ರಾಷ್ಟ್ರರಾಜಧಾನಿ ದೆಹಲಿ ಸೇರಿ, ದೇಶದ ವಾಯುವ್ಯ ಭಾಗದ ಪ್ರದೇಶಗಳಿಗೆ ಇಂದು ಮಾನ್ಸೂನ್ (Monsoon 2021) ಪ್ರವೇಶಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ದೆಹಲಿಗೆ ಸಾಮಾನ್ಯವಾಗಿ ಜೂ.29ರ ಹೊತ್ತಿಗೆಲ್ಲ ಮುಂಗಾರು ಪ್ರವೇಶ ಆಗುತ್ತದೆ. ಆದರೆ ಈ ಬಾರಿ ವಿಳಂಬ ಆಗಿರುವ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಹೆಚ್ಚಿನ ಶಾಖ, ಇಬ್ಬನಿಯ ವಾತಾವರಣ ಇತ್ತು. ಶುಕ್ರವಾರ ದೆಹಲಿಯಲ್ಲಿ ಮುಂಗಾರು ಪೂರ್ವ ಮಳೆಯಾಗಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಮಳೆಯಾಗಲಿಲ್ಲ.
ಇಂದು ದೆಹಲಿಯನ್ನು ಪ್ರವೇಶಿಸುವ ನೈಋತ್ಯ ಮಾನ್ಸೂನ್ ಜು.13ರೊಳಗೆ ದೆಹಲಿ, ಹರ್ಯಾಣ, ಪಂಜಾಬ್ನ ಭಾಗಗಳಲ್ಲಿ ತೀವ್ರಗೊಳ್ಳಲಿದ್ದು, ಹೆಚ್ಚಿನ ಮಳೆ ತರಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ಈ ಮಧ್ಯೆ ದೆಹಲಿ ಗರಿಷ್ಠ ತಾಪಮಾನ ಶನಿವಾರ 39.8 ಡಿಗ್ರಿ ಸೆಲ್ಸಿಯಸ್ನಷ್ಟಿತ್ತು. ದೆಹಲಿಯಲ್ಲಿ ಕಳೆದ 15ವರ್ಷಗಳಲ್ಲಿ ಇದೇ ತುಂಬ ವಿಳಂಬಿತ ಮಾನ್ಸೂನ್. ಇಷ್ಟು ದಿನಗಳ ಕಾಲ ಮುಂದೂಡಲ್ಪಟ್ಟಿರಲಿಲ್ಲ ಎಂದು ಹವಾಮಾನ ಇಲಾಖೆ ಪ್ರಾದೇಶಿಕ ಕೇಂದ್ರದ ಮುಖ್ಯಸ್ಥ ಕುಲದೀಪ್ ಶ್ರೀವತ್ಸ ತಿಳಿಸಿದ್ದಾರೆ. ಈ ಮಧ್ಯೆ ಕೇರಳದಲ್ಲಿ ಸಿಕ್ಕಾಪಟೆ ಮಳೆಯಾಗುತ್ತಿದ್ದು, ಕಣ್ಣೂರು ಮತ್ತು ಕಾಸರಗೋಡಿನಲ್ಲಿ ಇಂದು ರೆಡ್ಅಲರ್ಟ್ ಘೋಷಣೆಯಾಗಿದೆ.
ಕರ್ನಾಟಕ ಹವಾಮಾನ (Karnataka Weather)
ಕರ್ನಾಟಕದ ಕರಾವಳಿ ಪ್ರದೇಶದಲ್ಲೂ ಕೂಡ ಶನಿವಾರವೇ ರೆಡ್ ಅಲರ್ಟ್ ಜಾರಿಯಾಗಿದೆ. ಉಳಿದಂತೆ ನಾಲ್ಕು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್, 12 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ರಾಜ್ಯ ಹಲವು ಪ್ರದೇಶಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಗುಡುಗು-ಮಿಂಚು ಸಹಿತ ಸಿಕ್ಕಾಪಟೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ಕರ್ನಾಟಕದ ಕರಾವಳಿ ತೀರಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರಕನ್ನಡಗಳಲ್ಲಿ ರೆಡ್ ಅಲರ್ಟ್, ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಜಾರಿಯಾಗಿದೆ. ಇನ್ನುಳಿದ ಚಾಮರಾಜನಗರ, ಮಂಡ್ಯ, ಮೈಸೂರು, ರಾಮನಗರ, ಕಲಬುರ್ಗಿ, ವಿಜಯಪುರ, ಬಾಗಲಕೋಟೆ, ಬೀದರ್, ಬೆಳಗಾವಿ, ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಇದೆ. ಇನ್ನೂ 24ಗಂಟೆಗಳ ಕಾಲ ಇದು ಮುಂದುವರಿಯಲಿದೆ.
ಜುಲೈ 11ರ ಹೊತ್ತಿಗೆ ಅರೇಬಿಯನ್ ಸಮುದ್ರದಲ್ಲಿ ಮಾನ್ಸೂನ್ ಬಲಗೊಳ್ಳಲಿದ್ದು, ಬಂಗಾಳಕೊಲ್ಲಿಯ ಪಶ್ಚಿಮ, ಮಧ್ಯ ಮತ್ತು ವಾಯುವ್ಯ ಪ್ರದೇಶಗಳಲ್ಲಿ ಕಡಿಮೆ ಒತ್ತಡ ಪ್ರದೇಶ ರಚನೆಯಾಗಲಿದೆ. ಈ ಕಾರಣಕ್ಕೆ ಕರ್ನಾಟಕದಲ್ಲಿ ಇಂದಿನಿಂದ ಮಾನ್ಸೂನ್ ತೀವ್ರಗೊಂಡು, ಮಳೆ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇದನ್ನೂ ಓದಿ: Petrol Price Today: ಶತಕ ಬಾರಿಸಿ ಮುನ್ನುಗ್ಗುತ್ತಲೇ ಇದೆ ಇಂಧನ ದರ; ಇಂದು ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ? ಪರಿಶೀಲಿಸಿ
Karnataka Weather IMD issues red alert in coastal districts Of Karnataka
Published On - 9:52 am, Sun, 11 July 21