Delhi News: ಯುವತಿಯನ್ನು ಕಾರಿನಡಿ ಎಳೆದೊಯ್ದ ಪ್ರಕರಣ; ದೆಹಲಿಯ 11 ಪೊಲೀಸರ ಅಮಾನತು
ಕಾರಿನಡಿ ಸಿಕ್ಕಿ ದೆಹಲಿಯ 20 ವರ್ಷದ ಅಂಜಲಿ ಸಿಂಗ್ ದೇಹದ ಮೇಲೆ 40 ಗಾಯಗಳಾಗಿತ್ತು. ಬಳಿಕ ಆ ಯುವತಿ ರಸ್ತೆಯಲ್ಲೇ ಸಾವನ್ನಪ್ಪಿದ್ದರು. ಈ ಘಟನೆಗೆ ಇಡೀ ದೇಶವೇ ಬೆಚ್ಚಿಬಿದ್ದಿತ್ತು.
ನವದೆಹಲಿ: ದೆಹಲಿಯಲ್ಲಿ ಹೊಸ ವರ್ಷಾಚರಣೆಯ ರಾತ್ರಿ ಯುವತಿ ಅಂಜಲಿ ಸಿಂಗ್ (Anjali Singh) ಸ್ಕೂಟಿಗೆ ಕಾರು ಡಿಕ್ಕಿ ಹೊಡೆದು, 13 ಕಿ.ಮೀಗೂ ಹೆಚ್ಚು ದೂರ ಎಳೆದುಕೊಂಡು ಹೋಗಲಾಗಿತ್ತು. ಈ ಪ್ರಕರಣದಲ್ಲಿ ನಿರ್ಲಕ್ಷ್ಯ ತೋರಿದ 11 ಪೊಲೀಸರನ್ನು ಅಮಾನತುಗೊಳಿಸಲಾಗಿದೆ. ದೆಹಲಿ ಹಿಟ್ ಆ್ಯಂಡ್ ರನ್ ಪ್ರಕರಣದಲ್ಲಿ (Delhi Hit and Run) ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ್ದಕ್ಕಾಗಿ ಗೃಹ ಸಚಿವಾಲಯದ ಶಿಫಾರಸಿನ ಮೇರೆಗೆ ದೆಹಲಿಯ 11 ಪೊಲೀಸರನ್ನು ಅಮಾನತುಗೊಳಿಸಿ ಆದೇಶ ನೀಡಲಾಗಿದೆ.
ಕಾರಿನಡಿ ಸಿಕ್ಕಿ ದೆಹಲಿಯ 20 ವರ್ಷದ ಅಂಜಲಿ ಸಿಂಗ್ ದೇಹದ ಮೇಲೆ 40 ಗಾಯಗಳಾಗಿತ್ತು ಎಂದು ಮರಣೋತ್ತರ ಪರೀಕ್ಷೆಯ ವರದಿ ಹೇಳಿದೆ. ಅಪಘಾತದ ತೀವ್ರತೆಗೆ ಆಕೆಯ ಮೆದುಳೇ ಕಾಣೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ತೋರಿದ ರೋಹಿಣಿ ಜಿಲ್ಲೆಯ ಒಟ್ಟು 11 ಪೊಲೀಸರನ್ನು ಅಮಾನತುಗೊಳಿಸಲಾಗಿದೆ.
ಸ್ಕೂಟರ್‌ಗೆ ಡಿಕ್ಕಿ ಹೊಡೆದು ಮಹಿಳೆಯ ಶವವನ್ನು ಕಾರಿನಿಂದ ಹಲವಾರು ಕಿಲೋಮೀಟರ್‌ಗಳವರೆಗೆ ಎಳೆದೊಯ್ದ ಕಾಂಝಾವಾಲಾ ಪ್ರಕರಣದ ವಿವರವಾದ ವರದಿಯನ್ನು ಪಡೆದ ನಂತರ ಕೇಂದ್ರ ಗೃಹ ಸಚಿವಾಲಯವು ಮೂರು ಪಿಸಿಆರ್ ವ್ಯಾನ್‌ಗಳಲ್ಲಿ ನಿಯೋಜಿಸಲಾದ ಪೊಲೀಸರನ್ನು ತಕ್ಷಣವೇ ಅಮಾನತುಗೊಳಿಸುವಂತೆ ದೆಹಲಿ ಪೊಲೀಸರಿಗೆ ಸೂಚಿಸಿತ್ತು.
