ಜಾರ್ಖಂಡ ಜಡ್ಜ್ ಹತ್ಯೆ ಪ್ರಕರಣ; ಉದ್ದೇಶ ಪೂರ್ವಕವಾಗಿಯೇ ಅಪಘಾತ ಮಾಡಲಾಗಿದೆ ಎಂದ ಸಿಬಿಐ
ಪ್ರಕರಣದಲ್ಲಿ ಸದ್ಯ ಆರೋಪಿಗಳಾದ ವಾಹನ ಚಾಲಕ ಲಖನ್ ವರ್ಮಾ ಮತ್ತು ಸಹಾಯಕ ರಾಹುಲ್ ವರ್ಮಾ ಬಂಧಿತರಾಗಿದ್ದಾರೆ. ಅಪಘಾತಕ್ಕೆ ಇವರು ಬಳಸಿದ ವಾಹನ ಓರ್ವ ಮಹಿಳೆಯ ಹೆಸರಲ್ಲಿ ನೋಂದಣಿಯಾಗಿದೆ.
ರಾಂಚಿ: ಜಾರ್ಖಂಡ ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಉತ್ತಮ್ ಆನಂದ್ ಅವರಿಗೆ ಉದ್ದೇಶ ಪೂರ್ವಕವಾಗಿಯೇ ಅಪಘಾತ ಮಾಡಿ ಕೊಲ್ಲಲಾಗಿದೆ ಎಂದು ಸಿಬಿಐ ಜಾರ್ಖಂಡ ಹೈಕೋರ್ಟ್ಗೆ ಗುರುವಾರ ತಿಳಿಸಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಅಪ್ಡೇಟ್ ವರದಿಯನ್ನು ಸಲ್ಲಿಸಿದೆ. ಉತ್ತಮ್ ಆನಂದ್ ಅವರನ್ನು ಜುಲೈನಲ್ಲಿ ಹತ್ಯೆ ಮಾಡಲಾಗಿತ್ತು. ಮುಂಜಾನೆ ರಸ್ತೆ ಬದಿಯಲ್ಲಿ ಜಾಗಿಂಗ್ ಮಾಡುತ್ತಿದ್ದ ಅವರಿಗೆ ವಾಹನವೊಂದು ಬೇಕೆಂದೇ ಹೋಗಿ ಡಿಕ್ಕಿ ಹೊಡೆದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಸಿಸಿಟಿವಿ ಫೂಟೇಜ್ನ್ನು ಸಿಬಿಐ 3ಡಿ ತಂತ್ರಾಂಶದ ಮೂಲಕ ಪರಿಶೀಲನೆ ಮಾಡಿದೆ. ಹಾಗೇ, ವಿಧಿವಿಜ್ಞಾನ ಪುರಾವೆಗಳೂ ಸಹ, ನ್ಯಾಯಾಧೀಶರನ್ನು ಉದ್ದೇಶಪೂರ್ವಕವಾಗಿಯೇ ಕೊಲೆ ಮಾಡಲಾಗಿದೆ ಎಂಬುದನ್ನು ಸೂಚಿಸುತ್ತವೆ ಎಂದು ಸಿಬಿಐ ಹೇಳಿದೆ. ಇನ್ನು ಸಾಕ್ಷಿಗಳನ್ನು ವಿಶ್ಲೇಷಿಸಲು ಸಿಬಿಐ ಗುಜರಾತ್ನ ಗಾಂಧಿನಗರ, ದೆಹಲಿ ಮತ್ತು ಮುಂಬೈನಲ್ಲಿ ಒಟ್ಟೂ ನಾಲ್ಕು ವಿಧಿವಿಜ್ಞಾನ ತಂಡಗಳನ್ನು ಹೊಂದಿದೆ. ಈ ನಾಲ್ಕೂ ತಂಡಗಳೂ ಕೂಡ ನ್ಯಾಯಾಧೀಶರನ್ನು ಉದ್ದೇಶಪೂರ್ವಕವಾಗಿಯೇ ಹತ್ಯೆ ಮಾಡಿದ್ದಾಗಿ ಹೇಳಿವೆ ಎಂದು ಮೂಲಗಳು ತಿಳಿಸಿವೆ.
