
ನವದೆಹಲಿ, ಜೂನ್ 10: ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ನಾಯಕರ ನಡುವಿನ ಬಂಡಾಯದಿಂದ ಮಮತಾ ಬ್ಯಾನರ್ಜಿ (Mamata Banerjee) ಪಕ್ಷವನ್ನು ಉಳಿಸಿಕೊಳ್ಳುವುದು ಹೇಗೆಂಬ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಧಿಕಾರದಿಂದ ದೂರ ಸರಿದಾಯಿತು, ಇದೀಗ ಪಕ್ಷವೂ ಕೈ ತಪ್ಪಿಹೋಗುತ್ತದೆಯೇ? ಎಂಬ ಆತಂಕದಲ್ಲಿ ದೀದಿ ಇದ್ದಾರೆ. ಇದರ ನಡುವೆ ದೆಹಲಿಯಲ್ಲಿ ‘ಕೈ’ ನಾಯಕರ ಜೊತೆ ಟಿಎಂಸಿ ನಾಯಕರ ಚರ್ಚೆ ನಡೆದಿದ್ದು, ನಿನ್ನೆ ಸೋನಿಯಾ ಗಾಂಧಿಯನ್ನು ಮಮತಾ ಬ್ಯಾನರ್ಜಿ ಭೇಟಿಯಾಗಿದ್ದರು. ಇಂದು ರಾಹುಲ್ ಗಾಂಧಿಯನ್ನು ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಭೇಟಿಯಾಗಿದ್ದಾರೆ. ಈ ವೇಳೆ ಮಮತಾ ಬ್ಯಾನರ್ಜಿಗೆ ಎಐಸಿಸಿ ಉಪಾಧ್ಯಕ್ಷರ ಸ್ಥಾನದ ಆಫರ್ ನೀಡಲಾಗಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಇದಕ್ಕೆ ದೀದಿ ಒಪ್ಪಿದರೆ ಕಾಂಗ್ರೆಸ್ ಜೊತೆ ಟಿಎಂಸಿ ವಿಲೀನವಾಗಲಿದೆ.
ತೃಣಮೂಲ ಕಾಂಗ್ರೆಸ್ (TMC) ಪಕ್ಷದೊಳಗಿನ ತೀವ್ರ ಆಂತರಿಕ ಬಂಡಾಯ ಮತ್ತು ಸರಣಿ ರಾಜೀನಾಮೆಗಳ ಬೆನ್ನಲ್ಲೇ ದೇಶದ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಬಲ್ಲ ಅತ್ಯಂತ ಮಹತ್ವದ ಬೆಳವಣಿಗೆಯೊಂದು ವರದಿಯಾಗಿದೆ. ಕಾಂಗ್ರೆಸ್‌ನ ಉನ್ನತ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರೊಂದಿಗೆ ನಡೆದ ರಹಸ್ಯ ಮಾತುಕತೆಯ ನಂತರ, ಮಮತಾ ಬ್ಯಾನರ್ಜಿ ಮತ್ತು ಅಭಿಷೇಕ್ ಬ್ಯಾನರ್ಜಿ ಅವರಿಗೆ ಕಾಂಗ್ರೆಸ್ ಪಕ್ಷದಲ್ಲಿ ಅತ್ಯುನ್ನತ ಹುದ್ದೆಗಳನ್ನು ಆಫರ್ ಮಾಡಲಾಗಿದೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಟಿಎಂಸಿ ಬಿಕ್ಕಟ್ಟಿನ ನಡುವೆ ಸೋನಿಯಾ ಗಾಂಧಿಯನ್ನು ಭೇಟಿಯಾದ ಮಮತಾ ಬ್ಯಾನರ್ಜಿ
ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಶಾಸಕರು ಮತ್ತು ಸಂಸದರ ಸರಣಿ ಬಂಡಾಯದಿಂದಾಗಿ ಮಮತಾ ಬ್ಯಾನರ್ಜಿ ಅವರ ಹಿಡಿತ ಸಡಿಲಗೊಳ್ಳುತ್ತಿರುವ ಬೆನ್ನಲ್ಲೇ, ತೃಣಮೂಲ ಕಾಂಗ್ರೆಸ್ ಅನ್ನು ಮತ್ತೆ ಕಾಂಗ್ರೆಸ್ ಪಕ್ಷದೊಂದಿಗೆ ವಿಲೀನಗೊಳಿಸುವ ಅಥವಾ ಮೈತ್ರಿಯನ್ನು ಸಂಪೂರ್ಣವಾಗಿ ಪುನರ್ರಚಿಸುವ ನಿಟ್ಟಿನಲ್ಲಿ ತೆರೆಮರೆಯ ರಾಜಕೀಯ ಕಸರತ್ತುಗಳು ಆರಂಭವಾಗಿವೆ. ಕಾಂಗ್ರೆಸ್ ಉನ್ನತ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ಮಮತಾ ಬ್ಯಾನರ್ಜಿ ಮತ್ತು ಅವರ ಸೋದರಸಳ ಹಾಗೂ ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರೊಂದಿಗೆ ಸುದೀರ್ಘ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಮೂಲಗಳ ಪ್ರಕಾರ, ಟಿಎಂಸಿಯಲ್ಲಿ ಉಂಟಾಗಿರುವ ಬಿರುಕನ್ನು ಬಳಸಿಕೊಂಡು ಬಂಗಾಳದಲ್ಲಿ ಬಿಜೆಪಿಯ ಪ್ರಭಾವವನ್ನು ತಡೆಯಲು ಕಾಂಗ್ರೆಸ್ ಹೈಕಮಾಂಡ್ ಈ ಮಾಸ್ಟರ್ ಪ್ಲಾನ್ ರೂಪಿಸಿದೆ. ಮಾತುಕತೆಯ ವೇಳೆ ಕಾಂಗ್ರೆಸ್ ನಾಯಕರು ಕೆಲವು ಪ್ರಮುಖ ಪ್ರಸ್ತಾಪಗಳನ್ನು ಮಮತಾ ಬ್ಯಾನರ್ಜಿಯ ಮುಂದೆ ಇಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮಮತಾ ಬ್ಯಾನರ್ಜಿ ಅವರನ್ನು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಮೈತ್ರಿಕೂಟದ ಅಧ್ಯಕ್ಷರನ್ನಾಗಿ ಅಥವಾ ಎಐಸಿಸಿ (AICC) ಉನ್ನತ ನೀತಿ ನಿರೂಪಣಾ ಸಮಿತಿಯ ಮುಖ್ಯಸ್ಥರನ್ನಾಗಿ ಮಾಡಲು ಆಫರ್ ನೀಡಲಾಗಿದೆ.
ಇದನ್ನೂ ಓದಿ: ಮಮತಾ ಬ್ಯಾನರ್ಜಿಗೆ ಮತ್ತೊಂದು ಆಘಾತ; ಟಿಎಂಸಿ ಸಂಸದೆ ಸುಶ್ಮಿತಾ ದೇವ್ ರಾಜೀನಾಮೆ
ಅಭಿಷೇಕ್ ಬ್ಯಾನರ್ಜಿ ಅವರಿಗೆ ಅಖಿಲ ಭಾರತ ಕಾಂಗ್ರೆಸ್ ಸಮಿತಿಯಲ್ಲಿ (AICC) ಅತ್ಯಂತ ಪ್ರಭಾವಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆ ಅಥವಾ ಲೋಕಸಭೆಯಲ್ಲಿ ಪಕ್ಷದ ಪ್ರಮುಖ ಜವಾಬ್ದಾರಿಯನ್ನು ನೀಡುವ ಭರವಸೆ ನೀಡಲಾಗಿದೆ ಎಂದು ಮೂಲಗಳು ಹೇಳಿವೆ. ಪಶ್ಚಿಮ ಬಂಗಾಳದ ವಿಧಾನಸಭೆಯಲ್ಲಿ 58 ಶಾಸಕರು ಬಂಡಾಯ ಎದ್ದು ರಿತಬ್ರತ ಬ್ಯಾನರ್ಜಿ ಅವರನ್ನು ಬೆಂಬಲಿಸಿದ್ದು, ಸಂಸತ್ತಿನಲ್ಲಿ ಸುಖೇಂದು ಶೇಖರ್ ರಾಯ್ ಮತ್ತು ಸುಶ್ಮಿತಾ ದೇವ್ ಅವರಂತಹ ಹಿರಿಯ ನಾಯಕರು ರಾಜ್ಯಸಭೆಗೆ ರಾಜೀನಾಮೆ ನೀಡಿರುವುದು ಮಮತಾ ಬ್ಯಾನರ್ಜಿ ಅವರಿಗೆ ಶಾಕ್ ನೀಡಿದೆ.
