ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಅನಾಮಧೇಯ ಭಕ್ತರಿಂದ 60 ಕೆಜಿ ಚಿನ್ನ ದಾನ; ಗರ್ಭಗುಡಿಯ ಅಲಂಕಾರಕ್ಕೆ 37 ಕೆಜಿ ಚಿನ್ನ ಬಳಕೆ

| Updated By: ಸುಷ್ಮಾ ಚಕ್ರೆ

Updated on: Mar 01, 2022 | 3:00 PM

Kashi Vishwanath Temple: ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಅನಾಮಧೇಯ ದಾನಿಯಿಂದ 60 ಕೆಜಿ ಚಿನ್ನ ದಾನವಾಗಿ ಬಂದಿದೆ. ಅದರಲ್ಲಿ 37 ಕೆಜಿಯನ್ನು ಗರ್ಭಗುಡಿಯ ಒಳಗೋಡೆಗಳ ಚಿನ್ನದ ಹೊದಿಕೆಗೆ ಬಳಸಲಾಗಿದೆ.

ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಅನಾಮಧೇಯ ಭಕ್ತರಿಂದ 60 ಕೆಜಿ ಚಿನ್ನ ದಾನ; ಗರ್ಭಗುಡಿಯ ಅಲಂಕಾರಕ್ಕೆ 37 ಕೆಜಿ ಚಿನ್ನ ಬಳಕೆ
ಕಾಶಿ ವಿಶ್ವನಾಥ ದೇವಸ್ಥಾನ
Follow us on

ವಾರಾಣಸಿ: ಕಾಶಿ ವಿಶ್ವನಾಥ ದೇಗುಲಕ್ಕೆ (ಕೆವಿಟಿ) ಅನಾಮಧೇಯ ದಾನಿಯೊಬ್ಬರು 60 ಕೆಜಿ ಚಿನ್ನಾಭರಣವನ್ನು (Gold) ದಾನವಾಗಿ ನೀಡಿದ್ದು, ಇದರಲ್ಲಿ 37 ಕೆಜಿಯನ್ನು ದೇಗುಲದ ಗರ್ಭಗುಡಿಯ ಒಳಗೋಡೆಗಳಿಗೆ ಬಳಸಲಾಗಿದೆ. ಕಾಶಿ ವಿಶ್ವನಾಥ ದೇವಾಲಯಕ್ಕೆ (Kashi Vishwanath Temple) ಭೇಟಿ ನೀಡಿದ ಯಾತ್ರಾರ್ಥಿಗಳು ‘ಝರೋಖಾ ದರ್ಶನ’ (ಬಾಗಿಲಿನ ಹೊರಗಿನಿಂದ ದೇವರನ್ನು ನೋಡುವುದು) ಮೂಲಕ ಪ್ರಾರ್ಥನೆ ಸಲ್ಲಿಸುವಾಗ ಗೋಡೆಗಳ ಮೇಲೆ ಚಿನ್ನದ ಲೇಪನದ ದೃಶ್ಯವನ್ನು ನೋಡಬಹುದು.

ಈ ಕುರಿತು ವಿಭಾಗೀಯ ಆಯುಕ್ತ ದೀಪಕ್ ಅಗರವಾಲ್ ಮಾತನಾಡಿ, ‘ದೇವಸ್ಥಾನಕ್ಕೆ ಅನಾಮಧೇಯ ದಾನಿಯಿಂದ 60 ಕೆಜಿ ಚಿನ್ನ ದಾನವಾಗಿ ಬಂದಿದೆ. ಅದರಲ್ಲಿ 37 ಕೆಜಿಯನ್ನು ಗರ್ಭಗುಡಿಯ ಒಳಗೋಡೆಗಳ ಚಿನ್ನದ ಹೊದಿಕೆಗೆ ಬಳಸಲಾಗಿದೆ ಮತ್ತು ಉಳಿದ 23 ಕೆಜಿ ಚಿನ್ನವನ್ನು ಕಾಶಿ ವಿಶ್ವನಾಥ ದೇವಸ್ಥಾನದ ಮುಖ್ಯ ವಿನ್ಯಾಸದ ಚಿನ್ನದ ಗುಮ್ಮಟದ ಕೆಳಗಿನ ಭಾಗಕ್ಕೆ ಬಳಸಲಾಗುವುದು ಎಂದಿದ್ದಾರೆ.

2021ರ ಡಿಸೆಂಬರ್ ತಿಂಗಳಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಾಶಿ ವಿಶ್ವನಾಥ ಧಾಮವನ್ನು ಔಪಚಾರಿಕವಾಗಿ ಉದ್ಘಾಟನೆ ಮಾಡಿದ್ದರು. ಅದಕ್ಕೂ ಮೊದಲೇ ದಾನಿಯು ದೇವಾಲಯದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ, ತಾವು 60 ಕೆಜಿ ಚಿನ್ನವನ್ನು ದೇವಸ್ಥಾನಕ್ಕೆ ದಾನವಾಗಿ ನೀಡುವುದಾಗಿ ಹೇಳಿದ್ದರು. ದೇವಾಲಯದ ಅಧಿಕಾರಿಗಳು ಅವರು ದೇಣಿಗೆ ನೀಡಿದ ಚಿನ್ನವನ್ನು ಗರ್ಭಗುಡಿಯ ಒಳಗೋಡೆಯ ಚಿನ್ನದ ಲೇಪನಕ್ಕಾಗಿ ಮತ್ತು ಮುಖ್ಯ ದೇವಾಲಯದ ಗುಮ್ಮಟದ ಕೆಳಗಿನ ಭಾಗಕ್ಕೆ ಬಳಸುವ ಯೋಜನೆಯನ್ನು ಅಂತಿಮಗೊಳಿಸಿದ್ದರು.

