20 ವರ್ಷಗಳಿಂದ ಆಟೋ ಚಾಲಕರಾಗಿದ್ದ ಸರವಣನ್ ಈಗ ಕುಂಭಕೋಣಂ ಕಾರ್ಪೊರೇಷನ್‌ನ ಮೊದಲ ಮೇಯರ್
ಸರವಣನ್ ಅವರು ಇತ್ತೀಚೆಗೆ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿದ ಕುಂಭಕೋಣಂನ ಮೊದಲ ಮೇಯರ್ ಆಗಿದ್ದಾರೆ. ದೇವಸ್ಥಾನ ನಗರಿಯ ವಾರ್ಡ್ 17ರಲ್ಲಿ ನಡೆದ ಚುನಾವಣೆಯಲ್ಲಿ ಒಟ್ಟು 2,100 ಮತಗಳ ಪೈಕಿ 964 ಮತಗಳನ್ನು ಪಡೆದು ವಿಜಯಿಯಾಗಿದ್ದರು ಇವರು
ಚೆನ್ನೈ: 42 ವರ್ಷದ ಆಟೋರಿಕ್ಷಾ ಚಾಲಕ ಕೆ ಸರವಣನ್ (K Saravanan) ತಮಿಳುನಾಡಿನ ತಂಜಾವೂರು ಜಿಲ್ಲೆಯ ಕುಂಭಕೋಣಂ ಕಾರ್ಪೊರೇಷನ್‌ನ (Kumbakonam corporation) ಮೊದಲ ಮೇಯರ್ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಜನರ ನಡುವೆ ತಾನೂ ಒಬ್ಬ ಎಂಬ ಸಂದೇಶ ಸಾರುವ ಉದ್ದೇಶದಿಂದ ಸರವಣನ್ ಶುಕ್ರವಾರ ತಮ್ಮ ಆಟೋರಿಕ್ಷಾದಲ್ಲಿಯೇ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆಗಮಿಸಿದ್ದರು. ರಾಜ್ಯದಲ್ಲಿ ಆಡಳಿತಾರೂಢ ಡಿಎಂಕೆ (DMK)ರಾಜ್ಯದ 21 ಪಾಲಿಕೆಗಳ ಪೈಕಿ 20 ಪಾಲಿಕೆಗಳ ಮುಖ್ಯಸ್ಥರಾಗಿ ಪಕ್ಷದಿಂದ ಅಭ್ಯರ್ಥಿಗಳನ್ನು ನಾಮನಿರ್ದೇಶನ ಮಾಡಿದ್ದು, ಕಾಂಗ್ರೆಸ್‌ಗೆ ಒಂದು ಮೇಯರ್ ಹುದ್ದೆಯನ್ನು ಮೀಸಲಿಟ್ಟಿದೆ. ಈ ಹುದ್ದೆಯು ಪಕ್ಷದ ಹಿರಿಯ ಕಾರ್ಯಕರ್ತರಲ್ಲಿ ಒಬ್ಬರಿಗೆ ಸಿಗುವ ನಿರೀಕ್ಷೆಯಿದ್ದರೂ, ಕಾಂಗ್ರೆಸ್ ಹೈಕಮಾಂಡ್ ಸರವಣನ್ ಅವರನ್ನು ಈ ಸ್ಥಾನಕ್ಕೆ ಆಯ್ಕೆ ಮಾಡಿದೆ. ಸರವಣನ್ ಅವರು ಇತ್ತೀಚೆಗೆ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿದ ಕುಂಭಕೋಣಂನ ಮೊದಲ ಮೇಯರ್ ಆಗಿದ್ದಾರೆ. ದೇವಸ್ಥಾನ ನಗರಿಯ ವಾರ್ಡ್ 17ರಲ್ಲಿ ನಡೆದ ಚುನಾವಣೆಯಲ್ಲಿ ಒಟ್ಟು 2,100 ಮತಗಳ ಪೈಕಿ 964 ಮತಗಳನ್ನು ಪಡೆದು ವಿಜಯಿಯಾಗಿದ್ದರು ಇವರು. ಸರವಣನ್ ಅವರನ್ನು ಅನೇಕ ಪ್ರಮುಖ ಕಾಂಗ್ರೆಸ್ ನಾಯಕರು ಟ್ವೀಟ್ ಮೂಲಕ ಅಭಿನಂದಿಸಿದ್ದು ಸಾಧಾರಣ ಹಿನ್ನೆಲೆಯಿಂದ ಬಂದ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದಕ್ಕಾಗಿ ಪಕ್ಷದ ನಾಯಕತ್ವವನ್ನು ಶ್ಲಾಘಿಸಿದರು. ಈ ಬಗ್ಗೆ ದಿ ಇಂಡಿಯನ್ ಎಕ್ಸ್ ಪ್ರೆಸ್ ಜತೆ ಮಾತನಾಡಿದ ಸರವಣನ್, ತಮ್ಮನ್ನು ಉನ್ನತ ಹುದ್ದೆಗೆ ನಾಮನಿರ್ದೇಶನ ಮಾಡಲಾಗಿದೆ ಎಂದು ಪಕ್ಷವು ತಿಳಿಸಿದಾಗ ನನಗೆ ಅಚ್ಚರಿ ಆಯ್ತು ಎಂದಿದ್ದಾರೆ.
