ಕೊವಿಡ್ 19 ಲಸಿಕೆ ತಯಾರಿಕೆಗಾಗಿ ತೆಲಂಗಾಣ ಮೂಲದ ಕಂಪನಿಯೊಂದಿಗೆ ಕೈಜೋಡಿಸಿದ ಜಾನ್ಸನ್ ಆ್ಯಂಡ್ ಜಾನ್ಸನ್..
ಭಾರತದಲ್ಲಿ ನಮ್ಮ ಕಂಪನಿಯ ಕೊವಿಡ್ 19 ಲಸಿಕೆಯ ಕ್ಲಿನಿಕಲ್ ಪ್ರಯೋಗಗಳಿಗೆ ಅನುಮೋದನೆ ನೀಡುವ ಬಗ್ಗೆ ಇಲ್ಲಿನ ಕೇಂದ್ರ ಸರ್ಕಾರದೊಂದಿಗೆ ಚರ್ಚೆ ನಡೆಯುತ್ತಿದೆ ಎಂದೂ ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪನಿ ತಿಳಿಸಿದೆ.
ಭಾರತದಲ್ಲಿ ಕೊವಿಡ್ 19 ಲಸಿಕೆ ತಯಾರಿಕೆಗಾಗಿ ಯುಎಸ್ ಮೂಲದ ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪನಿ, ತೆಲಂಗಾಣ ಮೂಲದ ಬಯಲಾಜಿಕಲ್ ಇ ಲಿಮಿಟೆಡ್ನೊಂದಿಗೆ ಕೈಜೋಡಿಸಿದೆ. ಈ ಲಸಿಕೆಗೆ ಜಾನ್ಸೆನ್ ಎಂದು ಹೆಸರಿಡಲಾಗಿದ್ದು, ಈಗಾಗಲೇ ಯುಎಸ್, ಯುರೋಪ್, ಥೈಲ್ಯಾಂಡ್, ಸೌತ್ ಆಫ್ರಿಕಾಗಳಲ್ಲಿ ಬಳಕೆಗೆ ಅನುಮೋದನೆಯೂ ಸಿಕ್ಕಿದೆ. ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪನಿಯು, ಬಯೋಲಜಿಕಲ್ ಇ ಲಿಮಿಟೆಡ್ನೊಂದಿಗೆ ಸೇರಿ ಜಾನ್ಸೆನ್ ಕೊವಿಡ್ 19 ಲಸಿಕೆ ತಯಾರಿಕೆ ಮಾಡಲಾಗಿದೆ. ಜಗತ್ತಿನಾದ್ಯಂತ ವಿವಿಧ ವ್ಯವಸ್ಥೆ, ಸಂಸ್ಥೆಗಳು ನಮ್ಮ ಕಂಪನಿಯ ಲಸಿಕೆ ತಯಾರಿಕೆಯಲ್ಲಿ ತೊಡಗಿಕೊಂಡಿವೆ. ಹಾಗೇ ಈ ಭಾರತದ ಬಯೋಲಜಿಕಲ್ ಇ ಲಿಮಿಟೆಡ್ ಕೂಡ ನಮ್ಮ ಲಸಿಕೆಯ ಜಾಗತಿಕ ಪೂರೈಕೆ ಜಾಲದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂಬ ನಂಬಿಕೆ ಇದೆ ಎಂದು ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪನಿ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ.
ನಮ್ಮ ಕಂಪನಿಯ ಲಸಿಕೆ ಉತ್ಪಾದನಾ ಸಮಾರ್ಥ್ಯ ಹೆಚ್ಚಿಸಲು, ಜಗತ್ತಿನಾದ್ಯಂತ ಕೊವಿಡ್ 19 ಲಸಿಕೆಯನ್ನು ಪೂರೈಸಲು ಶ್ರಮವಹಿಸಿ ಕೆಲಸ ಮಾಡಲಾಗುತ್ತಿದೆ. ಈ ಸಾಂಕ್ರಾಮಿಕವನ್ನು ಹೋಗಲಾಡಿಸಲು ನಾವು ಸರ್ಕಾರಗಳು, ಆರೋಗ್ಯ ವ್ಯವಸ್ಥೆಗಳು, ಇನ್ನಿತರ ಕಂಪನಿಗಳೊಂದಿಗೆ ಸಹಭಾಗಿತ್ವ, ಸಹಯೋಗವನ್ನು ಹೊಂದಿದ್ದೇವೆ. ನಮ್ಮೊಂದಿಗೆ ಕೈಜೋಡಿಸಿದ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇವೆ ಎಂದೂ ಜಾನ್ಸನ್ ಆ್ಯಂಡ್ ಜಾನ್ಸನ್ ಹೇಳಿಕೊಂಡಿದೆ.
ಇನ್ನು ಭಾರತದಲ್ಲಿ ನಮ್ಮ ಕಂಪನಿಯ ಕೊವಿಡ್ 19 ಲಸಿಕೆಯ ಕ್ಲಿನಿಕಲ್ ಪ್ರಯೋಗಗಳಿಗೆ ಅನುಮೋದನೆ ನೀಡುವ ಬಗ್ಗೆ ಇಲ್ಲಿನ ಕೇಂದ್ರ ಸರ್ಕಾರದೊಂದಿಗೆ ಚರ್ಚೆ ನಡೆಯುತ್ತಿದೆ ಎಂದೂ ಔಷಧೀಯ ಕಂಪನಿ ಮಾಹಿತಿ ನೀಡಿದೆ. ಭಾರತದಲ್ಲಿ ಸದ್ಯ ಕೊವಿಶೀಲ್ಡ್, ಕೊವ್ಯಾಕ್ಸಿನ್ ಮತ್ತು ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಗಳ ಬಳಕೆಗೆ ಸರ್ಕಾರ ಅನುಮೋದನೆ ನೀಡಿದೆ. ಇನ್ನು ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪನಿಯ ಲಸಿಕೆಗೆ ಅನುಮತಿ ಸಿಕ್ಕರೆ, ದೇಶದಲ್ಲಿ ಇನ್ನೊಂದು ಲಸಿಕೆ ಬಳಕೆಗೆ ಅವಕಾಶ ಸಿಗುತ್ತದೆ.
ಇದನ್ನೂ ಓದಿ: ರೋಗನಿರೋಧಕ ಶಕ್ತಿ ಹೆಚ್ಚಿಸಲು ಆಹಾರ ಅಭ್ಯಾಸದಲ್ಲಿನ ಈ ಕೆಲವು ಬದಲಾವಣೆ ಬಹಳ ಮುಖ್ಯ
Viral: ಕೊರೊನಾ ಸೋಂಕಿತರಿಗೆ ಈ ಪುಟ್ಟ ಬಾಲಕನ ವಿಶೇಷ ಸಂದೇಶ
(Johnson and Johnson Joins Hand with Telangana based Company to Manufacture Covid 19 Vaccine)