ಜಾರ್ಖಂಡ್ ಆಸ್ಪತ್ರೆಯಲ್ಲಿ ಮೊಬೈಲ್ ಟಾರ್ಚ್ ಬಳಸಿ ಹೆರಿಗೆ; ತಾಯಿ, ಮಗು ಸಾವು

ಆಧುನಿಕ ವೈದ್ಯಕೀಯ ಸೌಲಭ್ಯ ಎಷ್ಟೇ ಮುಂದುವರೆದಿದ್ದರೂ ಕೆಲವು ಸ್ಥಳಗಳಲ್ಲಿ ಇನ್ನೂ ಮೂಲಭೂತ ಸೌಕರ್ಯಗಳು ಸರಿಯಾಗಿ ಸಿಗುತ್ತಿಲ್ಲ. ಜಾರ್ಖಂಡ್​​ನ ಆಸ್ಪತ್ರೆಯೊಂದರಲ್ಲಿ ಮೊಬೈಲ್ ಟಾರ್ಚ್ ಹಾಕಿಕೊಂಡು ಮಹಿಳೆಗೆ ಹೆರಿಗೆ ಮಾಡಿಸಲಾಗಿದೆ. ಇದರಿಂದ ಆ ಮಹಿಳೆ ಮತ್ತು ನವಜಾತ ಶಿಶು ಸಾವನ್ನಪ್ಪಿರುವ ಅಮಾನವೀಯ ಘಟನೆ ನಡೆದಿದೆ. ಮೃತರನ್ನು ಹತಿಸಿರಿಂಗ್ ಗ್ರಾಮದ ನಿವಾಸಿ ಬಿನಿತಾ ಬನ್ರಾ ಎಂದು ಗುರುತಿಸಲಾಗಿದೆ. ಆ ಆಸ್ಪತ್ರೆಯಲ್ಲಿ ವಿದ್ಯುತ್ ಬ್ಯಾಕಪ್ ಇರಲಿಲ್ಲ. ಹೀಗಾಗಿ, ವೈದ್ಯರು ಮತ್ತು ನರ್ಸಿಂಗ್ ಸಿಬ್ಬಂದಿ ಮೊಬೈಲ್ ಟಾರ್ಚ್‌ಲೈಟ್ ಬಳಸಿ ಡೆಲಿವರಿ ಮಾಡಿದ್ದಾರೆ.

ಜಾರ್ಖಂಡ್ ಆಸ್ಪತ್ರೆಯಲ್ಲಿ ಮೊಬೈಲ್ ಟಾರ್ಚ್ ಬಳಸಿ ಹೆರಿಗೆ; ತಾಯಿ, ಮಗು ಸಾವು
representative image
Image Credit source: iStock

Updated on: May 05, 2026 | 8:17 PM

ಜಾರ್ಖಂಡ್, ಮೇ 5: ಜಾರ್ಖಂಡ್‌ನಲ್ಲಿ (Jharkhand) ಅಮಾನವೀಯ ಘಟನೆಯೊಂದು ನಡೆದಿದೆ. ಇಲ್ಲಿನ ಸೆರೈಕೆಲಾ-ಖರ್ಸವಾನ್ ಜಿಲ್ಲೆಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ (ಸಿಎಚ್‌ಸಿ) ವಿದ್ಯುತ್ ಕಡಿತದಿಂದಾಗಿ ಆಸ್ಪತ್ರೆಯ ಸಿಬ್ಬಂದಿ ಮೊಬೈಲ್ ಟಾರ್ಚ್ ಹಾಕಿಕೊಂಡು ಡೆಲಿವರಿ ಮಾಡಿಸಿದ್ದಾರೆ. ಇದಾದ ಬಳಿಕ ಮಹಿಳೆ ಮತ್ತು ಅವರ ನವಜಾತ ಶಿಶು ಸಾವನ್ನಪ್ಪಿದೆ. ಆಸ್ಪತ್ರೆ ಸಿಬ್ಬಂದಿ ಮೊಬೈಲ್ ಫೋನ್ ಬೆಳಕನ್ನು ಬಳಸಿ ಹೆರಿಗೆಗೆ ಪ್ರಯತ್ನಿಸಿದ್ದರಿಂದಲೇ ಈ ಸಾವು ಸಂಭವಿಸಿದೆ ಎಂದು ಮೃತ ಮಹಿಳೆಯ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.

