Kalyan Singh: ಕಲ್ಯಾಣ್ ಸಿಂಗ್ ಅಂತಿಮ ದರ್ಶನ; ರಾಷ್ಟ್ರಧ್ವಜದ ಮೇಲೆ ಪಕ್ಷದ ಬಾವುಟ ಹೊದಿಸಿ ಟೀಕೆಗೀಡಾದ ಬಿಜೆಪಿ

Kalyan Singh Death: ಅಂತಿಮ ನಮನ ಸಲ್ಲಿಸುವಾಗ ಕಲ್ಯಾಣ್ ಸಿಂಗ್ ಅವರ ಶವಪೆಟ್ಟಿಗೆಗೆ ಹೊದಿಸಲಾಗಿದ್ದ ರಾಷ್ಟ್ರಧ್ವಜದ ಮೇಲೆ ಬಿಜೆಪಿ ಬಾವುಟವನ್ನು ಹೊದಿಸಿರುವ ಫೋಟೋಗಳು ವೈರಲ್ ಆಗಿದ್ದು, ಭಾರೀ ಟೀಕೆಗೆ ಕಾರಣವಾಗಿದೆ.

Kalyan Singh: ಕಲ್ಯಾಣ್ ಸಿಂಗ್ ಅಂತಿಮ ದರ್ಶನ; ರಾಷ್ಟ್ರಧ್ವಜದ ಮೇಲೆ ಪಕ್ಷದ ಬಾವುಟ ಹೊದಿಸಿ ಟೀಕೆಗೀಡಾದ ಬಿಜೆಪಿ
ಕಲ್ಯಾಣ್ ಸಿಂಗ್ ಅಂತಿಮ ದರ್ಶನ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Aug 23, 2021 | 12:51 PM

ನವದೆಹಲಿ: ಬಹು ಅಂಗಾಂಗ ವೈಫಲ್ಯದಿಂದ ಶನಿವಾರ ರಾತ್ರಿ ಸಾವನ್ನಪ್ಪಿದ್ದ ಬಿಜೆಪಿ ಹಿರಿಯ ನಾಯಕ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ (Kalyan Singh) ಅವರ ಅಂತ್ಯಸಂಸ್ಕಾರ ಇಂದು ನಡೆಯಲಿದೆ. ಭಾನುವಾರ ಮಾಜಿ ಸಿಎಂ ಕಲ್ಯಾಣ್ ಸಿಂಗ್ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಅವರ ಮೃತದೇಹದ ಮೇಲೆ ರಾಷ್ಟ್ರಧ್ವಜ ಹೊದಿಸಿ ಸರ್ಕಾರಿ ಗೌರವ ಸಲ್ಲಿಸುವುದು ಸಂಪ್ರದಾಯ. ಆದರೆ, ಶವ ಪೆಟ್ಟಿಗೆಯ ಮೇಲೆ ಹೊದಿಸಲಾಗಿದ್ದ ಆ ರಾಷ್ಟ್ರಧ್ವಜದ ಮೇಲೆ ಬಿಜೆಪಿ ಧ್ವಜವನ್ನು ಹೊದಿಸಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ.

89 ವರ್ಷವಾಗಿದ್ದ ಮಾಜಿ ಸಿಎಂ ಕಲ್ಯಾಣ್ ಸಿಂಗ್ ಬಹು ಅಂಗಾಂಗ ವೈಫಲ್ಯದಿಂದ ಲಕ್ನೋದಲ್ಲಿರುವ ಸಂಜಯ್ ಗಾಂಧಿ ವೈದ್ಯಕೀಯ ವಿಜ್ಞಾನಗಳ ಸ್ನಾತಕೋತ್ತರ ಸಂಸ್ಥೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಾರ್ಡಿಯಾಲಜಿ, ನೆಫ್ರಾಲಜಿ, ನ್ಯೂರಾಲಜಿ, ಎಂಡೋಕ್ರಿನಾಲಜಿ ವೈದ್ಯರು ಸಿಂಗ್ ಅವರ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ಇಟ್ಟಿದ್ದರು. ವೆಂಟಿಲೇಟರ್​ನಲ್ಲಿದ್ದ ಅವರಿಗೆ ಮೂತ್ರ ವಿಸರ್ಜನೆಯಾಗದ ಹಿನ್ನೆಲೆಯಲ್ಲಿ ಶುಕ್ರವಾರದಿಂದ ಡಯಾಲಿಸಿಸ್​ನಲ್ಲಿ ಇರಿಸಲಾಗಿತ್ತು. ಅದಾದ ಮರುದಿನವೇ ಅವರು ಮೃತಪಟ್ಟಿದ್ದರು.