“ತಂಜಾವೂರು ಉತ್ತರ ಕಾಂಗ್ರೆಸ್ ಸಮಿತಿಯ ಜಿಲ್ಲಾ ನಾಯಕ ಟಿ ಆರ್ ಲೋಗನಾಥನ್ ಅವರು ಜಿಲ್ಲಾ ಕಚೇರಿಗೆ ಬರುವಂತೆ ನನ್ನಲ್ಲಿ ಹೇಳಿದ್ದು ಒಂದು ಸರ್ಪ್ರೈಸ್ ಇದೆ ಅಂದರು. ನನಗೆ ಇದ್ಯಾವುದರ ಸುಳಿವು ಇರಲಿಲ್ಲ. ನಾನು ಕಚೇರಿ ತಲುಪಿದಾಗ, ಅವರು ನನಗೆ ಅದ್ದೂರಿ ಸ್ವಾಗತ ನೀಡಿದರು. ‘ಸ್ವಾಗತ, ಕುಂಭಕೋಣಂನ ಮೊದಲ ಮೇಯರ್’ ಎಂದು ಅವರು ಹೇಳಿದಾಗ ನಾನು ಗಾಬರಿಯಾದೆ. ಅನೇಕ ಹಿರಿಯ ನಾಯಕರು ಮತ್ತು ಪದಾಧಿಕಾರಿಗಳಿರುವುದರಿಂದ ನಾನು ಇದನ್ನು ಎಂದಿಗೂ ನಿರೀಕ್ಷಿಸಿರಲಿಲ್ಲ ಎಂದು ಸರವಣನ್ ಹೇಳಿದ್ದಾರೆ.
ನಾನು ಕೇವಲ ಆಟೋ ಡ್ರೈವರ್. ಆದರೆ ನಮ್ಮ ನಾಯಕರು, ನನಗೆ ಮೇಯರ್ ಆಗುವ ಗುಣವಿದೆ ಮತ್ತು ಪಕ್ಷವು ನನ್ನನ್ನು ಎಲ್ಲಾ ರೀತಿಯಲ್ಲಿ ಬೆಂಬಲಿಸುತ್ತದೆ ಎಂದು ಹೇಳಿದರು. ನಂತರ, ನಮ್ಮ ರಾಜ್ಯಾಧ್ಯಕ್ಷ ಕೆ ಎಸ್ ಅಳಗಿರಿ ಅವರು ನನ್ನನ್ನು ಅಭಿನಂದಿಸಿದರು. ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರಿಂದ ನನಗೆ ಕರೆ ಬಂದಿತು. ಅವರು ನಿಜವಾಗಿಯೂ ಜೀವನಕ್ಕಾಗಿ ಆಟೋರಿಕ್ಷಾ ಓಡಿಸಿದ್ದೀರಾ ಎಂದು ಕೇಳಿದಾಗ ನಾನು ಹೌದು ಎಂದು ಹೇಳಿದೆ. ನನಗೆ ಅವಕಾಶ ಕಲ್ಪಿಸಿಕೊಟ್ಟಿದ್ದಕ್ಕೆ ಸಂತಸ ವ್ಯಕ್ತಪಡಿಸಿದ ಅವರು, ಕುಂಭಕೋಣವನ್ನು ರಾಜ್ಯದ ಎಲ್ಲ ಮಹಾನಗರ ಪಾಲಿಕೆಗಳಲ್ಲಿ ಅತ್ಯುತ್ತಮವಾಗಿಸಲು ಶ್ರಮಿಸುತ್ತೇನೆ ಎಂದು ತಿಳಿಸಿದರು. ನನ್ನ ನಾಮನಿರ್ದೇಶನದಿಂದ ರಾಹುಲ್-ಜಿ (ರಾಹುಲ್ ಗಾಂಧಿ) ಕೂಡ ಸಂತೋಷಪಟ್ಟಿದ್ದಾರೆ ಎಂದು ನಮ್ಮ ನಾಯಕರು ಹೇಳಿದರು ಎಂದು ಸರವಣನ್ ಖುಷಿ ಹಂಚಿಕೊಂಡಿದ್ದಾರೆ.
