
ಹೈದರಾಬಾದ್, ಸೆಪ್ಟೆಂಬರ್ 3: ಭಾರತ್ ರಾಷ್ಟ್ರ ಸಮಿತಿ ಪಕ್ಷದಿಂದ (BRS- Bharat Rashtra Samithi) ಅಮಾನತುಗೊಂಡಿದ್ದ ಕೆ ಕವಿತಾ (K Kavitha) ಅವರು ಇಂದು ಬುಧವಾರ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಹಾಗೆಯೇ, ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೂ (MLC) ಅವರು ರಾಜೀನಾಮೆ ಕೊಟ್ಟಿದ್ದಾರೆ. ಕವಿತಾ ಅವರು ಭಾರತ್ ರಾಷ್ಟ್ರ ಸಮಿತಿ ಸಂಸ್ಥಾಪಕ ಹಾಗೂ ಮಾಜಿ ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ಅವರ ಮಗಳು. ತಮ್ಮನ್ನು ಬಿಆರ್ಎಸ್ ಪಕ್ಷದಿಂದ ದಿಢೀರನೇ ಉಚ್ಛಾಟನೆ ಮಾಡುವ ಕ್ರಮದಿಂದ ಬಹಳ ನೋವಾಯಿತು ಎಂದು ಕವಿತಾ ಅವರು ತಮ್ಮ ರಾಜೀನಾಮೆ ನಿರ್ಧಾರಕ್ಕೆ ಕಾರಣ ನೀಡಿದ್ದಾರೆ.
‘ಎಂಎಲ್‌ಸಿ ಸ್ಥಾನ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯಕ್ಕೆ ರಾಜೀನಾಮೆ ನೀಡುತ್ತಿದ್ದೇನೆ’ ಎಂದು ಪತ್ರಿಕಾ ಹೇಳಿಕೆಯಲ್ಲಿ ಕವಿತಾ ತಿಳಿಸಿದ್ದಾರೆ. ‘ನನ್ನ ರಾಜನಾಮೆ ಪತ್ರವನ್ನು ಸಭಾಧ್ಯಕ್ಷರು ಹಾಗೂ ಕೆ. ಚಂದ್ರಶೇಖರ್ ರಾವ್ ಅವರಿಗೆ ಕಳುಹಿಸುತ್ತಿದ್ದೇನೆ’ ಎಂದು ಹೇಳಿರುವ ಕವಿತಾ, ತಾನು ಯಾವುದೇ ಪಕ್ಷದೊಂದಿಗೆ ಹೋಗುತ್ತಿಲ್ಲ. ತೆಲಂಗಾಣ ಜಾಗೃತಿ ಸದಸ್ಯರ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುವುದಾಗಿ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ರೆಸಿಸ್ಟೆನ್ಸ್ ಫ್ರಂಟ್ಗೆ ಹಣದ ಹರಿವು; ಮಲೇಷ್ಯಾದ ನಂಟು; ಎನ್ಐಎ ತನಿಖೆಯಲ್ಲಿ ಹೊಸ ಸಾಕ್ಷ್ಯ
‘ಕೆಸಿಆರ್ ಮತ್ತು ಕೆಟಿಆರ್ ಅವರು ನನ್ನ ಕುಟುಂಬ. ನಮ್ಮದು ರಕ್ತ ಸಂಬಂಧ. ಪಕ್ಷದಿಂದ ಅಮಾನತುಗೊಳ್ಳುವ ಕಾರಣಕ್ಕೆ ಈ ಬಾಂಧವ್ಯ ಮುರಿದುಬೀಳುವುದಿಲ್ಲ. ಆದರೆ, ಕೆಲ ವ್ಯಕ್ತಿಗಳು ತಮ್ಮ ವೈಯಕ್ತಿಕ ಮತ್ತು ರಾಜಕೀಯ ಹಿತಾಸಕ್ತಿಗೋಸ್ಕರ ನಮ್ಮ ಕುಟುಂಬದ ಅವನತಿ ಬಯಸುತ್ತಿದ್ದಾರೆ’ ಎಂದು ಕವಿತಾ ಆರೋಪಿಸಿದ್ದಾರೆ.
ತಮ್ಮ ಕುಟುಂಬದ ವಿರುದ್ಧ ಮಸಲತ್ತು ನಡೆಸುತ್ತಿದ್ದಾರೆ ಎಂದು ತೆಲಂಗಾಣದ ಈಗಿನ ಸಿಎಂ ರೇವಂತ್ ರೆಡ್ಡಿ ಮತ್ತು ಬಿಆರ್ಎಸ್ ನಾಯಕ ಹರೀಶ್ ರಾವ್ ಮೇಲೆ ಕವಿತಾ ಬೊಟ್ಟು ಮಾಡಿ ತೋರಿಸಿದ್ದಾರೆ.
ಇದನ್ನೂ ಓದಿ: ಅಪ್ಪನ ಪಕ್ಷದಿಂದಲೇ ಮಗಳ ಉಚ್ಛಾಟನೆ; ಬಿಆರ್ಎಸ್ನಿಂದ ಎಂಎಲ್‌ಸಿ ಕೆ. ಕವಿತಾ ಹೊರಕ್ಕೆ
‘ತಮ್ಮ ಸುತ್ತಲೂ ಇರುವ ಪಕ್ಷದ ಮುಖಂಡರ ಬಗ್ಗೆ ಹುಷಾರಾಗಿರುವಂತೆ ಅಪ್ಪನಿಗೆ ಮನವಿ ಮಾಡುತ್ತೇನೆ. ನೇರವಾಗಿಯೇ ಅವರಿಗೆ ಈ ವಿಚಾರ ಮಾತನಾಡಿದ್ದೇನೆ. ನಮ್ಮ ಕುಟುಂಬವನ್ನು ನಾಶ ಮಾಡಲು ರೇವಂತ್ ರೆಡ್ಡಿ ಮತ್ತು ಹರೀಶ್ ರಾವ್ ಒಂದು ಫ್ಲೈಟ್ನಲ್ಲಿ ಕೂತು ಹುನ್ನಾರ ನಡೆಸಿದ್ದಾರೆ’ ಎಂದು ಕವಿತಾ ತಿಳಿಸಿದ್ದಾರೆ.
‘ಕಾಲೇಶ್ವರಂ ಪ್ರಾಜೆಕ್ಟ್ ಆರಂಭವಾದಾಗ ಹರೀಶ್ ರಾವ್ ನೀರಾವರಿ ಮಂತ್ರಿಯಾಗಿದ್ದರು. ಆದರೆ, ಪ್ರಕರಣಗಳಲ್ಲಿ ಅವರ ಹೆಸರು ಕೇಳಿಬರಲಿಲ್ಲ. ನನ್ನ ಕುಟುಂಬ ಸದಸ್ಯರ ಮೇಲೆ ಮಾತ್ರ ಯಾಕೆ ಪ್ರಕರಣ ದಾಖಲಾಯಿತು’ ಎಂದು ಕವಿತಾ ಪ್ರಶ್ನೆ ಮಾಡಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