ದೆಹಲಿ ರೀತಿಯಲ್ಲೇ ಮತ್ತೊಂದು ಅಪಘಾತ; ಸ್ಕೂಟಿಗೆ ಡಿಕ್ಕಿ ಹೊಡೆದು ಮಹಿಳೆಯನ್ನು 3 ಕಿ.ಮೀ ಎಳೆದುಕೊಂಡು ಹೋದ ಟ್ರಕ್!
ಮಹಿಳೆಯ ದೇಹವು ಚಕ್ರದ ಮೇಲ್ಭಾಗಕ್ಕೆ ಸಿಲುಕಿಕೊಂಡಿದ್ದರಿಂದ ಟ್ರಕ್‌ಗೆ ಬೆಂಕಿ ಹೊತ್ತಿಕೊಂಡಿದೆ. ಸಂತ್ರಸ್ತೆಯ ಸ್ಕೂಟಿ ಕೂಡ ಸುಟ್ಟು ಬೂದಿಯಾಗಿದೆ.
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi Accident) 20 ವರ್ಷದ ಯುವತಿಯ ಸ್ಕೂಟಿಗೆ ಡಿಕ್ಕಿ ಹೊಡೆದ ಕಾರು ಆಕೆಯನ್ನು 13 ಕಿ.ಮೀ. ಎಳೆದುಕೊಂಡು ಹೋಗಿ ಕೊಂದ ಘಟನೆಗೆ ಇಡೀ ದೇಶವೇ ಬೆಚ್ಚಿ ಬಿದ್ದಿತ್ತು. ಇದೀಗ ಅದೇ ರೀತಿಯ ಮತ್ತೊಂದು ಘಟನೆ ಉತ್ತರ ಪ್ರದೇಶದಲ್ಲಿ (Uttar Pradesh) ನಡೆದಿದ್ದು, ಸ್ಕೂಟಿಯಲ್ಲಿ ಹೋಗುತ್ತಿದ್ದ ಮಹಿಳೆಯೊಬ್ಬರಿಗೆ ಟ್ರಕ್ ಡಿಕ್ಕಿ ಹೊಡೆದು ಆಕೆಯ ದೇಹವನ್ನು 3 ಕಿ.ಮೀವರೆಗೆ ಎಳೆದೊಯ್ದಿದೆ. ಇದರಿಂದ ಆ ಮಹಿಳೆ ಸಾವನ್ನಪ್ಪಿದ್ದಾರೆ. ಉತ್ತರ ಪ್ರದೇಶದ ಬಂದಾ ಜಿಲ್ಲೆಯ ಮಾವಾಯಿ ಬುಜುರ್ಗ್ ಗ್ರಾಮದಲ್ಲಿ ಈ ಘೋರ ಘಟನೆ ನಡೆದಿದೆ.
ಮಹಿಳೆಯ ದೇಹವು ಚಕ್ರದ ಮೇಲ್ಭಾಗಕ್ಕೆ ಸಿಲುಕಿಕೊಂಡಿದ್ದರಿಂದ ಟ್ರಕ್‌ಗೆ ಬೆಂಕಿ ಹೊತ್ತಿಕೊಂಡಿದೆ. ಸಂತ್ರಸ್ತೆಯ ಸ್ಕೂಟಿ ಕೂಡ ಸುಟ್ಟು ಬೂದಿಯಾಗಿದೆ. ಬೆಂಕಿ ನಂದಿಸಲು ಅಗ್ನಿಶಾಮಕ ಟೆಂಡರ್‌ಗಳು ಸ್ಥಳಕ್ಕೆ ಧಾವಿಸಿದ್ದು, ಪೊಲೀಸರು ಮೃತ ಮಹಿಳೆಯ ದೇಹವನ್ನು ಟ್ರಕ್‌ನಿಂದ ಹೊರತೆಗೆದಿದ್ದಾರೆ.
ಇದನ್ನೂ ಓದಿ: ದೆಹಲಿಯ ಯುವತಿಯನ್ನು ರಸ್ತೆಯಲ್ಲಿ ಎಳೆದುಕೊಂಡು ಹೋದ ಕಾರು; ಸಿಸಿಟಿವಿಯಲ್ಲಿ ಸಂಪೂರ್ಣ ಘಟನೆ ದಾಖಲು
ಮೃತ ಮಹಿಳೆಯ ಹೆಸರು ಪುಷ್ಪಾ. ಅವರು ವಿಶ್ವವಿದ್ಯಾಲಯದಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದರು. ಅಪಘಾತವಾದಾಗ ದಿನಸಿ ಸಾಮಾನುಗಳು ಮತ್ತು ಪೆಟ್ರೋಲ್ ಖರೀದಿಸಲು ಹೊರಗೆ ಹೋಗಿದ್ದರು. ಅಪಘಾತದ ನಂತರ ಟ್ರಕ್ ಆ ಮಹಿಳೆಯನ್ನು 3 ಕಿಲೋಮೀಟರ್‌ಗೂ ಹೆಚ್ಚು ದೂರ ಎಳೆದೊಯ್ದಿದೆ. ಬಹಳಷ್ಟು ಜನ ಪ್ರಯಾಣಿಕರು ಟ್ರಕ್ ಅನ್ನು ನಿಲ್ಲಿಸಲು ಪ್ರಯತ್ನಿಸಿದರು. ಆದರೆ ಚಾಲಕ ಟ್ರಕ್ ಅನ್ನು ನಿಲ್ಲಿಸಲಿಲ್ಲ. ಈ ಪ್ರದೇಶದಲ್ಲಿ ಬ್ರೇಕರ್‌ಗಳಿಲ್ಲದ ಕಾರಣ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಬಲಿಯಾದ ಮಹಿಳೆ ಲಕ್ನೋ ನಿವಾಸಿಯಾಗಿದ್ದಾರೆ. ಅವರ ದೇಹವನ್ನು ಟ್ರಕ್‌ನ ಡಂಪರ್‌ನಿಂದ ಹೊರತೆಗೆದು, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಟ್ರಕ್‌ನ ಚಾಲಕ ಪರಾರಿಯಾಗಿದ್ದು, ಇತರೆ ವಾಹನ ಸವಾರರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಸಂಪೂರ್ಣ ತನಿಖೆ ನಡೆಸುತ್ತಿದ್ದಾರೆ.