ಮೂರ್ನಾಲ್ಕು ಹೈಪ್ರೊಫೈಲ್ ಪ್ರಕರಣಗಳ ವಿಚಾರಣೆ ನಡೆಸಿದ್ದ ಉತ್ತಮ್ ಆನಂದ್ ಆರೋಪಿಗಳಿಗೆ ಜಾಮೀನು ನೀಡಲು ನಿರಾಕರಿಸಿದ್ದರು. ಅದಾದ ಕೆಲವೇ ದಿನಗಳಲ್ಲಿ ಅವರು ಮೃತಪಟ್ಟಿದ್ದರು. ಮೊದಲು ಅದೊಂದು ಆಕಸ್ಮಿಕ ಅಪಘಾತ ಎಂದು ಹೇಳಲಾಗಿದ್ದರೂ, ಸಿಸಿಟಿವಿ ಫೂಟೇಜ್ನಿಂದಾಗಿ ಸತ್ಯ ಹೊರಬಿದ್ದಿತ್ತು. ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಸುಪ್ರಿಂಕೋರ್ಟ್ ಕೂಡ ಆಗ್ರಹಿಸಿತ್ತು. ಇದೀಗ ತನಿಖೆ ನಡೆಸುತ್ತಿರುವ ಸಿಬಿಐ, ಆರೋಪಿಗನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದೆ. ಇಬ್ಬರು ಆರೋಪಿಗಳ ಮೇಲೆ ಗುಜರಾತ್ನಲ್ಲಿ ಸುಳ್ಳು ಪತ್ತೆ ಪರೀಕ್ಷೆಗಳನ್ನು ನಡೆಸಿದೆ. ಹಲವು ಆಯಾಮಗಳಲ್ಲಿ ಕೇಸ್ನ್ನು ತನಿಖೆ ಮಾಡುತ್ತಿದೆ ಎಂದು ಹೇಳಲಾಗಿದೆ.
ಪ್ರಕರಣದಲ್ಲಿ ಸದ್ಯ ಆರೋಪಿಗಳಾದ ವಾಹನ ಚಾಲಕ ಲಖನ್ ವರ್ಮಾ ಮತ್ತು ಸಹಾಯಕ ರಾಹುಲ್ ವರ್ಮಾ ಬಂಧಿತರಾಗಿದ್ದಾರೆ. ಅಪಘಾತಕ್ಕೆ ಇವರು ಬಳಸಿದ ವಾಹನ ಓರ್ವ ಮಹಿಳೆಯ ಹೆಸರಲ್ಲಿ ನೋಂದಣಿಯಾಗಿದೆ ಎನ್ನಲಾಗಿದೆ. ಅಷ್ಟೇ ಅಲ್ಲ, ಈ ಆರೋಪಿಗಳು ಜಡ್ಜ್ ಹತ್ಯೆಯ ಮುನ್ನಾದಿನ ಕೆಲವು ಮೊಬೈಲ್ಗಳನ್ನು ಕಳವು ಮಾಡಿದ್ದರು. ಅದರ ಮೂಲಕವೇ ಮಾತನಾಡಿದ್ದರು ಎನ್ನಲಾಗಿದೆ.
ಇದನ್ನೂ ಓದಿ: ಬೆಂಗಳೂರು ನಿಗೂಢ ಸ್ಫೋಟ ಪ್ರಕರಣ: ಗೋದಾಮು ಮಾಲೀಕ ಪೊಲೀಸರ ವಶಕ್ಕೆ; ಒಬ್ಬ ಗಾಯಾಳು ಸ್ಥಿತಿ ಗಂಭೀರ
(Jharkhand Judge Intentionally Hit By Autorickshaw says CBI)
Published On - 4:06 pm, Thu, 23 September 21