ಇದನ್ನೂ ಓದಿ: ದೆಹಲಿ ರೀತಿಯಲ್ಲೇ ಮತ್ತೊಂದು ಅಪಘಾತ; ಸ್ಕೂಟಿಗೆ ಡಿಕ್ಕಿ ಹೊಡೆದು ಮಹಿಳೆಯನ್ನು 3 ಕಿ.ಮೀ ಎಳೆದುಕೊಂಡು ಹೋದ ಟ್ರಕ್!
ಈ ಭೀಕರ ಘಟನೆ ನಡೆದ ಸಂದರ್ಭದಲ್ಲಿ ಈ ಪೊಲೀಸ್ ಸಿಬ್ಬಂದಿ ಕರ್ತವ್ಯದಲ್ಲಿದ್ದರು. ಈ ಪೊಲೀಸ್ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ದೆಹಲಿ ಪೊಲೀಸ್ ಆಯುಕ್ತ ಸಂಜಯ್ ಅರೋರಾ ಅವರಿಗೆ ಗೃಹ ಸಚಿವಾಲಾಯ ಶಿಫಾರಸು ಮಾಡಿದೆ. ಈ ಪ್ರಕರಣದ ತನಿಖೆಯ ನಿರ್ಲಕ್ಷ್ಯದ ಕಾರಣ ಮೇಲ್ವಿಚಾರಣಾ ಅಧಿಕಾರಿಗಳ ವಿರುದ್ಧ ಶೋಕಾಸ್ ನೋಟಿಸ್ ನೀಡುವಂತೆ ದೆಹಲಿ ಪೊಲೀಸ್ ಆಯುಕ್ತರಿಗೆ ಸಚಿವಾಲಯ ಸೂಚಿಸಿದೆ.
ಏನಿದು ಘಟನೆ?: ಭಾನುವಾರ ನಸುಕಿನ ಜಾವ 20 ವರ್ಷದ ದೆಹಲಿಯ ಯುವತಿಯ ಸ್ಕೂಟಿಗೆ ಕಾರೊಂದು ಡಿಕ್ಕಿ ಹೊಡೆದು 20 ಕಿ.ಮೀ ದೂರಕ್ಕೆ ಆಕೆಯನ್ನು ಎಳೆದುಕೊಂಡು ಹೋಗಿತ್ತು. ಇದರಿಂದ ಆ ಯುವತಿ ಸಾವನ್ನಪ್ಪಿದ್ದಳು. ಭಾನುವಾರ ಮುಂಜಾನೆ ಸಾವನ್ನಪ್ಪಿದ 20 ವರ್ಷದ ಯುವತಿ ಆರೋಪಿಯ ಕಾರಿನ ಕೆಳಗೆ ಸಿಲುಕಿಕೊಂಡಿದ್ದು, ಆಕೆಯನ್ನು ರಸ್ತೆಯಲ್ಲಿ ಎಳೆದೊಯ್ಯಲಾಗಿತ್ತು. ಬಟ್ಟೆಯೆಲ್ಲ ಹರಿದುಹೋಗಿ, ಮೈಕೈ ಎಲ್ಲ ಗಾಯಗೊಂಡು ಬೆತ್ತಲಾಗಿ ರಸ್ತೆಯಲ್ಲಿ ಬಿದ್ದಿದ್ದ ಆಕೆಯನ್ನು ಆಸ್ಪತ್ರೆಗೆ ಸೇರಿಸುವಷ್ಟರಲ್ಲಿ ಆಕೆ ಸಾವನ್ನಪ್ಪಿದ್ದಳು. ಭಾನುವಾರ ಮುಂಜಾನೆ 3.30ರ ಸುಮಾರಿಗೆ ಹೊಸ ವರ್ಷದ ಸಂಭ್ರಮಾಚರಣೆ ಮುಗಿಸಿ, ಕುಡಿದು ವಾಹನ ಚಲಾಯಿಸುತ್ತಿದ್ದ ಐವರ ಕಾರು ಯುವತಿಯ ಸ್ಕೂಟಿಗೆ ಡಿಕ್ಕಿ ಹೊಡೆದಿತ್ತು. ಆ ವೇಳೆ ಆಕೆಯ ಬಟ್ಟೆ ಕಾರಿಗೆ ಸಿಕ್ಕಿಹಾಕಿಕೊಂಡ ಹಿನ್ನೆಲೆಯಲ್ಲಿ ಆ ಕಾರು ಆಕೆಯನ್ನು 20 ಕಿ.ಮೀವರೆಗೂ ಎಳೆದುಕೊಂಡು ಹೋಗಿತ್ತು. ಕಂಠಪೂರ್ತಿ ಕುಡಿದಿದ್ದರಿಂದ ಆಕೆ ತಮ್ಮ ಕಾರಿನಡಿ ಸಿಲುಕಿಕೊಂಡಿದ್ದು ಆ ಐವರಿಗೆ ತಿಳಿದಿಲ್ಲ ಎನ್ನಲಾಗುತ್ತಿದೆ.