Truly historic decision by @INCIndia
An autorickshaw driver and an ordinary worker of @INCTamilNadu K Saravanan has been selected to become the #Mayor of Kumbakonam.
I congratulate @KS_Alagiri & @SPK_TNCC for making this inspirational choice. https://t.co/E9Zsgmtlq4
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) March 4, 2022
ಹತ್ತನೇ ತರಗತಿವರೆಗೆ ಓದಿದ್ದ ಸರವಣನ್ ಚಿಕ್ಕವಯಸ್ಸಿನಲ್ಲೇ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡು ಅಜ್ಜ-ಅಜ್ಜಿಯ ಆಶ್ರಯದಲ್ಲಿ ಬೆಳೆದವರು. ಅವರ ಅಜ್ಜ ಟಿ ಕುಮಾರಸ್ವಾಮಿ ಅವರು 1976 ರಲ್ಲಿ ಕುಂಭಕೋಣಂ ಪುರಸಭೆಯ ಸದಸ್ಯರಾಗಿ ಸೇವೆ ಸಲ್ಲಿಸಿದರು. ಅವರ ಅಜ್ಜನಿಂದ ಪ್ರೇರಿತರಾದ ಸರವಣನ್ 2002 ರಲ್ಲಿ ಕಾಂಗ್ರೆಸ್‌ಗೆ ಸೇರಿದರು. ಆಮೇಲೆ ವಾರ್ಡ್ ನಾಯಕರ ಹುದ್ದೆಗೆ ಮತ್ತು ನಂತರ ಪುರಸಭೆಯಲ್ಲಿ ಪಕ್ಷದ ಉಪನಾಯಕರಾಗಿ ನಾಮನಿರ್ದೇಶನಗೊಂಡರು.
“ನನ್ನ ಅಜ್ಜನಿಗೆ ಕೈ ಚಿಹ್ನೆ (ಕಾಂಗ್ರೆಸ್‌ನ ಹಸ್ತದ ಚಿಹ್ನೆ) ಇತ್ತು. ನಾನು ಯಾವಾಗಲೂ ಅದನ್ನು ನನ್ನ ಕೈಯಲ್ಲಿ ಹಿಡಿದುಕೊಳ್ಳಲು ಬಯಸುತ್ತೇನೆ. ನಾನು 22 ವರ್ಷದವನಿದ್ದಾಗ, ನಾನು ತಂಜಾವೂರು ಉತ್ತರ ಕಾಂಗ್ರೆಸ್ ಸಮಿತಿಯ ಮುಖಂಡರನ್ನು ಭೇಟಿಯಾಗಿ ಪಕ್ಷಕ್ಕೆ ಸೇರಲು ಬಯಸುತ್ತೇನೆ ಎಂದು ಹೇಳಿದೆ. ನಾನು ಪಕ್ಷದಲ್ಲಿ ಇದ್ದೇನೆ ಮತ್ತು ಚುನಾವಣಾ ಕೆಲಸಗಳಲ್ಲಿ ಭಾಗವಹಿಸಿದ್ದೇನೆ. ಒಂದೆರಡು ಆಂದೋಲನಕ್ಕಾಗಿ ಬಂಧನಕ್ಕೊಳಗಾಗಿದ್ದೇನೆ. ನನಗೆ ರಾಜಕೀಯ ಕಲಿಸಿದ ನಾಯಕ ಲೋಗನಾಥನ್. ಅವರು ತಮ್ಮ ಬಿಡುವಿನ ವೇಳೆಯಲ್ಲಿ ನನ್ನನ್ನು ತಮ್ಮ ಕಚೇರಿಗೆ ಆಹ್ವಾನಿಸಿದರು ಮತ್ತು ಪಕ್ಷದ ಕಾರ್ಯಕರ್ತರು, ಇತರ ಹಿರಿಯ ನಾಯಕರು ಮತ್ತು ಸಾಮಾನ್ಯ ಜನರೊಂದಿಗೆ ಹೇಗೆ ಮಾತನಾಡಬೇಕೆಂದು ನನಗೆ ಕಲಿಸಿದರು.
