ತಿರುವನಂತಪುರಂ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಮಸ್ಯೆ ಸೃಷ್ಟಿಸುವ ಅವಿವಾಹಿತ, ಅವರ ಬಗ್ಗೆ ಹೆಣ್ಣು ಮಕ್ಕಳು ಎಚ್ಚರದಿಂದ ಇರಬೇಕು ಎಂದು ಹೇಳಿದ್ದ ಕೇರಳದ ಮಾಜಿ ಸಂಸದ ಜಾಯ್ಸ್ ಜಾರ್ಜ್ ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಮಾರ್ಚ್ 29 ಸೋಮವಾರ ಇರಟ್ಟಯಾರ್ನಲ್ಲಿ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ವಿರುದ್ಧ ಹೇಳಿಕೆ ನೀಡಿದ್ದರು. ಕಳೆದ ವಾರ ಕೊಚ್ಚಿಯಲ್ಲಿ ಚುನಾವಣಾ ಪ್ರಚಾರಕ್ಕೆ ಬಂದಿದ್ದ ರಾಹುಲ್, ಸೇಂಟ್ ತೆರೆಸಾ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರಿಗೆ ಐಕಿಡೊ ಸಮರ ಕಲೆ ಹೇಳಿಕೊಟ್ಟಿದ್ದರು. ಈ ಬಗ್ಗೆ ಉಲ್ಲೇಖಿಸಿದ ಜಾರ್ಜ್, ರಾಹುಲ್ ಗಾಂಧಿ ಮಹಿಳೆಯರ ಕಾಲೇಜಿಗೆ ಮಾತ್ರ ಭೇಟಿ ನೀಡುತ್ತಿದ್ದಾರೆ. ಯುವತಿಯರು ಕಾಂಗ್ರೆಸ್ನ ಮಾಜಿ ಅಧ್ಯಕ್ಷರೊಂದಿಗೆ ವ್ಯವಹರಿಸುವಾಗ ಎಚ್ಚರದಿಂದ ಇರಬೇಕು ಎಂದು ಹೇಳಿದ್ದರು.
ಮಹಿಳೆಯರ ಕಾಲೇಜಿನಲ್ಲಿ ಮಾತ್ರ ರಾಹುಲ್ ಗಾಂಧಿಯವರ ಕಾರ್ಯಕ್ರಮ ನಡೆಯುತ್ತದೆ. ಅವರು ಅಲ್ಲಿಗೆ ಹೋಗಿ ಹುಡುಗಿಯರು ಹೇಗೆ ನೆಟ್ಟಗೆ ನಿಲ್ಲಬೇಕು, ಯಾವ ರೀತಿ ಬಗ್ಗಬೇಕು ಎಂಬುದನ್ನು ಹೇಳಿಕೊಡುತ್ತಾರೆ. ಹೆಣ್ಣುಮಕ್ಕಳು ಅವರ ಬಳಿ ಹೋಗಿ ಆ ರೀತಿ ಎಲ್ಲ ಮಾಡಬೇಡಿ, ಆತ ಅವಿವಾಹಿತ ಎಂದು ಜಾರ್ಜ್ ಹೇಳಿರುವುದಾಗಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ. ರಾಹುಲ್ ಸಮಸ್ಯೆ ಸೃಷ್ಟಿಸುವ ಅವಿವಾಹಿತ. ಆತನ ಮುಂದೆ ಹೆಣ್ಣು ಮಕ್ಕಳು ಬಾಗಬೇಡಿ ಎಂದು ಜಾರ್ಜ್ ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿತ್ತು.
ಜಾರ್ಜ್ ಅವರ ಹೇಳಿಕೆ ಸುದ್ದಿಯಾಗುತ್ತಿದ್ದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ಷೇಪ ವ್ಯಕ್ತವಾಗಿದೆ. ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕೆ ಕೆಲವರು ಜಾರ್ಜ್ ಅವರನ್ನು ಖಂಡಿಸಿದ್ದಾರೆ. ಅದೇ ವೇಳೆ ರಾಹುಲ್ ಬಗ್ಗೆ ಜಾರ್ಜ್ ಹೇಳಿದ್ದು ಸರಿ ಎಂದು ಬಿಜೆಪಿ ಬೆಂಬಲಿಗರು ಹೇಳಿದ್ದರು.
