ಕರೂರ್ ಕಾಲ್ತುಳಿತ ಪ್ರಕರಣ; ವಿಜಯ್ ವಿರುದ್ಧ ಹೈಕೋರ್ಟ್ ಆಕ್ರೋಶ, ಎಸ್‌ಐಟಿ ತನಿಖೆಗೆ ಆದೇಶ
ಕರೂರ್ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್ ಟಿವಿಕೆ ಮುಖ್ಯಸ್ಥ ವಿಜಯ್ ದಳಪತಿ ಅವರನ್ನು ತರಾಟೆಗೆ ತೆಗೆದುಕೊಂಡಿದೆ. ಈ ದುರಂತ ಸಂಭವಿಸುತ್ತಿದ್ದಂತೆ ಟಿವಿಕೆ ನಾಯಕ ಆ ಸ್ಥಳದಿಂದ ಓಡಿಹೋಗಿದ್ದಾರೆ, ಆ ಘಟನೆಯ ಬಗ್ಗೆ ಸ್ವಲ್ಪವೂ ಪಶ್ಚಾತ್ತಾಪ ವ್ಯಕ್ತಪಡಿಸಿಲ್ಲ ಎಂದು ಟೀಕಿಸಿದೆ. ವಿಜಯ್ ಅವರನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದ್ದು, ಈ ಪ್ರಕರಣದ ಬಗ್ಗೆ ಎಸ್‌ಐಟಿ ತನಿಖೆಗೆ ಆದೇಶಿಸಿದೆ.

ಚೆನ್ನೈ, ಅಕ್ಟೋಬರ್ 3: ತಮಿಳುನಾಡಿನ ಕರೂರಿನಲ್ಲಿ ನಡೆದ ಕಾಲ್ತುಳಿತಕ್ಕೆ (Karur Stampede) ಸಂಬಂಧಿಸಿದಂತೆ ತಮಿಳಗ ವೆಟ್ರಿ ಕಳಗಂ (ಟಿವಿಕೆ) ನಾಯಕರ ವಿರುದ್ಧ ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠವು ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಕಾಲ್ತುಳಿತದಿಂದ ಜನರು ಸಾವನ್ನಪ್ಪಿದರೂ ಟಿವಿಕೆ ಮುಖ್ಯಸ್ಥ ವಿಜಯ್ ಆ ಘಟನಾ ಸ್ಥಳದಿಂದ ಪಲಾಯನ ಮಾಡಿದ್ದಾರೆ. ಆ ಘಟನೆಯ ಬಗ್ಗೆ ಟಿವಿಕೆ ಪಕ್ಷವು ಸ್ವಲ್ಪವೂ ಪಶ್ಚಾತ್ತಾಪ ವ್ಯಕ್ತಪಡಿಸಿಲ್ಲ ಎಂದು ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಹಾಗೇ, ಈ ಘಟನೆಯ ತನಿಖೆಗಾಗಿ ಹಿರಿಯ ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಆಸ್ರಾ ಗರ್ಗ್ ನೇತೃತ್ವದ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆಗೆ ಕೋರ್ಟ್ ಆದೇಶಿಸಿದೆ.
ಕಾಲ್ತುಳಿತದ ಸಮಯದಲ್ಲಿ ಆ ಜಾಗದಿಂದ ವಿಜಯ್ ಓಡಿಹೋಗಿದ್ದಾರೆ. ಇದು ಆ ನಟ-ರಾಜಕಾರಣಿಯ ಮಾನಸಿಕ ಸ್ಥಿತಿಯನ್ನು ಬಿಂಬಿಸುತ್ತದೆ ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ. 41 ಜೀವಗಳನ್ನು ಬಲಿ ಪಡೆದ ಕಾಲ್ತುಳಿತವನ್ನು ತಪ್ಪಾಗಿ ನಿರ್ವಹಿಸಲಾಗಿದೆ ಎಂದು ನ್ಯಾಯಮೂರ್ತಿ ಸೆಂಥಿಲ್‌ಕುಮಾರ್ ಹೇಳಿದ್ದಾರೆ. ತಮಿಳುನಾಡು ರಾಜ್ಯವು ವಿಜಯ್ ಕಡೆಗೆ ಮೃದು ಧೋರಣೆ ತಳೆದಿದೆ ಎಂದು ಅವರು ಟೀಕಿಸಿದ್ದಾರೆ.
