ನಂತರ ದೆಹಲಿಯಲ್ಲಿ ಸೋನಿಯಾ ಗಾಂಧಿಯನ್ನು ಭೇಟಿಯಾಗಲಿದ್ದಾರೆ. ಈ ಸಭೆಯಲ್ಲಿ ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಕೂಡ ಕುಮಾರ್ ಅವರೊಂದಿಗೆ ಭಾಗಿಯಾಗಲಿದ್ದಾರೆ.
ಐಎನ್‌ಎಲ್‌ಡಿ ನಾಯಕ ಮತ್ತು ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲ ಅವರು ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಮತ್ತು ಟಿಡಿಪಿಯ ಚಂದ್ರಬಾಬು ನಾಯ್ಡು ಸೇರಿದಂತೆ ಹಲವಾರು ಇತರ ಪ್ರಾದೇಶಿಕ ಪ್ರಮುಖರಿಗೆ ಆಹ್ವಾನಗಳನ್ನು ಕಳುಹಿಸಿದ್ದಾರೆ. ಟಿಎಂಸಿ ಶಾಸಕ ವಿವೇಕ್ ಗುಪ್ತಾ ಅವರು ರ್ಯಾಲಿಯಲ್ಲಿ ಪಕ್ಷವನ್ನು ಪ್ರತಿನಿಧಿಸಲಿದ್ದಾರೆ ಎಂದು ಪಶ್ಚಿಮ ಬಂಗಾಳದ ಆಡಳಿತ ಪಕ್ಷದ ಹಿರಿಯ ನಾಯಕರೊಬ್ಬರು ಶುಕ್ರವಾರ ತಿಳಿಸಿದ್ದಾರೆ. ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರಿಗೂ ಆಹ್ವಾನ ನೀಡಲಾಗಿದೆ.
Published On - 5:17 pm, Sun, 25 September 22