ಜೆಎನ್‌ಯು ಗುಂಪು ಘರ್ಷಣೆ: ಮಾಂಸಾಹಾರ ಪೂರೈಕೆ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಹೊಡೆದಾಟ
ರಾಮನವಮಿಯಂದು ಹಾಸ್ಟೆಲ್ ಕ್ಯಾಂಟೀನ್ನಲ್ಲಿ ಮಾಂಸಾಹಾರ ಸಿದ್ಧಪಡಿಸಿ ಪೂರೈಸಿದ್ದಕ್ಕೆ ವಿದ್ಯಾರ್ಥಿಗಳ ಗುಂಪೊಂದು ವಿರೋಧ ವ್ಯಕ್ತಪಡಿಸಿತು.
ದೆಹಲಿ: ಜವಾಹರ್ಲಾಲ್ ನೆಹರು ವಿಶ್ವವಿದ್ಯಾಲಯ (Jawaharlal Nehru University – JNU) ಕ್ಯಾಂಪಸ್ನಲ್ಲಿ ಭಾನುವಾರ ವಿದ್ಯಾರ್ಥಿಗಳ ಎರಡು ಗುಂಪಿನ ನಡುವೆ ಘರ್ಷಣೆ ನಡೆದಿದೆ. ಘಟನೆಯಲ್ಲಿ ಸುಮಾರು 60 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಎಡಪಂಥೀಯ ವಿದ್ಯಾರ್ಥಿ ಸಂಘಟನೆಯು ತಮ್ಮ ಬಣದ 50 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂದು ಹೇಳಿದ್ದರೆ, ಎಬಿವಿಪಿ ತನ್ನ 12 ಕಾರ್ಯಕರ್ತರಿಗೆ ಗಾಯಗಳಾಗಿವೆ ಎಂದಿದೆ. ‘ಗಾಯಗೊಂಡಿದ್ದ ಆರು ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ’ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. ರಾಮನವಮಿಯಂದು ಹಾಸ್ಟೆಲ್ ಕ್ಯಾಂಟೀನ್ನಲ್ಲಿ ಮಾಂಸಾಹಾರ ಸಿದ್ಧಪಡಿಸಿ ಪೂರೈಸಿದ್ದಕ್ಕೆ ವಿದ್ಯಾರ್ಥಿಗಳ ಗುಂಪೊಂದು ವಿರೋಧ ವ್ಯಕ್ತಪಡಿಸಿತು. ವಿವಿ ಆವರಣದಲ್ಲಿರುವ ಕಾವೇರಿ ಹಾಸ್ಟೆಲ್ನಲ್ಲಿ ಮಧ್ಯಾಹ್ನ 3.30ಕ್ಕೆ ಘಟನೆ ನಡೆದಿದೆ. ಘಟನೆಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರಣ ಎಂದು ಜವಾಹರ್ಲಾಲ್ ನೆಹರು ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘಟನೆ (Jawaharlal Nehru University Students’ Union – JNUSU) ಹೇಳಿದೆ. ಘಟನೆಯಲ್ಲಿ ಮೆಸ್ ಕಾರ್ಯದರ್ಶಿಯ ಮೇಲೆ ಹಲ್ಲೆ ನಡೆದಿದ್ದು, ಹಾಸ್ಟೆಲ್ ಒಳಗೆ ಮಾಂಸಾಹಾರ ಪೂರೈಕೆಯನ್ನು ತಡೆಯಲಾಗಿದೆ.
ಜೆಎನ್ಯುಎಸ್ಯು ಹೇಳಿಕೆಯನ್ನು ಎಬಿವಿಪಿ ಒಪ್ಪಿಲ್ಲ. ನಮ್ಮ ಕಾರ್ಯಕರ್ತರು ಹಾಸ್ಟೆಲ್ನಲ್ಲಿ ರಾಮನವಮಿ ಪೂಜೆ ಮಾಡಲು ಯತ್ನಿಸಿದರು. ಇದಕ್ಕೆ ಎರಡಪಂಥೀಯ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದಾಗ ಗೊಂದಲ ಉಂಟಾಯಿತು ಎಂದು ಹೇಳಿದರು. ಎರಡೂ ಗುಂಪುಗಳ ನಡುವೆ ಕಲ್ಲುತೂರಾಟ ನಡೆದಿದ್ದು, ಹಲವು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದರು. ‘ಪ್ರಸ್ತುತ ಕ್ಯಾಂಪಸ್ನಲ್ಲಿ ಯಾವುದೇ ಘರ್ಷಣೆ ನಡೆಯುತ್ತಿಲ್ಲ. ಪ್ರತಿಭಟನೆ ಮುಕ್ತಾಯವಾಗಿದೆ. ವಿಶ್ವವಿದ್ಯಾಲಯದ ವಿನಂತಿಯ ಮೇರೆಗೆ ನಮ್ಮ ತಂಡದೊಂದಿಗೆ ಇಲ್ಲಿಗೆ ಬಂದಿದ್ದೇವೆ. ಶಾಂತಿ ಕಾಪಾಡಲು ಯತ್ನಿಸುತ್ತಿದ್ದೇವೆ’ ಎಂದು ದೆಹಲಿಯ ಡೆಪ್ಯುಟಿ ಕಮಿಷನಲ್ ಆಫ್ ಪೊಲೀಸ್ ಮನೋಜ್ ಹೇಳಿದರು. ಕ್ಯಾಂಪಸ್ನಲ್ಲಿ ಎಬಿವಿಪಿ ತೋಳ್ಬಲ ಪ್ರದರ್ಶಿಸುತ್ತಾ ಗೂಂಡಾಗಿರಿ ನಡೆಸುತ್ತಿದೆ ಎಂದು ಜೆಎನ್ಯುಎಸ್ಯು ಆರೋಪ ಮಾಡಿದೆ.
