ಜೆಡಿಯು ರಾಜ್ಯ ಕಾರ್ಯದರ್ಶಿಯ ಭೀಕರ ಹತ್ಯೆ; ಮನೆಯ ಸಮೀಪವೇ ಗುಂಡು ಹೊಡೆದು ಕೊಂದ ದುಷ್ಕರ್ಮಿಗಳು
ನಿನ್ನೆ ರಾತ್ರಿ ಸುಮಾರು 10.15ರ ಹೊತ್ತಿಗೆ ನಡೆದಿದೆ. ದೀಪಕ್ ಮೆಹ್ತಾ ಅವರು ಮನೆಯ ಬಳಿಯೇ ವಾಕಿಂಗ್ ಮಾಡುತ್ತಿದ್ದರು. ಮನೆಗೆ ಮರಳು ತುಂಬಿದ ವಾಹನವೊಂದು ಬರಬೇಕಿದ್ದ ಕಾರಣ ಮನೆಯ ಗೇಟ್ನ್ನು ಕೂಡ ತೆರೆದೇ ಇಡಲಾಗಿತ್ತು.
ಜನತಾದಳ (ಸಂಯುಕ್ತ) ಪಕ್ಷದ ರಾಜ್ಯ ಕಾರ್ಯದರ್ಶಿ ಮತ್ತು ದನಾಪುರ ನಗರ ಪರಿಷತ್ ಉಪಾಧ್ಯಕ್ಷ ದೀಪಕ್ ಮೆಹ್ತಾ (47) ಅವರನ್ನು ಗುಂಡು ಹೊಡೆದು ಹತ್ಯೆಗೈಯ್ಯಲಾಗಿದೆ. ದನಾಪುರದ ಅವರ ಮನೆಯ ಸಮೀಪವೇ ಈ ಕೃತ್ಯ ನಡೆದಿದ್ದು, ಕೊಲೆ ಮಾಡಿದವರು ಯಾರೆಂಬುದು ಗೊತ್ತಾಗಿಲ್ಲ. ಈ ದನಾಪುರ ಬಿಹಾರದ ರಾಜಧಾನಿ ಪಾಟ್ನಾದಿಂದ ಸುಮಾರು 10 ಕಿಮೀ ದೂರದಲ್ಲಿದೆ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು, ಇದೊಂದು ರಾಜಕೀಯ ಮತ್ತು ವ್ಯಾಪಾರ ಸಂಬಂಧಿ ವೈಷಮ್ಯದಿಂದ ನಡೆದ ಕೊಲೆಯಾಗಿರಬಹುದು ಎಂದು ಶಂಕಿಸಿದ್ದಾರೆ.
ನಿನ್ನೆ ರಾತ್ರಿ ಸುಮಾರು 10.15ರ ಹೊತ್ತಿಗೆ ನಡೆದಿದೆ. ದೀಪಕ್ ಮೆಹ್ತಾ ಅವರು ಮನೆಯ ಬಳಿಯೇ ವಾಕಿಂಗ್ ಮಾಡುತ್ತಿದ್ದರು. ಮನೆಗೆ ಮರಳು ತುಂಬಿದ ವಾಹನವೊಂದು ಬರಬೇಕಿದ್ದ ಕಾರಣ ಮನೆಯ ಗೇಟ್ನ್ನು ಕೂಡ ತೆರೆದೇ ಇಡಲಾಗಿತ್ತು. ಇದೇ ವೇಳೆ ಎರಡು ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ದೀಪಕ್ ಮೆಹ್ತಾರ ಹತ್ತಿರವೇ ನಿಂತು ಸುಮಾರು 10 ಸುತ್ತು ಗುಂಡು ಹೊಡೆದಿದ್ದಾರೆ. ಅಷ್ಟು ಮಾಡಿ ಆರೋಪಿಗಳು ಪರಾರಿಯಾಗಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೆಹ್ತಾರನ್ನು ಕೂಡಲೇ ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಕರೆದುಕೊಂಡು ಹೋಗುವಷ್ಟರಲ್ಲೇ ಅವರ ಉಸಿರು ನಿಂತಿತ್ತು. ಇದರಿಂದ ಸಿಟ್ಟಿಗೆದ್ದ ಅವರ ಬೆಂಬಲಿಗರು ಪ್ರತಿಭಟನೆಯನ್ನೂ ನಡೆಸಿದ್ದಾರೆ. ಪಾಟ್ನಾ-ದನಾಪುರ್ ರಸ್ತೆಯನ್ನು ಸುಮಾರು 2 ತಾಸುಗಳ ಕಾಲ ಬಂದ್ ಮಾಡಿದ್ದರು.
ದೀಪಕ್ ಮೆಹ್ತಾ ಮೂಲತಃ ರಾಷ್ಟ್ರೀಯ ಲೋಕ ಸಮತಾ ಪಾರ್ಟಿಯವರಾಗಿದ್ದರು. ಆ ಪಕ್ಷ ನಂತರ ಜೆಡಿಯುದಲ್ಲಿ ವಿಲೀನಗೊಂಡಿದೆ. ಕಳೆದ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ದೀಪಕ್ ರಾಷ್ಟ್ರೀಯ ಲೋಕ ಸಮತಾ ಪಕ್ಷದಿಂದ ದನಾಪುರ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ ಆರ್ಜೆಡಿಯ ಅಭ್ಯರ್ಥಿ ವಿರುದ್ಧ ಸೋತಿದ್ದರು. ನಿತೀಶ್ ಕುಮಾರ್ ಅವರು ಅಧಿಕಾರಕ್ಕೆ ಬಂದ ಮೇಲೆ ಬಿಹಾರದ ಕಾನೂನು ಸುವ್ಯವಸ್ಥೆಯಲ್ಲಿ ಹಲವು ಸುಧಾರಣೆಗಳನ್ನು ಮಾಡಿದ್ದಾರೆ. ಹಾಗಿದ್ದಾಗ್ಯೂ ಅವರದ್ದೇ ಪಕ್ಷದ ಮುಖಂಡ ಹೀಗೆ ಮನೆಯ ಬಳಿಯೇ ಭೀಕರವಾಗಿ ಹತ್ಯೆಗೀಡಾಗಿದ್ದು ಚರ್ಚೆಗೆ ಕಾರಣವಾಗಿದೆ.
ಇದನ್ನೂ ಓದಿ: ಹಿಂದಿ ಚಿತ್ರರಂಗದಲ್ಲಿ ‘ಆರ್ಆರ್ಆರ್’ ಅಬ್ಬರ; 100 ಕೋಟಿ ಕ್ಲಬ್ ಸೇರಿದ ರಾಜಮೌಳಿ ಸಿನಿಮಾ
Published On - 2:22 pm, Tue, 29 March 22