ದೆಹಲಿ ಮೂಲದ ಸಂಸ್ಥೆಯೊಂದು ಈ ಕೆಲಸವನ್ನು ಪೂರ್ಣಗೊಳಿಸಲು ತೊಡಗಿದೆ. ಕಾಶಿ ವಿಶ್ವನಾಥ ದೇವಸ್ಥಾನದ ಇತಿಹಾಸದ ಪ್ರಕಾರ, 1777ರಲ್ಲಿ ಇಂದೋರ್‌ನ ರಾಣಿ ಮಹಾರಾಣಿ ಅಹಲ್ಯಾಬಾಯಿ ಹೋಳ್ಕರ್ ದೇವಾಲಯದ ಪುನರ್ ನಿರ್ಮಾಣದ ನಂತರ, ಪಂಜಾಬ್‌ನ ಮಹಾರಾಜ ರಂಜಿತ್ ಸಿಂಗ್ ಅವರು ಸುಮಾರು ಒಂದು ಟನ್ ಚಿನ್ನವನ್ನು ದಾನ ಮಾಡಿದ್ದರು. ಇದನ್ನು ದೇವಸ್ಥಾನದ ಎರಡು ಗುಮ್ಮಟಗಳನ್ನು ಮುಚ್ಚಲು ಬಳಸಲಾಯಿತು.

18ನೇ ಶತಮಾನದ ನಂತರ, 2017ರಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಕಾಶಿ ವಿಶ್ವನಾಥ ದೇವಸ್ಥಾನದ ಪ್ರದೇಶವನ್ನು ವಿಸ್ತರಿಸುವ ಪ್ರಮುಖ ಕೆಲಸವನ್ನು ಪ್ರಧಾನಿ ಮೋದಿ ಖಚಿತಪಡಿಸಿದ್ದರು. 900 ಕೋಟಿ ರೂ.ಗಳ ಯೋಜನೆಯನ್ನು ಕೆವಿ ಧಾಮ್ (ಕಾರಿಡಾರ್) ಹೆಸರಿನಲ್ಲಿ ಪ್ರಾರಂಭಿಸಲಾಯಿತು. ಈ ಕಾರಿಡಾರ್ ಅನ್ನು 5,000 ಹೆಕ್ಟೇರ್ ಪ್ರದೇಶದಲ್ಲಿ ನಿರ್ಮಿಸಲಾಗಿದೆ. 800 ಕೋಟಿ ರೂ. ವೆಚ್ಚದ ಈ ಯೋಜನೆಯು ಪುರಾತನ ದೇವಾಲಯವನ್ನು ಗಂಗಾನದಿಯ ದಡಕ್ಕೆ ಸಂಪರ್ಕಿಸುತ್ತದೆ. ಹಾಗೇ, ಕಾಶಿ ವಿಶ್ವನಾಥ ದೇವಾಲಯ ಮತ್ತು ಗಂಗಾ ನದಿಯ ಉದ್ದಕ್ಕೂ ಇರುವ ಘಾಟ್‌ಗಳನ್ನು ಸಂಪರ್ಕಿಸುತ್ತದೆ. ಈ ಯೋಜನೆಯ ಮೊದಲ ಹಂತವನ್ನು 339 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಮೊದಲ ಹಂತವು ಸುಮಾರು 5 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ಹರಡಿದೆ ಮತ್ತು 23 ಕಟ್ಟಡಗಳನ್ನು ಒಳಗೊಂಡಿದೆ.

ಇದನ್ನೂ ಓದಿ: ಕಾಶಿ ವಿಶ್ವನಾಥ ಕಾರಿಡಾರ್ ಸಂಕೀರ್ಣವನ್ನು ಉದ್ಘಾಟಿಸುವ ಮೊದಲು ಪ್ರಧಾನಿ ಮೋದಿ ಶಿವನ ಆಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು

Video: ಕಾಶಿ ವಿಶ್ವನಾಥ ಕಾರಿಡಾರ್ ನಿರ್ಮಾಣ ಮಾಡಿದ ಕಾರ್ಮಿಕರ ಮೇಲೆ ಹೂಮಳೆ ಸುರಿಸಿದ ಪ್ರಧಾನಿ ಮೋದಿ; ಅವರೊಂದಿಗೇ ಕುಳಿತು ಊಟ ಸೇವನೆ

Published On - 2:59 pm, Tue, 1 March 22