ಜಾರ್ಖಂಡ್‌ನಲ್ಲಿ ಕಲಾಪಕ್ಕೆ ಅಡ್ಡಿಪಡಿಸಿದ ಆರೋಪ; ವಿಧಾನಸಭೆಯಿಂದ 18 ಬಿಜೆಪಿ ಶಾಸಕರ ಅಮಾನತು
ಜಾರ್ಖಂಡ್‌ನ ವಿಧಾನಸಭಾ ಕಲಾಪಕ್ಕೆ ತೊಂದರೆ ಮಾಡಿದ ಆರೋಪದಡಿ ವಿಧಾನಸಭೆ ಅಧಿವೇಶನದಿಂದ 18 ಬಿಜೆಪಿ ಶಾಸಕರನ್ನು ಅಮಾನತು ಮಾಡಲಾಗಿದೆ. ಅಮಾನತುಗೊಂಡ ಶಾಸಕರನ್ನು ವಿಧಾನಸಭೆಯಿಂದ ಮಾರ್ಷಲ್‌ಗಳು ಹೊರಹಾಕಿದ್ದಾರೆ.
ರಾಂಚಿ: ಜಾರ್ಖಂಡ್‌ನಲ್ಲಿ ಅಶಾಂತಿ ಉಂಟು ಮಾಡಿದ್ದಕ್ಕಾಗಿ 18 ಬಿಜೆಪಿ ಶಾಸಕರನ್ನು ಆಗಸ್ಟ್ 2ರ ಮಧ್ಯಾಹ್ನ 2 ಗಂಟೆಯವರೆಗೆ ವಿಧಾನಸಭೆಯಿಂದ ಅಮಾನತುಗೊಳಿಸಲಾಗಿದೆ. ವಿಧಾನಸಭೆಯ ನೈತಿಕ ಸಮಿತಿ ಈ ಬಗ್ಗೆ ತನಿಖೆ ನಡೆಸಿ 1 ವಾರದೊಳಗೆ ವರದಿ ಸಲ್ಲಿಸಲಿದೆ ಎಂದು ಸ್ಪೀಕರ್ ಹೇಳಿದ್ದಾರೆ. ಇಂದು ಸದನದಿಂದ ಹೊರಬರಲು ನಿರಾಕರಿಸಿದ ಆ ಶಾಸಕರನ್ನು ಮಾರ್ಷಲ್‌ಗಳು ಎತ್ತಿಕೊಂಡು ಹೋಗಿ ಹೊರಹಾಕಿದ್ದಾರೆ. ಈ ವೇಳೆ ಸದನದ ನೆಲದ ಮೇಲೆ ಬಿದ್ದು ಹೊರಳಾಡಿ ಶಾಸಕರು ಪ್ರತಿಭಟನೆಯನ್ನು ಮಾಡಿದ್ದಾರೆ.
ಮಾರ್ಷಲ್‌ಗಳ ಮೂಲಕ ವಿರೋಧ ಪಕ್ಷದ ಶಾಸಕರನ್ನು ಹೊರಹಾಕಿದ್ದನ್ನು ವಿರೋಧಿಸಿ ಸದನದಲ್ಲಿ ಗದ್ದಲವನ್ನು ಸೃಷ್ಟಿಸಿದ ನಂತರ ಮತ್ತು ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ಪ್ರಶ್ನೆಗಳಿಗೆ ಉತ್ತರಿಸಲು “ನಿರಾಕರಣೆ” ಮಾಡಿದ ನಂತರ ಸ್ಪೀಕರ್ ರವೀಂದ್ರ ನಾಥ್ ಮಹ್ತೋ ಅವರು ಬಿಜೆಪಿ ಸದಸ್ಯರ ವಿರುದ್ಧ ಕ್ರಮ ಕೈಗೊಂಡರು.
ಜಾರ್ಖಂಡ್‌ನಲ್ಲಿ ಸರ್ವಾಧಿಕಾರವಿದೆ ಎಂದು ವಿರೋಧ ಪಕ್ಷದ ನಾಯಕ ಅಮರ್ ಬೌರಿ ಆರೋಪಿಸಿದ್ದಾರೆ. ಅಧಿವೇಶನ ಆರಂಭಕ್ಕೂ ಮುನ್ನ ಬಿಜೆಪಿ ಶಾಸಕರು ಸದನದ ಬಾವಿಗೆ ನುಗ್ಗಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ರಾಜೀನಾಮೆಗೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು. ಬಾವಿಯಲ್ಲಿದ್ದ ಕೆಲವು ದಾಖಲೆಗಳನ್ನು ಹರಿದು ಹಾಕುತ್ತಿರುವುದು ಕೂಡ ಕಂಡು ಬಂದಿದೆ.
