ಜಮ್ಮು-ಕಾಶ್ಮಿರದಲ್ಲಿ ಉಗ್ರ ಚಟುವಟಿಕೆಗಳು ಹೆಚ್ಚುತ್ತಿರುವ ಬೆನ್ನಲ್ಲೇ, ಭಾರತೀಯ ಸೇನೆ ಒಂದು ವಿಡಿಯೋವನ್ನು ಬಿಡುಗಡೆ ಮಾಡಿದ್ದು, ನಾಗರಿಕರಿಗೆ ಧೈರ್ಯ ತುಂಬಿದೆ. ಜಮ್ಮು-ಕಾಶ್ಮೀರದ ನಾಗರಿಕ ಸಮಾಜದ ಪ್ರತಿ ವಿಭಾಗ, ವರ್ಗವೂ ಭಯೋತ್ಪಾದನೆಯಿಂದ ಸಾಕಷ್ಟು ಸಂಕಷ್ಟಕ್ಕೀಡಾಗುತ್ತಿದೆ. ಆದರೆ ನಾಗರಿಕರು ಹೆದರಬೇಕಾಗಿಲ್ಲ. ಕಾಶ್ಮೀರಿ ಕಣಿವೆಯಲ್ಲಿ ಉಗ್ರರ ವಿರುದ್ಧ ಹೋರಾಡಿ, ಇಲ್ಲಿ ಸುಸ್ಥಿರತೆ ಸ್ಥಾಪಿಸಲು ನಾವು ಸದಾ ಹೋರಾಡುತ್ತೇವೆ ಎಂಬ ಭರವಸೆಯನ್ನು ಸೇನೆ ನೀಡಿದೆ.
ಭಾರತೀಯ ಸೇನೆಯ ಚಿನಾರ್ ಕಾರ್ಪ್ಸ್ ವಿಡಿಯೋ ಬಿಡುಗಡೆ ಮಾಡಿದ್ದು, ಅದಕ್ಕೆ ಕಾಶ್ಮೀರಿ ಫೈಟ್ಸ್ ಬ್ಯಾಕ್ ಎಂದು ಹೆಸರು ಕೊಟ್ಟಿದೆ. ಇದರಲ್ಲಿ, ಭಯೋತ್ಪಾದನೆಯಿಂದ ನಾಗರಿಕರು ನರಳುತ್ತಿರುವ ರೀತಿ, ಅದನ್ನು ಕೊನೆಗಾಣಿಸಲು ಭದ್ರತಾ ಪಡೆಗಳ ಹೋರಾಟದ ಸ್ವರೂಪ, ಕಣಿವೆಯಲ್ಲಿ ಸಹಜ ಸ್ಥಿತಿಯನ್ನು ತರಲು ಮಾಡುತ್ತಿರುವ ಪ್ರಯತ್ನಗಳನ್ನೆಲ್ಲ ಚಿತ್ರಣದ ಸಹಿತ ಭಾರತೀಯ ಸೇನೆಯ ಚಿನಾರ್ ಕಾರ್ಪ್ಸ್ ಈ ವಿಡಿಯೋದಲ್ಲಿ ತೋರಿಸಿದೆ. ‘ದಶಕಗಳಿಂದ ನಡೆಯುತ್ತಿರುವ ಭಯೋತ್ಪಾದನೆ ಅನೇಕರ ಪ್ರಾಣ ತೆಗೆದಿದೆ, ಅದೆಷ್ಟೋ ಮಹಿಳೆಯರು ವಿಧವೆಯರಾಗಿದ್ದಾರೆ, ಹಲವರು ಅನಾಥರಾಗಿದ್ದಾರೆ. ತಾಯಂದಿರು ತಮ್ಮ ಮಕ್ಕಳಿಗಾಗಿ ಕಾಯುವಂತಾಗಿದೆ, ಅಪ್ಪಂದಿರು ಹತಾಶರಾಗಿ ಬದುಕುವಂತಾಗಿದೆ. ಭಯೋತ್ಪಾದಕರು ನಮ್ಮ ಸಮಾಜವನ್ನು ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ. ನಮ್ಮ ಯುವಕರ ದಾರಿ ತಪ್ಪಿಸುತ್ತಿದ್ದಾರೆ ಎಂಬಿತ್ಯಾದಿ ಬರಹಗಳನ್ನು ವಿಡಿಯೋ ಹೊಂದಿದೆ.
ಹಾಗೇ, ಭಯೋತ್ಪಾದಕರಿಂದ ಕೊಲ್ಲಲ್ಪಟ್ಟ ಕಾಶ್ಮೀರಿಗಳಿಗೆ ಈ ವಿಡಿಯೋ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಗಿದೆ. ಪತ್ರಕರ್ತ ಶುಜಾತ್ ಬುಖಾರಿ, ಸಾಮಾಜಿಕ ಕಾರ್ಯಕರ್ತ ಅರ್ಜುಮಂದ್ ಮಜೀದ್, ಮಖನ್ ಲಾಲ್ ಬಿಂದ್ರೂ, ಸರ್ಪಂಚ್ ಅಜಯ್ ಪಂಡಿತಾ, ಸುಪೀಂದರ್ ಕೌರ್, ವಾಸಿಂ ಬಾರಿ, ಲೆಫ್ಟಿನೆಂಟ್ ಉಮರ್ ಫಯಾಜ್, ಅಯೂಬ್ ಪಂಡಿತಾ ಮತ್ತು ಪರ್ವೇಜ್ ಅಹ್ಮದ್ ದಾರ್ ಇನ್ನಿತರರಿಗೆ ಗೌರವ ಸಮರ್ಪಿಸಲಾಗಿದೆ. ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಕಾಶ್ಮೀರಿಗಳು ಏಕಾಂಗಿಗಳಲ್ಲ. ಹಿಂದೆಯೂ ನಾವಿದ್ದೆವು..ಭವಿಷ್ಯದಲ್ಲೂ ನಾವು ಜತೆ ನಿಲ್ಲುತ್ತೇವೆ. ನಾವೆಲ್ಲರೂ ಒಟ್ಟಿಗೇ ಹೋರಾಡಿ ಜಯ ಸಾಧಿಸೋಣ ಎಂಬ ಸಂದೇಶದ ಮೂಲಕ ಭಾರತೀಯ ಸೇನೆ ಧೈರ್ಯ ತುಂಬಿದೆ.
खुशहाली की ओर बढ़ता हमारा #Kashmir @adgpi @Whiteknight_IA @firefurycorps @prodefencejammu @PRODefSrinagar @proudhampur https://t.co/8AKc9BZg2B
— NorthernComd.IA (@NorthernComd_IA) April 15, 2022
ಇದನ್ನೂ ಓದಿ: ಪಂಜಾಬ್ ಸಿಎಂ ಭಗವಂತ್ ಮಾನ್ ವಿರುದ್ಧ ಮದ್ಯ ಸೇವಿಸಿ ಗುರುದ್ವಾರ ಪ್ರವೇಶಿಸಿದ ಆರೋಪ; ಪೊಲೀಸರಿಗೆ ದೂರು ಕೊಟ್ಟ ಬಿಜೆಪಿ ನಾಯಕ
Published On - 8:16 pm, Sat, 16 April 22