‘ಎಬಿವಿಪಿ ಕಾರ್ಯಕರ್ತರು ಮೆಸ್ನ ಮೆನು ಬದಲಿಸುವಂತೆ ಒಂದೇ ಸಮನೆ ಒತ್ತಡ ಹೇರುತ್ತಿದ್ದಾರೆ. ಎಲ್ಲ ವಿದ್ಯಾರ್ಥಿಗಳಿಗೆ ಮಾಂಸಾಹಾರ ಸರಬರಾಜು ಮಾಡಬಾರದು ಎನ್ನುವುದು ಅವರ ವಾದವಾಗಿದೆ. ಜೆಎನ್‌ಯು ಆವರಣವು ಎಲ್ಲ ವಿದ್ಯಾರ್ಥಿಗಳಿಗೆ ಸಂಬಂಧಿಸಿದ್ದು. ಇದನ್ನು ಯಾವುದೋ ಒಂದು ನಿರ್ದಿಷ್ಟ ವರ್ಗಕ್ಕೆ ತಕ್ಕಂತೆ ಬದಲಿಸಲು ಆಗುವುದಿಲ್ಲ’ ಎಂದು ಜೆಎನ್ಯುಎಸ್ಯು ಹೇಳಿದೆ. ಜೆಎನ್ಯುಎಸ್ಯು ಆರೋಪವನ್ನು ಎಬಿವಿಪಿ ತಳ್ಳಿಹಾಕಿದೆ. ‘ಕೆಲ ಸಾಮಾನ್ಯ ವಿದ್ಯಾರ್ಥಿಗಳು ರಾಮನವಮಿ ಪ್ರಯುಕ್ತ ಪೂಜೆ ಮತ್ತು ಹವನವನ್ನು ಕಾವೇರಿ ಹಾಸ್ಟೆಲ್ನಲ್ಲಿ ಆಯೋಜಿಸಿದ್ದರು. ಪೂಜೆಗೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬಂದಿದ್ದರು. ಇದಕ್ಕೆ ಕೆಲ ಎಡಪಂಥೀಯರು ಅಡ್ಡಿಪಡಿಸಿದರು. ಆಹಾರದ ಹಕ್ಕು ವಿಚಾರವನ್ನು ಇದ್ದಕ್ಕಿದ್ದಂತೆ ಪ್ರಸ್ತಾಪಿಸಿ ಗೊಂದಲದ ವಾತಾವರಣ ಉಂಟು ಮಾಡಿದರು’ ಎಂದು ಎಬಿವಿಪಿ ಪ್ರತಿ ಆರೋಪ ಮಾಡಿದೆ.
ವಿಶ್ವವಿದ್ಯಾಲಯದ ಕ್ಯಾಂಪಸ್ನ ಮೆಸ್ನಲ್ಲಿ ಮಾಂಸಾಹಾರ ಸಿದ್ಧಪಡಿಸಲು ಎಬಿವಿಪಿ ಅವಕಾಶ ಮಾಡಿಕೊಡುತ್ತಿಲ್ಲ ಎನ್ನುವ ಪೋಸ್ಟ್ ಒಂದು ಭಾನುವಾರ ವೈರಲ್ ಆಗಿತ್ತು. ಈ ಮೆಸ್ನಲ್ಲಿ ವಾರಾಂತ್ಯಗಳಲ್ಲಿ ಸಾಮಾನ್ಯವಾಗಿ ಮಾಂಸಾಹಾರ ಸಿದ್ಧಪಡಿಸಲಾಗುತ್ತದೆ. ಆದರೆ ನಿನ್ನೆ ಎಬಿವಿಪಿ ಕಾರ್ಯಕರ್ತರು ಮಾಂಸಾಹಾರ ಸಿದ್ಧಪಡಿಸುವುದನ್ನು ವಿರೋಧಿಸಿದ್ದರು ಎಂದು ಜೆಎನ್‌ಯು ವಿದ್ಯಾರ್ಥಿ ಸಾರಿಕಾ ಎಎನ್ಐ ಸುದ್ದಿಸಂಸ್ಥೆಗೆ ತಿಳಿಸಿದ್ದರು.
ಇದನ್ನೂ ಓದಿ: ನಾನು ಟ್ವಿಟರ್ ಖಾತೆಯನ್ನು ಹೊಂದಿರಲಿಲ್ಲ, ಇದು ನನ್ನ ವಿರುದ್ಧದ ಪಿತೂರಿ: ಜೆಎನ್‌ಯು ಉಪಕುಲಪತಿ
ಇದನ್ನೂ ಓದಿ: ಪ್ರಚೋದನಕಾರಿ ಭಾಷಣ: ಜೆಎನ್‌ಯು ವಿದ್ಯಾರ್ಥಿ ಶರ್ಜೀಲ್ ಇಮಾಮ್ ವಿರುದ್ಧ ದೇಶದ್ರೋಹದ ಆರೋಪ ಹೊರಿಸಿದ ದೆಹಲಿ ನ್ಯಾಯಾಲಯ