Wayanad Landslide: ವಯನಾಡಿನಲ್ಲಿ ಭೂಕುಸಿತವಾದ ಸ್ಥಳಕ್ಕೆ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಭೇಟಿ

|

Updated on: Aug 01, 2024 | 4:23 PM

ಕೇರಳದಲ್ಲಿ ಭಾರೀ ಭೂಕುಸಿತ ಉಂಟಾಗಿದ್ದು, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಯನಾಡಿಗೆ ಭೇಟಿ ನೀಡಿದ್ದಾರೆ. ಬುಧವಾರವೇ ಅವರಿಬ್ಬರೂ ವಯನಾಡಿಗೆ ತೆರಳಬೇಕಿತ್ತು. ಆದರೆ, ಹವಾಮಾನ ವೈಪರೀತ್ಯದಿಂದಾಗಿ ಆ ಪ್ರಯಾಣವನ್ನು ಮುಂದೂಡಲಾಗಿತ್ತು.

Wayanad Landslide: ವಯನಾಡಿನಲ್ಲಿ ಭೂಕುಸಿತವಾದ ಸ್ಥಳಕ್ಕೆ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಭೇಟಿ
ವಯನಾಡಿನಲ್ಲಿ ಭೂಕುಸಿತವಾದ ಸ್ಥಳಕ್ಕೆ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಭೇಟಿ
Image Credit source: PTI
Follow us on

ವಯನಾಡು: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಇಂದು ಕೇರಳದ ವಯನಾಡಿನ ಚೂರಲ್ಮಲಾದಲ್ಲಿ ಭೂಕುಸಿತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ತಾತ್ಕಾಲಿಕವಾಗಿ ನಿರ್ಮಿಸಲಾಗಿದ್ದ ಸೇತುವೆಯ ಮೇಲೆ ಸಾಗಿ ಪ್ರವಾಹದಪೀಡಿತ ಸ್ಥಳವನ್ನು ಪರಿಶೀಲಿಸಿದ ಅವರು ಸಂತ್ರಸ್ತರನ್ನು ಭೇಟಿಯಾಗಿದ್ದಾರೆ. ಅಧಿಕಾರಿಗಳು ಸಾವಿನ ಸಂಖ್ಯೆ ಹೆಚ್ಚಾಗುವ ಭೀತಿಯಲ್ಲಿದ್ದಾರೆ.

ಭಾರೀ ಮಳೆಯ ನಂತರ ಮಂಗಳವಾರ ಕೇರಳದ ವಯನಾಡಿನಲ್ಲಿ ಮೂರು ಭೂಕುಸಿತಗಳು ಸಂಭವಿಸಿದ ನಂತರ ಇದುವರೆಗೆ 256 ಜನರು ಸಾವನ್ನಪ್ಪಿದ್ದಾರೆ. ಕೇರಳ ಜಿಲ್ಲೆಯ ಮುಂಡಕ್ಕೈ, ಚೂರಲ್ಮಲಾ, ಅಟ್ಟಮಾಲ ಮತ್ತು ನೂಲ್ಪುಳ ಗ್ರಾಮಗಳು ಭೂಕುಸಿತದಿಂದ ಹೆಚ್ಚು ಹಾನಿಗೊಳಗಾಗಿವೆ. ಭೂಕುಸಿತದಲ್ಲಿ 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ಇಂದು ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಸೇನೆಯು ಸುಮಾರು 1,000 ಜನರನ್ನು ರಕ್ಷಿಸಲಾಗಿದೆ ಮತ್ತು 220 ಜನರು ಇನ್ನೂ ನಾಪತ್ತೆಯಾಗಿದ್ದಾರೆ.


ಈಗಾಗಲೇ ಸೈನ್ಯವು ಕೋಝಿಕ್ಕೋಡ್‌ನಲ್ಲಿ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ ಅನ್ನು ಸ್ಥಾಪಿಸಿದೆ ಎಂದು ಪಿಟಿಐ ವರದಿ ಮಾಡಿದೆ. ರಕ್ಷಣಾ ಕಾರ್ಯಾಚರಣೆಗೆ ಕನಿಷ್ಠ 1,500 ಸೇನಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮುಂದಿನ 2 ದಿನಗಳಲ್ಲಿ ವಯನಾಡ್ ಮತ್ತು ಇತರ ಹಲವು ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಡುಕ್ಕಿ, ತ್ರಿಶೂರ್, ಪಾಲಕ್ಕಾಡ್, ಮಲಪ್ಪುರಂ, ಕೋಝಿಕ್ಕೋಡ್, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ರೆಡ್ ಅಲರ್ಟ್ ಘೋಷಿಸಲಾಗಿದೆ.