ಪ್ರತ್ಯಕ್ಷದರ್ಶಿ ದೀಪಕ್ ದಹಿಯಾ ಮಿಠಾಯಿ ಅಂಗಡಿಯನ್ನು ನಡೆಸುತ್ತಿದ್ದು, ಅವರು ಈ ಘಟನೆಯನ್ನು ಪೊಲೀಸರಿಗೆ ತಿಳಿಸಿದ್ದರು. ಆರೋಪಿಗಳು ಯು-ಟರ್ನ್ ತೆಗೆದುಕೊಳ್ಳುವ ಮೂಲಕ ಸುಮಾರು 4ರಿಂದ 5 ಕಿಲೋಮೀಟರ್ ಒಂದೇ ರಸ್ತೆಯಲ್ಲಿ ಪದೇ ಪದೇ ವಾಹನ ಚಲಾಯಿಸುತ್ತಿದ್ದರು. ಹೀಗಾಗಿ, ಇದು ಕೇವಲ ಅಪಘಾತವಲ್ಲ. ಆಕೆ ಕಾರಿನಡಿ ಸಿಲುಕಿದ್ದು ತಿಳಿದೇ ಅವರು ಆಕೆಯನ್ನು ಎಳೆದುಕೊಂಡು ಹೋಗಿದ್ದರು ಎಂದು ದಹಿಯಾ ಹೇಳಿದ್ದರು.
ನನ್ನ ಅಂಗಡಿ ಮುಂದೆಯೇ ಹಲವು ರೌಂಡ್ ತಿರುಗಿದ ಅವರನ್ನು ತಡೆಯಲು ನಾನು ಹಲವು ಬಾರಿ ಯತ್ನಿಸಿದರೂ ವಾಹನ ನಿಲ್ಲಿಸದೆ ಸುಮಾರು ಒಂದೂವರೆ ಗಂಟೆಗಳ ಕಾಲ ಯುವತಿಯ ಶವವನ್ನು ಸುಮಾರು 20 ಕಿ.ಮೀ ಹೊತ್ತು ಸಾಗಿಸಿದರು ಎಂದು ಪ್ರತ್ಯಕ್ಷದರ್ಶಿ ದಹಿಯಾ ಹೇಳಿದ್ದಾರೆ. ಅವರು ತನ್ನ ಬೈಕ್ನಲ್ಲಿ ಕಾರನ್ನು ಹಿಂಬಾಲಿಸಿ ಪೊಲೀಸರೊಂದಿಗೆ ಸಂಪರ್ಕದಲ್ಲಿದ್ದರು. ಸುಮಾರು ಒಂದೂವರೆ ಗಂಟೆಗಳ ನಂತರ ಆ ಯುವತಿಯ ಶವವು ಕಾಂಜ್ವಾಲಾ ರಸ್ತೆಯ ಜ್ಯೋತಿ ಗ್ರಾಮದ ಬಳಿ ಕಾರಿನಿಂದ ಹೊರಗೆ ಬಿದ್ದಿತು. ನಂತರ ಕಾರಿನಲ್ಲಿದ್ದ ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಅವರು ಹೇಳಿದ್ದರು. ಆರೋಪಿಗಳು ಈ ಅಪಘಾತದ ವೇಳೆ ಕಾರಿನ ಗ್ಲಾಸ್ ಹಾಕಿಕೊಂಡಿದ್ದರು. ಅಲ್ಲದೆ, ಕಾರಿನೊಳಗೆ ಜೋರಾಗಿ ಸಂಗೀತ ಹಾಕಿಕೊಂಡಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:06 pm, Fri, 13 January 23