ಕಲ್ಯಾಣ್​ ಸಿಂಗ್​ ಅವರ ಅಂತ್ಯಕ್ರಿಯೆ ಇಂದು ನರೋರಾದಲ್ಲಿರುವ ಗಂಗಾ ನದಿಯ ದಡದಲ್ಲಿ ನಡೆಯಲಿದೆ. ಕಲ್ಯಾಣ್ ಸಿಂಗ್​ ಮೃತದೇಹವನ್ನು ನಿನ್ನೆ ವಿಧಾನಸಭೆಗೆ ತೆಗೆದುಕೊಂಡು ಹೋಗಿ, ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ನಂತರ ಅಲ್ಲಿಂದ ಬಿಜೆಪಿ ಕಚೇರಿಗೆ ತೆಗೆದುಕೊಂಡು ಹೋಗಲಾಗಿತ್ತು. ಅಲ್ಲಿ ಅಂತಿಮ ನಮನ ಸಲ್ಲಿಸುವಾಗ ಕಲ್ಯಾಣ್ ಸಿಂಗ್ ಅವರ ಶವಪೆಟ್ಟಿಗೆಗೆ ಹೊದಿಸಲಾಗಿದ್ದ ರಾಷ್ಟ್ರಧ್ವಜದ ಮೇಲೆ ಬಿಜೆಪಿ ಬಾವುಟವನ್ನು ಹೊದಿಸಿರುವ ಫೋಟೋಗಳು ವೈರಲ್ ಆಗಿದ್ದು, ಭಾರೀ ಟೀಕೆಗೆ ಕಾರಣವಾಗಿದೆ.

ಬಿಜೆಪಿ ತನ್ನ ಟ್ವಿಟ್ಟರ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ಫೋಟೋದಲ್ಲಿ ಕಲ್ಯಾಣ್ ಸಿಂಗ್ ಅವರ ಮೃತದೇಹದ ಮೇಲೆ ಬಿಜೆಪಿ ಬಾವುಟ ಹೊದಿಸಲಾಗಿತ್ತು. ಇದಕ್ಕೆ ಕಾಂಗ್ರೆಸ್ ಸಂಸದ ಶಶಿ ತರೂರ್ ಟ್ವಿಟ್ಟರ್​ನಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದು, ರಾಷ್ಟ್ರ ಮೊದಲು ಎಂದು ಹೇಳುವ ಬಿಜೆಪಿ ರಾಷ್ಟ್ರಧ್ವಜಕ್ಕಿಂತಲೂ ಪಕ್ಷದ ಬಾವುಟಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಿರುವುದು ಅವರ ಉದ್ದೇಶವನ್ನು ಬಹಿರಂಗಗೊಳಿಸುವಂತಿದೆ ಎಂದಿದ್ದಾರೆ.

ಕಾಂಗ್ರೆಸ್ ನಾಯಕ ಬಿ.ವಿ. ಶ್ರೀನಿವಾಸ್ ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದು, ನವಭಾರತದಲ್ಲಿ ರಾಷ್ಟ್ರಧ್ವಜದ ಮೇಲೆ ಪಕ್ಷದ ಧ್ವಜ ಹೊದಿಸುವುದು ಕೂಡ ಸ್ವಾಗತಾರ್ಹವೇ? ನಮ್ಮ ರಾಷ್ಟ್ರಧ್ವಜಕ್ಕೆ ಆದ ಅವಮಾನವನ್ನು ಭಾರತೀಯರು ಎಂದಿಗೂ ಸಹಿಸಲಾರರು ಎಂದು ಟ್ವೀಟ್ ಮಾಡಿದ್ದಾರೆ.