ಇದನ್ನೂ ಓದಿ: Viral Video: ಕೇರಳ ಪ್ರವಾಹ; ಗರ್ಭಿಣಿ ಪತ್ನಿಯನ್ನು ಆಸ್ಪತ್ರೆಗೆ ಸೇರಿಸಲು ಉಕ್ಕಿ ಹರಿವ ನದಿಯಲ್ಲೇ ಕಾರು ಚಲಾಯಿಸಿದ ಗಂಡ

ಕಾಣೆಯಾದ ಜನರನ್ನು ಪತ್ತೆಹಚ್ಚಲು ಪಾರುಗಾಣಿಕಾ ತಂಡಗಳು ಬೀಡುಬಿಟ್ಟಿವೆ. ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಇಂದು ಮಧ್ಯಾಹ್ನ ಕೇರಳಕ್ಕೆ ಆಗಮಿಸಿದರು. ನಿನ್ನೆಗೆ ನಿಗದಿಯಾಗಿದ್ದ ಅವರ ಭೇಟಿಯನ್ನು ಪ್ರತಿಕೂಲ ಹವಾಮಾನದಿಂದಾಗಿ ಇಂದಿಗೆ ಮುಂದೂಡಲಾಯಿತು.


ವಯನಾಡ್ ಜಿಲ್ಲೆಯ ಭೂಕುಸಿತ ಪೀಡಿತ ಪ್ರದೇಶಗಳಲ್ಲಿ ಸ್ಥಾಪಿಸಲಾದ ವಿವಿಧ ಪರಿಹಾರ ಶಿಬಿರಗಳಿಗೆ ಇಬ್ಬರೂ ಭೇಟಿ ನೀಡಲಿದ್ದಾರೆ. ಬೆಳಗ್ಗೆ 9.30ಕ್ಕೆ ಕಣ್ಣೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ಗಾಂಧಿ ಮತ್ತು ವಾದ್ರಾ ನಂತರ ರಸ್ತೆ ಮೂಲಕ ವಯನಾಡಿಗೆ ಪ್ರಯಾಣ ಬೆಳೆಸಿದರು. ಮಧ್ಯಾಹ್ನ ಚೂರಲ್ಮಲ ತಲುಪಿದರು. ಇವರೊಂದಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಆಲಪ್ಪುಳ ಸಂಸದ ಕೆಸಿ ವೇಣುಗೋಪಾಲ್ ಕೂಡ ಇದ್ದರು.

ಇದನ್ನೂ ಓದಿ: Wayanad Disaster: ಒಂದೇ ದಿನದಲ್ಲಿ ನರಕವಾಯ್ತು ಪ್ರವಾಸಿಗರ ಸ್ವರ್ಗ ವಯನಾಡ್

2019ರ ಸಾರ್ವತ್ರಿಕ ಚುನಾವಣೆಯಲ್ಲಿ ವಯನಾಡ್ ಲೋಕಸಭಾ ಕ್ಷೇತ್ರದಿಂದ ಗೆದ್ದಿದ್ದ ರಾಹುಲ್ ಗಾಂಧಿ, ಈ ವರ್ಷವೂ ಇಲ್ಲಿಂದ ಗೆದ್ದಿದ್ದರು. ಆದರೆ, ಅವರು ಉತ್ತರ ಪ್ರದೇಶದ ರಾಯ್ಬರೇಲಿ ಲೋಕಸಭಾ ಕ್ಷೇತ್ರದಿಂದ ಗೆದ್ದ ಕಾರಣ, ಅವರು ಉಪಚುನಾವಣೆ ನಡೆದಾಗ ಪ್ರಿಯಾಂಕಾ ಗಾಂಧಿ ಸ್ಪರ್ಧಿಸುವ ನಿರೀಕ್ಷೆಯಿರುವ ವಯನಾಡ್ ಕ್ಷೇತ್ರವನ್ನು ಬಿಟ್ಟುಕೊಟ್ಟರು.

ಭೂಕುಸಿತ ಪೀಡಿತ ಪ್ರದೇಶದಲ್ಲಿ ಸೇನೆ, ನೌಕಾಪಡೆ, ಎನ್‌ಡಿಆರ್‌ಎಫ್, ಪೊಲೀಸ್, ಅಗ್ನಿಶಾಮಕ ಮತ್ತು ಪಾರುಗಾಣಿಕಾ ಸೇರಿದಂತೆ 1,600ಕ್ಕೂ ಹೆಚ್ಚು ರಕ್ಷಣಾ ಕಾರ್ಯಕರ್ತರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