ಇದನ್ನೂ ಓದಿ: Karur Stampede: ಕರೂರ್ ಕಾಲ್ತುಳಿತದ ಸಾವಿನ ಸಂಖ್ಯೆ 41ಕ್ಕೆ ಏರಿಕೆ
ನ್ಯಾಯಮೂರ್ತಿ ಸೆಂಥಿಲ್‌ಕುಮಾರ್ ಆ ರ‍್ಯಾಲಿಯ ಆಯೋಜಕರು ಮತ್ತು ಪೊಲೀಸರನ್ನು ಅವರ ಜವಾಬ್ದಾರಿಯ ಬಗ್ಗೆ ಪ್ರಶ್ನಿಸಿದ್ದಾರೆ. “ಈ ಕಾರ್ಯಕ್ರಮದ ಆಯೋಜಕರಾಗಿ ನಿಮಗೆ ಯಾವುದೇ ಜವಾಬ್ದಾರಿ ಇಲ್ಲವೇ?” ಎಂದು ಅವರು ಪ್ರಶ್ನಿಸಿದ್ದಾರೆ. ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳು ಸಾವನ್ನಪ್ಪಿದಾಗ ವಿಜಯ್ ವಿಮಾನದಲ್ಲಿ ಪಲಾಯನ ಮಾಡಿದ ನಡವಳಿಕೆಯನ್ನು ಕೋರ್ಟ್ ಬಲವಾಗಿ ಖಂಡಿಸಿತು.
ಟಿವಿಕೆ ನಾಯಕರಾದ ಬುಸ್ಸಿ ಆನಂದ್ ಮತ್ತು ಸಿಟಿಆರ್ ನಿರ್ಮಲ್ ಕುಮಾರ್ ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿಗಳ ಮೇಲಿನ ಆದೇಶಗಳನ್ನು ಮದ್ರಾಸ್ ಹೈಕೋರ್ಟ್ ನ್ಯಾಯಪೀಠ ಕಾಯ್ದಿರಿಸಿದೆ.
ಇದನ್ನೂ ಓದಿ: ಕರೂರು ಕಾಲ್ತುಳಿತ, ರೋಡ್ ಶೋಗೆ ಅನುಮತಿ ಇರಲಿಲ್ಲ, ಅಂದು ತಡವಾಗಿ ಬಂದಿದ್ದಕ್ಕೆ ವಿಜಯ್ ವಿರುದ್ಧ ಎಫ್ಐಆರ್
ತಮಿಳುನಾಡು ಸರ್ಕಾರ ಹೇಳಿದ್ದೇನು?:
ತಮಿಳುನಾಡು ಸರ್ಕಾರವು ಮರ ಬಿದ್ದ ಕಾರಣ ಕಾಲ್ತುಳಿತ ಸಂಭವಿಸಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದೆ. ಟಿವಿಕೆ ಮುಖ್ಯಸ್ಥ ವಿಜಯ್ ಅವರನ್ನು ಟೀಕಿಸಿದ ರಾಜ್ಯ ಸರ್ಕಾರ, ನಟ-ರಾಜಕಾರಣಿ ಅವರ ರೋಡ್ ಶೋ ಹಲವಾರು ಷರತ್ತುಗಳನ್ನು ಉಲ್ಲಂಘಿಸಿದೆ ಎಂದು ಹೇಳಿದೆ. ಆದರೆ, ತಮಿಳುನಾಡು ಸರ್ಕಾರ ವಿಜಯ್ ಅವರ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದರೆ ಕಾನೂನು ಮತ್ತು ಸುವ್ಯವಸ್ಥೆ ಹದಗೆಡುತ್ತಿತ್ತು. ಹೀಗಾಗಿ, ಅನುಮತಿ ನೀಡಲಾಯಿತು ಎಂದು ಹೇಳಿದೆ.
ಆ ಸಭೆಯಲ್ಲಿ ಮಕ್ಕಳೂ ಇದ್ದರು. ಆದರೆ ಆಯೋಜಕರು ಅವರಿಗೆ ಯಾವುದೇ ವ್ಯವಸ್ಥೆ ಮಾಡಿರಲಿಲ್ಲ. ಒಂದು ನೀರಿನ ಬಾಟಲಿಯೂ ಲಭ್ಯವಿರಲಿಲ್ಲ. ಪೊಲೀಸರು ಕುಡಿಯುವ ನೀರು ನೀಡಲು ಸಾಧ್ಯವಿಲ್ಲ, ಆಯೋಜಕರೇ ಅದನ್ನು ಮಾಡಬೇಕು. ಟಿವಿಕೆ ಕಾರ್ಯಕರ್ತರ ನಡವಳಿಕೆಯಿಂದಾಗಿ ಕಾಲ್ತುಳಿತ ಉಂಟಾಗಿದೆ. ನಾಯಕರು ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ ಎಂದು ಸ್ಟಾಲಿನ್ ಸರ್ಕಾರ ಹೇಳಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