ಪಕ್ಷೇತರ ಅಭ್ಯರ್ಥಿ ಆಗಿರುವ ಜಾರ್ಜ್ ಸಿಪಿಐ (ಎಂ) ಬೆಂಬಲದಿಂದ 2014ರಲ್ಲಿ ಇಡುಕ್ಕಿ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಸಂಸದರಾಗಿದ್ದರು. 2019ರ ವರೆಗೆ ಅವರು ಸಂಸದರಾಗಿ ಕಾರ್ಯನಿರ್ವಹಿಸಿದ್ದರು. ಈಗ ಎಲ್ಡಿಎಫ್ ಪರವಾಗಿ ಜಾರ್ಜ್ ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ.
ಜಾರ್ಜ್ ಹೇಳಿಕೆ ಬಗ್ಗೆ ಅಂತರ ಕಾಪಾಡಿದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ , ರಾಹುಲ್ ಗಾಂಧಿ ವಿರುದ್ಧ ವೈಯಕ್ತಿಕ ದಾಳಿ ಮಾಡುವುದು ಎಲ್ಡಿಎಫ್ನ ನಿಲುವು ಅಲ್ಲ. ನಾವು ಅವರನ್ನು ರಾಜಕೀಯವಾಗಿ ವಿರೋಧಿಸಬೇಕೆ ಹೊರತು ವೈಯಕ್ತಿಕವಾಗಿ ಅಲ್ಲ ಎಂದು ಹೇಳಿದ್ದಾರೆ.
We condemn this misogynistic comment by Joyce George.
It’s clear @cpimspeak is feeling the heat of losing elections https://t.co/IZWlV4j0xQ— Congress Kerala (@INCKerala) March 30, 2021
ಜಾರ್ಜ್ ಅವರು ರಾಹುಲ್ ಗಾಂಧಿ ಬಗ್ಗೆ ಹೇಳಿರುವ ಹೇಳಿಕೆ ದುರಾದೃಷ್ಟ ಮತ್ತು ಒಪ್ಪುವಂತದಲ್ಲ. ಮಾಜಿ ಸಂಸದರ ವಿರುದ್ಧ ಕೇಸು ದಾಖಲಿಸಿ ಅವರನ್ನು ಬಂಧಿಸಬೇಕು ಎಂದು ಕೇರಳದ ವಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಹೇಳಿದ್ದಾರೆ. ಅದೇ ವೇಳೆ, ಜಾರ್ಜ್ ಅವರ ಮನಸ್ಸಿನಲ್ಲಿರುವ ಅಶ್ಲೀಲತೆ ಹೊರಬಂದಿದೆ. ರಾಹುಲ್ ಗಾಂಧಿಯವರನ್ನು ಟೀಕಿಸಲು ಅವರು ಯಾರು? ಅಸಭ್ಯ ಹೇಳಿಕೆಗಳನ್ನು ನೀಡುವ ವಿದ್ಯುತ್ ಸಚಿವ ಎಂ.ಎಂ. ಮಾಣಿ ಅವರ ಹೆಜ್ಜೆಯನ್ನು ಅನುಸರಿಸಲು ಜಾರ್ಜ್ ಯತ್ನಿಸುತ್ತಿದ್ದಾರೆ ಎಂದು ಸಂಸದ, ಯೂತ್ ಕಾಂಗ್ರೆಸ್ ನಾಯಕ ಡೀನ್ ಕುರಿಯಾಕೋಸ್ ಕಿಡಿಕಾರಿದ್ದಾರೆ.
ಆದಾಗ್ಯೂ, ಹೇಳಿಕೆ ಬಗ್ಗೆ ಜಾರ್ಜ್ ಮಂಗಳವಾರ ವಿಷಾದ ವ್ಯಕ್ತಪಡಿಸಿದ್ದಾರೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ವರದಿ ಮಾಡಿದೆ. ನಿನ್ನೆ ನಾನು ಇರಟ್ಟಯಾರ್ನಲ್ಲಿ ಚುನಾವಣಾ ಪ್ರಚಾರದ ವೇಳೆ ಅನುಚಿತ ಮಾತುಗಳನ್ನಾಡಿದ್ದೆ. ನಾನು ಆ ಹೇಳಿಕೆಗಳನ್ನು ಹಿಂಪಡೆಯುತ್ತೇವೆ. ನಾನು ಸಾರ್ವಜನಿಕವಾಗಿ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಜಾರ್ಜ್ ಹೇಳಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.