ಕಲ್ಯಾಣ್ ಸಿಂಗ್ ಅವರ ರಕ್ತದೊತ್ತಡ ಕಡಿಮೆಯಾಗಿದ್ದು, ಮೂತ್ರ ವಿಸರ್ಜನೆ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರಿಗೆ ಡಯಾಲಿಸಿಸ್ ಮಾಡಲಾಗುತ್ತಿತ್ತು. ಹಲವು ದಿನಗಳಿಂದ ಕಲ್ಯಾಣ್ ಸಿಂಗ್ ವಯೋ ಸಹಜ ಖಾಯಿಲೆಗಳಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ಸೇರಿದಂತೆ ಅನೇಕರು ಆಸ್ಪತ್ರೆಗೆ ತೆರಳಿ ಕಲ್ಯಾಣ್ ಸಿಂಗ್ ಅವರ ಆರೋಗ್ಯ ವಿಚಾರಿಸಿದ್ದರು. ಕಲ್ಯಾಣ್ ಸಿಂಗ್ ಅವರನ್ನು ಮೊದಲು ದೆಹಲಿಯ ಆರ್​ಎಮ್​ಎಲ್ ಇನ್​ಸ್ಟಿಟ್ಯೂಟ್​ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಬಳಿಕ ಲಕ್ನೋದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೆಂಟಿಲೇಟರ್​ನಲ್ಲಿಟ್ಟು ಕಲ್ಯಾಣ್ ಸಿಂಗ್​ಗೆ ಚಿಕಿತ್ಸೆ ನೀಡಲಾಗುತ್ತಿತ್ತು.

89 ವರ್ಷದ ಕಲ್ಯಾಣ್ ಸಿಂಗ್ ಅವರ ದೇಹ ಇದ್ದಕ್ಕಿದ್ದಂತೆ ಊದಿಕೊಂಡು, ಪ್ರಜ್ಞಾ ಹೀನರಾದ ಹಿನ್ನೆಲೆಯಲ್ಲಿ ಜುಲೈ 4ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿನ್ನೆ ಲಕ್ನೋಗೆ ತೆರಳಿದ್ದ ಪ್ರಧಾನಿ ನರೇಂದ್ರ ಮೋದಿ ಕೂಡ ಕಲ್ಯಾಣ್ ಸಿಂಗ್ ಅವರ ಅಂತಿಮ ದರ್ಶನ ಪಡೆದಿದ್ದರು. ಬಾಬ್ರಿ ಮಸೀದಿ ಧ್ವಂಸದ ವೇಳೆ ಉತ್ತರ ಪ್ರದೇಶದ ಸಿಎಂ ಆಗಿದ್ದ ಕಲ್ಯಾಣ್ ಸಿಂಗ್ ಪ್ರಖರ ಹಿಂದೂವಾದಿ ಎಂದೇ ಹೆಸರಾಗಿದ್ದರು.

ಇದನ್ನೂ ಓದಿ: Kalyan Singh: ಉತ್ತರ ಪ್ರದೇಶದ ಮಾಜಿ ಸಿಎಂ, ಹಿರಿಯ ಬಿಜೆಪಿ ನಾಯಕ ಕಲ್ಯಾಣ್ ಸಿಂಗ್ ನಿಧನ

Kalyan Singh Health Update: ಉತ್ತರ ಪ್ರದೇಶದ ಮಾಜಿ ಸಿಎಂ ಕಲ್ಯಾಣ್ ಸಿಂಗ್ ಆರೋಗ್ಯ ಸ್ಥಿತಿ ಗಂಭೀರ; ವೆಂಟಿಲೇಟರ್ ಅಳವಡಿಕೆ

(Kalyan Singh Funeral: Controversy After BJP Flag over National Flag at Prayer Meet for Kalyan Singh)

Published On - 12:49 pm, Mon, 23 August 21