  • ಜಾರ್ಖಂಡ್​​ ಆಸ್ಪತ್ರೆಯಲ್ಲಿ ಮೊಬೈಲ್ ಟಾರ್ಚ್ ಬಳಸಿ ಹೆರಿಗೆ
  • ವೈದ್ಯರ ನಿರ್ಲಕ್ಷ್ಯದಿಂದ ತಾಯಿ-ಮಗು ಸಾವು
  • ಜಾರ್ಖಂಡ್ ಸರ್ಕಾರದ ವಿರುದ್ಧ ವಿಪಕ್ಷಗಳ ಅಸಮಾಧಾನ

ಮೃತರನ್ನು ಹತಿಸಿರಿಂಗ್ ಗ್ರಾಮದ ನಿವಾಸಿ ಮತ್ತು ಆರೋಗ್ಯ ಸಹಾಯಕಿ ಬಿನಿತಾ ಬನ್ರಾ ಎಂದು ಗುರುತಿಸಲಾಗಿದೆ. ರಾಜನಗರ ಸಿಎಚ್‌ಸಿಯಲ್ಲಿ ಹೆರಿಗೆಯ ಸಮಯದಲ್ಲಿ ವಿದ್ಯುತ್ ಕಡಿತವಾಗಿದ್ದರಿಂದ ಈ ಘಟನೆ ನಡೆದಿದೆ ಎನ್ನಲಾಗಿದೆ. ಆ ಆಸ್ಪತ್ರೆಯಲ್ಲಿ ವಿದ್ಯುತ್ ಬ್ಯಾಕಪ್ ಇರಲಿಲ್ಲ. ಬಳಿಕ ವೈದ್ಯರು ಮತ್ತು ನರ್ಸಿಂಗ್ ಸಿಬ್ಬಂದಿ ಮೊಬೈಲ್ ಟಾರ್ಚ್‌ಲೈಟ್ ಬಳಸಿ ಹೆರಿಗೆ ಮಾಡಿದ್ದಾರೆ. ಈ ಪ್ರಕ್ರಿಯೆಯ ಸಮಯದಲ್ಲಿ ಮಹಿಳೆಯ ಸ್ಥಿತಿ ಹದಗೆಟ್ಟಿತು. ಆಕೆಗೆ ಸರಿಯಾದ ಚಿಕಿತ್ಸೆ ನೀಡಲಾಗಲಿಲ್ಲ. ಆಕೆಗೆ ಸಕಾಲದಲ್ಲಿ ಉನ್ನತ ವೈದ್ಯಕೀಯ ಸೌಲಭ್ಯ ಕೂಡ ಸಿಗಲಿಲ್ಲ.

ಇದನ್ನೂ ಓದಿ: ಮನೆ ಬಾಗಿಲು ಹಾಕಲು ಮರೆತು ಹೋದ ಯುವತಿ, ಪಾರ್ಸೆಲ್ ಡೆಲಿವರಿಗೆಂದು ಬಂದ ವ್ಯಕ್ತಿ ಮಾಡಿದ್ದೇನು?

ಇದರಿಂದಾಗಿ ತಾಯಿ ಮತ್ತು ನವಜಾತ ಶಿಶು ಇಬ್ಬರೂ ಸಾವನ್ನಪ್ಪಿದ್ದಾರೆ. ಆಸ್ಪತ್ರೆಯ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣ ಎಂದು ಮೃತ ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ. ಇದರ ನಡುವೆ, ಮಹಿಳೆ ಮತ್ತು ಆಕೆಯ ಮಗುವಿನ ಸಾವು ಜಾರ್ಖಂಡ್‌ನಲ್ಲಿ ರಾಜಕೀಯ ಕೋಲಾಹಲಕ್ಕೆ ಕಾರಣವಾಯಿತು. ಇದನ್ನು ಜಾರ್ಖಂಡ್ ಬಿಜೆಪಿ ಅಧ್ಯಕ್ಷ ಆದಿತ್ಯ ಸಾಹು ರಾಜ್ಯದ ಆರೋಗ್ಯ ವ್ಯವಸ್ಥೆಯ ಕುಸಿತ ಎಂದು ಆರೋಪಿಸಿದ್ದಾರೆ. ಆರೋಗ್ಯ ಸಚಿವರು ಈ ಘಟನೆಯನ್ನು ನಾಚಿಕೆಗೇಡಿನ ಸಂಗತಿ ಎಂದು ಕರೆದಿದ್ದಾರೆ.

ಈ ಘಟನೆಯ ಬಳಿಕ ಪ್ರಭಾರಿ ವೈದ್ಯಾಧಿಕಾರಿಯನ್ನು ಅಮಾನತುಗೊಳಿಸಲಾಗಿದೆ. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಜಯ್ ಕುಮಾರ್ ಸಿಂಗ್ ಅವರನ್ನು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಈ ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us