
ಕಾಸರಗೋಡು (ಕೇರಳ): ಕಾಸರಗೋಡಿನ(Kasaragod) ಪೈವಳಿಕೆ- ಚೇವಾರ್ ರಸ್ತೆಯಲ್ಲಿರುವ ಕಟ್ಟದಮನೆ ಸೇತುವೆ ಬಳಿ ಕಂಪ್ರೆಸರ್ ಟ್ರಾಕ್ಟರ್ (tractor) ಮಗುಚಿ ಚಾಲಕ ಸಾವಿಗೀಡಾದ ಘಟನೆ ವರದಿ ಆಗಿದೆ. ಜತೆಯಲ್ಲಿದ್ದ ಮತ್ತೊಬ್ಬ ವ್ಯಕ್ತಿಗೆ ಗಾಯಗಳಾಗಿವೆ. ಮೃತರನ್ನು ನೇಪಾಳದ ರುನ್ಕಾವ್ ನಿವಾಸಿ ಸುರೇಶ್ ಪೊನ್ ಎಂದು ಗುರುತಿಸಲಾಗಿದೆ. ಜನವರಿ 11 ಬುಧವಾರ ಈ ಘಟನೆ ನಡೆದಿದೆ.ಟ್ರ್ಯಾಕ್ಚರ್ ಮಗುಚಿ ಬಿದ್ದಾಗ ಸುರೇಶ್ ಅದರಡೆಯಲ್ಲಿ ಸಿಲುಕಿದ್ದರು. ಗಂಭೀರ ಗಾಯಗೊಂಡ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದು ಅಲ್ಲಿ ಕೊನೆಯುಸಿರೆಳೆದಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ಈತ ಕೆಲಸಕ್ಕೆ ಸೇರಿದ್ದ. ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಖಾಸಗಿ ಶಾಲಾ ಬಸ್‌ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಸಾವನ್ನಪ್ಪಿದ್ದಾರೆ. ಒಬ್ಬ ವ್ಯಕ್ತಿ ಗಾಯಗೊಂಡಿದ್ದಾರೆ. ಮೃತರನ್ನು ಮಂಗಳೂರಿನ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳಾದ ಅಭಿಷೇಕ್ ಮತ್ತು ಪ್ರೀತೇಶ್ ಎಂದು ಗುರುತಿಸಲಾಗಿದೆ. ಮೂವರು ಬೈಕ್‌ನಲ್ಲಿ ಕಾಲೇಜಿಗೆ ಹೋಗುತ್ತಿದ್ದಾಗ ಅವಘಡ ಸಂಭವಿಸಿದೆ. ಮಂಜೇಶ್ವರಂ ಮೀಯಪದವು ಎಂಬಲ್ಲಿ ಈ ದುರ್ಘಟನೆ ನಡೆದಿದೆ.
ಮೃತರನ್ನು ಮೀಯಪದವು ಸೇವಾ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷರಾದ ಪೂರ್ಣಿಮಾ ಶೆಟ್ಟಿ ಮತ್ತು ಹರೀಶ್ ಶೆಟ್ಟಿ ದಂಪತಿಯ ಪುತ್ರ ಪ್ರೀತೇಶ್ ಶೆಟ್ಟಿ (18) ಎಂದು ಗುರುತಿಸಲಾಗಿದೆ. ಅಭಿಷೇಕ್ ಭಂಡಾರಿ (18) ಮೀಯಪದವಿನ ದಿನಗೂಲಿ ಕಾರ್ಮಿಕರಾದ ಸುರೇಶ್ ಭಂಡಾರಿ ಮತ್ತು ಹರಿನಾಶಿ ಭಂಡಾರಿ ದಂಪತಿಯ ಪುತ್ರರಾಗಿದ್ದಾರೆ,
ಗಾಯಗೊಂಡ ವಿದ್ಯಾರ್ಥಿಯನ್ನು ದಿನಗೂಲಿ ಕಾರ್ಮಿಕ ವಿಶ್ವನಾಥ ಶೆಟ್ಟಿ ಮತ್ತು ಮೀನಾಕ್ಷಿ ದಂಪತಿಯ ಪುತ್ರ ನಮಿತ್ ಶೆಟ್ಟಿ (17) ಎಂದು ಗುರುತಿಸಲಾಗಿದೆ. ಈತನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ವೇಗವಾಗಿ ಬಂದ ಬೈಕ್ ಶಾಲಾ ಬಸ್‌ಗೆ ಡಿಕ್ಕಿ ಹೊಡೆದಿದೆ. ಒಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಎರಡನೇ ವ್ಯಕ್ತಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಗಾಯಗೊಂಡ ವಿದ್ಯಾರ್ಥಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ಶಾಲಾ ಬಸ್‌ನಲ್ಲಿದ್ದ ವಿದ್ಯಾರ್ಥಿಗಳಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಮಲಯಾಳ ಮನೋರಮ ಪತ್ರಿಕೆ ವರದಿ ಮಾಡಿದೆ.
ಮಂಗಳೂರಿನ ಶ್ರೀ ದೇವಿ ಕಾಲೇಜು ಪ್ರೇರಣಾ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಾದ ಮೂವರು ಬಾಲಕರು ಮೋಟಾರು ಸೈಕಲ್‌ನಲ್ಲಿ ಟ್ರಿಪಲ್ ರೈಡಿಂಗ್ ಮಾಡುತ್ತಿದ್ದರು. ಪ್ರತಿದಿನ 12 ಕಿ.ಮೀ ದೂರದ ಮಂಜೇಶ್ವರ ರೈಲು ನಿಲ್ದಾಣಕ್ಕೆ ಮೋಟರ್ ಸೈಕಲ್‌ನಲ್ಲಿ ಹೋಗಿ ನಂತರ ಮಂಗಳೂರಿಗೆ ರೈಲಿನಲ್ಲಿ ತಮ್ಮ ಕಾಲೇಜಿಗೆ ಹೋಗುತ್ತಿದ್ದರು ಎಂದು ಮೀಂಜ ಪಂಚಾಯತ್ ಸದಸ್ಯ ಜನಾರ್ದನ ಪೂಜಾರಿ ತಿಳಿಸಿದ್ದಾರೆ.
ಮೀಯಪದವಿನಲ್ಲಿ ಶುಕ್ರವಾರ ಬೆಳಗ್ಗೆ 7.15ರ ಸುಮಾರಿಗೆ ರಸ್ತೆ ತಿರುವಿನಲ್ಲಿ ಮೋಟಾರ್ ಸೈಕಲ್ ಬಸ್‌ಗೆ ಡಿಕ್ಕಿ ಹೊಡೆದಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:09 pm, Fri, 13 January 23