ಪತ್ನಿ ದೇವಿ ಮತ್ತು ಮೂವರು ಮಕ್ಕಳೊಂದಿಗೆ ತುಕ್ಕಂಪಾಳ್ಯಂನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಸರವಣನ್ ಎರಡು ದಶಕಗಳಿಂದ ಆಟೋರಿಕ್ಷಾ ಓಡಿಸುತ್ತಿದ್ದಾರೆ. ಆಟೋ ಓಡಿಸುತ್ತಿರುವುದರಿಂದ ಎಲ್ಲಾ 48 ವಾರ್ಡ್‌ಗಳ ಜನರೊಂದಿಗೆ ಪರಿಚಯವಾಗಲು ಸಹಾಯವಾಯಿತು, ಕುಂಭಕೋಣಂನ ಪ್ರತಿಯೊಂದು ಮೂಲೆಗಳೂ ನನಗೆ ತಿಳಿದಿದೆ ಎಂದು ಅವರು ಹೇಳಿದರು. ಏಳು ವರ್ಷಗಳ ಹಿಂದೆ ಸ್ವಂತ ಆಟೊರಿಕ್ಷಾ ಖರೀದಿಸಿ ಅದರಿಂದಲೇ ಜೀವನ ಸಾಗಿಸುತ್ತಿದ್ದಾರೆ.
ಇತರರ ಬದುಕಿನಂತೆ ಕೊವಿಡ್ ಸಾಂಕ್ರಾಮಿಕವು ಅವರ ಆದಾಯಕ್ಕೆ ತೀವ್ರ ಹೊಡೆತವನ್ನು ನೀಡಿತು. ಸರವಣನ್ ಅವರು ವಾರ್ಡ್ ಸದಸ್ಯರ ಸಹಾಯದಿಂದ ಮಾತ್ರ ಕೌನ್ಸಿಲರ್ ಹುದ್ದೆಗೆ ತಮ್ಮ ನಾಮನಿರ್ದೇಶನವನ್ನು ಸಲ್ಲಿಸಲು ಸಾಧ್ಯವಾಯಿತು ಎನ್ನುತ್ತಾರೆ.
ಪ್ರತಿದಿನ ಸುಮಾರು 200-250 ರೂ ಸಂಪಾದಿಸುತ್ತೇನೆ . ಲಾಕ್‌ಡೌನ್ ನನ್ನ ಜೀವನೋಪಾಯಕ್ಕೆ ಸಂಪೂರ್ಣ ಹೊಡೆತ ನೀಡಿದೆ. ಶಾಲೆಗಳು ಮುಚ್ಚಲ್ಪಟ್ಟಿದ್ದರಿಂದ, ನಾನು ಆ ಸವಾರಿ ಕಳೆದುಕೊಂಡೆ. ಆ ಸಮಯದಲ್ಲಿ ನನ್ನ ಪ್ರದೇಶದ ಜನರು ನನಗೆ ಸಾಕಷ್ಟು ಸಹಾಯ ಮಾಡಿದರು. ಈಗಲೂ, ಅವರು ಈ ಚುನಾವಣೆ ಗೆಲ್ಲಲು ನನಗೆ ಸಹಾಯ ಮಾಡಿದರು. ಸಾಧ್ಯವಾದಾಗಲೆಲ್ಲಾ ನಾನು ಅವರನ್ನು ಭೇಟಿ ಮಾಡುವುದನ್ನು ಮುಂದುವರಿಸುತ್ತೇನೆ, ”ಎಂದು ಅವರು ಹೇಳಿದರು.
ಮೇಯರ್ ಆಗಿ ಅವರ ಯೋಜನೆಗಳ ಬಗ್ಗೆ ಕೇಳಿದಾಗ, ಸರವಣನ್ ಅವರು ಪ್ರಸ್ತುತ ಭೂಗತ ಒಳಚರಂಡಿ ಕಾಮಗಾರಿಗಳನ್ನು ಪೂರ್ಣಗೊಳಿಸುವುದು, ಹಾಳಾದ ರಸ್ತೆಗಳನ್ನು ದುರಸ್ತಿ ಮಾಡುವುದು ಮತ್ತು ಕುಡಿಯುವ ನೀರು ಸರಬರಾಜು, ಬೀದಿ ದೀಪಗಳು ಮುಂತಾದ ಮೂಲಭೂತ ಸೌಕರ್ಯಗಳನ್ನು ಖಚಿತಪಡಿಸಿಕೊಳ್ಳಲು ಗಮನಹರಿಸಿರುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: Russia-Ukraine War: 12ನೇ ದಿನಕ್ಕೆ ಕಾಲಿಟ್ಟ ರಷ್ಯಾ-ಉಕ್ರೇನ್ ಯುದ್ಧ; ಪುಟಿನ್ ಜೊತೆ ಪ್ರಧಾನಿ ಮೋದಿ ಮಾತುಕತೆ