ಕಾಂಗ್ರೆಸ್ ನಾಯಕ ಕಮಲನಾಥ್ ಅವರು ಮಧ್ಯಪ್ರದೇಶ ವಿಧಾನಸಭೆ ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕಮಲನಾಥ್ ರಾಜೀನಾಮೆಯನ್ನು ಕಾಂಗ್ರೆಸ್ ಹೈಕಮಾಂಡ್ ಅಂಗೀಕರಿಸಿ, ಒಪ್ಪಿಕೊಂಡಿದ್ದು ಮಧ್ಯಪ್ರದೇಶ ವಿಧಾನಸಭೆ ವಿಪಕ್ಷ ನಾಯಕನ ಸ್ಥಾನಕ್ಕೆ ಡಾ. ಗೋವಿಂದ್ ಸಿಂಗ್ರನ್ನು ನೇಮಕ ಮಾಡಿದೆ. ಇವರು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನೂ ಹೌದು.
ನಿಮ್ಮ ರಾಜೀನಾಮೆ ಪತ್ರವನ್ನು ಕಾಂಗ್ರೆಸ್ ಅಧ್ಯಕ್ಷರು ಅಂಗೀಕರಿಸಿದ್ದಾರೆ. ತಕ್ಷಣ ಜಾರಿಗೆ ಬರುವಂತೆ ನಿಮ್ಮನ್ನು ಮಧ್ಯಪ್ರದೇಶ ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಸ್ಥಾನದಿಂದ ಬಿಡುಗಡೆಗೊಳಿಸಲಾಗಿದೆ. ನಿಮ್ಮ ಇಷ್ಟು ವರ್ಷದ ಸೇವೆ, ಪಕ್ಷಕ್ಕೆ ನೀಡಿದ ಕೊಡುಗೆಯನ್ನು ನಾವು ಶ್ಲಾಘಿಸುತ್ತೇವೆ ಎಂದು ಏಪ್ರಿಲ್ 28ರಂದು ಕಾಂಗ್ರೆಸ್ ಪ್ರಧಾನಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಕಮಲನಾಥ್ಗೆ ಪತ್ರ ಬರೆದಿದ್ದಾರೆ.
ಮಧ್ಯಪ್ರದೇಶದಲ್ಲೂ ಕೂಡ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದೆ. 2023ರ ಕೊನೆಯಲ್ಲಿ ವಿಧಾನಸಭೆ ಚುನಾವಣೆಯಿದ್ದು,ಪಕ್ಷದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲು ಕಾಂಗ್ರೆಸ್ ವರಿಷ್ಠರು ಮುಂದಾಗಿದ್ದಾರೆ. ಅದರ ಒಂದು ಭಾಗವಾಗಿಯೇ ಈಗ ಕಮಲನಾಥ್ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ. ಇದೀಗ ಆ ಸ್ಥಾನಕ್ಕೆ ನೇಮಕಗೊಂಡಿರುವ ಗೋವಿಂದ್ ಸಿಂಗ್ ಅವರು ಹಿರಿಯ ಕಾಂಗ್ರೆಸ್ ನಾಯಕರಾಗಿದ್ದು, ಲಾಹರ್ ವಿಧಾನಸಭಾ ಕ್ಷೇತ್ರದ ಶಾಸಕರು. ಇನ್ನೊಂದೆಡೆ ರಾಜಸ್ಥಾನದಲ್ಲೂ ಕಾಂಗ್ರೆಸ್ ಪಕ್ಷ ಬಲವರ್ಧನೆಗೆ ಮುಂದಾಗಿದ್ದು, ಅಲ್ಲಿನ ಸಿಎಂ ಅಶೋಕ್ ಗೆಹ್ಲೋಟ್ ರಾಜೀನಾಮೆ ಬಗ್ಗೆ ಮಾತುಗಳು ಕೇಳಿಬರುತ್ತಿವೆ.
ಇದನ್ನೂ ಓದಿ: ವಿದ್ಯಾರ್ಥಿನಿಯೊಬ್ಬಳ ಸಾವಿನಿಂದ ರೊಚ್ಚಿಗೆದ್ದ ಗೀತಂ ವಿವಿ ವಿದ್ಯಾರ್ಥಿಗಳಿಂದ ಹಾಸ್ಟೆಲ್ ಮೇಲೆ ಕಲ್ಲು ತೂರಾಟ