ಕಾಶಿ ವಿಶ್ವನಾಥ v/s ಗ್ಯಾನವಾಪಿ ಮಸೀದಿ: ಏನಿದು ವಿಶೇಷ ಪ್ರಕರಣ?

ಈಗಿರುವ  ಮಸೀದಿ ನಿರ್ಮಾಣದ ಕೆಳಗೆ ಇನ್ಯಾವುದೇ ಧಾರ್ಮಿಕ ಕಟ್ಟಡದ ಅವಶೇಷ, ಕುರುಹುಗಳು ಕಂಡುಬರುತ್ತದೆಯೋ ಇಲ್ಲವೋ ಎಂಬುದನ್ನು ಈ ಸಮಿತಿ ಅಧ್ಯಯನ ನಡೆಸಬೇಕಿದೆ. ಈ ಮೂಲಕ ಗ್ಯಾನವಾಪಿ ಮಸೀದಿಯ ಅಡಿ ಯಾವುದೇ ಹಿಂದೂ ದೇವಾಲಯದ ಅಸ್ತಿತ್ವ ಅಥವಾ ಅವಶೇಷ ದೊರೆಯುವ ಕುರಿತು ಅಧ್ಯಯನಕ್ಕಾಗಿ ಸರ್ವೆ ನಡೆಸಲು ಕೋರ್ಟ್ ತಿಳಿಸಿದಂತಾಗಿದೆ.

  • TV9 Web Team
  • Published On - 12:00 PM, 9 Apr 2021
ಕಾಶಿ ವಿಶ್ವನಾಥ v/s ಗ್ಯಾನವಾಪಿ ಮಸೀದಿ: ಏನಿದು ವಿಶೇಷ ಪ್ರಕರಣ?
ಜ್ಞಾನವಪಿ ಮಸೀದಿಯ ಚಿತ್ರಣ

ವಾರಣಾಸಿ: ರಾಮಜನ್ಮಭೂಮಿ-ಬಾಬರಿ ಮಸೀದಿ ಪ್ರಕರಣದಂತೆಯೇ ಇನ್ನೊಂದು ಪ್ರಕರಣ ದೇಶದಲ್ಲಿ ಸಂಚಲನ ಮೂಡಿಸುವ ಇನ್ನೊಂದು ಸಾಧ್ಯತೆ ದಟ್ಟವಾಗುತ್ತಿದೆ. ವಾರಣಾಸಿಯ ಸ್ಥಳೀಯ  ನ್ಯಾಯಾಲಯದ ಆದೇಶವೊಂದು ಪ್ರಾಚೀನ ಹಿಂದೂ ದೇಗುಲಗಳನ್ನು ಕೆಡವಿ ಮಸೀದಿಗಳ ನಿರ್ಮಾಣ ಮಾಡಲಾಗಿತ್ತು ಎಂಬ ವಾದಕ್ಕೆ ಪೂರಕವಾಗಿ ವಿಚಾರಣೆ ನಡೆಸಲು ಅನುಮತಿ ನೀಡಿದೆ. ಉತ್ತರ ಪ್ರದೇಶದ ವಾರಣಾಸಿಯ ಸ್ಥಳೀಯ ನ್ಯಾಯಾಲಯವು ಕಾಶಿ ವಿಶ್ವನಾಥ- ಗ್ಯಾನವಾಪಿ ಮಸೀದಿಯ ಸ್ಥಳದ ಸರ್ವೆ ಮಾಡಲು ಪುರಾತತ್ವ ಇಲಾಖೆಗೆ ಆದೇಶ ನೀಡಿದೆ. ಈ ಮೂಲಕ ಮೂರು ದಶಕದ ಹಿಂದೆ ಸಲ್ಲಿಸಲಾಗಿದ್ದ ಅರ್ಜಿಯೊಂದು ಮುನ್ನೆಲೆಗೆ ಬಂದಿದೆ. ಈ ಹಿಂದೆ ಮೊಘಲ್ ರಾಜ ಔರಂಗಜೇಬ್ ತನ್ನ ಅಧಿಕಾರಾವಧಿಯಲ್ಲಿ ಪ್ರಾಚೀನ ವಿಶ್ವೇಶ್ವರ ದೇಗುಲವನ್ನು ಕೆಡವಿ ಗ್ಯಾನವಾಪಿ ಮಸೀದಿಯನ್ನು ನಿರ್ಮಿಸಿದ್ದ ಎಂದು ಅರ್ಜಿ ಸಲ್ಲಿಸಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ವಾರಣಾಸಿಯ ಸ್ಥಳಿಯ ನ್ಯಾಯಾಲಯ ಪುರಾತತ್ವ ಇಲಾಖೆಗೆ ಸರ್ವೆ ನಡೆಸಲು ಆದೇಶ ನೀಡಿದೆ.