ಇದನ್ನೂ ಓದಿ: ಕರ್ನಾಟಕ ವಿಧಾನಸಭೆ ಕಲಾಪ: ನೀಟ್ ಪರೀಕ್ಷೆ ರದ್ದುಪಡಿಸುವಂತೆ ಒತ್ತಾಯಿಸಿ ನಿರ್ಣಯ ಅಂಗೀಕಾರ
ಅಧಿವೇಶನದ ಆರಂಭಕ್ಕೂ ಮುನ್ನ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರು ತೀವ್ರ ವಾಗ್ವಾದಕ್ಕಿಳಿದಿದ್ದು ಕಂಡುಬಂದಿತು. ಅಮಾನತುಗೊಂಡ ನಂತರವೂ ಶಾಸಕರು ಸದನದಿಂದ ಹೊರಬರಲು ನಿರಾಕರಿಸಿದ್ದರಿಂದ, ಅವರು ಮಾರ್ಷಲ್‌ಗಳನ್ನು ಕರೆದು ಆ ವಿಪಕ್ಷ ಸದಸ್ಯರನ್ನು ಹೊರಹಾಕಿದ್ದಾರೆ.
Amidst the continuous uproar and the disorder of the House, the Speaker of #Jharkhand Assembly has suspended 18 BJP MLAs till 2:00 pm on Friday. Meanwhile loP @amarbauri alleged that the proceedings is unfair and is onesided. pic.twitter.com/NPB4CEPGGq
— Niraj Sinha (@nirajsinhajh) August 1, 2024
ಜಾರ್ಖಂಡ್‌ನ ಹಲವು ಬಿಜೆಪಿ ಶಾಸಕರು ಬುಧವಾರ ರಾತ್ರಿ ವಿಧಾನಸಭೆಯ ಮೊಗಸಾಲೆಯಲ್ಲಿ ಕಳೆದರು. ಮಾರ್ಷಲ್‌ಗಳು ಅವರನ್ನು ಸದನದ ಬಾವಿಯಿಂದ ಹೊರಹಾಕಿದರು. ಅಲ್ಲಿ ಅವರು ಉದ್ಯೋಗ ಸೇರಿದಂತೆ ಪ್ರಮುಖ ವಿಷಯಗಳ ಕುರಿತು ತಮ್ಮ ಪ್ರಶ್ನೆಗಳಿಗೆ ಉತ್ತರಿಸಲು ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ “ನಿರಾಕರಣೆ”ಯ ವಿರುದ್ಧ ಪ್ರತಿಭಟನೆ ನಡೆಸಿದರು.
ವಿಧಾನಸಭೆಯ ನೈತಿಕ ಸಮಿತಿಯು ಈ ಬಗ್ಗೆ ತನಿಖೆ ನಡೆಸಿ ಒಂದು ವಾರದೊಳಗೆ ವರದಿಯನ್ನು ಅವರಿಗೆ ಸಲ್ಲಿಸಲಿದೆ ಎಂದು ಸ್ಪೀಕರ್ ಹೇಳಿದರು. ನಂತರ ಸದನವನ್ನು ಮುಂದೂಡಲಾಯಿತು.
ಇದನ್ನೂ ಓದಿ: Hemant Soren: ಜಾರ್ಖಂಡ್ ವಿಧಾನಸಭೆಯಲ್ಲಿ ವಿಶ್ವಾಸ ಮತ ಗೆದ್ದ ಸಿಎಂ ಹೇಮಂತ್ ಸೊರೇನ್
ಜಾರ್ಖಂಡ್ ರಾಜ್ಯದಲ್ಲಿ ಜೆಎಂಎಂ ನೇತೃತ್ವದ ಸರ್ಕಾರದ ಆದೇಶದ ಮೇರೆಗೆ ಸ್ಪೀಕರ್ ಪ್ರಜಾಪ್ರಭುತ್ವದ ಕೊಲೆ ಮಾಡಿದ್ದಾರೆ ಎಂದು ಬಿಜೆಪಿ ಶಾಸಕರು ವಿಧಾನಸಭೆಯ ಹೊರಗೆ ಆರೋಪಿಸಿದ್ದಾರೆ. “ಜನರಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ನಾವು ಉತ್ತರಿಸಲು ಸರ್ಕಾರವನ್ನು ವಿನಂತಿಸಿದ್ದೇವೆ. ಇಂದು ನಡೆದಿರುವುದು ವಿರೋಧ ಪಕ್ಷದ ಶಾಸಕರ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ” ಎಂದು ಆರೋಪಿಸಲಾಗಿದೆ.
ಈ ವರ್ಷಾಂತ್ಯದಲ್ಲಿ ಜಾರ್ಖಂಡ್ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಬುಧವಾರ ರಾತ್ರಿ ವಿಧಾನಸಭೆ ಭವನದ ಪ್ರವೇಶ ದ್ವಾರದ ಬಳಿಯ ಲಾಬಿಯ ನೆಲದ ಮೇಲೆ ಹಲವು ಬಿಜೆಪಿ ಶಾಸಕರು ಬೆಡ್ ಕವರ್‌ಗಳು ಮತ್ತು ಹೊದಿಕೆಗಳ ಮೇಲೆ ಮಲಗಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