KC Tyagi:ಪಕ್ಷದ ವಕ್ತಾರ ಸ್ಥಾನಕ್ಕೆ ರಾಜೀನಾಮೆ ನೀಡಿದ ಜೆಡಿಯು ನಾಯಕ ಕೆಸಿ ತ್ಯಾಗಿ
ಜೆಡಿಯು ನಾಯಕ ಕೆಸಿ ತ್ಯಾಗಿ ಪಕ್ಷದ ವಕ್ತಾರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲಿ ಬಿಹಾರದಲ್ಲಿ ಅಧಿಕಾರದಲ್ಲಿರುವ ಪಕ್ಷದ ಹೊಸ ರಾಷ್ಟ್ರೀಯ ವಕ್ತಾರರಾಗಿ ರಾಜೀವ್ ರಂಜನ್ ಪ್ರಸಾದ್ ಅವರು ತ್ಯಾಗಿ ಅವರ ಸ್ಥಾನವನ್ನು ಅಲಂಕರಿಸಲಿದ್ದಾರೆ.
ಸಂಯುಕ್ತ ಜನತಾದಳದ ಹಿರಿಯ ನಾಯಕ ಕೆಸಿ ತ್ಯಾಗಿ ಪಕ್ಷದ ವಕ್ತಾರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಕ್ಷದ ನಾಯಕತ್ವಕ್ಕೆ ಬರೆದ ಪತ್ರದಲ್ಲಿ ತ್ಯಾಗಿ ತಮ್ಮ ರಾಜೀನಾಮೆಗೆ ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿದ್ದಾರೆ. ಆದರೆ, ಇತ್ತೀಚೆಗೆ ವಿವಿಧ ವಿಷಯಗಳ ಕುರಿತು ಅವರು ನೀಡಿರುವ ಹೇಳಿಕೆಗಳಿಂದ ನಾಯಕತ್ವದ ಅಸಮಾಧಾನಗೊಂಡಿತ್ತು ಈ ಹಿನ್ನೆಲೆ ರಾಜೀನಾಮೆ ನೀಡಲಾಗಿದೆ ಎಂದು ಮೂಲಗಳು ಸೂಚಿಸಿವೆ.
ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲಿ ಬಿಹಾರದಲ್ಲಿ ಅಧಿಕಾರದಲ್ಲಿರುವ ಪಕ್ಷದ ಹೊಸ ರಾಷ್ಟ್ರೀಯ ವಕ್ತಾರರಾಗಿ ರಾಜೀವ್ ರಂಜನ್ ಪ್ರಸಾದ್ ಅವರು ತ್ಯಾಗಿ ಅವರ ಸ್ಥಾನವನ್ನು ಅಲಂಕರಿಸಲಿದ್ದಾರೆ. ಇಸ್ರೇಲ್-ಪ್ಯಾಲೆಸ್ತೀನ್ ಸಮಸ್ಯೆ ಮತ್ತು ಲ್ಯಾಟರಲ್ ಎಂಟ್ರಿ ವಿವಾದ ಸೇರಿದಂತೆ ಅವರ ಇತ್ತೀಚಿನ ಹೇಳಿಕೆಗಳು ಪಕ್ಷದ ನಿಲುವಿಗಿಂತ ಭಿನ್ನವಾಗಿತ್ತು.
ಇಸ್ರೇಲ್‌ಗೆ ಶಸ್ತ್ರಾಸ್ತ್ರ ಪೂರೈಕೆಯನ್ನು ನಿಲ್ಲಿಸುವಂತೆ ಅವರು ಕೇಂದ್ರವನ್ನು ಒತ್ತಾಯಿಸಿದ್ದರು ಮತ್ತು ಗಾಜಾದಲ್ಲಿ ಶಾಂತಿ ಮತ್ತು ಕದನ ವಿರಾಮವನ್ನು ಭಾರತ ಬೆಂಬಲಿಸುತ್ತದೆ ಎಂದು ಹೇಳಿಕೆ ನೀಡಿದ್ದರು. ತ್ಯಾಗಿ ಅವರು ನಾಯಕರನ್ನು ಸಂಪರ್ಕಿಸದೆ ಹೇಳಿಕೆಗಳನ್ನು ನೀಡಿದ್ದಾರೆ ಮತ್ತು ಅವರ ಹೇಳಿಕೆಗಳಿಂದಾಗಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದಲ್ಲಿ (ಎನ್‌ಡಿಎ) ಭಿನ್ನಾಭಿಪ್ರಾಯಗಳ ಬಗ್ಗೆ ಮಾತುಕತೆ ನಡೆದಿತ್ತು.
ಮತ್ತಷ್ಟು ಓದಿ: ಲೋಕಸಭಾ ಸ್ಪೀಕರ್ ಹುದ್ದೆಗೆ ಬಿಜೆಪಿ ಅಭ್ಯರ್ಥಿಗೆ ಬೆಂಬಲ; ಜೆಡಿಯು ಸ್ಪಷ್ಟನೆ
73 ವರ್ಷ ವಯಸ್ಸಿನ ನಾಯಕ ತ್ಯಾಗಿ, ನಿತೀಶ್ ಕುಮಾರ್ ಅವರ ರಾಜಕೀಯ ಪ್ರಯಾಣದುದ್ದಕ್ಕೂ ಜೊತೆಯಲ್ಲಿದ್ದರು ಮತ್ತು ಪಕ್ಷದ ಪ್ರಮುಖ ಮುಖವೆಂದು ಪರಿಗಣಿಸಲ್ಪಟ್ಟಿದ್ದಾರೆ. ಅವರು 2013 ರಿಂದ 2016 ರವರೆಗೆ ಬಿಹಾರದಿಂದ ರಾಜ್ಯಸಭಾ ಸಂಸದರಾಗಿದ್ದರು ಮತ್ತು 1989 ರಿಂದ 1991 ರವರೆಗೆ ಹಾಪುರ್ ಕ್ಷೇತ್ರದಿಂದ ಲೋಕಸಭಾ ಸದಸ್ಯರಾಗಿದ್ದರು.
ಕೋಟಾವನ್ನು ಹೆಚ್ಚಿಸುವ ರಾಜ್ಯ ಸರ್ಕಾರದ ತಿದ್ದುಪಡಿಗಳನ್ನು ರದ್ದುಗೊಳಿಸಿದ ಪಾಟ್ನಾ ಹೈಕೋರ್ಟ್‌ನ ಆದೇಶಕ್ಕೆ ತಡೆಯಾಜ್ಞೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದ ನಂತರ ಪ್ರತಿಕ್ರಿಯಿಸಿದ ತ್ಯಾಗಿ, ಜೆಡಿಯು ದೇಶದಲ್ಲಿ ಜಾತಿ ಆಧಾರಿತ ಜನಗಣತಿ ಪರವಾಗಿದೆ ಎಂದು ಹೇಳಿದ್ದರು.
ತ್ಯಾಗಿ ಈ ವಿಷಯಗಳ ಬಗ್ಗೆ ತಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ಪಕ್ಷದ ಅಭಿಪ್ರಾಯದಂತೆ ಆಗಾಗ ಮಂಡಿಸುತ್ತಿದ್ದರು ಎಂದು ಜೆಡಿಯು ಮೂಲಗಳು ಆರೋಪಿಸಿವೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