ಪಶ್ಚಿಮ ಬಂಗಾಳದಲ್ಲಿ ಟಿಎಂಸಿಯ ಭ್ರಷ್ಟಾಚಾರದ ವಿರುದ್ಧ ಜನಾಭಿಪ್ರಾಯ ರೂಪಿಸಿ ಬಿಜೆಪಿ ಭಾರಿ ಯಶಸ್ಸು ಗಳಿಸುತ್ತಿರುವುದರಿಂದ, ಒಂಟಿಯಾಗಿ ಹೋರಾಡುವ ಬದಲು ಕಾಂಗ್ರೆಸ್ ಜೊತೆ ಶಕ್ತಿ ಮರುಸಂಗ್ರಹಿಸುವುದು ಮಮತಾ ಬ್ಯಾನರ್ಜಿಗೂ ಅನಿವಾರ್ಯ ಎನಿಸಿದೆ ಎನ್ನಲಾಗಿದೆ. ಮಮತಾ ಬ್ಯಾನರ್ಜಿ 1998ರಲ್ಲಿ ಕಾಂಗ್ರೆಸ್ ತೊರೆದು ಟಿಎಂಸಿ ಸ್ಥಾಪಿಸಿದ್ದರು. ಇದೀಗ ಸುಮಾರು 3 ದಶಕಗಳ ನಂತರ ಪರಿಸ್ಥಿತಿಯ ಒತ್ತಡಕ್ಕೆ ಮಣಿದು ಕಾಂಗ್ರೆಸ್ ಜೊತೆ ಕೈಜೋಡಿಸುವ ಸಾಧ್ಯತೆಯಿದೆ.
ಮೂಲಗಳ ಪ್ರಕಾರ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ಈ ಬಂಪರ್ ಆಫರ್ ಕುರಿತು ಮಮತಾ ಬ್ಯಾನರ್ಜಿ ಯಾವುದೇ ಅಂತಿಮ ನಿರ್ಧಾರ ಪ್ರಕಟಿಸಿಲ್ಲ. ತಮ್ಮ ಪಾಳಯದಲ್ಲಿ ಉಳಿದುಕೊಂಡಿರುವ ನಿಷ್ಠಾವಂತ ನಾಯಕರು ಹಾಗೂ ಪ್ರಸ್ತುತ ರಾಜಕೀಯ ಪರಿಸ್ಥಿತಿಯನ್ನು ಅವಲೋಕಿಸಿ, ಶೀಘ್ರದಲ್ಲೇ ಅವರು ತಮ್ಮ ಮುಂದಿನ ನಿರ್ಧಾರವನ್ನು ಪ್ರಕಟಿಸಲಿದ್ದಾರೆ ಎಂದು ಟಿಎಂಸಿ ಆಪ್ತ ಮೂಲಗಳು ಸೂಚಿಸಿವೆ. ಒಂದು ವೇಳೆ ಈ ವಿಲೀನ ಅಥವಾ ಮೈತ್ರಿ ಯಶಸ್ವಿಯಾದರೆ, ಅದು ದೇಶದ ರಾಜಕಾರಣದ ದಿಕ್ಕನ್ನೇ ಬದಲಿಸಬಲ್ಲ ದಿಕ್ಸೂಚಿಯಾಗಲಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