ಐವರು ತಜ್ಞರ ಸಮಿತಿ ರಚಿಸಿ ಈ ಪ್ರದೇಶದ ಸರ್ವೇ ಮಾಡಿ ಎಂದು ಕೋರ್ಟ್ ತನ್ನ ಸೂಚನೆಯಲ್ಲಿ ತಿಳಿಸಿದೆ. ಸಮಿತಿಯ ಐವರು ಸದಸ್ಯರ ಪೈಕಿ ಇಬ್ಬರು ಹಿಂದುಳಿದ ಸಮುದಾಯದವರಾಗಿರಬೇಕು ಎಂದು ಕೋರ್ಟ್ ತಿಳಿಸಿದೆ. ಮತ್ತು ಅತ್ಯಂತ ಹಿರಿಯ ವಿದ್ವಾಂಸರು ಅಥವಾ ತಜ್ಞರೋರ್ವರನ್ನು ಈ ಸಮಿತಿಯ ಕೆಲಸ ಕಾರ್ಯಗಳ ಮೇಲೆ ಗಮನ ಇಟ್ಟಿರಬೇಕು ಎಂದು ಸಹ ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.

ಈಗಿರುವ  ಮಸೀದಿ ನಿರ್ಮಾಣದ ಕೆಳಗೆ ಇನ್ಯಾವುದೇ ಧಾರ್ಮಿಕ ಕಟ್ಟಡದ ಅವಶೇಷ, ಕುರುಹುಗಳು ಕಂಡುಬರುತ್ತದೆಯೋ ಇಲ್ಲವೋ ಎಂಬುದನ್ನು ಈ ಸಮಿತಿ ಅಧ್ಯಯನ ನಡೆಸಬೇಕಿದೆ. ಈ ಮೂಲಕ ಗ್ಯಾನವಾಪಿ ಮಸೀದಿಯ ಅಡಿ ಯಾವುದೇ ಹಿಂದೂ ದೇವಾಲಯದ ಅಸ್ತಿತ್ವ ಅಥವಾ ಅವಶೇಷ ದೊರೆಯುವ ಕುರಿತು ಅಧ್ಯಯನಕ್ಕಾಗಿ ಸರ್ವೆ ನಡೆಸಲು ಕೋರ್ಟ್ ತಿಳಿಸಿದಂತಾಗಿದೆ.

ಗ್ಯಾನವಾಪಿ ಮಸೀದಿ ಇರುವ ಭೂಮಿಯೂ ಸೇರಿ ಈ ಪ್ರದೇಶವಷ್ಟೂ ಕಾಶಿ ವಿಶ್ವನಾಥ ಮಂದಿರಕ್ಕೆ ಸೇರಬೇಕು ಎಂದು ಕೋರಿ ಮೂರು ದಶಕದ ಹಿಂದೆ ಅರ್ಜಿ ಸಲ್ಲಿಸಲಾಗಿತ್ತು. ಮಸೀದಿಯನ್ನು ಹಿಂದೂ ದೇಗುಲವೊಂದನ್ನು ನಾಶಪಡಿಸಿ ನಿರ್ಮಿಸಲಾಗಿದೆ ಎಂದು ಪ್ರತಿಪಾದಿಸಿದ್ದ ಅರ್ಜಿದಾರರು, ಬಾಬರಿ ಮಸೀದಿ- ರಾಮಜನ್ಮಭೂಮಿ ಪ್ರಕರಣವನ್ನು ಉದಾಹರಿಸಿ , ಗ್ಯಾನವಾಪಿ ಮಸೀದಿಯ ಕೆಳಗೆ ಹಿಂದೂ ದೇಗುಲವಿತ್ತು ಎಂದು ಪ್ರತಿಪಾದಿಸಿದ್ದರು.

1947 ಅಗಸ್ಟ್ 15 ರಂದು ಧಾರ್ಮಿಕ ಆರಾಧನಾ ಸ್ಥಳಗಳ ಸ್ವರೂಪ ಹೇಗಿತ್ತೋ ಭವಿಷ್ಯದಲ್ಲೂ ಹಾಗೇ ಇರಬೇಕು ಎಂಬ ಕಾನೂನನ್ನು ಜಾರಿಗೊಳಿಸಲಾಗಿತ್ತು. ಈ ತೀರ್ಮಾನದ ಆಧಾರದ ಮೇಲೆ ವಾದ ಮಂಡಿಸಿದ್ದ ಸುನ್ನಿ ವಕ್ಪ್ ಮಂಡಳಿ ವಾರಣಾಸಿಯ ಸ್ಥಳೀಯ ಕೋರ್ಟ್ ನೀಡಿದ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವುದಾಗಿ ತಿಳಿಸಿದೆ.

ಇದನ್ನೂ ಓದಿ: ಶೇ.50ರಷ್ಟು ಮೀಸಲಾತಿಯನ್ನು ಲಕ್ಷ್ಮಣರೇಖೆಯಂತೆ ಪಾಲಿಸಬೇಕು; ಮರಾಠಾ ಮಿಸಲಾತಿ ಕುರಿತು ಹಿರಿಯ ವಕೀಲ ಅರವಿಂದ ದಾತಾರ್ ವಾದ

ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿಯಾಗಿ ಎನ್​.ವಿ.ರಮಣ ನೇಮಕ; ಏಪ್ರಿಲ್​ 24ಕ್ಕೆ ಪ್ರಮಾಣವಚನ ಸ್ವೀಕಾರ

(kashi gyanvapi vs Kashi Vishwanath temple here is the full detail)